ಸೋಮವಾರ, ಜೂನ್ 21, 2021
26 °C

ಸರ್ಕಾರಿ ನೌಕರರ ವೇತನದಲ್ಲಿ ಜಿಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಧಿಕಾರಿ ವೇತನ ಸಮಿತಿಯ ವರದಿಯ ಶಿಫಾರಸುಗಳನ್ನು ಒಪ್ಪಿಕೊಂಡಿರುವ ಸರ್ಕಾರ, ಏಪ್ರಿಲ್ 1ರಿಂದ ಅವುಗಳನ್ನು ಜಾರಿಗೊಳಿಸಲಿದೆ. ಪರಿಣಾಮವಾಗಿ ರಾಜ್ಯದ ಎಲ್ಲ ವರ್ಗದ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ವೇತನ ಶ್ರೇಣಿ ಬಹುತೇಕ ದ್ವಿಗುಣಗೊಳ್ಳಲಿದೆ.ಸರ್ಕಾರ ಈಗ ಪ್ರಕಟಿಸಿರುವ ಪ್ರಕಾರ, ಸರ್ಕಾರಿ ನೌಕರರ ಕನಿಷ್ಠ ವೇತನ ಶ್ರೇಣಿ ರೂ 4,800-7,275ರಿಂದ ರೂ 9,600-14,550ಕ್ಕೆ ಹೆಚ್ಚಳವಾಗಲಿದೆ. ಗರಿಷ್ಠ ವೇತನ ಶ್ರೇಣಿ ರೂ 28,275-39,900ರಿಂದ ರೂ 56,660-79,800ಕ್ಕೆ ಜಿಗಿಯಲಿದೆ.ಏ.1ಕ್ಕೆ ಇರುವ ಮೂಲ ವೇತನ, ಜನವರಿ 1ರಂದು ಇದ್ದ ಶೇಕಡ 76.75 ತುಟ್ಟಿಭತ್ಯೆ, ಶೇ 15ರ ಪರಿಹಾರ ಸೇರಿದಂತೆ ಶೇ 22.5ರಷ್ಟು `ಫಿಟ್‌ಮೆಂಟ್~ ಹೆಚ್ಚಳವನ್ನು ಕೂಡಿಸಿ ಸರ್ಕಾರಿ ನೌಕರರ ವೇತನ ಶ್ರೇಣಿ ನಿಗದಿ ಮಾಡಲಾಗಿದೆ. ಪ್ರಸ್ತುತ ಇರುವ ವೇತನ ಬಡ್ತಿಗಳ ದರವನ್ನೂ ದ್ವಿಗುಣಗೊಳಿಸಲಾಗಿದೆ.ಮನೆ ಬಾಡಿಗೆ ಭತ್ಯೆ ನಿಗದಿಯಲ್ಲಿ ನಗರ, ಪಟ್ಟಣ ಮತ್ತು ಇತರೆ ಪ್ರದೇಶಗಳನ್ನು ಆರು ಗುಂಪುಗಳಾಗಿ ವರ್ಗೀಕರಿಸಲಾಗುತ್ತಿತ್ತು. ಈಗ ಅದನ್ನು ನಾಲ್ಕು ಗುಂಪುಗಳಿಗೆ ಇಳಿಕೆ ಮಾಡಲಾಗಿದೆ. ಮನೆ ಬಾಡಿಗೆ ಭತ್ಯೆಯ ಕನಿಷ್ಠ ದರವನ್ನು ಶೇ 6ರಿಂದ ಶೇ 7ಕ್ಕೆ ಹೆಚ್ಚಿಸಲಾಗಿದೆ.

 

ನಗರ ಪರಿಹಾರ ಭತ್ಯೆ ದರಗಳನ್ನು ರೂ 80-300ರಿಂದ ರೂ 250-400ಕ್ಕೆ ಏರಿಕೆ ಮಾಡಲಾಗಿದೆ. `ಸಿ~ ಮತ್ತು `ಡಿ~ ಸಮೂಹದ ನೌಕರರ ವೈದ್ಯಕೀಯ ಭತ್ಯೆಯ ದರವನ್ನು ಮಾಸಿಕ ರೂ 50ರಿಂದ ರೂ 100ಕ್ಕೆ ಹೆಚ್ಚಿಸಲಾಗಿದೆ. ಇತರೆ ಭತ್ಯೆಗಳು, ವಿಶೇಷ ಭತ್ಯೆ ಮತ್ತು ಸೌಲಭ್ಯಗಳ ದರದಲ್ಲೂ ಹೆಚ್ಚಳ ಆಗಲಿದೆ.ನಿವೃತ್ತರಿಗೂ ಸಿಹಿ: ನಿವೃತ್ತ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಮಾಸಿಕ ನಿವೃತ್ತಿ ವೇತನದ ಕನಿಷ್ಠ ಮೊತ್ತ ರೂ 4,800 ಇರಲಿದೆ. ಗರಿಷ್ಠ 39,900 ರೂಪಾಯಿಗಳವರೆಗೂ ನಿವೃತ್ತಿ ವೇತನ ದೊರೆಯಬಹುದು. ಕುಟುಂಬ ನಿವೃತ್ತಿ ವೇತನದ ಕನಿಷ್ಠ ಮೊತ್ತ ಮಾಸಿಕ ರೂ 4,800 ಇದ್ದರೆ, ಗರಿಷ್ಠ ರೂ 23,940 ಇರಲಿದೆ. ಮರಣ ಮತ್ತು ನಿವೃತ್ತಿ ಉಪದಾನದ ಮಿತಿಯನ್ನು ರೂ 6 ಲಕ್ಷದಿಂದ ರೂ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.