ಗುರುವಾರ , ಮೇ 13, 2021
39 °C

ಸರ್ವಜ್ಞ ಪ್ರಾಧಿಕಾರ: ಸಾಂಸ್ಕೃತಿಕ ಗಂಜಿಕೇಂದ್ರ ಆಗದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತ್ತೀಚಿಗೆ ರಾಜ್ಯ ಸರ್ಕಾರ ಹಾವೇರಿ ಜಿಲ್ಲೆ ಹಿರೇಕೆರೂರಿನ ಅಬಲೂರಿನಲ್ಲಿ ಸರ್ವಜ್ಞನ ಪ್ರಾಧಿಕಾರ ರಚನೆಗೆ ಹಸಿರು ನಿಶಾನೆ ತೋರಿದೆ.  ಕೇವಲ ಸ್ಥಾವರ ರೂಪಕ್ಕೆ ಸೀಮಿತಗೊಳಿಸುವ ಒಂದು ಭೌತಿಕ ಪ್ರತಿಷ್ಠಾಪನೆಗೆ ಮಾತ್ರ ಈ ಸರ್ವಜ್ಞ ಪ್ರಾಧಿಕಾರದ ಕಾರ್ಯ ಸೀಮಿತವಾಗಿ ಉಳಿಯಬಾರದು ಎನ್ನುವ  ಉದ್ದೇಶದಿಂದ ಇತ್ತೀಚಿಗೆ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಪಾಟೀಲ ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಒಂದು ಚಿಂತನ ಕೂಟವನ್ನು ಆಯೋಜಿಸಲಾಗಿತ್ತು.ಸರ್ವಜ್ಞ ಪ್ರಾಧಿಕಾರದ ಕಾರ್ಯವಿಧಾನ, ರಚನೆ ಹೇಗಿರಬೇಕು ಎನ್ನುವ ವಿಷಯವಾಗಿ ಪ್ರಾಜ್ಞರಿಂದ ಸಲಹೆಗಳನ್ನು ಪಡೆಯುವುದು ಇದರ ಉದ್ದೇಶವಾಗಿತ್ತು. ಧಾರವಾಡದ ಅನೇಕ ಹಿರಿಯರು, ನಾಗರಿಕರು ಆ ಸಭೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು.ಸರ್ವಜ್ಞ ಕವಿ ಗರ್ವದಿಂದಾದವನಲ್ಲ. `ಸರ್ವರೊಳು ಒಂದೊಂದು ನುಡಿ ಕಲಿತು ವಿದ್ಯೆಯ ಪರ್ವತವೇ ಆದ~ವನಂತೆ. ಜನರಲ್ಲಿದ್ದ ಒಡನಾಟವೇ ಸರ್ವಜ್ಞನ ಸಾಹಿತ್ಯದ ಮೂಲ ಸಾಮಗ್ರಿ. ಆದ್ದರಿಂದಲೇ ಓದು ಬರಹ ಅರಿಯದ, ಜನಸಾಮಾನ್ಯರ ಬಾಯಲ್ಲಿ ಸರ್ವಜ್ಞನ ತ್ರಿಪದಿಗಳು ಈಗಲೂ ನಲಿದಾಡುತ್ತವೆ.

 

ತುಂಡು ಬಟ್ಟೆಯ ಗಂಡು ಕವಿ ಎಂದು ಕರೆಯಿಸಿಕೊಂಡ ಸರ್ವಜ್ಞ ಸ್ವತಃ ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಆತ ಒಬ್ಬ ಮನಶ್ಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ,ಅರ್ಥಶಾಸ್ತ್ರಜ್ಞ, ಚರಿತ್ರಕಾರ, ಕವಿ, ತತ್ವಜ್ಞಾನಿ, ಆರ್ಥಿಕ ಚಿಂತಕ, ಅದ್ಭುತ ವಿಮರ್ಶಕ. ಇನ್ನೂ ಅನೇಕ ಪ್ರತಿಭೆಗಳ ಸಮನ್ವಯದಂತಿರುವ ಸರ್ವಜ್ಞ ಮುಂದಿನ ಪೀಳಿಗೆಯ ವಸ್ತುನಿಷ್ಠ ಅಧ್ಯಯನದ ನಿಕಷಕ್ಕೆ ಒಳಪಡಬೇಕು.ಜನಸಾಮಾನ್ಯನಿಗೆ ಪ್ರತಿಯೊಂದನ್ನು ಮೂರ್ತವಾಗಿಯೇ ಗ್ರಹಿಸುವ ರೂಢಿ. ಹೀಗಾಗಿ ಸರ್ವಜ್ಞನ ಸ್ಥಾವರ ಸ್ವರೂಪವನ್ನು ಅಲ್ಲಗಳೆಯುವಂತಿಲ್ಲ. ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಆತನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ದಿಶೆಯಲ್ಲಿಯೂ ಯತ್ನಿಸುವ ಅವಶ್ಯಕತೆಯಿದೆ.ಸರ್ವಜ್ಞನ ಬದುಕು, ಬರಹ, ವಿಚಾರಗಳ ಪರಾಮರ್ಶೆಯ ಜೊತೆಗೆ ಸಂಶೋಧನೆ ಮತ್ತು ಅಧ್ಯಯನಗಳನ್ನು ಕೈಗೆತ್ತಿಗೊಳ್ಳುವ ಒಂದು ಪುಟ್ಟ ವಿಶ್ವವಿದ್ಯಾಲಯದ ಹಾಗೆ ಈ ಸರ್ವಜ್ಞ ಪ್ರಾಧಿಕಾರ ರೂಪುಗೊಳ್ಳಬೇಕಿದೆ.ಸಾಂಸ್ಕೃತಿಕ ಸಮನ್ವಯತೆಯ ನಿಟ್ಟಿನಲ್ಲಿ ಸರ್ವಜ್ಞನನ್ನು ಅವನಷ್ಟೇ ಗಟ್ಟಿಯಾಗಿರುವ ಜನಪದ, ದಾರ್ಶನಿಕ ಕವಿಗಳೊಂದಿಗೆ ಸಮನ್ವಯಗೊಳಿಸಿ ತುಲನಾತ್ಮಕವಾದ ಅಧ್ಯಯನಗಳಿಗೆ ಅವಕಾಶ ಸಾಧ್ಯವಾಗುವಂತಹ ಪರಿಸರವನ್ನು ಈ ಪ್ರಾಧಿಕಾರ ರೂಪಿಸುವಲ್ಲಿ ನೆರವಾಗಬೇಕು. ಅಲ್ಲಿ ಸರ್ವಜ್ಞನ ಬದುಕು ಮತ್ತು ವಿಚಾರಗಳಿಗೆ ಸಂಬಂಧಿಸಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಆಗಾಗ ಜರುಗಬೇಕು.ಯಾರದೇ ಮನೆಯಲ್ಲಿರಲಿ ಸರ್ವಜ್ಞನ ಬಗೆಗಿರುವ ಹಸ್ತಪ್ರತಿಗಳನ್ನು ಹಾಗೂ ಅಮೂಲ್ಯವಾದ ಮಾಹಿತಿ ವಿವರಗಳನ್ನು ಕಲೆಹಾಕುವ, ಸಂರಕ್ಷಿಸುವ ಕೆಲಸ ಅಲ್ಲಿ ನಡೆಯಬೇಕು.

 

ಸರ್ವಜ್ಞನ ಪ್ರಾಧಿಕಾರದ ಸ್ಥಳದಲ್ಲಿ ಸುಸಜ್ಜಿತ ಗ್ರಂಥಾಲಯವನ್ನು ರೂಪಿಸಿ ಅಲ್ಲಿ ಸರ್ವಜ್ಞನಿಗೆ ಸಂಬಂಧಿಸಿದ ಗ್ರಂಥಗಳು, ಮಾಹಿತಿಗಳಲ್ಲದೆ, ತಿರುವಳ್ಳುವರ್, ವೇಮನ, ಕಬೀರ ನಂಥ ಸಂತ ಕವಿಗಳ ಬರಹಗಳೂ ಇರಬೇಕು. ಇದರಿಂದ ತುಲನಾತ್ಮಕವಾಗಿ ಅಧ್ಯಯನ ಮಾಡುವವರಿಗೆ ಆ ಗ್ರಂಥಾಲಯ ಅಗತ್ಯವಾದ ಆಕರ ಸಾಮಗ್ರಿಗಳನ್ನು ಒದಗಿಸುವಂತಾಗುತ್ತದೆ.ರಾಷ್ಟ್ರಮಟ್ಟದಲ್ಲಿ ಸರ್ವಜ್ಞನಿಗೆ ಸಂಬಂಧಿಸಿದ ಮಾಹಿತಿ ಯಾವುದೇ ಇರಲಿ, ಅದು ಈ ಪ್ರಾಧಿಕಾರದ ಗ್ರಂಥಾಲಯದಲ್ಲಿ ಸಿಕ್ಕೇ ಸಿಗುತ್ತದೆ ಎನ್ನುವ ಹಾಗೆ ಆ ಗ್ರಂಥಾಲಯ ಸಜ್ಜುಗೊಳ್ಳಬೇಕು. ಈಗಾಗಲೇ ಲಭ್ಯವಿರುವ ಸರ್ವಜ್ಞನ ತ್ರಿಪದಿಗಳ ಪುಸ್ತಕ ಹಾಗೂ ಅವನ ಬದುಕಿಗೆ ಸಂಬಂಧಿಸಿದಂತೆ ದೊರೆಯುವ ವಿವರಗಳು ಕಡಿಮೆ.

 

ಆ ದಿಶೆಯಲ್ಲಿ ಪ್ರಾಧಿಕಾರ  ಪ್ರತಿವರ್ಷ ಕೊನೆಯ ಪಕ್ಷ ಹತ್ತು ಅತ್ಯುತ್ತಮ ಕೃತಿಗಳನ್ನು ಹೊರತರುವಂತೆ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಆ ದಿಶೆಯಲ್ಲಿ ಗಣನೀಯ ಕೆಲಸ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವೂ ನಡೆಯಬೇಕು.ಇಂದಿನ ತೊಳಲಾಟದ ಬದುಕಿಗೆ ತಣ್ಣನೆಯ ಉತ್ತರ ಕೊಡುವ ಸತ್ವ ಮತ್ತು ಶಕ್ತಿ ಸರ್ವಜ್ಞನ ವಿಚಾರಗಳಲ್ಲಿದೆ. ಅವುಗಳನ್ನು ದೈನಂದಿನ ಜೀವನಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳು ತಯಾರಾಗಬೇಕು. ಸರ್ವಜ್ಞನ ವಿಚಾರಗಳು ಜಡರನ್ನೂ ಸೋಮಾರಿಗಳನ್ನೂ ಜಾಗೃತಗೊಳಿಸುವಷ್ಟು ಹರಿತವಾಗಿವೆ.ಈಗಾಗಲೇ ಇರುವ ಹಲವು ಪ್ರಾಧಿಕಾರಗಳು ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಪಡೆದು ಸಾಂಸ್ಥಿಕವಾಗಿ ಎಷ್ಟು ಯಶಸ್ವಿಯಾಗಿವೆ ಎನ್ನುವುದನ್ನು ಈ ಪ್ರಾಧಿಕಾರ ಮರೆಯಬಾರದು. ಕೆಲವು ಹುದ್ದೆಗಳ ಸೃಷ್ಟಿ ಮತ್ತು ಆಯಕಟ್ಟಿನ ಜಾಗದಲ್ಲಿ ತನಗೆ ಬೇಕಾದವರನ್ನು ತಂದು ಕುಳ್ಳಿರಿಸುವ ಪಟ್ಟಭದ್ರ ಹಿತಾಸಕ್ತಿ ಇವೆರಡಕ್ಕೂ ಇಲ್ಲಿ ಅವಕಾಶವಿರಬಾರದು.

 

ಈಗಾಗಲೇ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಗಳು ತಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ; ಏಕೆಂದರೆ ಅವು ನಿರ್ಭೀತ ಮತ್ತು ವಾಸ್ತವ ಶಿಕ್ಷಣದಿಂದ ದೂರ ಉಳಿದು ಪ್ರಭುತ್ವದ ಅಂಕಿತಕ್ಕೆ ಒಳಪಟ್ಟಿವೆ ಎಂಬುದನ್ನು ಸರ್ವಜ್ಞ ಪ್ರಾಧಿಕಾರ ಸ್ಥಾಪಿಸಹೊರಟವರು ತಿಳಿದಿರಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.