ಸೋಮವಾರ, ಮೇ 17, 2021
25 °C

ಸೆನ್ ಮತ್ತೊಮ್ಮೆ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆನ್ ಮತ್ತೊಮ್ಮೆ ರಾಜೀನಾಮೆ

ನವದೆಹಲಿ, (ಪಿಟಿಐ): ಕೋಲ್ಕತ್ತ ಹೈಕೋರ್ಟ್‌ನ ವಿವಾದಿತ ನ್ಯಾಯಮೂರ್ತಿ ಸೌಮಿತ್ರ ಸೆನ್ ಅವರು ಶನಿವಾರ ರಾಷ್ಟ್ರಪತಿಗೆ `ಕ್ರಮಬದ್ಧ~ವಾದ ರೀತಿಯಲ್ಲಿ ತಮ್ಮ ರಾಜೀನಾಮೆ ಪತ್ರ ಕಳುಹಿಸಿದ್ದು, ಅದು ಅಂಗೀಕಾರಗೊಳ್ಳುವ ಹಂತದಲ್ಲಿದೆ. ಇದರಿಂದ ಸೋಮವಾರ ಅವರ ವಿರುದ್ಧ ಲೋಕಸಭೆಯಲ್ಲಿ ನಿಗದಿಯಾಗಿರುವ ವಾಗ್ದಂಡನೆ ಪ್ರಕ್ರಿಯೆ ಏನಾಗಬಹುದು ಎಂಬ ಕುತೂಹಲ ಮೂಡಿದೆ.ಸೆನ್ ಅವರ ಕೈಬರಹದ ರಾಜೀನಾಮೆ ಪತ್ರವನ್ನು ಅವರ ವಕೀಲರು ರಾಷ್ಟ್ರಪತಿ ಅವರ ಕಾರ್ಯದರ್ಶಿ ಕ್ರಿಸ್ಟಿ ಫರ್ನಾಂಡಿಸ್ ಅವರಿಗೆ ತಲುಪಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಾಜೀನಾಮೆ ಪತ್ರ ಸಲ್ಲಿಕೆ ಕ್ರಮ ಸರಿಯಾಗಿದೆ, ಹೀಗಾಗಿ ರಾಷ್ಟ್ರಪತಿ ಅದರ ಅಂಗೀಕಾರಕ್ಕೆ ನಿಯಮಾನುಸಾರ ಕೈಗೊಳ್ಳಬೇಕಾದ ಕ್ರಮಗಳಿಗಾಗಿ ಕಾನೂನು ಸಚಿವಾಲಯಕ್ಕೆ ಕಳುಹಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಜೀನಾಮೆ ಅಂಗೀಕಾರದ ಔಪಚಾರಿಕ ಕ್ರಮಗಳು ಮುಗಿದ ಬಳಿಕ ಲೋಕಸಭೆಯು ಸೆನ್ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆಯನ್ನು ಕೈಬಿಡುವ ಸಾಧ್ಯತೆ ಇದೆ.ಸೆನ್ ಈ ಮೊದಲು, ಅಂದರೆ ಗುರುವಾರ ಕಳುಹಿಸಿಕೊಟ್ಟಿದ್ದ ರಾಜೀನಾಮೆ ಪತ್ರ ಕ್ರಮಬದ್ಧವಾಗಿ ಇರಲಿಲ್ಲ. ನಿಯಮದ ಪ್ರಕಾರ, ನ್ಯಾಯಮೂರ್ತಿ ರಾಜೀನಾಮೆ ಪತ್ರವನ್ನು ಕೈಯ್ಯಾರೆ ಬರೆದು ಕಳುಹಿಸಬೇಕು. ಆದರೆ ಸೆನ್ ಹಾಗೆ ಮಾಡದೆ ಅದನ್ನು ಫ್ಯಾಕ್ಸ್ ಮೂಲಕ ಕಳುಹಿಸಿದ್ದರಲ್ಲದೆ, ಅದರಲ್ಲಿ ಅವರ ಮೂಲ ಸಹಿ ಸಹ ಇರಲಿಲ್ಲ. ಹೀಗಾಗಿ `ಫ್ಯಾಕ್ಸ್ ಮೂಲಕ ಕಳುಹಿಸಿದ ರಾಜೀನಾಮೆ ಪತ್ರವನ್ನು ಅಂಗೀಕರಿಸಲು ಆಗದು~ ಎಂಬ ಅಡಿ ಟಿಪ್ಪಣಿ ಬರೆದು ರಾಷ್ಟ್ರಪತಿ ಅದನ್ನು ನ್ಯಾಯಾಂಗ ಇಲಾಖೆಗೆ ಕಳುಹಿಸಿಕೊಟ್ಟಿದ್ದರು.ಸಂವಿಧಾನದ ಪ್ರಕಾರ, ನ್ಯಾಯಮೂರ್ತಿ ಸ್ವತಃ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ಅವರಿಗೆ ಬರೆದರೆ ಅದು ತಾನಾಗಿಯೇ ಜಾರಿಯಾಗುತ್ತದೆ (ಸ್ವೀಕೃತವಾಗಿದೆ ಎಂದು ಅರ್ಥ)ವಾಗ್ದಂಡನೆಗೆ ಸಲಹೆ: ಸೆನ್ ತಮ್ಮ ರಾಜೀನಾಮೆ ಪತ್ರವನ್ನು ಶುಕ್ರವಾರ ರಾಷ್ಟ್ರಪತಿಗೆ ಫ್ಯಾಕ್ಸ್ ಮೂಲಕ ಕಳುಹಿಸಿದ ಮಾಹಿತಿ ದೊರೆತ ಕೂಡಲೇ ಅಟಾರ್ನಿ ಜನರಲ್ ಜಿ.ಇ.ವಹನ್ವತಿ ಅವರು, `ಈಗಾಗಲೇ ನಿಗದಿಯಾಗಿರುವಂತೆ ಸೋಮವಾರ ವಾಗ್ದಂಡನೆ ಪ್ರಕ್ರಿಯೆ ಮುಂದುವರಿಯಬೇಕು~ ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ.`ರಾಜೀನಾಮೆ ಪತ್ರ ಕ್ರಮಬದ್ಧವಾಗಿ ಇರದಿದ್ದರೆ ರಾಷ್ಟ್ರಪತಿ ಅದನ್ನು ತಿರಸ್ಕರಿಸಬಹುದು. ನಂತರ ಸೆನ್ ನ್ಯಾಯಮೂರ್ತಿಯಾಗಿ ಮುಂದುವರಿಯುವುದರಿಂದ ವಾಗ್ದಂಡನೆ ಪ್ರಕ್ರಿಯೆಯನ್ನು ನಿಲ್ಲಿಸಲು ಬರುವುದಿಲ್ಲ. ರಾಜ್ಯಸಭೆಯು ವಾಗ್ದಂಡನೆ ಪ್ರಕ್ರಿಯೆ ಆರಂಭಿಸುವ ಮೊದಲೇ ಸೆನ್ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಬೇಕಾಗಿತ್ತು~ ಎಂದು ವಹನ್ವತಿ ಅಭಿಪ್ರಾಯಪಟ್ಟಿದ್ದರು.ತಮ್ಮ ವಶದಲ್ಲಿದ್ದ ನ್ಯಾಯಾಲಯದ 33.23 ಲಕ್ಷ ರೂಪಾಯಿಯನ್ನು ದುರ್ಬಳಕೆ ಮಾಡಿಕೊಂಡಿದ್ದ ಮತ್ತು 1983ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಕೀಲರಾಗಿ ಕೋಲ್ಕತ್ತ ಹೈಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದ ಆಪಾದನೆ ಸೆನ್ ಮೇಲೆ ಇದೆ.ಆಗಸ್ಟ್ 18ರಂದು ರಾಜ್ಯಸಭೆಯು ಅವರ ವಿರುದ್ಧದ ವಾಗ್ದಂಡನೆ ಗೊತ್ತುವಳಿಯನ್ನು ಭಾರಿ ಬಹುಮತದಿಂದ ಅಂಗೀಕರಿಸಿದೆ.ಈ ಮಧ್ಯೆ ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಲ್ ಹೇಳಿಕೆ ನೀಡಿ, `ಕಾನೂನು ಇಲಾಖೆಯಿಂದ ಅಧಿಕೃತ ಮಾಹಿತಿ ಬಂದ ನಂತರ ಸೋಮವಾರ ವಾಗ್ದಂಡನೆ ಪ್ರಕ್ರಿಯೆ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುವುದು. ರಾಜೀನಾಮೆ ಕ್ರಮಬದ್ಧವಾಗಿದ್ದರೆ ವಾಗ್ದಂಡನೆ ಪ್ರಕ್ರಿಯೆ ಸ್ಥಗಿತಗೊಳ್ಳುತ್ತದೆ~ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.