ಭಾನುವಾರ, ಜನವರಿ 19, 2020
20 °C
2006ರ ಕಾಯ್ದೆ ಜಾರಿ ಹಿನ್ನೆಲೆ

ಸಿಇಟಿಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಅಧಿಕ ಸೀಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ ಅನುಷ್ಠಾನದಿಂದ ಶುಲ್ಕ ಹೆಚ್ಚಳವಾದರೂ, ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೀಟುಗಳು ಲಭ್ಯವಾಗಲಿವೆ.ವೈದ್ಯಕೀಯ ಕೋರ್ಸ್‌ಗಳಲ್ಲಿ ಇದುವರೆಗೆ ಖಾಸಗಿ ಕಾಲೇಜುಗಳು ಶೇ 40ರಷ್ಟು ಸೀಟುಗಳನ್ನು ಮಾತ್ರ ಸರ್ಕಾರಕ್ಕೆ ಬಿಟ್ಟುಕೊಡುತ್ತಿದ್ದವು. ಆದರೆ, ಈ ಬಾರಿ ಶೇ 50ರಷ್ಟು ಸೀಟುಗಳು ಸರ್ಕಾರದ ಮೀಸಲಾತಿ ಅಡಿ ಲಭ್ಯವಾಗಲಿವೆ. ಈ ಸೀಟುಗಳು ಕರ್ನಾಟಕದ ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.ವೈದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ಶೇ 33ರಷ್ಟು ಸೀಟುಗಳು ಮಾತ್ರ ಸರ್ಕಾರಿ ಕೋಟಾದಡಿ ಇದುವರೆಗೆ ಲಭ್ಯವಾಗುತ್ತಿದ್ದವು. ಆದರೆ, ಕಾಯ್ದೆ ಜಾರಿಯಿಂದಾಗಿ ಶೇ 50ರಷ್ಟು ಸೀಟುಗಳು ಸರ್ಕಾರದ ಮೀಸಲಾತಿ ಅಡಿ ಲಭ್ಯವಾಗಲಿವೆ.ವೈದ್ಯಕೀಯ ಪದವಿ ವಿಭಾಗದಲ್ಲಿ ಶೇ 10ರಷ್ಟು ಸೀಟುಗಳು ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಶೇ 17ರಷ್ಟು ಸೀಟುಗಳು ಹೆಚ್ಚುವರಿಯಾಗಿ ಸರ್ಕಾರದ ಮೀಸಲಾತಿ ಅಡಿ ದೊರೆಯಲಿದ್ದು, ಈ ಸೀಟುಗಳು ಕಡ್ಡಾಯವಾಗಿ ಕನ್ನಡಿಗರಿಗೆ ಲಭ್ಯವಾಗಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.ಸ್ನಾತಕೋತ್ತರ ವೈದ್ಯಕೀಯ ವಿಭಾಗದಲ್ಲಿ ಶೇ 33ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡುತ್ತಿದ್ದ ಖಾಸಗಿ ಕಾಲೇಜುಗಳು ಉಳಿದ ಶೇ 67ರಷ್ಟು ಸೀಟುಗಳನ್ನು ಹೊರ ರಾಜ್ಯದವರಿಗೆ, ಅನಿವಾಸಿ ಭಾರತೀಯರಿಗೆ ಅಧಿಕ ಹಣಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದವು.

ಆದರೆ, ಈ ಬಾರಿ ಶೇ 50ರಷ್ಟು ಸೀಟುಗಳು ಕಡ್ಡಾಯವಾಗಿ ರಾಜ್ಯದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ದೊರೆಯಲಿವೆ. ಕೆಲವು ಖಾಸಗಿ ಕಾಲೇಜುಗಳಲ್ಲಿ ಮಾತ್ರ ಶುಲ್ಕ ಜಾಸ್ತಿಯಾಗ ಬಹುದು. ಆದರೆ, ಎಲ್ಲಾ ಕಾಲೇಜುಗಳಲ್ಲಿ ಜಾಸ್ತಿಯಾಗುವ ಸಾಧ್ಯತೆ ಇಲ್ಲ ಎಂದು ವಿವರಿಸಿದರು.ರಾಜ್ಯದಲ್ಲಿ 15 ವರ್ಷ ವಾಸ ಮಾಡಿರುವ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾತಿ ಕೋಟಾದಡಿ ಸ್ನಾತಕೋತ್ತರ ವಿಭಾಗದಲ್ಲಿ ಸೀಟು ನೀಡಲಾಗುತ್ತದೆ. ಅದೇ ರೀತಿ ಹತ್ತು ವರ್ಷ ವ್ಯಾಸಂಗ ಮಾಡಿದವರಿಗೆ ಎಂಬಿಬಿಎಸ್‌ ಸೀಟು ನೀಡಲಾಗುತ್ತದೆ. ಹೀಗಾಗಿ ಹೊರ ರಾಜ್ಯದವರು ಈ ಸೀಟುಗಳನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ನುಡಿದರು.ಇದುವರೆಗೆ ಸರ್ಕಾರಿ ಕೋಟಾ ಸೀಟುಗಳಿಗೆ ಅಧಿಕೃತವಾಗಿ ಕಡಿಮೆ ಶುಲ್ಕ ಇದ್ದರೂ, ಪ್ರವೇಶ ಸಂದರ್ಭದಲ್ಲಿ ಖಾಸಗಿ ಕಾಲೇಜುಗಳು ವಾಮ ಮಾರ್ಗದ ಮೂಲಕ ಹೆಚ್ಚಿನ ಶುಲ್ಕ ಸಂಗ್ರಹಿಸು ತ್ತಿದ್ದವು. ಆದರೆ, ಮುಂದಿನ ವರ್ಷದಿಂದ ಇದಕ್ಕೆ ಕಡಿವಾಣ ಬೀಳಲಿದೆ. ಪ್ರವೇಶ ಮೇಲ್ವಿಚಾರಣಾ ಸಮಿತಿ ಪ್ರತಿಯೊಂದು ಕಾಲೇಜಿನ ಸೀಟುಗಳ ಪ್ರವೇಶದ ಮೇಲೆ ನಿಗಾ ಇಡಲಿದೆ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)