ಶುಕ್ರವಾರ, ಮೇ 20, 2022
27 °C

ಸಚಿವ ಸುರೇಶ್ ಕುಮಾರ್ ಹೇಳಿಕೆ ಪ್ರತಿ ಕಟ್ಟಡದಲ್ಲೂ ಮಳೆ ನೀರು ಸಂಗ್ರಹ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಳೆ ನೀರು ಸಂಗ್ರಹಕ್ಕೆ ನಗರದ ನಿವಾಸಿಗಳು ಮುಂದಾಗದ್ದಿದ್ದರೆ ಜಲಮಂಡಳಿಯೇ ಖುದ್ದಾಗಿ ಪ್ರತಿ ಮನೆಗಳಲ್ಲಿ ಈ ವ್ಯವಸ್ಥೆ ಅಳವಡಿಸಲು ನಿರ್ಧರಿಸಿದೆ’ ಎಂದು ಬೆಂಗಳೂರು ಜಲಮಂಡಲಿ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

 

ವಿಶ್ವ ಜಲದಿನದ ಅಂಗವಾಗಿ ಬೆಂಗಳೂರು ಜಲಮಂಡಲಿ ಹಾಗೂ ಮಂಡಲಿಯ ಎಂಜಿನಿಯರ್‌ಗಳ ಸಂಘ ಸಂಯುಕ್ತವಾಗಿ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಜಲದಿನ 2011 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

 

‘ಮಳೆನೀರು ಸಂಗ್ರಹ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಜಲಮಂಡಲಿ ಸಿಬ್ಬಂದಿಯೇ ನಗರದ ಪ್ರತಿ ಕಟ್ಟಡಗಳಿಗೆ ಸಂಗ್ರಹ ವ್ಯವಸ್ಥೆಯನ್ನು ಅಳವಡಿಸುತ್ತಾರೆ. ನಂತರ ಅದಕ್ಕೆ ತಗಲುವ ವೆಚ್ಚವನ್ನು ನೀರಿನ ಬಿಲ್ ಮೂಲಕ ಸಂಗ್ರಹಿಸಲಾಗುತ್ತದೆ’ ಎಂದು ತಿಳಿಸಿದರು.

 

‘ಮಳೆ ನೀರು ಸಂಗ್ರಹ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಮುಖ್ಯವಾದ ವಿಚಾರವಾಗಿದೆ. ಅದರಲ್ಲಿಯೂ ಪ್ರತಿ ಶಾಲೆಗಳಿಗೆ ತೆರಳಿ ಮಕ್ಕಳಲ್ಲಿ ಮಳೆ ನೀರು ಸಂಗ್ರಹದ ಮಹತ್ವವನ್ನು ವಿವರಿಸಲಾಗುವುದು. ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ಇನ್ನಷ್ಟು ಪ್ರಚಾರ ನೀಡಲಾಗುವುದು’ ಎಂದರು.

 

‘ರಾಜ್ಯದಲ್ಲಿ ನೀರಿನ ಖಾಸಗೀಕರಣ ನಡೆಯುತ್ತಿದೆ ಎಂಬ ಬಗ್ಗೆ ಸಾಕಷ್ಟು ಪ್ರಚಾರ ನಡೆಯುತ್ತಿದೆ. ಆದರೆ ಸರ್ಕಾರ ಯಾವುದೇ ಕಾರಣಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವುದಿಲ್ಲ’ ಎಂದು ಭರವಸೆ ನೀಡಿದರು.

 

‘ಸೋರಿಕೆ ತಡೆಗಟ್ಟುವ ಮತ್ತಿತರ ಮೌಲ್ಯವರ್ಧಿತ ಕಾರ್ಯಗಳಿಗಾಗಿ ಖಾಸಗಿ ಸಂಸ್ಥೆಗಳಿಂದ ಮಾರ್ಗದರ್ಶನ ಪಡೆಯಲಾಗುತ್ತಿದೆ. ಜಲ ಮೂಲ, ನೀರಿನ ದರ ಹಾಗೂ ಅಕ್ರಮ ಸಂಪರ್ಕಗಳ ನಿಯಂತ್ರಣವನ್ನು ಎಂದಿಗೂ ಸರ್ಕಾರ ಖಾಸಗೀಕರಣಗೊಳಿಸುವುದಿಲ್ಲ’ ಎಂದರು.

 

‘ರಾಜ್ಯದ ಜನತೆ ಕೊಳವೆಬಾವಿಗಳನ್ನು ಅವಲಂಬಿಸುವುದನ್ನು ತಪ್ಪಿಸಬೇಕು ಎಂಬ ಕಾರಣಕ್ಕಾಗಿ ಕನ್ನಡ ಗಂಗಾ ಯೋಜನೆಯನ್ನು ಜಾರಿಗೆ ತರುತ್ತದೆ. ನೀರಿನ ಅಭಾವ ಇರುವ ವಿಜಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

 

ಅಲ್ಲದೇ 14 ಪಟ್ಟಣಗಳು ಯೋಜನೆಯ ವ್ಯಾಪ್ತಿಗೆ ಒಳಪಟ್ಟಿವೆ’ ಎಂದು ತಿಳಿಸಿದರು. ‘ಬೆಳಗಾವಿ, ಹುಬ್ಬಳ್ಳಿ, ಗುಲ್ಬರ್ಗದ ಪ್ರತಿ ವಾರ್ಡ್‌ಗಳಲ್ಲಿ 24 ಗಂಟೆಯೂ ನೀರು ಒದಗಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೀರು ಸದಾ ಕಾಲ ದೊರೆಯುವುದರಿಂದ ಜನ ಅದರ ದುರ್ಬಳಕೆ ಮಾಡುವುದಿಲ್ಲ. ಅಲ್ಲದೇ ಸೋರಿಕೆ ಕೂಡ ನಿಲ್ಲುತ್ತದೆ. ಇಂತಹ ಮಹತ್ವದ ಯೋಜನೆ ರಾಜ್ಯದೆಲ್ಲಡೆ ಜಾರಿಯಾಗಬೇಕಿದೆ’ ಎಂದು ಹೇಳಿದರು.

 

‘ಜಲಮಂಡಲಿ ಅಧಿಕಾರಿಗಳು ನಗರದ ಜನತೆಗೆ ನೀರು ಒದಗಿಸುವ ಕೆಲಸವನ್ನು ಕೇವಲ ಕರ್ತವ್ಯ ಎಂದು ಭಾವಿಸದೇ ಹೆಮ್ಮೆಯಿಂದ ಕಾರ್ಯ ನಿರ್ವಹಿಸಬೇಕು. ಮಳೆ ನೀರು ಸಂಗ್ರಹದ ಬಗ್ಗೆ ಅಪಾರ ಜನಜಾಗರತಿ ಮೂಡಿಸಲು ಮುಂದಾಗಬೇಕು’ ಎಂದು ಕರೆ ನೀಡಿದರು.

 

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನಿವೃತ್ತ ಪ್ರಾಧ್ಯಾಪಕ ರಾಮಪ್ರಸಾದ್ ಮಾತನಾಡಿ ‘ಜನಸಂಖ್ಯೆ ನೂರು ಕೋಟಿಗೂ ಹೆಚ್ಚಿದ್ದು ಇದರ ಆರುಪಟ್ಟು ನೀರು ವೆಚ್ಚವಾಗುತ್ತಿದೆ. ನೀರಿನ ಬೇಡಿಕೆ ಹೆಚ್ಚಿರುವುದರಿಂದ ಜಲ ಸಂಗ್ರಹಕ್ಕೆ ಜನರು ಹೆಚ್ಚು ಒತ್ತು ನೀಡಬೇಕಿದೆ’ ಎಂದರು.

 

‘ಯಶವಂತಪುರ, ಈಜಿಪುರ ಮುಂತಾದ ಕಡೆ ಪ್ರತಿ ಮಳೆಗಾಲದಲ್ಲಿ ಪ್ರವಾಹ ಉಕ್ಕುತ್ತದೆ. ನಗರದ ವಿನ್ಯಾಸ ಸರಿಯಾಗಿ ನಿರ್ಮಾಣವಾಗದೆ ಇರುವುದರಿಂದ ಜನರು ಪೇಚಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

 

ಜಲಮಂಡಲಿಯ ನಿವೃತ್ತ ಅಧ್ಯಕ್ಷ ಬಿ.ಎನ್.ತ್ಯಾಗರಾಜ್ ಮಾತನಾಡಿ ‘ಹಿಂದೆ ನೂರಾರು ಕೆರೆಗಳು ಇದ್ದುದರಿಂದ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿರಲಿಲ್ಲ. ಅನೇಕ ಕೆರೆಗಳು ಮಾರುಕಟ್ಟೆ, ಕ್ರೀಡಾಂಗಣ, ಬಸ್ ನಿಲ್ದಾಣಗಳಾಗಿ ಬದಲಾಗಿವೆ. ಈಗ ನಗರದಲ್ಲಿ ಒಟ್ಟು 62 ಕೆರೆಗಳಿವೆ ಎಂಬುದು ಒಂದು ಅಂದಾಜು. ಕೆರೆ ಅಭಿವೃದ್ಧಿ ಪ್ರಾಧಿಕಾರ ಇವುಗಳನ್ನು ಅಭಿವೃದ್ಧಿಗೊಳಿಸುವ ವಿಶ್ವಾಸವಿದೆ’ ಎಂದರು.

 

‘ಜಲಮಂಡಲಿ ಲೆಕ್ಕಕ್ಕೆ ಸಿಗದ ನೀರನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚಬೇಕಿದೆ. ಇದರಿಂದ ನೀರಿನ ಸೋರಿಕೆ ನಿಲ್ಲುವುದಲ್ಲದೇ ಮಂಡಲಿಯ ಆದಾಯ ಕೂಡ ಹೆಚ್ಚುತ್ತದೆ’ ಎಂದು ಅವರು ಹೇಳಿದರು. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿ ಸಿಂಗ್, ರಾಜ್ಯ ಪರಿಸರ ನಿಯಂತಣ ಮಂಡಲಿ ಅಧ್ಯಕ್ಷ ಎ.ಜೆ.ಸದಾಶಿವಯ್ಯ,   ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶಂಭು ದಯಾಳ್ ಮೀನ, ಜಲಮಂಡಲಿ ಅಧ್ಯಕ್ಷ ಪಿ.ಬಿ.ರಾಮಮೂರ್ತಿ, ಮಂಡಲಿಯ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ನಾರಾಯಣ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಕಾಲ್ನಡಿಗೆ ಜಾಥಾ

 ಇದಕ್ಕೂ ಮುನ್ನ ವಿಶ್ವ ಜಲದಿನದ ಅಂಗವಾಗಿ ಜಲಮಂಡಲಿ ಕಾಲ್ನಡಿಗೆ ಜಾಥಾ ಕಾವೇರಿ ಭವನದಿಂದ ಅರಮನೆ ರಸ್ತೆಯ ಜ್ಞಾನಜ್ಯೋತಿ ಸಭಾಂಗಣದವರೆಗೆ ಏರ್ಪಡಿಸಿತ್ತು. ಜಾಥಾವನ್ನು ನಟಿ ತಾರಾ ಉದ್ಘಾಟಿಸಿದರು. ಸಚಿವ ಎಸ್.ಸುರೇಶ್‌ಕುಮಾರ್, ಜಲಮಂಡಲಿ ಅಧ್ಯಕ್ಷ ಪಿ.ಬಿ.ರಾಮಮೂರ್ತಿ, ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ನಾರಾಯಣ ಜಾಥಾದಲ್ಲಿ ಪಾಲ್ಗೊಂಡರು. ನೀರಿನ ಮಹತ್ವ ಸಾರುವ ಫಲಕಗಳನ್ನು ಹಿಡಿದು ಜನಜಾಗೃತಿ ಮೂಡಿಸಲಾಯಿತು. 300ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.