ಯೋಗ ಮತ್ತು ಆಯುರ್ವೇದ ವಿದ್ಯೆಗಳನ್ನು ಕರಗತ ಮಾಡಿಕೊಂಡಿ ರುವ ಬಾಬಾ ರಾಮ್ದೇವ್, ಅವೆರಡನ್ನೂ ಸಂಯೋಜಿಸಿ ಮಾರುಕಟ್ಟೆಯಲ್ಲಿ ಹೊಸ ಪ್ರಯೋಗ ಮಾಡಲು ಹೊರಟಿದ್ದಾರೆ. ಯೋಗ ಫಲ ನೀಡಿದಂತೆ ಮಾರುಕಟ್ಟೆಯಲ್ಲೂ ಅವರ ಈ ಹೊಸ ಮಾಂತ್ರಿಕತೆಯ ಪ್ರಭಾವ ಕೆಲಸ ಮಾಡಲಿದೆಯೇ ಎನ್ನುವುದನ್ನು ಗವಿ ಬ್ಯಾಳಿ ಇಲ್ಲಿ ವಿವರಿಸಿದ್ದಾರೆ.

ಸದಾ ಒಂದಲ್ಲ ಒಂದು ವಿವಾದ ಮೈಮೇಲೆ ಎಳೆದುಕೊಂಡು ಸುದ್ದಿಯಲ್ಲಿರುವ ಯೋಗಗುರು ಬಾಬಾ ರಾಮ್ದೇವ್ ಅವರು ಈಗ ವಿಭಿನ್ನ ಕಾರಣಕ್ಕಾಗಿ ಮತ್ತೆ ಗಮನ ಸೆಳೆಯುತ್ತಿದ್ದಾರೆ. ಯೋಗ ಕಲಿಸುವ ಜತೆಗೆ ಸಣ್ಣದಾಗಿ ಆಯುರ್ವೇದ ಉತ್ಪನ್ನಗಳ ಮಾರಾಟ ಶುರುವಿಟ್ಟುಕೊಂಡಿದ್ದ ಅವರು, 2007ರಲ್ಲಿ ಹರಿದ್ವಾರದಲ್ಲಿ ಸ್ಥಾಪಿಸಿದ್ದ ಪತಂಜಲಿ ಸಂಸ್ಥೆ ಇದೀಗ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿರುವ ಉದ್ಯಮವಾಗಿ ಬೆಳೆದಿದೆ. ಆ ಸಾಮ್ರಾಜ್ಯವನ್ನು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಲು ರಾಮ್ದೇವ್ ಹೊರಟಿದ್ದಾರೆ.

ಯೋಗ ಮತ್ತು ಆಯುರ್ವೇದ ಉತ್ಪನ್ನಗಳಿಗೆ ಬ್ರ್ಯಾಂಡ್ ರೂಪಿಸಿ, ವ್ಯವಸ್ಥಿತ ವಾಣಿಜ್ಯ ಮಾರುಕಟ್ಟೆ ಕಲ್ಪಿಸಿದ ಕೀರ್ತಿ ರಾಮ್ದೇವ್ ಅವರಿಗೆ ಸಲ್ಲಬೇಕು. ಆಯುರ್ವೇದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಪತಂಜಲಿ ಆಯುರ್ವೇದ ಸಂಸ್ಥೆಯನ್ನು ಆರಂಭದಲ್ಲಿ ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ.

‘ಉದ್ಯಮವನ್ನು ಕೈಕಾಲು ಆಡಿಸಿ ಮಾಡುವ ಯೋಗದಂತೆ ಮಕ್ಕಳಾಟಿಕೆ ಎಂದುಕೊಂಡು ರಾಮ್ದೇವ್ ಹುಚ್ಚಾಟಿಕೆ ಮಾಡುತ್ತಿದ್ದಾರೆ’ ಎಂದು ಗೇಲಿ ಮಾಡಿದ್ದ ಖಾಸಗಿ ಕಂಪೆನಿಗಳು ಪತಂಜಲಿ ಉತ್ಪನ್ನಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದವು. ಜಾಹೀರಾತುಗಳ ಅಬ್ಬರ ಇಲ್ಲದೇ ಗ್ರಾಹಕರನ್ನು ತಲುಪಿರುವ ಪತಂಜಲಿ, ಈಗ ದೊಡ್ಡಮಟ್ಟದಲ್ಲಿ ದೇಶಿ ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ನಡೆಸಿದೆ. ದಶಕಗಳಿಂದ ಬೇರು ಬಿಟ್ಟಿರುವ ದೈತ್ಯ ಖಾಸಗಿ ಕಂಪನಿಗಳ ನಿದ್ರೆಗೆಡಿಸಿದೆ. ಬಹುರಾಷ್ಟ್ರೀಯ ಖಾಸಗಿ ಕಂಪೆನಿಗಳು ತಮ್ಮ ಉತ್ಪನ್ನಗಳ ಬಿಕರಿಗಾಗಿ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿಯನ್ನು ನೀರಿನಂತೆ ಸುರಿಯುತ್ತಿರುವಾಗ ಆ ಯಾವ ಜಂಜಡಗಳಿಲ್ಲದೆ ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿರುವ ಸನ್ಯಾಸಿಯ ತಂತ್ರ ಉದ್ಯಮಿಗಳನ್ನು ದಂಗುಬಡಿಸಿದೆ.

ನೂಡಲ್ಸ್ನಿಂದ ಬಿಸ್ಕತ್ತಿನವರೆಗೆ, ಶಾಂಪೂವಿನಿಂದ ಹಲ್ಲುಜ್ಜುವ ಪೇಸ್ಟ್ನವರೆಗೆ 350ಕ್ಕೂ ಹೆಚ್ಚು ದಿನಬಳಕೆಯ ವಸ್ತುಗಳನ್ನು ಮಾರುಕಟ್ಟೆಗೆ ತಂದಿರುವ ಪತಂಜಲಿ ಕಂಪನಿ, ಮುಟ್ಟಿಸಿದ ಬಿಸಿಯಿಂದ ಇನ್ನುಳಿದ ಖಾಸಗಿ ಕಂಪೆನಿಗಳು ಎಚ್ಚೆತ್ತುಕೊಂಡಂತೆ ಕಾಣುತ್ತದೆ. ಜನಪ್ರಿಯತೆ ಪಡೆಯುತ್ತಿರುವ ಪತಂಜಲಿಯ ಸಾವಯವ, ಆಯುರ್ವೇದ, ನೈಸರ್ಗಿಕ ಹಾಗೂ ಗಿಡಮೂಲಿಕೆ ಉತ್ಪನ್ನಗಳ ಬಗ್ಗೆ ಕಾರ್ಪೊರೇಟ್ ಮೀಟಿಂಗ್ ಮತ್ತು ಬೋರ್ಡ್ ರೂಂಗಳಲ್ಲಿ ಚರ್ಚೆಯಾಗತೊಡಗಿದೆ.

ಪತಂಜಲಿ ಆಯುರ್ವೇದ ಸಂಸ್ಥೆಯ ಸೋಪು, ಶಾಂಪು, ಊದುಬತ್ತಿ, ಹಲ್ಲುಜ್ಜುವ ಪೇಸ್ಟ್, ಚರ್ಮದ ಕಾಂತಿ ಹೆಚ್ಚಿಸುವ ಕ್ರೀಮ್ಗಳು, ತುಪ್ಪ, ಜೇನು, ಹಣ್ಣಿನ ರಸ, ಸಕ್ಕರೆ, ಸಾಸಿವೆ, ವಿವಿಧ ತೈಲ, ಗೋಧಿ, ರಾಗಿ, ನೂಡಲ್ಸ್, ಕೊಬ್ಬರಿ ಎಣ್ಣೆ, ಉಪ್ಪು, ಇಂಗು, ಬಿಸ್ಕತ್ತು, ಓಟ್ಸ್, ಕಾರ್ನ್ ಫ್ಲೇಕ್ಸ್, ಸಿಹಿ ತಿನಿಸು, ಹಪ್ಪಳ ಹೀಗೆ ನಾನಾ ಉತ್ಪನ್ನಗಳ ಮಾರಾಟ ಭರಾಟೆ ಜೋರಾಗಿದೆ. ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಉತ್ಪನ್ನಗಳ ದೇಶಿ ಮಾರುಕಟ್ಟೆಯನ್ನು (ಎಫ್ಎಂಸಿಜಿ) ನಿಧಾನವಾಗಿ ಆಕ್ರಮಿಸಿಕೊಳ್ಳುತ್ತಿರುವ ಪತಂಜಲಿ, 2020ರ ವೇಳೆಗೆ ಗ್ರಾಹಕ ಉತ್ಪನ್ನಗಳ ಅತಿದೊಡ್ಡ ಸಂಸ್ಥೆಯಾಗಿ ಹೊರಹೊಮ್ಮುವ ಮಹದಾಸೆ ಇಟ್ಟುಕೊಂಡಿದೆ.

‘ಎಫ್ಎಂಸಿಜಿ’ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಏರುತ್ತಿದೆ. 2016ರಲ್ಲಿ ₹5,000 ಕೋಟಿ ವಹಿವಾಟು ನಡೆಸುವ ಗುರಿ ಹೊಂದಿದ್ದು, ಪ್ರತಿಸ್ಪರ್ಧಿ ಕಂಪೆನಿ ಮಾರಿಕೊ ವಹಿವಾಟನ್ನು (₹ 4,000 ಕೋಟಿ) ಮೀರಲಿದೆ ಎಂದು ಜಾಗತಿಕ ಹಣಕಾಸು ಸೇವಾ ಸಂಸ್ಥೆ ಜೆ.ಪಿ. ಮೋರ್ಗನ್ ತಿಳಿಸಿದೆ. ₹1,700 ಕೋಟಿ ವಾರ್ಷಿಕ ವಹಿವಾಟು ಹೊಂದಿರುವ ಮತ್ತೊಂದು ಎದುರಾಳಿ ಕಂಪೆನಿ ಇಮಾಮಿಯನ್ನು ಈಗಾಗಲೇ ಪತಂಜಲಿ ಹಿಂದಿಕ್ಕಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಳವಣಿಗೆ ಪ್ರಮಾಣ ಶೇ 67ರಷ್ಟು ಹೆಚ್ಚು. ಆರಂಭದಲ್ಲಿ ಫ್ರಾಂಚೈಸಿ ಮೂಲಕ ಮಾರುಕಟ್ಟೆಗೆ ಪ್ರವೇಶಿಸಿದ್ದ ಪತಂಜಲಿ 2012ರ ವೇಳೆಗೆ ನೂರೈವತ್ತು ಮಾರಾಟ ಮಳಿಗೆ ಹೊಂದಿತ್ತು. ಈಗ ಆ ಸಂಖ್ಯೆ ಹತ್ತು ಸಾವಿರದ ಗಡಿ ದಾಟಿದೆ.

ದೇಸಿ ನೂಡಲ್ಸ್ ವಿವಾದಗಳ ಸರಮಾಲೆ
ನೆಸ್ಲೆ ಇಂಡಿಯಾ ಕಂಪನಿ ಮ್ಯಾಗಿ ನೂಡಲ್ಸ್ ವಿವಾದಕ್ಕೆ ಸಿಲುಕುತ್ತಲೇ ಇಂಥ ಅವಕಾಶಕ್ಕಾಗಿ ಕಾಯುತ್ತಿದ್ದ ರಾಮ್ದೇವ್ ಅಗ್ಗದ ಬೆಲೆಯ (70 ಗ್ರಾಂ ನೂಡಲ್ಸ್ ಪ್ಯಾಕ್' ಬೆಲೆ ₹15) ‘ಪತಂಜಲಿ ವೆಜ್ ಆಟಾ ನೂಡಲ್ಸ್' ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಮ್ಯಾಗಿ ನೂಡಲ್ಸ್ ವಿವಾದದಿಂದ ಹೊರಬಂದು ಮತ್ತೆ ಮಾರುಕಟ್ಟೆ ಪ್ರವೇಶಿಸುವ ಮೊದಲೇ ಈ ದೇಸಿ ನೂಡಲ್ಸ್ನಿಂದ ಅನಿರೀಕ್ಷಿತ ಪೈಪೋಟಿ ಎದುರಿಸಬೇಕಾಯಿತು. ಮಾರುಕಟ್ಟೆಗೆ ಬರುತ್ತಲೇ ಪತಂಜಲಿ ನೂಡಲ್ಸ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಮಾರಾಟಕ್ಕೆ ಅನುಮತಿ ಪಡೆದಿಲ್ಲ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಷೋಕಾಸ್ ನೋಟಿಸ್ ಜಾರಿ ಮಾಡಿದೆ.

ಹರಿಯಾಣದ ಜಿಂದ್ನಲ್ಲಿ ಪತಂಜಲಿ ನೂಡಲ್ಸ್ನಲ್ಲಿ ಹುಳುಗಳು ಸಿಕ್ಕಿರುವುದು ದೊಡ್ಡ ಸುದ್ದಿಯಾಗಿದೆ. ಇದು ರಾಮ್ದೇವ್ ಕಂಪೆನಿಗಾದ ದೊಡ್ಡ ಹಿನ್ನಡೆ. ಹಲ್ಲುಜ್ಜುವ ಪೇಸ್ಟ್ ಹಾಗೂ ಇನ್ನಿತರ ಕೆಲವು ಉತ್ಪನ್ನಗಳಲ್ಲಿ ಮೂಳೆ ಹಾಗೂ ಹಾಗೂ ಮೂಳೆಯ ಬೂದಿ ಬಳಸಲಾಗುತ್ತಿದೆ ಎಂದು ಎಡ ಪಕ್ಷಗಳ ಮುಖಂಡರು ಈ ಹಿಂದೆ ರಾಮ್ದೇವ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನಂತರ ಈ ವಿವಾದ ತಣ್ಣಗಾದರೂ ಗ್ರಾಹಕರು ಪತಂಜಲಿ ಉತ್ಪನ್ನಗಳನ್ನು ಸಂಶಯದಿಂದ ಕಾಣುವಂತಾಯಿತು. ಹೀಗಾಗಿ ಕೆಲವು ದಿನ ಭಾರಿ ಹಿನ್ನಡೆ ಅನುಭವಿಸಿತ್ತು. ಆದರೆ, ಒಂದು ನಿರ್ದಿಷ್ಟ ಸಮೂಹದ ಗ್ರಾಹಕರ ಒಲವು ಪಡೆದ ಅದು ಮತ್ತೆ ಚೇತರಿಸಿಕೊಂಡಿತು.

ಫ್ಯೂಚುರಾ ಜೊತೆ ಒಪ್ಪಂದ
ಬಿಗ್ ಬಜಾರ್, ಈಸಿ ಡೇ ಮುಂತಾದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪತಂಜಲಿ ಉತ್ಪನ್ನಗಳ ಮಾರಾಟಕ್ಕೆ ಉದ್ಯಮಿ ಕಿಶೋರ್ ಬಿಯಾನಿ ಒಡೆತನದ ಫ್ಯೂಚುರಾ ಗ್ರೂಪ್ ಜೊತೆ ಪತಂಜಲಿ ಒಪ್ಪಂದ ಮಾಡಿಕೊಂಡಿದೆ. 240 ನಗರಗಳಲ್ಲಿರುವ ಫ್ಯೂಚುರಾ ಸಂಸ್ಥೆಯ ರಿಟೇಲ್ ಮಳಿಗೆಗಳಲ್ಲಿ ಉತ್ಪನ್ನಗಳು ಲಭ್ಯವಾಗಲಿದೆ ಎನ್ನುತ್ತಾರೆ ಪತಂಜಲಿ ಉತ್ಪನ್ನಗಳ ಮುಂಬೈ ವಿತರಣೆ ಹೊಣೆ ಹೊತ್ತ ಪಿಟ್ಟಿ ಸಮೂಹದ ಸಿಇಒ ಆದಿತ್ಯ ಪಿಟ್ಟಿ

ಭವಿಷ್ಯದ ಉತ್ಪನ್ನಗಳು
ಮಕ್ಕಳ ಆರೋಗ್ಯಕರ ಪೇಯಗಳಾದ( ಹೆಲ್ತ್ ಡ್ರಿಂಕ್ಸ್) ಹಾರ್ಲಿಕ್ಸ್ ಮತ್ತು ಬೋರ್ನ್ವಿಟಾದಂತೆ ಆಯುರ್ವೇದ ಮೂಲಿಕೆಗಳನ್ನು ಒಳಗೊಂಡ ಪವರ್ ವಿಟಾ ಎಂಬ ಪುಡಿ ಹಾಗೂ ಚಿಣ್ಣರ ಉತ್ಪನ್ನ (ಬೇಬಿ ಕೇರ್), ಸೌಂದರ್ಯ ಪ್ರಸಾಧನ, ಪೌಡರ್ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳ ತಯಾರಿಕೆಗೂ ಪತಂಜಲಿ ಮುಂದಾಗಿದೆ.

ದಕ್ಷಿಣದ ರಾಜ್ಯಗಳಲ್ಲಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ಚಿಂತನೆ ನಡೆಸಿದೆ. ಇದರ ಜೊತೆಗೆ ಇ-ಕಾಮರ್ಸ್, ರಫ್ತು ಬಗ್ಗೆ ಹೆಚ್ಚಿನ ಗಮನಹರಿಸಲು ಹಾಗೂ ಉದ್ಯಮ ವಿಸ್ತರಣೆಗಾಗಿ ಮುಂದಿನ ವರ್ಷ ₹ 1,000 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ. ಬೆಂಗಳೂರು ಹಾಗೂ ಹರಿದ್ವಾರದಲ್ಲಿ ಮೆಗಾ ಫುಡ್ ಪಾರ್ಕ್ ಸ್ಥಾಪನೆ ಹಾಗೂ ಮಾರಾಟ ಮಳಿಗೆ ‘ಮೆಗಾ ಮಾರ್ಟ್’ ತೆರೆಯಲು ಪಾಲುದಾರರನ್ನು ಎದುರು ನೋಡುತ್ತಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.

ರಾಮ್ದೇವ್ ಸುತ್ತಿಕೊಂಡ ವಿವಾದ
* ವಿದೇಶಿ ವಿನಿಮಯ (ಫೆಮಾ) ಉಲ್ಲಂಘನೆ ಆರೋಪ: ರಾಮ್ದೇವ್ ಹಾಗೂ ಅವರ ಟ್ರಸ್ಟ್ ವಿರುದ್ಧ ಜಾರಿ ನಿರ್ದೇಶನಾಲಯ ಮೊಕದ್ದಮೆ

* ಟ್ರಸ್ಟ್ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣು. ಆಯುರ್ವೇದ ಔಷಧಿಗಳ ಮಾರಾಟದಿಂದ ಗಳಿಸಿರುವ ಆದಾಯಕ್ಕೆ ₹ 58 ಕೋಟಿ ತೆರಿಗೆ ಕಟ್ಟುವಂತೆ ಸೂಚನೆ.

* ಗೋಮೂತ್ರ ಬಳಸಿ ತಯಾರಿಸಿದ ಪತಂಜಲಿ ಉತ್ಪನ್ನ ಬಳಸದಂತೆ ತಮಿಳುನಾಡು ಮುಸ್ಲಿಂ ಸಂಘಟನೆ ತೊವೀದ್ ಜಮತ್(ಟಿಎನ್ಟಿಜೆ) ಫತ್ವಾ

* ಐದು ಉತ್ಪನ್ನಗಳಲ್ಲಿ ಮಾತ್ರ ಗೋ ಮೂತ್ರ ಬಳಕೆ ಮಾಡಲಾಗಿದೆ ಎಂದು ಸ್ಪಷ್ಟನೆ

* ಪತಂಜಲಿ ಉತ್ಪನ್ನ ಖರೀದಿಸುತ್ತಿರುವ ಕೋಟಿಗೂ ಅಧಿಕ ಬಡ ಮುಸ್ಲಿಮರನ್ನು ದಾರಿ ತಪ್ಪಿಸುವ ಪಿತೂರಿ ಎಂದು ರಾಮ್ದೇವ್ ಟೀಕೆ

* ಹರಿಯಾಣದ ಪತಂಜಲಿ ಆಟಾ ನೂಡಲ್ಸ್ನಲ್ಲಿ ಹುಳುಗಳು ಪತ್ತೆ: ಪ್ರಕರಣ ದಾಖಲು

* ಗಂಡು ಸಂತಾನ ಪಡೆಯಲು ‘ದಿವ್ಯ ಪುತ್ರ ಜೀವಕ’ ಔಷಧಿ ನಿಷೇಧಕ್ಕೆ ಪಟ್ಟು. ಕೋರ್ಟ್ ಮೆಟ್ಟಿಲೇರಿದ ಪ್ರಕರಣ

* ಆಂಧ್ರ ಪ್ರದೇಶ ಸರ್ಕಾರದಿಂದ ₹ 207 ಕೋಟಿ ವೆಚ್ಚದಲ್ಲಿ 706 ಟನ್ ರಕ್ತಚಂದನ ಖರೀದಿಸಿ ಹೊಸ ವಿವಾದ

* ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಯೋಗಗುರು ಮಹಿಳೆಯರ ಚೂಡಿದಾರ್ ತೊಟ್ಟು ಪೊಲೀಸರಿಂದ ಪರಾರಿ

* ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹನಿಮೂನ್ ಮತ್ತು ಪಿಕ್ನಿಕ್ ನಡೆಸಲು ದಲಿತರ ಮನೆಗೆ ಹೋಗುತ್ತಾರೆ ಎಂಬ ಅಸಂಬದ್ಧ ಹೇಳಿಕೆ ನೀಡಿ ಹೊಸ ವಿವಾದ ಮೈಮೇಲೆ ಎಳೆದುಕೊಂಡ ಬಾಬಾ

* ‘ರಾಮ್ದೇವ್ ಸನ್ಯಾಸಿಯೇ ಅಲ್ಲ, ಯೋಗ ಶಿಬಿರವೊಂದಕ್ಕೆ 50 ಸಾವಿರ ರೂಪಾಯಿ ಶುಲ್ಕ ವಿಧಿಸುವ ಅವರು ಒಬ್ಬ ಉದ್ಯಮಿ’ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಟೀಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.