ಭಾನುವಾರ, ಜನವರಿ 19, 2020
22 °C
ಜಿ.ಪಂ.ಸದಸ್ಯತ್ವ ಅನೂರ್ಜಿತ ಪ್ರಕರಣ

ಸಂಜೆವರೆಗೂ ಕಾದರೂ ಸಿಗದ ಪ್ರಮಾಣ ಪತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲಾ ಪ್ರಧಾನ ಮತ್ತು ಸೆಷನ್‌ ನ್ಯಾಯಾಲಯದ ಆದೇಶದಂತೆ ಜಿಲ್ಲಾ ಪಂಚಾಯಿತಿಯ ಕೂಟಗಲ್‌ ಕ್ಷೇತ್ರದ ಸದಸ್ಯತ್ವ ಪಡೆಯುವ ಸಂಬಂಧ ಜೆಡಿಎಸ್‌ನ ಸುಮಿತ್ರಮ್ಮ ಅವರು ಗುರುವಾರ ಉಪವಿಭಾಗಾಧಿಕಾರಿ ಅವರನ್ನು ಭೇಟಿ ಮಾಡಲು ಅವರ ಕಚೇರಿ ಮುಂದೆ ಸಂಜೆವರೆಗೆ ಕಾದ ಪ್ರಸಂಗ ನಡೆಯಿತು.‘ನ್ಯಾಯಾಲಯವು ಕೂಟಗಲ್‌ ಜಿ.ಪಂ ಕ್ಷೇತ್ರದ ಸದಸ್ಯೆ ಮಂಜುಳಾ ಮರಿದೇವರು ಅವರ ಸದಸ್ಯತ್ವವನ್ನು ಅನೂರ್ಜಿತಗೊಳಿಸಿ, ನನ್ನನ್ನು ವಿಜೇತ ಅಭ್ಯರ್ಥಿ ಎಂದು ಆದೇಶ ನೀಡಿದೆ. ಅದರಂತೆ ಉಪ ವಿಭಾಗಾಧಿಕಾರಿ ಅವರನ್ನು ಭೇಟಿ ಮಾಡಿ, ಅವರಿಂದ ಪ್ರಮಾಣ ಪತ್ರ ಪಡೆಯಲು ಕಾಯುತ್ತಿದ್ದೇನೆ. ಆದರೆ ಅವರು ಸಂಜೆಯಾದರೂ ಕಚೇರಿಗೆ ಬಾರದಿದ್ದರಿಂದ ಬೇಸರವಾಗಿದೆ’ ಎಂದು ಸುಮಿತ್ರಮ್ಮ ಸುದ್ದಿಗಾರರಿಗೆ ತಿಳಿಸಿದರು.ಈ ನಡುವೆ ಸುಮಿತ್ರಮ್ಮ ಅವರಿಗೆ ಜಿ.ಪಂ ಅಧ್ಯಕ್ಷ ಎಚ್‌.ಸಿ.ರಾಜಣ್ಣ, ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಎಂ.ಕೆ.ಧನಂಜಯ್‌, ರಘುಕುಮಾರ್‌, ಮಾಜಿ ಸದಸ್ಯೆ ಲಕ್ಷ್ಮಿದೇವಮ್ಮ ‘ಸಾತ್‌’ ನೀಡಿದರು.‘ಉಪ ವಿಭಾಗಾಧಿಕಾರಿ ಅವರು ಲೋಕಾಯುಕ್ತ ನ್ಯಾಯಾಲಯಕ್ಕೆ ಬೆಂಗಳೂರಿಗೆ ತೆರಳಿದ್ದರು. ಅವರು ಸಂಜೆ 4 ಗಂಟೆಗೆ ರಾಮನಗರಕ್ಕೆ ಹಿಂದಿರುಗಿದ್ದಾರೆ ಎಂದು ಗೊತ್ತಾಗಿದೆ. ಅವರು ಕಚೇರಿಗೆ ಬಂದರೆ ಅವರನ್ನು ಕಂಡು ನ್ಯಾಯಾಲಯದ ಆದೇಶದ ಪ್ರತಿ ನೀಡಿ, ಪ್ರಮಾಣ ಪತ್ರ ನೀಡುವಂತೆ ಮನವಿ ಮಾಡಲು ಕಚೇರಿ ಬಳಿ ಕಾಯುತ್ತಿರುವುದಾಗಿ’ ಜಿ.ಪಂ ಅಧ್ಯಕ್ಷ ರಾಜಣ್ಣ ತಿಳಿಸಿದರು.‘ಉಪ ವಿಭಾಗಾಧಿಕಾರಿ ಅವರು ಮನೆಯಲ್ಲಿ ಇದ್ದಾರೆ ಎಂದು ತಿಳಿದು ಅಲ್ಲಿಗೆ ಹೋಗಲಾಯಿತು. ಆದರೆ ಅವರು ಮನೆಯಲ್ಲಿ ಇಲ್ಲ ಎಂದು ಅವರ ತಾಯಿ ತಿಳಿಸಿದರು’ ಎಂದರು. ಪುನಃ ಶುಕ್ರವಾರ ಬೆಳಿಗ್ಗೆ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಕೋರಲಾಗುವುದು ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)