ಗುರುವಾರ , ಜನವರಿ 23, 2020
22 °C

ಸಹಬಾಳ್ವೆಗೆ ಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಹಬಾಳ್ವೆ  ಪಾಪವೂ ಅಲ್ಲ, ಅಪರಾಧವೂ ಅಲ್ಲ. ಇಂತಹ ಸಂಬಂಧ ಗಳಲ್ಲಿ ಇರುವ ಮಹಿಳೆಯರು ಹಾಗೂ ಇಂತಹ ಸಂಬಂಧಗಳಿಂದ ಹುಟ್ಟಿದ ಮಕ್ಕಳ ರಕ್ಷಣೆಗೆ ಸಂಸತ್ತು  ಕಾನೂನು ರೂಪಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಸಹಬಾಳ್ವೆ ಕುರಿತಂತೆ ವಿವಿಧ ನ್ಯಾಯಾ ಲಯಗಳು ವಿವಿಧ ಬಗೆಗಳಲ್ಲಿ ವ್ಯಾಖ್ಯಾನಗಳನ್ನು ನೀಡುತ್ತಲೇ ಬಂದಿವೆ.   ಸಹಬಾಳ್ವೆ  ವಿಚಾರದಲ್ಲಿ ವಿವಿಧ ಪ್ರಕರಣಗಳನ್ನು ನಿರ್ವಹಿಸುವ ಸಂದರ್ಭ ದಲ್ಲಿ ವಿವಿಧ ರೀತಿಯ ಗೊಂದಲಗಳು ಸೃಷ್ಟಿಯಾಗಿರುವುದೂ ಇದೆ.ಸಹಬಾಳ್ವೆಯ ಸಂಬಂಧಗಳಲ್ಲಿರುವ ಮಹಿಳೆಯರು ಹಾಗೂ ಅವರ ಮಕ್ಕಳಿಗೆ ಕಾನೂನಿನ ಬಲ  ಇಲ್ಲವೆಂಬ  ಕೊರತೆ ಸಾಕಷ್ಟು ಗಮನ ಸೆಳೆದಿದೆ. ಇದನ್ನು ಮನಗಂಡೇ  2005ರ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ  ಕಾಯಿದೆಯ ಸೆಕ್ಷನ್ 2 (ಎಫ್), ‘ಕೌಟುಂಬಿಕ ಸಂಬಂಧ’ವನ್ನು ವಿವರಿಸುವ ಸಂದರ್ಭದಲ್ಲಿ ‘ವಿವಾಹದ ಸ್ವರೂಪದ ಸಂಬಂಧ’ ಎಂಬುದನ್ನೂ  ಸೇರಿಸಿದೆ. ಆ ನಂತರ ಅನೇಕ ನ್ಯಾಯಾಲಯ ತೀರ್ಪುಗಳು ಸಹಬಾಳ್ವೆಯ ಸಂಬಂಧಗಳನ್ನು ಈ ‘ಕೌಟುಂಬಿಕ ಸಂಬಂಧ’ದ ವ್ಯಾಖ್ಯಾನದಡಿ ತಂದಿರು ವುದೂ ಉಂಟು. ಆದರೆ ಅನೇಕ ಸಂದರ್ಭಗಳಲ್ಲಿ ಈ ವ್ಯಾಖ್ಯಾನಗಳು   ವ್ಯಕ್ತಿನಿಷ್ಠ ನೆಲೆಗಳಲ್ಲಷ್ಟೇ  ಆಗಿ ಅಸ್ಪಷ್ಟತೆ ಮುಂದುವರಿದಿದೆ. ಈ ಅಸ್ಪಷ್ಟತೆ ನಿವಾರಣೆಗಾಗಿ ‘ವಿವಾಹದ ಸ್ವರೂಪದ ಸಂಬಂಧ’ದಡಿ ಸಹಬಾಳ್ವೆಯನ್ನು ಗುರುತಿಸುವುದಕ್ಕಾಗಿ ಎಂಟು ಮಾರ್ಗದರ್ಶಿ ಸೂತ್ರಗಳನ್ನು  ಸುಪ್ರೀಂಕೋರ್ಟ್ ಈಗ ನೀಡಿರುವುದು ಸ್ವಾಗತಾರ್ಹ.ಈ ಮಾರ್ಗದರ್ಶಿ ಸೂತ್ರಗಳು ಸಮಗ್ರ ಎಂದೇನೂ ಅಲ್ಲ.  ಆದರೆ ಇವು ಇಂತಹ ಸಂಬಂಧಗಳ ವ್ಯಾಖ್ಯೆಗೆ ಕೆಲವು ಒಳನೋಟಗಳನ್ನಂತೂ ನೀಡುತ್ತವೆ ಎಂದು ಸುಪ್ರೀಂಕೋರ್ಟ್ ಹೇಳಿರುವುದು ಸರಿಯಾಗಿದೆ. ಸಹಬಾಳ್ವೆಯ ಅವಧಿ, ಕುಟುಂಬ ನಿರ್ವಹಣೆಯಲ್ಲಿ ಹೊಣೆಗಾರಿಕೆಯ ಹಂಚಿಕೆ, ಹಣಕಾಸು ಏರ್ಪಾಡು, ಲೈಂಗಿಕ ಸಂಬಂಧ, ಮಕ್ಕಳ ಪೋಷಣೆ ಇತ್ಯಾದಿ ಈ ಸೂತ್ರಗಳಲ್ಲಿ ಸೇರಿದೆ.ಹೀಗಿದ್ದೂ ಈ ಸೂತ್ರಗಳು ಪರಿಪೂರ್ಣವಾಗುವುದು ಕಷ್ಟ. ಸಹಬಾಳ್ವೆ ಅಪರಾಧವಲ್ಲದಿದ್ದರೂ ಸಾಮಾಜಿಕವಾಗಿ ಅಂಗೀಕಾರಾರ್ಹ ವಲ್ಲ.  ಹೀಗಾಗಿ ಇಂತಹ ಸಂಬಂಧಗಳಲ್ಲಿ  ತೊಡಗಿಕೊಳ್ಳುವವರು   ಎಚ್ಚರ ಕಾಯ್ದುಕೊಳ್ಳುವುದು ಅಗತ್ಯ. ಮದುವೆಯಾಗುವುದು ಅಥವಾ ಬಿಡುವುದು ತೀರಾ ವೈಯಕ್ತಿಕವಾದ ವಿಚಾರ ಎಂಬುದೇನೋ ಸರಿ. ಭಾರತದ ನಗರ ಗಳಲ್ಲಿ ವಿವಿಧ ಬಗೆಗಳಲ್ಲಿ ಆಡಂಬರದ ಅದ್ದೂರಿ ವಿವಾಹಗಳು ನಡೆಯುವುದು ಮುಂದುವರಿದಿರುವಂತೆಯೇ ಸಹಬಾಳ್ವೆಯ ಸಂಬಂಧಗಳಲ್ಲಿ ಬದುಕು ಆರಂಭಿಸುವ ಜೋಡಿಗಳೂ ಇವೆ. ಇಂತಹ ಸಂಬಂಧಗಳನ್ನು  ‘ಒಪ್ಪಂದ’ಗಳಂತೆ ಭಾವಿಸಿ ಕೆಲವೊಂದು ಕಾನೂನಿನ ಅನುಕೂಲಗಳನ್ನು  ವಿಶ್ವದ ಅನೇಕ  ರಾಷ್ಟ್ರಗಳಲ್ಲಿ ನೀಡಿರುವ ನಿದರ್ಶನಗಳಿವೆ.ನಮ್ಮಲ್ಲೂ, ಸಾಕಷ್ಟು ಅವಧಿಗೆ ಸಹಬಾಳ್ವೆಯ ಸಂಬಂಧದಲ್ಲಿದ್ದರೆ ಮಹಿಳೆಗೆ ಪತ್ನಿಯ ಕಾನೂನು ಸ್ಥಾನಮಾನಗಳನ್ನು ನೀಡಬೇಕು ಎಂದು  ನ್ಯಾಯಮೂರ್ತಿ ಮಳೀಮಠ ಸಮಿತಿ ಹಾಗೂ ಭಾರತ ಕಾನೂನು ಆಯೋಗಗಳು  ಅಭಿ ಪ್ರಾಯಪಟ್ಟಿವೆ. ಪರಸ್ಪರ ಬದ್ಧತೆ ಇಂತಹ ಸಂಬಂಧಗಳಲ್ಲಿ ಅನೇಕ ಸಂದರ್ಭ ಗಳಲ್ಲಿ ದುರ್ಬಲವಾಗಿರುತ್ತದೆ.  ಆಗ ಹೆಚ್ಚು ಅನ್ಯಾಯಕ್ಕೊಳ ಗಾಗುವವಳು ಮಹಿಳೆ ಮತ್ತು ಮಕ್ಕಳು ಎಂಬುದನ್ನು ಸುಪ್ರೀಂಕೋರ್ಟ್ ಗುರುತಿಸಿದೆ.ಹೀಗಾಗಿ ಹೆಚ್ಚಾಗುತ್ತಿರುವ ಸಹಬಾಳ್ವೆ ಸಂಬಂಧಗಳಲ್ಲಿ ಸೃಷ್ಟಿಯಾಗುವ ಸಮಸ್ಯೆಗಳ ನಿಯಂತ್ರಣಕ್ಕೆ ಕಾನೂನು ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಹೇಳಿರುವುದು ಸಮಕಾಲೀನ ಅಗತ್ಯಗಳಿಗೆ ಸ್ಪಂದಿಸಿದಂತಾಗಿದೆ.

ಪ್ರತಿಕ್ರಿಯಿಸಿ (+)