ಸೋಮವಾರ, ಜೂನ್ 14, 2021
26 °C
ಮಿತಿ ಮೀರಿದ ಮರಳು ದಂಧೆ

ಸುವರ್ಣಮುಖಿ ನದಿ ಪಾತ್ರ ಛಿದ್ರ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಜಲತಾಣಗಳಲ್ಲಿ ಮರಳು ದಂಧೆ ಕರಾಳ ಸ್ವರೂಪ ಪಡೆದಿದೆ. ಕೆರೆ, ಕುಂಟೆ, ಹಳ್ಳ, ರಾಯಗಾಲುವೆ ವಿರೂಪಗೊಂಡಿವೆ. ಹೇಮಾವತಿ ನೀರು ಹರಿಸಲು ಆಸರೆಯಾಗಿರುವ ಸುವರ್ಣ ಮುಖಿ ನದಿ ಪಾತ್ರ ಛಿದ್ರಗೊಂಡಿದೆ.ಮರಳು ಗಣಿಗಾರಿಕೆಯಿಂದ ಈ ಭಾಗದಲ್ಲಿ ಅಪಾರ ಸಂಖ್ಯೆಯ ಕೊಳವೆ ಬಾವಿಗಳು ಬತ್ತಿವೆ. ಸಾವಿರ ಅಡಿ ಆಳ ಕೊರೆದರೂ; ನೀರು ಸಿಗದಾಗಿದೆ.ತಿಪಟೂರು ತಾಲ್ಲೂಕು ಹಾಲ್ಕುರಿಕೆ ಕೆರೆಯಿಂದ ತಾಲ್ಲೂ­ಕಿನ ಬೋರನಕಣಿವೆ ಜಲಾಶಯದವರೆಗೆ 82 ಕಿ.ಮೀ. ವಿಸ್ತರಿಸಿಕೊಂಡಿರುವ ಸುವರ್ಣಮುಖಿ ನದಿ ಪಾತ್ರದಲ್ಲಿ ಇಕ್ಕೆಲ­ಗಳಲ್ಲಿ 100 ಅಡಿ ಅಗಲ, 25 ಅಡಿ ಆಳದವರೆಗೆ ಮರಳು ಬರಿ­ದಾಗಿದೆ. ಇದರಿಂದ ಕೊಳವೆಬಾವಿ ಬತ್ತಿವೆ. ಫಲಭರಿತ ತೆಂಗಿನ ತೋಟಗಳೇ ಮರಳು ದಂದೆಗೆ ಬಲಿಯಾಗುತ್ತಿವೆ.ವಲಸೆ ಹೋಗಿದ್ದ ಯುವಕರು ಹಳ್ಳಿಗಳಿಗೆ ಮರಳಿ ಮರಳು ದಂಧೆಯಲ್ಲಿ ತೊಡಗಿದ್ದಾರೆ. ದಿನದಲ್ಲಿ 4 ಗಂಟೆ ಮರಳು ಬಾಚಿ­ದರೆ ₨ 500ರಿಂದ 800 ಸಿಗುತ್ತದೆ. ತಿಂಗಳಿಗೆ ₨ 15­ರಿಂದ 20 ಸಾವಿರ ದುಡಿಮೆ ಆಗುತ್ತದೆ ಎಂಬ ಲೆಕ್ಕಾಚಾರ ದಂದೆ ನಡೆಸುವ ಯುವಕರದ್ದು.ಎರಡು ತಿಂಗಳ ಹಿಂದೆ ಬೆಂಗ­ಳೂರಿ­­ನಿಂದ ಬಂದು ಮರಳು ಅಕ್ರಮದಲ್ಲಿ ತೊಡಗಿರುವ ನಿರುವಗಲ್ ಯುವಕನೊಬ್ಬ ಹೇಳುವಂತೆ ‘35 ಸಾವಿರ ಆರಂ­ಭಿಕ ಹಣ ನೀಡಿ, ಖಾಸಗಿ ಹಣಕಾಸು ಸಂಸ್ಥೆ ಮೂಲಕ ಟ್ರ್ಯಾಕ್ಟರ್ ತಂದಿದ್ದೇನೆ. ಮರಳನ್ನು ತನಗೆ ನೀಡಬೇಕು ಎಂಬ ಮೌಖಿಕ ಕರಾರಿನ ಮೇರೆಗೆ ಗುತ್ತಿಗೆದಾರರೊಬ್ಬರು ಹಣ ಕೊಟ್ಟಿ­ದ್ದಾರೆ. ಹಳ್ಳದಿಂದ ಮರಳು ತುಂಬಿ ನಿಗದಿತ ಸ್ಥಳಕ್ಕೆ ಸುರಿ­ದರೆ ಒಂದು ಟ್ರ್ಯಾಕ್ಟರ್ ಲೋಡ್‌ಗೆ ₨ 3 ಸಾವಿರ ಸಿಗುತ್ತದೆ’ ಎನ್ನುತ್ತಾರೆ. ಗೂಬೆಹಳ್ಳಿ, ಟಿ.ತಾಂಡ್ಯ ಸುತ್ತಮುತ್ತ 50ಕ್ಕೂ ಹೆಚ್ಚು ಯುವಕರು ಈ ದಂಧೆಯಲ್ಲಿ ತೊಡಗಿದ್ದಾರೆ.ನೂರಿಪ್ಪತ್ತು ಮನೆಯಿರುವ ನಿರುವಗಲ್ ಗ್ರಾಮದಲ್ಲಿ 6 ತಿಂಗಳಿನಿಂದ ಇದೇ ದಂಧೆ ನಂಬಿಕೊಂಡು 18 ಹೊಸ ಟ್ರ್ಯಾಕ್ಟರ್‌, 2 ಜೆಸಿಬಿ, 1 ಲಾರಿ ಖರೀದಿಸಲಾಗಿದೆ.ಕತ್ತಲಾ­ಗು­ತ್ತಿ­ದ್ದಂತೆ ವಾಹನಗಳ ಮೊರೆತ ಶುರುವಾಗುತ್ತದೆ. 3 ಹೋಟೆಲ್‌, 5 ಅಕ್ರಮ ಮದ್ಯದಂಗಡಿಗಳು ಗ್ರಾಮದಲ್ಲಿ ಆರಂಭ­ಗೊಂಡಿದ್ದು, ನೆಮ್ಮದಿ ಹಾಳಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.ತಾಲ್ಲೂಕಿನ 151 ಕೆರೆಗಳಲ್ಲಿ ನೂರಕ್ಕೂ ಹೆಚ್ಚು ಕೆರೆಗಳಲ್ಲಿ ಮರಳು ಕೊಳ್ಳೆಯಾಗಿದೆ. ರಾತ್ರಿಯೆಲ್ಲ ವಾಹನಗಳದ್ದೇ ಅಬ್ಬರ. ಕೆರೆ, ಹಳ್ಳದ ಸುತ್ತಮುತ್ತಲ ತೋಟ, ಹೊಲ, ಹಿತ್ತಲು, ಮನೆ ಅಂಗಳದಲ್ಲೂ ಅಕ್ರಮ ಮರಳು ದಾಸ್ತಾನು ಕಣ್ಣಿಗೆ ಬೀಳುತ್ತದೆ. ಆದರೂ  ಜಿಲ್ಲಾಡಳಿತ ಕಣ್ಣುಮುಚ್ಚಿ ಕೂತಿದೆ ಎಂದು ಈ ಭಾಗದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.