ಮಂಗಳವಾರ, ಮೇ 17, 2022
26 °C

ಸಿಎಂ ಕಿತ್ತೊಗೆಯಿರಿ: ಭಿನ್ನರ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭ್ರಷ್ಟಾಚಾರ- ಸ್ವಜನ ಪಕ್ಷಪಾತದಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಿತ್ತೊಗೆದು ಪಕ್ಷ ಉಳಿಸಬೇಕೆಂಬ ಬೇಡಿಕೆಯನ್ನು ಭಿನ್ನಮತೀಯ ನಾಯಕರು ವರಿಷ್ಠರ ಮುಂದೆ ಗುರುವಾರ ಮಂಡಿಸಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಮಾಜಿ ಅಧ್ಯಕ್ಷ ರಾಜನಾಥ್‌ಸಿಂಗ್ ಮತ್ತು ರಾಜ್ಯದ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಅವರನ್ನು ಭಿನ್ನಮತೀಯ ಮುಖಂಡರು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಮುಂದಿಟ್ಟರು.

ಯಡಿಯೂರಪ್ಪ ವ್ಯಾಪಕವಾದ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಮಕ್ಕಳ ಹೆಸರಲ್ಲಿ ‘ವ್ಯವಹಾರ’ ನಡೆಸುವ ಮೂಲಕ ಸ್ವಜನ ಪಕ್ಷಪಾತ ಮಾಡಿದ್ದಾರೆ. ಸಚಿವರು ಮತ್ತು ಶಾಸಕರ ಅಭಿಪ್ರಾಯಗಳಿಗೆ ಕಿವಿಗೊಡದೆ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. ಇವರ ನಾಯಕತ್ವದಲ್ಲಿ ಸರ್ಕಾರ ಮುನ್ನಡೆದರೆ ವರ್ಚಸ್ಸು ಸಂಪೂರ್ಣ ಕುಗ್ಗಲಿದೆ ಎಂದು ದೂರಿದರು. ವರಿಷ್ಠರನ್ನು ಭೇಟಿಯಾದ ಭಿನ್ನಮತೀಯರ ಗುಂಪಿನಲ್ಲಿ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್, ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಂಸದ ಪ್ರಹ್ಲಾದ್ ಜೋಶಿ, ಶಾಸಕ ಸಿ.ಟಿ. ರವಿ ಅವರಿದ್ದರು.

ಗುರುವಾರ ಬೆಳಿಗ್ಗೆ ರಾಜಧಾನಿಗೆ ಆಗಮಿಸಿದ ಮುಖ್ಯಮಂತ್ರಿ ವಿರೋಧಿ ಬಣದ ಮುಖಂಡರು ಮಧ್ಯಾಹ್ನ ಅನಂತ ಕುಮಾರ್ ಮನೆಯಲ್ಲಿ ಸೇರಿದರು. ಅಲ್ಲಿಗೇ ಧರ್ಮೇಂದ್ರ ಪ್ರಧಾನ್ ಧಾವಿಸಿದರು. ಸುದೀರ್ಘವಾಗಿ ನಡೆದ ಚರ್ಚೆಯ ವೇಳೆ ಯಡಿಯೂರಪ್ಪ ಅವರ ಮೇಲಿನ ಆರೋಪಗಳನ್ನು ಪಟ್ಟಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ನಂತರ ರಾಜನಾಥ್‌ಸಿಂಗ್ ಜತೆ ಭಿನ್ನರ ಗುಂಪು ಸಮಾಲೋಚಿಸಿತು. ನಿತಿನ್ ಗಡ್ಕರಿ ಅವರನ್ನು ರಾತ್ರಿ ಭೇಟಿ ಮಾಡಿತು. ‘ಯಡಿಯೂರಪ್ಪ ಪಕ್ಷಕ್ಕೆ ಅನಿವಾರ್ಯ. ಅವರನ್ನು ಕದಲಿಸಿದರೆ ಸರ್ಕಾರ ಬೀಳಲಿದೆ ಎಂದು ಬಿಂಬಿಸಲಾಗುತ್ತಿದೆ. ಪರಿಸ್ಥಿತಿ ಹಾಗಿಲ್ಲ. ಬಹುತೇಕ ಸಚಿವರು- ಶಾಸಕರು ಮುಖ್ಯಮಂತ್ರಿ ಮೇಲೆ ಬೇಸತ್ತಿದ್ದಾರೆ’ ಎಂದು ಮನವರಿಕೆ ಮಾಡುವ ಪ್ರಯತ್ನ ನಡೆಯಿತು. ಯಡಿಯೂರಪ್ಪ ನಾಯಕತ್ವ ಬದಲಾವಣೆ ಮಾಡದಿದ್ದರೆ ಅಪಾಯವಿದೆ. ಬಹಳಷ್ಟು ಸಚಿವರು- ಶಾಸಕರು ಈಗಾಗಲೇ ತಮ್ಮ ದುಃಖ- ದುಮ್ಮಾನವನ್ನು ರಾಜ್ಯಾಧ್ಯಕ್ಷರ ಮುಂದಿಟ್ಟಿದ್ದಾರೆ. ತಕ್ಷಣ ಮುಖ್ಯಮಂತ್ರಿಗಳನ್ನು ಕಿತ್ತುಹಾಕಬೇಕು ಎಂದು ಒತ್ತಾಯಿಸಿದ್ದಾರೆ. ವರಿಷ್ಠರು ವೀಕ್ಷಕರನ್ನು ಕಳುಹಿಸಿ ಸಚಿವರು ಮತ್ತು ಶಾಸಕರ ಅಭಿಪ್ರಾಯ ಪಡೆಯಬೇಕು ಎಂದು ಒತ್ತಡ ಹಾಕಿತು.

ಭಿನ್ನರ ಮನವಿಯನ್ನು ಮುಖಂಡರು ತಾಳ್ಮೆಯಿಂದ ಕೇಳಿದರು. ‘ರಾಜ್ಯದ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಸೂಕ್ತ ಸಮಯದಲ್ಲಿ ಅಗತ್ಯ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಆದರೆ, ಯಡಿಯೂರಪ್ಪ ಅವರ ಬದಲಾವಣೆ ಕುರಿತಂತೆ ಖಚಿತವಾದ ಆಶ್ವಾಸನೆ ನೀಡಲಿಲ್ಲ.

ಮುಖ್ಯಮಂತ್ರಿ ಕುಟುಂಬ ಭಾಗಿಯಾಗಿದೆ ಎನ್ನಲಾದ ‘ಭೂ ಹಗರಣ’ವನ್ನು ಲೋಕಾಯುಕ್ತ ತನಿಖೆ ಒಪ್ಪಿಸಿರುವ ಕುರಿತು ವರಿಷ್ಠರು ಮಾಹಿತಿ ಪಡೆದರು. ಭಿನ್ನಮತೀಯರು ಇದನ್ನು’ ಮುಖ್ಯಮಂತ್ರಿಗಾದ ಹಿನ್ನಡೆ’ ಎಂದೇ ಪರಿಗಣಿಸಿದ್ದಾರೆ.

ಪರಿಸ್ಥಿತಿ ಗಂಭೀರ: ಈ ಮಧ್ಯೆ, ‘ಮುಖ್ಯಮಂತ್ರಿಗಳ  ಮೇಲೆ ರಾಜ್ಯಾಧ್ಯಕ್ಷರೇ ‘ಬಂಡಾಯ’ ಎದ್ದಿರುವುದು ಅತ್ಯಂತ ಗಂಭೀರ ಪರಿಸ್ಥಿತಿಗೆ ಕಾರಣವಾಗಿದೆ. ಇದನ್ನು ಕಡೆಗಣಿಸುವಂತಿಲ್ಲ’ ಎಂದು ಬಿಜೆಪಿ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿವೆ.

‘ರಾಜ್ಯ ಬಿಜೆಪಿಯೊಳಗೆ ಭಿನ್ನಮತವಿದೆ. ಎರಡು ಗುಂಪುಗಳು ಶಕ್ತಿ ಪ್ರದರ್ಶನದಲ್ಲಿ ನಿರತವಾಗಿವೆ. ಈ ಹಂತದಲ್ಲಿ ಹೈಕಮಾಂಡ್ ತಟಸ್ಥವಾಗಿದೆ. ಭಿನ್ನಾಭಿಪ್ರಾಯ ನಿವಾರಣೆ ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾದರೆ ಶಾಸಕರ ಅಭಿಪ್ರಾಯ ಕೇಳುವುದು ಅನಿವಾರ್ಯವಾಗಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯೆ ಆಟವೇ ಅಂತಿಮ’ ಎಂದಿವೆ.

ರಾಜ್ಯದ ವಿದ್ಯಮಾನ ಕುರಿತು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಗುರುವಾರ ಮಧ್ಯಾಹ್ನ ’ನೋ ಕಾಮೆಂಟ್ಸ್’ ಎಂದರೆ, ಸುಷ್ಮಾ ಸ್ವರಾಜ್ ‘ಬಿಟ್ಟಾಕಿ’ ಎಂದು ಹಿಂದಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಭಿನ್ನರು ಶುಕ್ರವಾರವೂ ತಮ್ಮ ಕಾರ್ಯಾಚರಣೆ ಮುಂದುವರಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.