ಗುರುವಾರ , ಜೂನ್ 24, 2021
27 °C

ಸುಬ್ರತೊ ರಾಯ್‌ ತಿಹಾರ್‌ ಜೈಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಹೂಡಿಕೆದಾರ­ರಿಗೆ ರೂ.20 ಸಾವಿರ ಕೋಟಿಗಳಷ್ಟು ಹಣ ಹಿಂದಿರುಗಿಸದ ಆರೋಪ ಎದು­ರಿಸು­ತ್ತಿ­ರುವ ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತೊ ರಾಯ್‌ ಮತ್ತು ಸಂಸ್ಥೆಯ ಇಬ್ಬರು ನಿರ್ದೇಶಕರನ್ನು ಸುಪ್ರೀಂ­ಕೋರ್ಟ್‌ ಮಂಗ­ಳವಾರ ಒಂದು ವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಕೋರ್ಟ್‌ ಆದೇಶ ಪಾಲಿಸಲು ಪೊಲೀಸರು ಈ ಮೂವರನ್ನು ತಿಹಾರ್ ಜೈಲಿಗೆ ಕರೆದೊಯ್ದರು.‘ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದರೆ ನಿಮಗೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈ ಪರಿಸ್ಥಿತಿಗೆ ನಿಮ್ಮನ್ನು ನೀವೇ ತಂದುಕೊಂಡಿದ್ದೀರಿ’ ಎಂದು ಕೆ. ರಾಧಾಕೃಷ್ಣನ್‌ ಮತ್ತು ಜೆ.ಎಸ್‌. ಖೆಹರ್‌ ಅವರಿದ್ದ ಪೀಠ ಸುಬ್ರತೊ ಅವರನ್ನು ಉದ್ದೇಶಿಸಿ ಹೇಳಿತು. ಸಹಾರಾ ಹೂಡಿಕೆದಾರರಿಗೆ ಹಿಂದಿರುಗಿಸಿದೆ ಎನ್ನಲಾದ ಮೊತ್ತದ ಬಗ್ಗೆಯೂ ನ್ಯಾಯಮೂರ್ತಿಗಳು ಮಾಹಿತಿ ಪಡೆದರು.ಸುಬ್ರತೊ ಹಾಗೂ ಸಮೂಹದ ನಿರ್ದೇಶಕರಾದ ರವಿಶಂಕರ್‌ ದುಬೆ ಮತ್ತು ಅಶೋಕ್‌ ರಾಯ್‌ ಚೌಧರಿ ಅವರನ್ನು ನ್ಯಾಯಾಂಗ ನಿಂದನೆ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸ­ಲಾಗಿಲ್ಲ ಎಂದು  ನ್ಯಾಯಮೂರ್ತಿಗಳು ಇದೇ ವೇಳೆ ಸ್ಪಷ್ಟ­ಪಡಿಸಿದರು. ಮಹಿಳೆ ಎಂಬ ಕಾರಣಕ್ಕೆ ಮತ್ತೊಬ್ಬ ನಿರ್ದೇಶಕಿ ವಂದನಾ ಭಾರ್ಗವ್‌ ಅವರಿಗೆ ವಿನಾಯ್ತಿ ನೀಡ­ಲಾಗಿದೆ ಎಂದು ಅವರು ತಿಳಿಸಿದರು.ಭಾರಿ ಪೊಲೀಸ್‌ ಬಂದೋಬಸ್ತ್‌­ನಲ್ಲಿ  ಕೋರ್ಟ್‌ಗೆ ಕರೆತಂದಾಗ ವಕೀಲ­ರೊಬ್ಬ ಮುಖಕ್ಕೆ ಎರಚಿದ ಮಸಿ  ತೊಳೆ­ದುಕೊಂಡ ನಂತರ ಸುಬ್ರತೊ ಅವರನ್ನು ನ್ಯಾಯಾಧೀಶರ ಎದುರು ಹಾಜರು­ಪಡಿಸ­ಲಾಯಿತು.ಮನವರಿಕೆಗೆ ಕಿವಿಗೊಡದ ಪೀಠ: ‘ನ್ಯಾಯಾಲಯದ ಆದೇಶಕ್ಕೆ ನಾನು ಬದ್ಧನಾಗಿದ್ದು ಪ್ರಕರಣ ಇತ್ಯರ್ಥಕ್ಕೆ ಸಮ­ಯಾವಕಾಶ ಅಗತ್ಯ’ ಎಂದು ಅವರು ನ್ಯಾಯಮೂರ್ತಿಗಳಿಗೆ  ಮನ­ವರಿಕೆ ಮಾಡುವ ಪ್ರಯತ್ನ ಮಾಡಿ­ದರೂ ಪ್ರಯೋಜನವಾಗಲಿಲ್ಲ.ಒಂದು ಹಂತದಲ್ಲಿ ರಾಯ್‌, ‘ಸಾರ್ವಜನಿಕರ ಹಣವನ್ನು ಬೇಕಾದರೆ ಖಂಡಿತ ಮರಳಿ ನಿಮಗೇ ತಂದು ಒಪ್ಪಿ­ಸುತ್ತೇನೆ. ನನ್ನ ಮೇಲೆ ವಿಶ್ವಾಸ ಇಡಿ’ ಎಂದು ಮನವಿ ಮಾಡಿದರು. ಇದಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದ ನ್ಯಾ. ಖೆಹರ್‌, ‘ನಿಮ್ಮಿಂದ ನಮಗೇನೂ ಬೇಕಾ­ಗಿಲ್ಲ’ ಎಂದು ಖಾರವಾಗಿ ಪ್ರತಿಕ್ರಿ­ಯಿ­ಸಿದರು. ತಮ್ಮ ತಪ್ಪು ಅರಿತು ಸಾವರಿಸಿ­ಕೊಂಡ ರಾಯ್‌, ‘ಬಾಯ್ತಪ್ಪಿ ಹಾಗೆ ಹೇಳಿದೆ’ ಎಂದು ನ್ಯಾಯ­ಮೂರ್ತಿ­ಗಳ ಕ್ಷಮೆ ಯಾಚಿಸಿದರು.ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ವಿಶ್ವಾಸ ಮತ್ತು ಗೌರವ ಹೊಂದಿರುವುದಾಗಿ ಹೇಳಿದ ಅವರು, ‘37 ವರ್ಷಗಳ ವೃತ್ತಿ ಜೀವನದಲ್ಲಿ ಎಲ್ಲಿಯೂ ನನ್ನ ಮೇಲೆ ಕಳಂಕ ಇಲ್ಲ. ನ್ಯಾಯಾಲಯದ ಆದೇಶಕ್ಕೆ ಸದಾ  ಬದ್ಧನಾಗಿರುತ್ತೇನೆ.  ಒಂದು ವೇಳೆ  ನಿಮ್ಮ ಆದೇಶ ಪಾಲಿಸದಿದ್ದರೆ ನನ್ನನ್ನು ಸೂಕ್ತವಾಗಿ ಶಿಕ್ಷಿಸಬಹುದು’ ಎಂದರು.ಮಾರ್ಚ್‌ 11ಕ್ಕೆ ವಿಚಾರಣೆ: ಅವರ ಮನವಿ ತಳ್ಳಿ ಹಾಕಿದ ನ್ಯಾಯಮೂರ್ತಿ­ಗಳು ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 11ಕ್ಕೆ ಮುಂದೂಡಿದರು. ಒಂದು ವೇಳೆ ಅದರ ಒಳಗಾಗಿ  ಎಲ್ಲರಿಗೂ ಒಪ್ಪಿಗೆಯಾಗು­ವಂತಹ ನಿರ್ಧಾರ ಕೈಗೊಂಡಲ್ಲಿ ಪ್ರಕರಣದ ವಿಚಾರಣೆಯನ್ನು ನಿಗದಿತ ಅವಧಿಗಿಂತ ಮುಂಚೆಯೇ ಕೈಗೆತ್ತಿ­ಕೊಳ್ಳುವುದಾಗಿ ನ್ಯಾಯ­ಮೂರ್ತಿಗಳು ಹೇಳಿದರು.ಹೂಡಿಕೆದಾರರಿಗೆ ಹೂಡಿಕೆ ಮೊತ್ತ ಹಿಂದಿರುಗಿಸುವ ಕುರಿತು ರಾಯ್‌ ಹಾಗೂ ಇಬ್ಬರು ನಿರ್ದೇಶಕರು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರಗಳು ವಿರೋಧಾಭಾಸಗಳಿಂದ ಕೂಡಿದ್ದು,  ಗೊಂದಲ ಮತ್ತು ಶಂಕೆಗೆ ಎಡೆ ಮಾಡಿಕೊಡುತ್ತವೆ ಎಂದು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.ಮುಖಕ್ಕೆ ಮಸಿ ಬಳಿದ ವಕೀಲ

ಸುಬ್ರತೊ ರಾಯ್‌ ಸುಪ್ರೀಂ­ಕೋರ್ಟ್‌ಗೆ ಹಾಜರಾಗಲು ಬಂದಾಗ ಅವರ ಮೇಲೆ  ವಕೀಲ ಎಂದು ಹೇಳಿ­ಕೊಂಡ ಗ್ವಾಲಿಯರ್‌ನ ಮನೋಜ್‌ ಶರ್ಮಾ ಮಸಿ ಎರಚಿದ ಘಟನೆ ನಡೆಯಿತು.

ಭಾರಿ ಭದ್ರತೆಯ ಕೋರ್ಟ್ ಆವರಣದಲ್ಲಿ ರಾಯ್‌ ಕಾರಿನಿಂದ ಇಳಿಯುತ್ತಲೇ ಅವರ ಮುಖಕ್ಕೆ ಮಸಿ ಎರಚಲಾಯಿತು. ‘ಸುಬ್ರತೊ ರಾಯ್‌ ಬಡವರನ್ನು ಲೂಟಿ ಹೊಡೆದ ಕಳ್ಳ. ಹಾಗಾಗಿ ನಾನು ಮಸಿ ಎರಚಿದೆ’ ಎಂದು ಶರ್ಮಾ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.