ಮಂಗಳವಾರ, ಜೂನ್ 15, 2021
25 °C

ಸಚಿವರಿಗೆ ಕಾಂಗ್ರೆಸ್‌ ಕಾರ್ಯಕರ್ತರ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಸಂಜೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ನೂರಾರು ಕಾರ್ಯಕರ್ತರು ತಮ್ಮ ನಾಯಕರ ಪರ, ವಿರೋಧವಾಗಿ ಘೋಷಣೆ ಮತ್ತು ಧಿಕ್ಕಾರ ಕೂಗಿದ್ದರಿಂದ ಸ್ವಲ್ಪ ಕಾಲ ಗೊಂದಲದ ವಾತಾವರಣ ಉಂಟಾಯಿತು.ಮಂಗಳವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರನ್ನು ಭೇಟಿ ಮಾಡಲು ಹಾಗೂ ಮನವಿ ಸಲ್ಲಿಸಲು ಕಾಂಗ್ರೆಸ್‌ ಕಾರ್ಯಕರ್ತರು ಕಾದು ಕುಳಿತಿದ್ದರು. ಇದೇ ವೇಳೆಗೆ ಸಚಿವರನ್ನು ಸ್ವಾಗತಿಸಲು ಶಾಸಕ ಕೆ.ಎಂ. ಶಿವಲಿಂಗೇಗೌಡ ಸಹ ಬೆಂಬಲಿಗರೊಂದಿಗೆ ಬಂದರು. ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾ ಘಟಕ ಅಧ್ಯಕ್ಷ ಬಿ. ಶಿವರಾಂ ಮತ್ತು ಸಚಿವರ ಪರ ಜೈಕಾರ ಹಾಕಿದರು.  ಅಷ್ಟರಲ್ಲಿ ಪ್ರವಾಸಿ ಮಂದಿರ ಆವರಣ ಪ್ರವೇಶಿಸಿದ ಸಚಿವರು ಶಾಸಕರು ನಿಂತಿರುವುದನ್ನು ನೋಡಿ ಕಾರನ್ನು ಅಲ್ಲಿಯೇ ನಿಲ್ಲಿಸಿ, ಅವರಿಂದ  ಮಾಲಾರ್ಪಣೆ ಸ್ವೀಕರಿಸಿದರು. ಇದನ್ನು ನೋಡಿದ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಸಚಿವರ ಕಾರಿನತ್ತ ಓಡಿ ಬಂದು ಮುತ್ತಿಗೆ ಹಾಕಿದ್ದಲ್ಲದೇ ಅವಾಚ್ಯ ಪದಗಳಿಂದ ನಿಂದಿಸಿದರು ಎನ್ನಲಾಗಿದೆ.ಪೊಲೀಸರು ತಕ್ಷಣ ಬಿಗಿ ಭದ್ರತೆಯೊಂದಿಗೆ ಸಚಿವರನ್ನು ಪ್ರವಾಸಿ ಮಂದಿರಕ್ಕೆ ಕರೆ ತಂದರು. ಇಷ್ಟಾದರೂ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶ ಕಡಿಮೆಯಾಗಲಿಲ್ಲ. ತಮ್ಮದೇ ಪಕ್ದವರು ಎನ್ನುವುದನ್ನೂ ಲೆಕ್ಕಿಸದೇ ಏರು ದನಿಯಲ್ಲಿ ಕೂಗಾಡಿದರು. ಜಿಲ್ಲೆಗೆ ಬಂದಾಗಲೆಲ್ಲ, ದೇವೇಗೌಡ ಹಾಗೂ ರೇವಣ್ಣ ಅವರನ್ನು ಹಾಡಿ ಹೊಗಳುವುದಾದರೆ ಜಿಲ್ಲೆಗೆ ಏಕೆ ಬರುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಶಿವರಾಂ ಕಾರ್ಯರ್ತರನ್ನು ಸಮಾಧಾನಪಡಿಸಿದರು.‘ಎತ್ತಿನಹೊಳೆ ಯೋಜನೆ: ರಾಜಕೀಯ ಇಲ್ಲ’

ಅರಸೀಕೆರೆ:  ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ರೈತರಿಗೆ ಯಾವುದೇ ಆತಂಕ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ. ಮಹದೇವಪ್ಪ ಮಂಗಳವಾರ ಭರವಸೆ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ತೆಂಗು ಬೆಳೆ ನಾಶವಾಗಿರುವ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಖಾಸಗಿ ಕಂಪನಿಯೊಂದು ರೈತರಿಂದ ಹಣ ವಸೂಲಿ ಮಾಡುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿಯೇ ಇದ್ದ  ಜಿಲ್ಲಾಧಿಕಾರಿ ಅನ್ಬುಕುಮಾರ್‌ ಅವರಿಗೆ ಸೂಚಿಸಿದರು.ರಾಜಕೀಯ ಬೇಡ

ಹಾಸನ ಜಿಲ್ಲೆಯಲ್ಲಿ ಅರಸೀಕೆರೆ ಸದಾ ಬರಗಾಲಕ್ಕೆ ಸಿಕ್ಕು, ಕುಡಿಯುವ ನೀರಿನ ತೊಂದರೆ ಎದುರಿಸುತ್ತಿದೆ. ಸರ್ಕಾರ ಎತ್ತಿನಹೊಳೆ ಯೋಜನೆ ಮೂಲಕ ಜನರಿಗೆ ಕುಡಿಯಲು ನೀರು ಒದಗಿಸಲು ಮುಂದಾಗಿದೆಯೇ ಹೊರತು ಇದರಲ್ಲಿ ರಾಜಕೀಯ ಮಾಡುವುದಿಲ್ಲ. ವಿನಾ ಕಾರಣ ರಾಜಕಾರಣ ಬೆರೆಸಿ ಯೋಜನೆಯನ್ನು ಹಾಳು ಮಾಡುವುದು ಬೇಡ ಎಂದು ಮಹದೇವಪ್ಪ ತಿಳಿಸಿದರು.ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ಸಂಪೂರ್ಣ ಬದ್ಧವಾಗಿದೆ. ಅದನ್ನು ಮಾಡಲಾಗದವರು ಈ ಯೋಜನೆಯನ್ನು ಚುನಾವಣೆಯ ಗಿಮಿಕ್‌ ಎನ್ನುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.