ಸೋಮವಾರ, ಜುಲೈ 26, 2021
24 °C
ನೆಹರೂ ತಾರಾಲಯದಿಂದ ‘ಸೂರ್ಯ– ನಮ್ಮ ನಕ್ಷತ್ರ’ ಕಿರುಚಿತ್ರ ಪ್ರದರ್ಶನಕ್ಕೆ ಚಾಲನೆ

ಸೂರ್ಯನ ಬಗ್ಗೆ ತಿಳಿದುಕೊಳ್ಳುವುದು ಇನ್ನೂ ಸಾಕಷ್ಟಿದೆ: ಯು.ಆರ್.ರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸೂರ್ಯನ ಬಗ್ಗೆ ಅನಾದಿ ಕಾಲದಿಂದಲೂ ಅನೇಕ ಸಂಶೋಧನೆಗಳು ನಡೆದರೂ ಕೂಡ ತಿಳಿದುಕೊಳ್ಳುವುದು ಇನ್ನೂ ಬೇಕಾದಷ್ಟಿದೆ’ ಎಂದು ವಿಜ್ಞಾನಿ ಯು.ಆರ್.ರಾವ್ ಅಭಿಪ್ರಾಯಪಟ್ಟರು.ಸೋಮವಾರ ನೆಹರೂ ತಾರಾಲಯದಲ್ಲಿ ಆಯೋಜಿಸಿದ್ದ ‘ಸೂರ್ಯ– ನಮ್ಮ ನಕ್ಷತ್ರ’ ಎಂಬ ಕಿರುಚಿತ್ರ ಪ್ರದರ್ಶನದ ಇಂಗ್ಲಿಷ್ ಅವತರಣಿಕೆಗೆ ಚಾಲನೆ ನೀಡಿ ಮಾತನಾಡಿದರು.‘ಸೂರ್ಯನ ಬಗೆಗೆ ವಿಜ್ಞಾನಿಗಳು ಮಂಡಿಸಿರುವ ವಿವಿಧ ಸಿದ್ಧಾಂತಗಳು ಸೂರ್ಯನಲ್ಲಾಗುವ ಆಂತರಿಕ ಬದಲಾವಣೆಗಳಿಂದ ಕಾಲಕಾಲಕ್ಕೆ ಹೊಸರೂಪ ಪಡೆದುಕೊಂಡು ಹುಟ್ಟಿಕೊಳ್ಳುತ್ತವೆ. ಹಾಗಾಗಿ ಸೂರ್ಯನ ಕುರಿತು ನಾವು ತಿಳಿದುಕೊಂಡಿರುವುದು ಕೇವಲ ಶೇ 10 ರಷ್ಟು ಮಾತ್ರ’ ಎಂದು ಅವರು ತಿಳಿಸಿದರು.‘ಗುರುತ್ವಾಕರ್ಷಣ ಶಕ್ತಿಯೇ ಸೂರ್ಯನ ಉಗಮಕ್ಕೆ, ಅಸ್ತಿತ್ವಕ್ಕೆ ಮತ್ತು ಅವಸಾನಕ್ಕೆ ಕಾರಣವಾಗುವ ಪ್ರಮುಖ ಸತ್ಯ. ಸೂರ್ಯನ ಆಳವಾದ ಅಧ್ಯಯನದಿಂದ ಇತರ ನಕ್ಷತ್ರಗಳ  ಸೈದ್ಧಾಂತಿಕ ಅಧ್ಯಯನ ಕೂಡ ಮಾಡಬಹುದು’ ಎಂದು ತಿಳಿಸಿದರು.‘ಬೆಂಗಳೂರಿನ ನೆಹರೂ ತಾರಾಲಯ ಅತಿದೊಡ್ಡ ತಾರಾಲಯವಾಗಿದ್ದು ಶಾಲಾ ಮಕ್ಕಳು ಇದರ ಸದುಪಯೋಗ ಹೆಚ್ಚೆಚ್ಚು ಪಡೆದುಕೊಳ್ಳಬೇಕು. ಆ ಮೂಲಕ ಬಾಹ್ಯಾಕಾಶ ವಿಜ್ಞಾನದ ಬೆಳವಣಿಗೆಗೆ ಕಾರಣವಾಗಬೇಕು’ ಎಂದು ಸಲಹೆ ನೀಡಿದರು.ಭಾರತೀಯ ಖಭೌತ ಸಂಸ್ಥೆಯ ನಿರ್ದೇಶಕ ಪಿ.ಶ್ರೀಕುಮಾರ್ ಮಾತನಾಡಿ, ‘ಸೂರ್ಯನ ಮೇಲ್ಭಾಗದ ಬಗ್ಗೆ ಈಗಾಗಲೇ ಸಾಕಷ್ಟು ತಿಳಿದುಕೊಂಡಿದ್ದೇವೆ. ಆದರೆ ಸೂರ್ಯನ ಆಂತರಿಕ ಪ್ರಕ್ರಿಯೆಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುವುದು ಅವಶ್ಯಕವಿದೆ’ ಎಂದರು.‘ಬೆಂಗಳೂರಿನ ಹೊರಗಿನವರು ಸಹ ತಾರಾಲಯದ ಸದುಪಯೋಗ ಪಡೆದುಕೊಳ್ಳುವಂತಾಗಬೇಕು’ ಎಂದು ಹೇಳಿದರು.ಪ್ರದರ್ಶನದ ವಿವಿರ: ನೆಹರೂ ತಾರಾಲಯವು ಮಂಗಳವಾರದಿಂದ (ಆಗಸ್ಟ್ 25) ‘ಸೂರ್ಯ-  ನಮ್ಮ ನಕ್ಷತ್ರ’ ಕಿರುಚಿತ್ರ ಪ್ರದರ್ಶನವನ್ನು ಶಾಲಾಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಆಯೋಜಿಸಿದೆ.ಇದು ಸೂರ್ಯನ ಕುರಿತು ಸಾಂಸ್ಕೃತಿಕ, ಐತಿಹಾಸಿಕ ಮತ್ತು ವೈಜ್ಞಾನಿಕ ಅಂಶಗಳನ್ನು ಒಳಗೊಂಡಿರುವ ಹಾಗೂ  ರಾತ್ರಿ ಆಕಾಶಕಾಯ ಪರಿಚಯದ  ವಿಶೇಷ ಅನುಭವ ನೀಡುವ ಕಿರುಚಿತ್ರವಾಗಿದೆ.ಪ್ರದರ್ಶನದ ಅವಧಿ 40 ನಿಮಿಷಗಳು. ಕನ್ನಡ ಅವತರಣಿಕೆಯ ಪ್ರದರ್ಶನ ಮಧ್ಯಾಹ್ನ 3.30ಕ್ಕೆ. ಇಂಗ್ಲಿಷ್ ಅವತರಣಿಕೆ ಪ್ರತಿ ದಿನ  ಸಂಜೆ 4.30ಕ್ಕೆ. ಪ್ರತಿ ಸೋಮವಾರ ಮತ್ತು ತಿಂಗಳ ಎರಡನೇ ಮಂಗಳವಾರ ತಾರಾಲಯಕ್ಕೆ ರಜೆ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.