ಮಂಗಳವಾರ, ಮೇ 24, 2022
31 °C

ಸಂವಹನ ಸುಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಪ್ರಕಟಿಸಿರುವ `ರಾಷ್ಟ್ರೀಯ ದೂರಸಂಪರ್ಕ ಕರಡು ನೀತಿ-2011~ರ (ಎನ್‌ಟಿಪಿ) ಮುಖ್ಯ ಉದ್ದೇಶವು ಮೊಬೈಲ್ ಸೇವೆಗಳ ಒಟ್ಟಾರೆ ಗುಣಮಟ್ಟ ಸುಧಾರಿಸುವುದೇ ಆಗಿದ್ದು, ಬಳಕೆದಾರರಿಗೆ ಇನ್ನಷ್ಟು `ಗ್ರಾಹಕ ಸ್ನೇಹಿ~ ಸವಲತ್ತು ಒದಗಿಸುವ ಮಹತ್ವಾಕಾಂಕ್ಷೆಯನ್ನೂ ಒಳಗೊಂಡಿದೆ. ಹಿಂದೊಮ್ಮೆ ದೇಶದ ಆರ್ಥಿಕ ಸುಧಾರಣಾ ಕ್ರಮಗಳ ಮುಂಚೂಣಿಯಲ್ಲಿದ್ದು ಈಗ ಕೋಟ್ಯಂತರ ರೂಪಾಯಿಗಳ (2ಜಿ) ಹಗರಣದ ಸುಳಿಗೆ ಸಿಲುಕಿರುವ  ದೂರಸಂಪರ್ಕ ವಲಯದ ಪಾಪ ಮತ್ತು ಕೊಳೆ ಸ್ವಚ್ಛಗೊಳಿಸಿ ಉತ್ಸಾಹ ಪುಟಿದೇಳಿಸುವ ಹಲವು ಕ್ರಮಗಳನ್ನು ಒಳಗೊಂಡಿರುವ ನೀತಿಯ ಜಾರಿಗೆ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸದಿರುವುದು ಮಾತ್ರ ನಿರಾಶಾದಾಯಕ. ಕೆಲ ವರ್ಷಗಳ ಹಿಂದೆ ಒಳಬರುವ ಕರೆಗಳ ಮೇಲಿನ ಶುಲ್ಕ ರದ್ದುಗೊಳಿಸಿದ ನಂತರ ಮೊಬೈಲ್ ಬಳಕೆ ವಿಷಯದಲ್ಲಿ ಕ್ರಾಂತಿಯೇ ನಡೆದಿದೆ. ಲೈಸೆನ್ಸ್, ತರಂಗಾಂತರ ಹಂಚಿಕೆಯಲ್ಲಿನ ಸಿಕ್ಕುಗಳ ಕಾರಣಕ್ಕೆ ರೋಮಿಂಗ್ (ಎಸ್‌ಟಿಡಿ) ಶುಲ್ಕ ಈಗಲೂ ಗ್ರಾಹಕರಿಗೆ ಹೊರೆಯೇ. ರಾಜ್ಯಗಳ ಗಡಿ ಪ್ರದೇಶದಲ್ಲಿನ ಜನರು ಮೊಬೈಲ್ ಗೋಪುರದ ವ್ಯಾಪ್ತಿ ಪ್ರದೇಶದ ಕಾರಣಕ್ಕೆ ಸ್ಥಳೀಯ ಪ್ರತಿ ಕರೆಗೂ ವೃಥಾ ರೋಮಿಂಗ್ ಶುಲ್ಕ ಪಾವತಿಸುತ್ತಾರೆ. `ಒಂದು ದೇಶ-ಒಂದು ಲೈಸೆನ್ಸ್~, `ಒಂದು ದೇಶ - ಉಚಿತ ರೋಮಿಂಗ್~ ಸೌಲಭ್ಯಗಳ ಅಡಿ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳ  ಮಧ್ಯೆ ಇರುವ ಅಂತರ ಕೊನೆಗೊಳಿಸಲು ಸರ್ಕಾರ ಉದ್ದೇಶಿಸಿರುವುದು ಗ್ರಾಹಕರ ಬವಣೆ ದೂರ ಮಾಡಲಿದೆ. ಸದ್ಯಕ್ಕೆ ನಿರ್ದಿಷ್ಟ ವೃತ್ತದಲ್ಲಿ ಇರುವ `ಮೊಬೈಲ್ ನಂಬರ್ ಪೋರ್ಟೆಬಿಲಿಟಿ~ (ಮೊಬೈಲ್ ಸ್ಥಿರ ಸಂಖ್ಯೆ) ಸೌಲಭ್ಯವನ್ನು ದೇಶದಾದ್ಯಂತ ವಿಸ್ತರಿಸಲು ಹೊರಟಿರುವುದು ಉತ್ತಮ ನಿರ್ಧಾರ.

ಇನ್ನಷ್ಟು ತರಂಗಾಂತರಗಳ ಬಿಡುಗಡೆ ಮತ್ತು ಅವುಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡುವ ಉದ್ದೇಶವು, ಸರ್ಕಾರ ಇದುವರೆಗಿನ ಹಗರಣಗಳಿಂದ ಉತ್ತಮ ಪಾಠ ಕಲಿತಿದೆ ಎನ್ನುವುದಕ್ಕೆ ನಿದರ್ಶನ. ದೂರಸಂಪರ್ಕ ರಂಗಕ್ಕೆ ಮೂಲಸೌಕರ್ಯ ಸ್ಥಾನಮಾನ, ದೂರಸಂಪರ್ಕ ಹಣಕಾಸು ನಿಗಮ ಸ್ಥಾಪನೆ ಉದ್ದೇಶವು ಈ ವಲಯವನ್ನು ಆರೋಗ್ಯ, ಶಿಕ್ಷಣದಂತೆ ಮೂಲ ಅಗತ್ಯ ಎಂದು ಪರಿಗಣಿಸುವಂತೆ ಮಾಡಲಿದೆ. ದೂರಸಂಪರ್ಕ, ಐ.ಟಿ, ಟೆಲಿವಿಷನ್ ಕಾರ್ಯಕ್ರಮ ಪ್ರಸಾರ ಮತ್ತು ಇತರ ವಿದ್ಯುನ್ಮಾನ ಪರಿಕರಗಳ ಸಂಗಮದತ್ತಲೂ ಗಮನ ಕೇಂದ್ರೀಕರಿಸಲಾಗಿದೆ. ಜೊತೆಗೆ ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಸುರಕ್ಷಿತ  ದೂರಸಂಪರ್ಕ ಮತ್ತು ಅತ್ಯಂತ ತ್ವರಿತಗತಿಯ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುವ ಉದ್ದೇಶ ಸಾಕಾರಗೊಂಡರೆ ಜನರ ಬದುಕು ಸಾಕಷ್ಟು ಹಸನಾಗಲಿದೆ. ಸದ್ಯ ಬಳಕೆಯಲ್ಲಿ ಇರುವ `ಇ-ಆಡಳಿತ~ದಿಂದ `ಮೊಬೈಲ್(ಎಂ)-ಆಡಳಿತ~ದತ್ತ ಸರ್ಕಾರದ ಚಿತ್ತ ಬದಲಾಗುತ್ತಿರುವುದು ಕಂಡು ಬರುತ್ತದೆ. ಲೈಸೆನ್ಸ್ ಸಂಬಂಧಿತ ಸುಧಾರಣೆಗಳು ಮೊಬೈಲ್ ಸೇವೆಯನ್ನು ತ್ವರಿತವಾಗಿ ಜಾರಿಗೆ ತರಲು, ಸ್ಪರ್ಧೆ ದ್ವಿಗುಣಗೊಳ್ಳಲು, ಗುಣಮಟ್ಟದ ಸೇವೆ ಒದಗಿಸಲು ನೆರವಾಗಲಿವೆ. ಡಿಸೆಂಬರ್‌ನಲ್ಲಿ ಸಮಗ್ರ ನೀತಿ ಪ್ರಕಟಿಸಿ ಅದರ ಜಾರಿಗೆ ಮುತುವರ್ಜಿ ವಹಿಸಿದರೆ ಸರ್ಕಾರದ ವರ್ಚಸ್ಸೂ ಹೆಚ್ಚೀತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.