ಮಂಗಳವಾರ, ಜನವರಿ 28, 2020
17 °C

ಶ್ರಮಜೀವನಕ್ಕೆ ಹೆಚ್ಚಿನ ಒತ್ತು ಅಗತ್ಯ: ಪ್ರಸನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕಳೆದ ನಾಲ್ಕು ದಶಕಗಳಲ್ಲಿ ಸಂಸ್ಕೃತಿ, ನಾಟಕ, ಸಂಗೀತದಂತಹ ಕಲಾ ಪ್ರಕಾರಗಳ ಮೂಲಕ ಅನೇಕ ಪ್ರತಿನಿಧಿಗಳನ್ನು ಪರಿಚಯಿಸಿದ ಸಮುದಾಯ ಚಳವಳಿಯು ಹಿಂದೆಂದಿಗಿಂತಲೂ ಇಂದು ತನ್ನ ಮೂಲ ಆಶಯವಾದ ಶ್ರಮ ಜೀವನಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ~ ಎಂದು ರಂಗಕರ್ಮಿ ಪ್ರಸನ್ನ ಬುಧವಾರ ಇಲ್ಲಿ ಹೇಳಿದರು. ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿಯು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಐದು ದಿನಗಳ `ಸಂಸ್ಕೃತಿ-ಸಾಮರಸ್ಯ, ಸಮುದಾಯ ರಂಗ ಸಂಗಮ~ದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.`ಕರ್ನಾಟಕದ ಸಾಂಸ್ಕೃತಿಕ ರಂಗದಲ್ಲಿ ಸಮುದಾಯದಿಂದ ತರಬೇತಿ ಪಡೆದ ಅಥವಾ ಚಳವಳಿ ಹಿನ್ನೆಲೆಯಿಂದ ಬಂದ ಅನೇಕರು ಕಾಣ ಸಿಗುತ್ತಾರೆ. ರಂಗ ಚಳವಳಿ ಹಾಗೂ ಸಾಂಸ್ಕೃತಿಕ ಚಳವಳಿಗೆ ಹೊಸ ಸೇರ್ಪಡೆಯಾದ ಸಮುದಾಯ ಚಳವಳಿಗೆ ವಿಶಾಲವಾದ ನೆಲೆಗಟ್ಟಿನಲ್ಲಿ ಶ್ರಮ ಜೀವಿಗಳನ್ನು ರಂಗಕ್ಕೆ ತಂದ ಹಿರಿಮೆಯಿದೆ~ ಎಂದು ಪ್ರಶಂಸಿಸಿದರು.`ಶ್ರಮ ಜೀವನ ಇಂದು ಅಪಮೌಲ್ಯಕ್ಕೆ ಒಳಗಾಗಿದೆ. ಇನ್ನೊಂದೆಡೆ ನಾವು ಹೆಚ್ಚಿನ ಗೊಂದಲ ಸೃಷ್ಟಿಸಿಕೊಳ್ಳುತ್ತಿದ್ದೇವೆ. ಇದರಿಂದ ರಂಗಕರ್ಮಿಗಳ ನಡುವೆ ನಾಟಕ, ಸಿನಿಮಾ, ಧಾರಾವಾಹಿಗಳನ್ನು ಮಾಡಬೇಕೆ ಎಂಬ ಗೊಂದಲ ಸೃಷ್ಟಿಯಾಗಿದೆ. ಎಪ್ಪತ್ತರ ದಶಕದಲ್ಲಿ ಚಳವಳಿಗೆ ಬೆಂಬಲ ನೀಡಿದ ಕಾರ್ಮಿಕ ವರ್ಗ ಇಂದು ರಂಗಭೂಮಿ ಕಡೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎನ್ನುವ ಮತ್ತೊಂದು ಗೊಂದಲ ಕೂಡ ಉದ್ಭವಿಸಿದೆ. ಶ್ರಮಿಕ ಜೀವನವನ್ನು ಕಡೆಗಣಿಸಿದ್ದು ಇದಕ್ಕೆ ಮುಖ್ಯ ಕಾರಣ~ ಎಂದು ಅವರು ವಿಶ್ಲೇಷಿಸಿದರು.`ಇಂದಿನ ಪರಿಸರದಲ್ಲಿ ರಂಗ ಅಥವಾ ಬೀದಿ ನಾಟಕಗಳು ಶ್ರಮಸಹಿತ ಮಾಧ್ಯಮವಾಗಬೇಕು. ಸುಖ ಜೀವನದ ಸಾಧ್ಯತೆಗಳಿಂದ ಶ್ರಮ ಜೀವನಕ್ಕೆ ಕುಂದುಂಟಾಗಿದ್ದರಿಂದ ಧರ್ಮ, ಧಾರ್ಮಿಕತೆ ಹಾಗೂ ಮಾನವೀಯ ಮೌಲ್ಯಗಳು ಎದುರಿಸಿದ ಅನಾಹುತಗಳನ್ನು ಮರೆಯಬಾರದು. ನಮ್ಮ ನಡುವಿನ ಗೊಂದಲ ಹಾಗೂ ಭ್ರಮೆಗೆ ಇತಿಶ್ರೀ ಹಾಡಬೇಕು. ಬೀದಿ ಅಥವಾ ರಂಗ ನಾಟಕಗಳಲ್ಲಿ ನಟ ಹಾಗೂ ಪ್ರೇಕ್ಷಕರ ನಡುವಿನ ಸಂವಾದ ಏರ್ಪಡಬೇಕು~ ಎಂದರು.`ಇಡೀ ದೇಶದಲ್ಲಿಯೇ ಕಾರ್ಖಾನೆಗಳಿಗೆ ಹೆಸರಾದ ಬೆಂಗಳೂರಿನ ಉದ್ದಿಮೆಗಳು ಇಂದು ಕಾರ್ಮಿಕರಹಿತವಾಗಿವೆ. ಐಟಿಐ, ಎಚ್‌ಎಂಟಿಯಂತಹ ಕಾರ್ಖಾನೆಗಳು ಸ್ಮಶಾನಗಳಾಗಿವೆ.ರೈತನಿಲ್ಲದ ಹಳ್ಳಿಗಳಲ್ಲಿ ಅರೆ ಜೀವಗಳು ಮಾತ್ರ ಉಳಿದಿವೆ. ಶ್ರಮಜೀವಿಗಳನ್ನು ನಾವು ಅಂತಹ ಸ್ಥಿತಿಗೆ ತಳ್ಳಿದ್ದೇವೆ. ಹೀಗಾಗಿ, ಹಳ್ಳಿಗಾಡಿನ ಶ್ರಮಜೀವಿಗಳಿಗೆ ಹೆಣ್ಣು ಕೊಡಲು ಕೂಡ ಯಾರೂ ಮುಂದೆ ಬರುತ್ತಿಲ್ಲ. ಎಲ್ಲರಿಗೂ ಸಾಫ್ಟ್‌ವೇರ್ ಎಂಜಿನಿಯರ್‌ಗಳೇ ಬೇಕು. ಇಂತಹ ಸನ್ನಿವೇಶದಲ್ಲಿ ಹೇಗೆ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ?~ ಎಂದು ಪ್ರಶ್ನಿಸಿದರು.ಮಹಾರಾಕ್ಷಸ ಸಂಸ್ಕೃತಿ ಹೆಚ್ಚು ಬಲಗೊಳ್ಳುತ್ತಿದೆ: ಸಾಹಿತಿ, ರಂಗ ವಿಮರ್ಶಕ ಡಾ.ಕೆ. ಮರುಳ ಸಿದ್ದಪ್ಪ, `ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಕದಡುವ ಮಹಾರಾಕ್ಷಸ ಸಂಸ್ಕೃತಿ ಹೆಚ್ಚು ಬಲವಾಗುತ್ತಿದೆ. ಈ ಬಗ್ಗೆ ಸಮುದಾಯ ಸೇರಿದಂತೆ ಎಲ್ಲ ಪ್ರಗತಿಪರ ಸಂಘಟನೆಗಳು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ~ ಎಂದು ಸಲಹೆ ನೀಡಿದರು.`ಪುತ್ತೂರು ಅಥವಾ ಸಿಂದಗಿಯ ಘಟನೆಗಳನ್ನು ಗಮನಿಸಿದರೆ ಸಾಮರಸ್ಯ ಕದಡಲು ಜನರನ್ನು ಪರಸ್ಪರ ಎತ್ತಿಕಟ್ಟುವ ಷಡ್ಯಂತ್ರ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವ ನಿರಂತರ ಪ್ರಯತ್ನ ನಡೆಯಬೇಕಾಗಿದೆ~ ಎಂದು ಅವರು ಹೇಳಿದರು.ಅಪೌಷ್ಟಿಕತೆ ರಾಷ್ಟ್ರೀಯ ಅಪಮಾನ ಎಂದು ಪ್ರಧಾನಿಯೇ ಒಪ್ಪಿಕೊಂಡಿರುವುದನ್ನು ಪ್ರಸ್ತಾಪಿಸಿದ ಅವರು, `ಇದರಿಂದ ದೇಶವು ದುಬರ್ಲರನ್ನು ಅತ್ಯಂತ ತಾತ್ಸಾರದಿಂದ ಕಾಣುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.  ಸುಮಾರು 20 ವರ್ಷಗಳಿಂದ ನಮ್ಮನ್ನಾಳುವವರು ತಮ್ಮ ಜವಾಬ್ದಾರಿಯಿಂದ ನಿರಂತರವಾಗಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ~ ಎಂದು ಆರೋಪಿಸಿದರು.

 

ಅಧ್ಯಕ್ಷತೆ ವಹಿಸಿದ್ದ `ಸಮುದಾಯ~ದ ಅಧ್ಯಕ್ಷ ಪ್ರೊ.ಆರ್.ಕೆ. ಹುಡುಗಿ, `ಕರ್ನಾಟಕ ರಾಜ್ಯವು ಸಾಂಸ್ಕೃತಿಕ ದೃಷ್ಟಿಯಿಂದ ಒಂದು ತಿರುವಿಗೆ ಬಂದು ನಿಂತಿದೆ. ಎಲ್ಲರೂ ಸಾಮರಸ್ಯದ ಕಡೆ ಸಾಗಲು ಸಮುದಾಯದ ಈ ಯುಗ ಯಾತ್ರೆಯಲ್ಲಿ ಎಲ್ಲರೂ ಹೆಜ್ಜೆ ಹಾಕಬೇಕು~ ಎಂದು ಕೋರಿದರು.

 

ರಂಗಕರ್ಮಿ ಸುರೇಂದ್ರ ಸ್ವಾಗತಿಸಿದರು. ಕೆ.ಎಸ್. ವಿಮಲಾ ವಂದಿಸಿದರು. ನಂತರ ಕೆ.ಜಿ.ಎಫ್. ಸಮುದಾಯ ತಂಡದಿಂದ `ಪಿನಾಕಿನಿಯ ತೀರದಲ್ಲಿ~ ನಾಟಕ ಪ್ರದರ್ಶಿಸಲಾಯಿತು.

 

ಪ್ರತಿಕ್ರಿಯಿಸಿ (+)