ಮಂಗಳವಾರ, ಜನವರಿ 28, 2020
21 °C

ಸರ್ಕಾರಿ ಹುದ್ದೆ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಅಂತರಿಕ್ಷ್- ದೇವಾಸ್ ಒಪ್ಪಂದದಡಿ ಎಸ್- ಬ್ಯಾಂಡ್ ತರಂಗಾಂತರ ಹಂಚಿಕೆ ಒಪ್ಪಂದ ಹಗರಣಕ್ಕೆ ಸಂಬಂಧಿಸಿದಂತೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಮುಖ್ಯಸ್ಥ ಜಿ.ಮಾಧವನ್ ನಾಯರ್ ಮತ್ತು ಇತರ ಮೂವರು ನಿವೃತ್ತ ಬಾಹ್ಯಾಕಾಶ ವಿಜ್ಞಾನಿಗಳು ಯಾವುದೇ ಸರ್ಕಾರಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸದಂತೆ ಕೇಂದ್ರ ಸರ್ಕಾರ ಬುಧವಾರ ನಿರ್ಬಂಧ ಹೇರಿದೆ.ಇಸ್ರೊ ಮಾಜಿ ವೈಜ್ಞಾನಿಕ ಕಾರ್ಯದರ್ಶಿ ಕೆ.ಭಾಸ್ಕರ ನಾರಾಯಣ, ಸಂಸ್ಥೆಯ ವಾಣಿಜ್ಯ ಘಟಕವಾದ ಅಂತರಿಕ್ಷ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ  ಕೆ.ಆರ್.ಶ್ರೀಧರಮೂರ್ತಿ ಹಾಗೂ ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕ ಕೆ.ಎನ್.ಶಂಕರ್ ಈ ಅಪರೂಪದ ಶಿಸ್ತು ಕ್ರಮಕ್ಕೆ ಒಳಗಾದವರಲ್ಲಿ ಸೇರಿದ್ದಾರೆ.ಹಗರಣದ ತನಿಖೆ ನಡೆಸಿದ ಉನ್ನತಾಧಿಕಾರ ಸಮಿತಿ ನೀಡಿದ ವರದಿ ಹಾಗೂ ಅದರ ಆಧಾರದ ಮೇಲೆ ಕೇಂದ್ರೀಯ ಜಾಗೃತ ಆಯೋಗದ ಮಾಜಿ ಆಯುಕ್ತ ಪ್ರತ್ಯೂಷ್ ಸಿನ್ಹಾ ನೇತೃತ್ವದ ಐವರು ಸದಸ್ಯರ ತಂಡ ನೀಡಿದ ಶಿಫಾರಸುಗಳನ್ನು ಆಧರಿಸಿ ಸರ್ಕಾರ ಈ ಕ್ರಮ ಜರುಗಿಸಿದೆ. ಪ್ರಧಾನಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಸಮಿತಿಯ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸಲಾಯಿತು.ನಾಯರ್ ಅವರು ಇಸ್ರೊ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದೇವಾಸ್ ಸಂಸ್ಥೆಯ ಜೊತೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದರಲ್ಲಿ ಹಗರಣದ ವದಂತಿ ಕೇಳಿಬಂದ ಕೂಡಲೇ ಸರ್ಕಾರ ತನಿಖೆಗಾಗಿ ಮಾಜಿ ಸಂಪುಟ ಕಾರ್ಯದರ್ಶಿ ಬಿ.ಕೆ.ಚತುರ್ವೇದಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಒಪ್ಪಂದದ ಬಗ್ಗೆ ಸಮಿತಿಯು ಕೂಲಂಕಷ ಅಧ್ಯಯನ ನಡೆಸಿ ವರದಿ ನೀಡಿತ್ತು. ಇದರ ಆಧಾರದ ಮೇಲೆ ಸಚಿವ ಸಂಪುಟ ಸಮಿತಿ ಒಪ್ಪಂದವನ್ನು ರದ್ದು ಮಾಡಿತ್ತು.

ಪ್ರತಿಕ್ರಿಯೆಗೆ ನಕಾರ
ಈ ಪ್ರಕರಣದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಇಸ್ರೊ ನಿರಾಕರಿಸಿದೆ.`ಈ ಸಂದರ್ಭದಲ್ಲಿ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪ್ರಕರಣದ ಕುರಿತು ಸೂಕ್ತ ಸಮಯದಲ್ಲಿ ಪ್ರತಿಕ್ರಿಯೆ ನೀಡಲಾಗುವುದು. ಯಾರ ವಿರುದ್ಧ ಸರ್ಕಾರದ ಆದೇಶ ಬಂದಿದೆಯೋ ಅವರು ಮಾತ್ರ ಈಗ ಪ್ರತಿಕ್ರಿಯೆ ನೀಡುತ್ತಿದ್ದಾರೆ~ ಎಂದು ಇಸ್ರೊದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಇಸ್ರೊ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಿವೃತ್ತ ಅಧಿಕಾರಿಗಳ ವಿರುದ್ಧ ಇಂತಹ ಕ್ರಮ ಜರುಗಿಸಲಾಗಿದೆ. ಇದರಿಂದಾಗಿ ನಾಯರ್ ಅವರು ಪಟ್ನಾ ಐಐಟಿ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಮುಂದುವರಿಯುವುದು ಸಂದೇಹಾಸ್ಪದವಾಗಿದೆ.`ಇಸ್ರೊ ಪರಿಸ್ಥಿತಿ ನಾಯಿಪಾಡು~

ಬೆಂಗಳೂರು/ಚೆನ್ನೈ (ಪಿಟಿಐ, ಐಎಎನ್‌ಎಸ್): `ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಪರಿಸ್ಥಿತಿ ನಾಯಿಪಾಡಾಗಿದೆ. ಸಂಸ್ಥೆಯ ಅಧ್ಯಕ್ಷ ಕೆ. ರಾಧಾಕೃಷ್ಣನ್ ಅವರಿಗೆ ಟ್ರಾನ್ಸ್‌ಪಾಂಡರ್ ಮತ್ತು ಉಪಗ್ರಹದ ನಡುವಿನ ವ್ಯತ್ಯಾಸವೂ ಗೊತ್ತಿಲ್ಲ~ ಎಂದು ಇಸ್ರೊ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಕಿಡಿಕಾರಿದರು.ವಿವಾದಿತ ಅಂತರಿಕ್ಷ್- ದೇವಾಸ್ ಒಪ್ಪಂದದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಮ್ಮ ಮೇಲೆ ಕೈಗೊಂಡ ಕ್ರಮದ ಕುರಿತು ಚೆನ್ನೈನಲ್ಲಿ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, `ರಾಧಾಕೃಷ್ಣನ್ ಈ ಒಪ್ಪಂದದ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ದಿಕ್ಕು ತಪ್ಪಿಸುವ ಮಾಹಿತಿ ನೀಡಿದ್ದಾರೆ. ಸರ್ಕಾರ ಇಂಥ ನಿರ್ಧಾರ ಕೈಗೊಳ್ಳಲು ಅವರೇ ಕಾರಣ~ ಎಂದು ವಾಗ್ದಾಳಿ ನಡೆಸಿದರು.`ನಾನು ಅಧ್ಯಕ್ಷನಾಗಿದ್ದಾಗ ಬಜೆಟ್‌ನಲ್ಲಿ ಸಂಸ್ಥೆಗೆ ನೀಡಿದ್ದ ಅಷ್ಟೂ ಹಣ ಬಳಕೆಯಾಗುತ್ತಿತ್ತು. ಆದರೆ ಈಗ ಶೇಕಡ 50ರಷ್ಟೂ ಬಳಕೆಯಾಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಸಂಸ್ಥೆ ಯಾವುದೇ ಪ್ರಮುಖ ಯೋಜನೆ ಹಮ್ಮಿಕೊಂಡಿಲ್ಲ. ಶೀಘ್ರದಲ್ಲೇ ಸಂಸ್ಥೆಯ ಚಟುವಟಿಕೆಗಳು ನಿಂತುಹೋಗುತ್ತವೆ~ ಎಂದರು.ಬೆಂಗಳೂರು ವರದಿ: `ಇದು ಹೇಡಿತನದ ಕೃತ್ಯ. ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿಯೂ ಆಗಿರುವ ರಾಧಾಕೃಷ್ಣನ್ ಅವರು ಹಲವರ ವಿರುದ್ಧ ಪ್ರತೀಕಾರ ಕೈಗೊಳ್ಳುವ ಇರಾದೆ ಹೊಂದಿದ್ದಾರೆ. ಅವರ ಈ ಮನೋಭಾವ ಸಂಸ್ಥೆಗೆ (ಇಸ್ರೊ) ಮಾರಣಾಂತಿಕವಾಗಿ ಪರಿಣಮಿಸಿದೆ~ ಎಂದು ಸುದ್ದಿಗಾರರ ಜೊತೆ ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ನಾಯರ್ ಟೀಕಿಸಿದರು.`ಕೇಂದ್ರ ಈ ಕ್ರಮದ ಮೂಲಕ ನಡತೆ ಮತ್ತು ಪಿಂಚಣಿ ನಿಯಮಗಳನ್ನು ಉಲ್ಲಂಘಿಸಿದೆ. ಮುಂಬೈ ಮೇಲೆ ದಾಳಿ ಮಾಡಿದ ಭಯೋತ್ಪಾದಕನಿಗೂ 3-4 ಬಾರಿ ಮೇಲ್ಮನವಿ ಸಲ್ಲಿಸುವ ಅವಕಾಶ ನೀಡಲಾಗಿದೆ. ನಾವು ಆ ಭಯೋತ್ಪಾದಕನಿಗಿಂತಲೂ ಕೀಳಾಗಿ ಕಾಣುತ್ತಿದ್ದೇವೆಯೇ?~ ಎಂದು ಪ್ರಶ್ನಿಸಿದರು.`ದೇಶದಲ್ಲಿ ಮಿಲಿಟರಿ ಆಡಳಿತ ಇದ್ದರೂ, ವ್ಯಕ್ತಿಯೊಬ್ಬನನ್ನು ನಿಂದಿಸುವ ಮುನ್ನ ಆತನ ವಿಚಾರಣೆ ನಡೆಸಲಾಗುತ್ತದೆ. ಆದರೆ ನಮ್ಮ ವಿರುದ್ಧ ಕೈಗೊಂಡ ಕ್ರಮ ಅದಕ್ಕಿಂತಲೂ ಹೀನವಾಗಿದೆ~ ಎಂದು ಬೇಸರ ವ್ಯಕ್ತಪಡಿಸಿದರು.`ಇಡೀ ಪ್ರಕರಣವನ್ನು ಕೆಟ್ಟದಾಗಿ ನಿರ್ವಹಿಸಲಾಗಿದೆ. ಸರ್ಕಾರಿ ಹುದ್ದೆ ಹೊಂದುವುದರಿಂದ ಕೇಂದ್ರ ಸರ್ಕಾರ ನನ್ನನ್ನು ನಿಷೇಧಿಸಿರುವ ಕುರಿತ ಆದೇಶದ ಪ್ರತಿ ದೊರೆತಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಆದೇಶದ ಪ್ರತಿ ಪಡೆದು ಮುಂದಿನ ಕ್ರಮ ಏನೆಂಬುದನ್ನು ನಿರ್ಣಯಿಸುವೆ~ ಎಂದು ತಿಳಿಸಿದರು.ಈ ಪ್ರಕರಣದ ಕುರಿತು ಯಾವುದೇ ತನಿಖೆ ನಡೆಸಲಾಗಿಲ್ಲ. ಯಾರ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ. ಆದರೂ ಸರ್ಕಾರ ಹೇಗೆ ಇಂಥ ಕ್ರಮ ಜರುಗಿಸಿದೆ ಎಂದು ಪ್ರಶ್ನಿಸಿದರು.ಪ್ರಕರಣದ ಕುರಿತು ತನಿಖೆ ನಡೆಸಿದ ಸಮಿತಿಯೊಂದು ಇಸ್ರೊ-ದೇವಾಸ್ ಒಪ್ಪಂದ ವಿವಾದದಲ್ಲಿ ಏಳು ಮಂದಿಯನ್ನು ಹೆಸರಿಸಿದೆ. ಇದರಲ್ಲಿ ನಾಲ್ವರು ತಂತ್ರಜ್ಞರು ಮತ್ತು ಮೂವರು ಆಡಳಿತಾಧಿಕಾರಿಗಳು. ಆದರೆ ಕೇಂದ್ರ ಸರ್ಕಾರ ಆಡಳಿತಾಧಿಕಾರಿಗಳ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದೂ ಪ್ರಶ್ನಿಸಿದರು.`ಈ ಪ್ರಕರಣ ಒಂದು ವಿವಾದವೇ ಅಲ್ಲ. ದೇವಾಸ್ ಕಂಪೆನಿ ಜೊತೆ ತಾನು ಒಪ್ಪಂದ ಮಾಡಿಕೊಳ್ಳುತ್ತಿದ್ದೇನೆ ಎಂದು ಇಸ್ರೊ ಸರ್ಕಾರಕ್ಕೆ ತಿಳಿಸಬೇಕಿತ್ತು ಎನ್ನಲಾಗುತ್ತಿದೆ. ಆದರೆ ಆ ಸಂದರ್ಭದಲ್ಲಿ ಇದ್ದ ನಿಯಮಗಳ ಅನ್ವಯ ಇಸ್ರೊ ಈ ಒಪ್ಪಂದದ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಬೇಕಾದ ಅಗತ್ಯ ಇರಲಿಲ್ಲ~ ಎಂದು ತಿಳಿಸಿದರು.ರಾಧಾಕೃಷ್ಣನ್ ಅವರಿಗೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ನಿಯಮಗಳ ಕುರಿತು ಅರಿವಿಲ್ಲ. ಅವರು ಸಂಸ್ಥೆಯನ್ನೇ ಕೊಲೆ ಮಾಡುತ್ತಾರೆ ಎಂದು ಕಿಡಿ ಕಾರಿದರು.`ರಾಧಾಕೃಷ್ಣನ್ ಅವರು ವಿಧ್ವಂಸಕ ವ್ಯಕ್ತಿತ್ವದವರು. ಇಸ್ರೊ ಕುರಿತು ನನಗಿರುವ ಗೌರವದ ಕಾರಣ ನಾನು ಇಷ್ಟು ದಿನ ಸುಮ್ಮನಿದ್ದೆ. ಕಳೆದ ಎರಡು ವರ್ಷಗಳಿಂದ ಇಸ್ರೊ ನಡೆಸುತ್ತಿರುವ ಕಾರ್ಯಕ್ರಮಗಳನ್ನು ಒಮ್ಮೆ ಪರಿಶೀಲಿಸಿ, ಸಂಸ್ಥೆ ಎಲ್ಲಿದೆ ಎಂಬುದು ಗೊತ್ತಾಗುತ್ತದೆ~ ಎಂದರು.`ಸೇವೆ ಮುಂದುವರಿಕೆ~

ತಿರುವನಂತಪುರ (ಪಿಟಿಐ): ಕೇಂದ್ರ ಸರ್ಕಾರದ ನಿರ್ಬಂಧದ ನಡುವೆಯೂ, ಮಾಧವನ್ ನಾಯರ್ ಅವರ ಸೇವೆಯನ್ನು ಮುಂದುವರಿಸಲು ಕೇರಳ ಸರ್ಕಾರ ನಿರ್ಧರಿಸಿದೆ.`ನಾಯರ್ ಅವರ ಸೇವೆಯನ್ನು ರಾಜ್ಯ ಮುಂದೆಯೂ ಬಳಸಿಕೊಳ್ಳಲಿದೆ. ಅವರು ಸರ್ಕಾರಕ್ಕೆ ಅನೇಕ ಸಂದರ್ಭಗಳಲ್ಲಿ ಹಲವು ವಿಷಯಗಳ ಬಗ್ಗೆ  ಅಮೂಲ್ಯ ಸಲಹೆ, ಸೂಚನೆ ನೀಡಿದ್ದಾರೆ~ ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸ್ಪಷ್ಟಪಡಿಸಿದ್ದಾರೆ.`ಪ್ರಧಾನಿ ಕಚೇರಿ ಪಾತ್ರ~

ನವದೆಹಲಿ (ಪಿಟಿಐ): ವಿವಾದಿತ ಅಂತರಿಕ್ಷ್- ದೇವಾಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳ ವಿರುದ್ಧ ಕ್ರಮ ಜರುಗಿಸಿರುವ ಸರ್ಕಾರ, ಈ ಒಪ್ಪಂದಕ್ಕೆ ಕಾರಣವಾಗಿರುವ ಪ್ರಧಾನಿ ಕಚೇರಿ ಅಧಿಕಾರಿಗಳ ವಿರುದ್ಧ ಏಕೆ ಕ್ರಮ ಜರುಗಿಸಿಲ್ಲ ಎಂದು ಬಿಜೆಪಿ ಪ್ರಶ್ನಿಸಿದೆ.

ಪ್ರತಿಕ್ರಿಯಿಸಿ (+)