ಭಾನುವಾರ, ಏಪ್ರಿಲ್ 11, 2021
23 °C

ಸುರಕ್ಷಿತವಾಗಿ ಇರಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಲವಾಗಿ ಬೀಸಿದ ಗಾಳಿಯಿಂದ ಎಲೆಯೊಂದು ಮರದಿಂದ ಕೆಳಗೆ ಬಿತ್ತು. ಗಾಳಿಯಲ್ಲಿ ಮೆಲ್ಲನೆ ತೇಲಿದ ಆ ಎಲೆ, ಪಕ್ಕದಲ್ಲಿ ಹರಿಯುತ್ತಿದ್ದ ನದಿಯ ನೀರಿನ ಮೇಲೆ ನಿಧಾನಕ್ಕೆ ಹೋಗಿ ಬಿತ್ತು. ನದಿಯಲ್ಲಿ ಇನ್ನೇನು ಮುಳುಗಿಹೋಗುತ್ತಿದ್ದ ಇರುವೆಯೊಂದು ಆ ಎಲೆಯ ಮೇಲೆ ಕಷ್ಟಪಟ್ಟು ಏರಿತು. ಸಮಾಧಾನದ ನಿಟ್ಟುಸಿರು ಬಿಟ್ಟಿತು.ನೀರಿನ ಪ್ರವಾಹ ಆ ಎಲೆಯನ್ನು ನದಿಯ ದಡಕ್ಕೆ ತಲುಪಿಸಿತು. ಕೂಡಲೇ ಆ ಇರುವೆ ಸುರಕ್ಷಿತವಾದ, ಒಣಗಿದ ನೆಲದ ಮೇಲೆ ಕಾಲಿಟ್ಟಿತು.ಮುಂದಕ್ಕೆ ಚಲಿಸುವ ಮುನ್ನ ಇರುವೆ ಎಲೆಯನ್ನು ಕೇಳಿತು, `ಓ ಹಸಿರು ಬಣ್ಣದವನೇ, ನೀನು ಯಾರು?~ ಎಲೆ ಮೃದುವಾದ ಸ್ವರದಲ್ಲಿ ಉತ್ತರಿಸಿತು. `ನಾನು ದೇವರ ತುಣುಕು.~ ಗಾಳಿಯಲ್ಲಿ ಹಾರುವ ಮುನ್ನ ಎಲೆ, ಇರುವೆಗೆ ಮತ್ತೆರಡು ಕಿವಿಮಾತು ಹೇಳಿತು. `ನೀನು ಸಹ ದೇವರ ತುಣುಕು~, `ಒಣ ಪ್ರದೇಶದಲ್ಲೇ ಇರು.~ಧ್ಯಾನದಿಂದ ಉಲ್ಲಸಿತವಾದ ನಿಮ್ಮ ಮನಸ್ಸಿನ ಕಡೆಗೆ ನೋಡಿಕೊಳ್ಳಿ. ದೇವರ ತುಣುಕಿನಂತೆ ಇರುವುದರ ಅರ್ಥ ನಿಮಗಾಗುತ್ತದೆ. ನೀವು ಅಂದರೆ ಒಂದು ಶ್ರೇಷ್ಠ ಅಸ್ತಿತ್ವ. ಆ ಅಸ್ತಿತ್ವ ಯಾವಾಗಲೂ ವಿಸ್ತಾರವಾಗುತ್ತಲೇ ಇರುತ್ತದೆ. ಈ ಅಸ್ತಿತ್ವ ತುಂಬ ಸಹನೆಯಿಂದ ಇರುತ್ತದೆ.ಮೃದುವಾಗಿ ಇರುತ್ತದೆ. ಕರುಣೆಯಿಂದ ಇರುತ್ತದೆ. ಎಲ್ಲರನ್ನೂ ಪ್ರೀತಿಸುತ್ತದೆ. ಎಲ್ಲವನ್ನೂ ಬೆಂಬಲಿಸುತ್ತದೆ. `ನಾನು~ ಎಂಬುದು ಈ ದೇಹಕ್ಕಿಂತ ಎಷ್ಟೋ ದೊಡ್ಡದು ಎಂಬ ವಿಸ್ಮಯಕಾರಿ ಅರಿವು ನಿಮಗಾಗುತ್ತದೆ. ಇಂತಹ `ನಾನು~ ಎಂಬುದು ದೇವರ ತುಣುಕಾಗಿರುತ್ತದೆ.ನಾವೆಲ್ಲರೂ ಚಿಕ್ಕದಾದ ಬೀಜದಲ್ಲಿ ಹುದುಗಿರುವ ಆಲದ ಮರದಂತೆ ಎಂದು ಗುರುವೊಬ್ಬರು ಹೇಳುತ್ತಾರೆ. ಇದನ್ನು ಅರಿಯದೇ ನೀರಿನಲ್ಲಿ ಕಷ್ಟಪಡುತ್ತಿದ್ದ ಇರುವೆಯಂತೆ ಚಿಕ್ಕದಾದ ಮಡಕೆಯಲ್ಲಿ ಬದುಕಲು ಆರಂಭಿಸಿದಾಗ ನಮ್ಮ ಸಮಸ್ಯೆಗಳೆಲ್ಲ ಆರಂಭವಾಗುತ್ತವೆ. ದೇಹಾರೋಗ್ಯ ಹದಗೆಡುತ್ತದೆ. ಅನಗತ್ಯವಾದ ಹಲವು ಸಂಗತಿಗಳನ್ನೆಲ್ಲ ತುರುಕಿಕೊಂಡು ನಾವು ಬದುಕನ್ನು ಮತ್ತಷ್ಟು ಸಣ್ಣದಾಗಿಸುತ್ತೇವೆ.ದೇಹ, ಮನಸ್ಸಿಗೆ ಉಲ್ಲಾಸ ನೀಡುವ ವ್ಯಾಯಾಮ, ಧ್ಯಾನಗಳನ್ನೆಲ್ಲ ಮಾಡಲು ನಮಗೆ ಸಮಯವೇ ಸಿಗುವುದಿಲ್ಲ ಅಥವಾ ಅದನ್ನು ಮುಂದಕ್ಕೆ ಹಾಕುತ್ತಲೇ ಇರುತ್ತೇವೆ.ನಿರುಪಯುಕ್ತವಾದ, ಅನಗತ್ಯ ಕೆಲಸಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ಮನಸ್ಸು ರೇಸ್‌ಗೆ ಬಿದ್ದಂತೆ ಓಡಲು ಆರಂಭಿಸುತ್ತದೆ. ಚಿಂತಿಸುತ್ತದೆ. ಸಿಡುಕುತ್ತದೆ. ಅಡುಗೆ ಮನೆಯ ಸಾಮಾನುಗಳು ಒಡೆದುಹೋಗುತ್ತವೆ. ನಾವು ಓಲೆಯ ಮೇಲೆ ಬೇಯಿಸಲು, ಕುದಿಸಲು ಇಟ್ಟಿದ್ದು ಮರೆತುಹೋಗುತ್ತದೆ.ಕೆಲವರು ಹೇಳುತ್ತಾರೆ. ಅಪಘಾತಗಳು ಆಗುವುದಿಲ್ಲ. ನಾವು, ಅಪಘಾತವಾಗುವಂತೆ ಮಾಡಿಕೊಳ್ಳುತ್ತೇವೆ. ಯಾವಾಗಲೂ ಯೋಚನೆಯಲ್ಲಿ ಮುಳುಗಿದ್ದರೆ, ಒತ್ತಡಕ್ಕೆ ಒಳಗಾಗಿದ್ದರೆ ಇರುವೆಯಂತೆ ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದರ ಅರಿವು ಇರುವುದಿಲ್ಲ. ನಮ್ಮ ಆತ್ಮ ಬಯಸುವ ಸುಂದರವಾದ, ಮಾಂತ್ರಿಕ ಅನುಭವದ ಬದಲು ನಮ್ಮನ್ನು ಅನಾರೋಗ್ಯ ಆವರಿಸುತ್ತದೆ. ಔಷಧಗಳು, ಅವುಗಳ ದುಷ್ಪರಿಣಾಮಗಳು ಕಾಡುತ್ತವೆ.ಒಣಗಿದ ಸುರಕ್ಷಿತವಾದ ಪ್ರದೇಶದಲ್ಲಿ ಇರಿ. ನಿಮ್ಮನ್ನು ನೀವು ಪ್ರೀತಿಯಿಂದ ನೋಡಿಕೊಳ್ಳಿ. ನಿಮ್ಮ ಸಮಯವನ್ನು ಆರೋಗ್ಯ ಕಾಪಾಡಿಕೊಳ್ಳಲು, ಸಂತಸದಿಂದ ಇರಲು, ಪ್ರೀತಿ, ಶಾಂತಿಯಿಂದ ಇರಲು ಬಳಸಿಕೊಳ್ಳಿ.ನಿಮಗೆ ಖುಷಿ ನೀಡದ, ಸ್ಫೂರ್ತಿ ನೀಡದ ಸಭೆ, ಸಮಾರಂಭಗಳಿಗೆ ಹೋಗಬೇಡಿ. ಆತಿಥೇಯರ ಸಂಪತ್ತು ಪ್ರದರ್ಶಿಸುವ ಝಗಮಗಿಸುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಡಿ. ನನ್ನ ಕುಟುಂಬ ಅದನ್ನು ನಿರೀಕ್ಷಿಸುತ್ತದೆ, ನನ್ನ ವ್ಯವಹಾರ ಪಾಲುದಾರರು ಅದನ್ನು ಇಷ್ಟಪಡುತ್ತಾರೆ ಎಂಬ ಕ್ಲೀಷೆ ಹೇಳುತ್ತಾ ನೀವು ಸಹ ಅದನ್ನೇ ಮಾಡಬೇಡಿ. ಇಂತಹ ಸಭೆ, ಸಮಾರಂಭಗಳಿಗೆ ಹೋಗಬೇಕು ಅಂದಾಗ ನಿಮ್ಮಲ್ಲಿ ಸಣ್ಣದೊಂದು ಕಿರಿಕಿರಿ ಹುಟ್ಟಿರುತ್ತದೆ. ನಿಮ್ಮ ದೇಹದಿಂದ ಸಂತಸ ಬಸಿದುಹೋದಂತೆ ಅನಿಸುತ್ತದೆ.ಇಂತಹ ಸಮಾರಂಭಗಳಲ್ಲಿ ಭಾಗವಹಿಸುವ ಪ್ರಸಂಗ ಎದುರಾದಾಗ ಸಂಬಂಧಿಸಿದ ವ್ಯಕ್ತಿಗೆ ಶುಭ ಹಾರೈಸಿ. ತಾವು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿ. ಪ್ರತಿಯೊಬ್ಬರಿಗೂ ತಮ್ಮ ಇಷ್ಟದಂತೆ ಬದುಕುವ ಹಕ್ಕು ಇದೆ ಎಂಬುದನ್ನು ಅವರಿಗೆ ತಿಳಿಸಿ. ನಮ್ಮ ಬದುಕಿನ ಜತೆ ಹೋರಾಡಲು ನಾವೆಲ್ಲ ಹುಟ್ಟಿಲ್ಲ.ನಮ್ಮ ಜೀವನವನ್ನು ನಿಭಾಯಿಸುತ್ತಾ ಕಸರತ್ತು ಮಾಡಲು ಇಲ್ಲಿಗೆ ನಾವು ಬಂದಿಲ್ಲ. ನಮ್ಮ ಬದುಕನ್ನು ಸಂತಸದಿಂದ ಕಳೆಯಲು ಇಲ್ಲಿಗೆ ಬಂದಿದ್ದೇವೆ.ಖಾಲಿ ಇರುವ ಸಮಯವನ್ನು ಉಪಯುಕ್ತವಾಗುವಂತೆ ಬಳಸಿಕೊಳ್ಳಿ. ಆ ಸಮಯದಲ್ಲಿ ವ್ಯರ್ಥ ಕೆಲಸ ಮಾಡಬೇಡಿ. ಆ ಸಮಯವನ್ನು ಮೌಲ್ಯಯುತವಾದ ಆಸ್ತಿಯಂತೆ ಪರಿಗಣಿಸಿ.

-ಆ ಸಮಯದಲ್ಲಿ ನಿಮ್ಮ ಜ್ಞಾನ, ಊಹಾಶಕ್ತಿಯನ್ನು ಹೆಚ್ಚಿಸುವ ಅಮೂಲ್ಯ ಪುಸ್ತಕಗಳನ್ನು ಓದಿ-ನಿಮ್ಮ ಭ್ರೂ ಮಧ್ಯದ ಜಾಗದಲ್ಲಿ ಮನಸ್ಸು ಕೇಂದ್ರೀಕರಿಸಿ ಧ್ಯಾನ ಮಾಡಿ. ಅಲೆದಾಡುವ ಮನಸ್ಸು ಶಾಂತವಾಗುತ್ತದೆ. ಜನರತ್ತ, ಬದುಕಿನ ಪರಿಸ್ಥಿತಿಯತ್ತ ಹುಟ್ಟುವ ಸಿಟ್ಟು, ಉದ್ವೇಗ, ಸ್ವ ಮರುಕ, ಅಶಾಂತಿ ಎಲ್ಲವೂ ಈ ಧ್ಯಾನದಿಂದ ತಣ್ಣಗಾಗುತ್ತವೆ. ನಿಮ್ಮ ಅಂತಃಪ್ರಜ್ಞೆಯೊಳಗೆ ಪರಿಶುದ್ಧತೆ, ಪ್ರಶಾಂತತೆ ನೆಲೆಸುತ್ತದೆ.-ದೇಹದತ್ತ ಪೂರ್ಣ ಗಮನ ಹರಿಸಿ ವ್ಯಾಯಾಮ ಮಾಡಿ. ದೇಹ ಎಂಬುದು ನಿಮ್ಮ ಆತ್ಮಕ್ಕೆ ಈ ಭೂಮಿಯೊಳಗೆ ಇರುವ ಒಂದೇ ಒಂದು ಮನೆ. ಏನನ್ನೋ ಸಾಧಿಸುವಂತೆ ಬಿರುಸಾಗಿ ವ್ಯಾಯಾಮ ಮಾಡುವುದು ಬೇಡ. ನಿಮ್ಮ ಪ್ರತಿ ಚಲನೆಯೂ ಪ್ರೀತಿಯ ಹೆಜ್ಜೆಯಾಗುವಂತೆ, ಕೀಲುಗಳಿಗೆ ಆರಾಮ ನೀಡುವಂತೆ, ಮೂಳೆಗೆ ಶಕ್ತಿ ನೀಡುವಂತೆ, ದೇಹವನ್ನು ಸದೃಢವಾಗಿಸುವಂತೆ ಮೃದುವಾಗಿ ವ್ಯಾಯಾಮ ಮಾಡಿ.ಅಂತಹ ಪ್ರತಿ ಚಲನೆಯೂ ನಿಮ್ಮಲ್ಲಿನ ಋಣಾತ್ಮಕ ಭಾವನೆಗಳನ್ನು ಹೊಡೆದು ಓಡಿಸುತ್ತದೆ. ನಿಮ್ಮ ಮನಸ್ಸು ಹಾಗೂ ದೇಹದ ಜೈವಿಕ ಕಂಪನಗಳು ಲಯಬದ್ಧವಾಗುತ್ತವೆ. ಆರೋಗ್ಯಕರವಾಗುತ್ತವೆ.-ಹಾಗೆಯೇ ನೀವು ತಿನ್ನುವುದರ ಕಡೆ ಗಮನ ಇರಲಿ. ದೇಹವನ್ನು ಭಾರವಾಗಿಸದೇ, ಶಕ್ತಿ ನೀಡುವ ಆಹಾರವನ್ನೇ ಸೇವಿಸಿ. ಪ್ರತಿ ತುತ್ತನ್ನೂ ಕೃತಜ್ಞತಾ ಭಾವದಿಂದ ಸವಿಯಿರಿ. ಅನಗತ್ಯವಾಗಿ ಆಹಾರ ಸೇವಿಸಬೇಡಿ. ಇಂತಹ ಸರಳವಾದ, ಪ್ರಶಾಂತ ಸ್ವರ್ಗದಂತಹ ಬದುಕಿನಲ್ಲಿ ನಿಮ್ಮ ಹೃದಯ ಹಾಗೂ ತಲೆಯಲ್ಲಿ ಪ್ರೀತಿ, ನಗುವನ್ನೇ ತುಂಬಿಕೊಳ್ಳಿ. `ನೀವು~ ಎಂಬ ಆಲದ ಮರ ದೊಡ್ಡದಾಗಿ ವ್ಯಾಪಿಸುವುದನ್ನು ನೋಡುವಿರಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.