ಬುಧವಾರ, ಜೂನ್ 16, 2021
22 °C

ಸುರಕ್ಷತೆಯ ಭರವಸೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |ಕೂಡುಂಕುಳಂ ಅಣು ವಿದ್ಯುತ್ ಸ್ಥಾವರಕ್ಕೆ ಇದ್ದ ಅಡ್ಡಿ ಆತಂಕಗಳು ನಿವಾರಣೆ ಆಗಿವೆ. ಸ್ಥಾವರದ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಲು ತಮಿಳುನಾಡು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಬೆಳವಣಿಗೆ ಸ್ವಾಗತಾರ್ಹ.

 ಅಣು ಸ್ಥಾವರದ ಸುರಕ್ಷತೆಯ ಬಗ್ಗೆ ಸ್ಥಳೀಯರು ಮತ್ತು ಮೀನುಗಾರರು ತಕರಾರು ತೆಗೆದು ಸ್ಥಾವರ ಕಾಮಗಾರಿ ನಿಲ್ಲಿಸುವಂತೆ ಚಳವಳಿ ಆರಂಭಿಸಿದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಜಯಲಲಿತಾ ಕಳೆದ ಸೆಪ್ಟಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಆನಂತರ ಕಾಮಗಾರಿ ಸ್ಥಗಿತಗೊಂಡಿತ್ತು. 2001ರಲ್ಲಿ ಆರಂಭವಾಗಿದ್ದ ಹದಿಮೂರು ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಅಣು ಸ್ಥಾವರದ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿರುವಾಗ ಅದರ ಸುರಕ್ಷತೆಯ ಬಗ್ಗೆ ಸ್ಥಳೀಯರು ಸಂದೇಹ ವ್ಯಕ್ತಪಡಿಸಿದ್ದಕ್ಕೆ ವೈಜ್ಞಾನಿಕ ಆಧಾರಗಳಿರಲಿಲ್ಲ.

ರಷ್ಯಾ ತಂತ್ರಜ್ಞಾನದ ಈ ಅಣು ಸ್ಥಾವರದ ತಾಂತ್ರಿಕ ಗುಣಮಟ್ಟದ ಬಗ್ಗೆ ನಾರ್ವೆ ಮೂಲದ ಸರ್ಕಾರೇತರ ಸಂಸ್ಥೆಯೊಂದು ಅನುಮಾನ ವ್ಯಕ್ತಪಡಿಸಿ ಇಲ್ಲದ ಗೊಂದಲಗಳನ್ನು ಹುಟ್ಟುಹಾಕಿತ್ತು.

ರಷ್ಯಾದ ಚೆರ್ನೋಬಿಲ್ ಮತ್ತು ಜಪಾನಿನ ಪುಕೊಶಿಮಾ ಅಣು ಸ್ಥಾವರಗಳ ದುರಂತಗಳ ಹಿನ್ನೆಲೆಯಲ್ಲಿ ಕೂಡುಂಕುಳಂ ಸುತ್ತಲಿನ ಜನರಲ್ಲಿ ಸ್ಥಾವರದ ಸುರಕ್ಷತಾ ಕ್ರಮಗಳ ಬಗ್ಗೆ ಸಂದೇಹಗಳಿದ್ದವು.

ಜನರ ಸಂದೇಹಗಳನ್ನು ನಿವಾರಿಸುವುದಕ್ಕೆ ಆರಂಭದಲ್ಲಿ ಹೆಚ್ಚಿನ ಪ್ರಯತ್ನ ನಡೆಯಲಿಲ್ಲ. ಈಗಾಗಲೇ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವಂತೆ ಒತ್ತಾಯಿಸುವ ಬದಲು ಯೋಜನೆಯನ್ನೇ ಕೈಬಿಡುವಂತೆ ಒತ್ತಾಯಿಸಿ ಚಳವಳಿ ನಡೆಸುವ ಅಗತ್ಯವೂ ಇರಲಿಲ್ಲ.

ಈ ಚಳವಳಿಗೆ ಅಮೆರಿಕಾದ ಕೆಲವು ಸ್ವಯಂ ಸೇವಾ ಸಂಸ್ಥೆಗಳ ಚಿತಾವಣೆ ಕಾರಣ.ಚಳವಳಿಗಾರರಿಗೆ ವಿದೇಶಿ ಆರ್ಥಿಕ ನೆರವು ಸಿಗುತ್ತಿದೆ ಎಂದು ಸ್ವತಃ ಪ್ರಧಾನ ಮಂತ್ರಿಯವರೇ ಹೇಳಿದ್ದರು. ಅದೇನೇ ಇರಲಿ, ಸ್ಥಾವರಕ್ಕೆ ಇದ್ದ ಬಹುತೇಕ ಅಡಚಣೆಗಳು ನಿವಾರಣೆಯಾಗಿವೆ ಎನ್ನುವುದು ಸಮಾಧಾನದ ಸಂಗತಿ.ಈ ಅಣುಸ್ಥಾವರ ಕಾಮಗಾರಿ ಐದು ತಿಂಗಳ ಸ್ಥಗಿತಗೊಂಡಿದ್ದರಿಂದ ಘಟಕದ ಮೊದಲ ಹಂತದ ಕಾರ್ಯಾರಂಭ ವಿಳಂಬ ಆಗಲಿದೆ. ಈ ಸ್ಥಾವರದಿಂದ ತಮಿಳುನಾಡಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಅನುಕೂಲವಾಗಲಿದೆ.

ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿರುವ ತಮಿಳುನಾಡಿಗೆ ಈ ಯೋಜನೆಯಿಂದ ಹೆಚ್ಚು ಲಾಭವಿದೆ.

ಯೋಜನೆಯನ್ನು ಮುಂದುವರಿಸಲು ಸರ್ಕಾರ ಅನುಮತಿ ನೀಡಿದ ನಂತರವೂ ಸ್ಥಾವರ ವಿರೋಧಿ ಚಳವಳಿ ಮುಂದುವರಿಯಬಹುದು.

ಆದರೆ ಅದರಿಂದ ಸ್ಥಾವರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವ ಹೊಣೆ ರಾಜ್ಯ ಸರ್ಕಾರದ್ದು. ಕೂಡುಂಕುಳಂ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ 500 ಕೋಟಿ ರೂಪಾಯಿ ನೆರವನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ಈ ಹಣ ಬಳಸಿಕೊಂಡು ಸ್ಥಾವರ ಸುತ್ತಲಿನ ಪ್ರದೇಶದ ಅಭಿವೃದ್ಧಿಯನ್ನು ಕೈಗೊಂಡು ಸ್ಥಳೀಯರ ವಿಶ್ವಾಸ ಗಳಿಸುವುದಕ್ಕೆ ಆದ್ಯತೆ ಕೊಡಬೇಕು.

 ಸ್ಥಾವರದಿಂದ ಅಪಾಯವಿಲ್ಲ ಎನ್ನುವುದನ್ನು ಸ್ಥಳೀಯರಿಗೆ ಮನವರಿಕೆ ಮಾಡಿಕೊಡುವುದು ಈ ಹಂತದಲ್ಲಿ ಬಹು ಮುಖ್ಯ. ಅಣುಸ್ಥಾವರ ಹೆಚ್ಚು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಹೊಣೆಯೂ ಸರ್ಕಾರದ್ದಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.