ಶನಿವಾರ, ಮೇ 8, 2021
26 °C

ಸೆರೆಮನೆ ಸೇರುತ್ತಿರುವ ಪ್ರಜಾ ನಾಯಕರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಸರಾದವರು ಸೆರೆಮನೆ ಸೇರುವುದು ಇಂದು ನಿನ್ನೆಯ ಬೆಳವಣಿಗೆಯಲ್ಲ. ಎಷ್ಟೋ ಜನ ಸೆರೆಮನೆಯಲ್ಲಿದ್ದೇ ಸಾಧಕರಾಗಿರುವುದುಂಟು. ಸೆರೆಮನೆಗೆ ತಳ್ಳಲಾದ ಕೆಲವರು ಯಾವ ವಿಧದ ಅಪರಾಧಗಳನ್ನು ಮಾಡಿದವರಲ್ಲ.

 

ಅವರ ಅನುಪಮ ಸೃಜನಶೀಲತೆ, ಮೇಧಾವಿತನಗಳು ಆಡಳಿತಾರೂಢರಲ್ಲಿ  ಧಾರ್ಮಿಕ ಪಂಥಗಳಲ್ಲಿ ಹುಟ್ಟಿಸಿದ ಆತಂಕವೇ ಇದಕ್ಕೆ ಕಾರಣ. ಅಪವಾದವೋ, ಅರೋಪವೋ ಹೊತ್ತು ಬಂದಿಖಾನೆ ಸೇರುವವರಲ್ಲಿ ಯಾವುದಾದರೊಂದು ವಿಶಿಷ್ಟ ಲಕ್ಷಣವಿದ್ದೇ ಇರುತ್ತದೆ.  ಹೆಚ್ಚಿನ ಪ್ರಸಂಗಗಳಲ್ಲಿ ಒಂದು ವಿಧದ ವ್ಯಕ್ತಿ ವಕ್ರತೆ ಕಾರಣ. ಇತ್ತೀಚಿನ ದಿನಗಳ ರಾಜಕೀಯ ಮತ್ತು ಆರ್ಥಿಕ ವಿದ್ಯಮಾನಗಳನ್ನು ಗಮನಿಸಿದರೆ ಸೆರೆಮನೆ ವಾಸಕ್ಕೆ ಸಿದ್ಧರಾಗಬೇಕಾಗಿರುವವರಲ್ಲಿ  ನಮ್ಮನ್ನು ಆಳುತ್ತಿರುವವರೇ ಹೆಚ್ಚು ಮಂದಿ ಎನಿಸುತ್ತದೆ.ಕಳ್ಳತನ, ಕೊಲೆ, ಠಕ್ಕತನ ಮಾಡುವವರಿಗೆ ಪೈಪೋಟಿಯಾಗಿ ನಿಂತಿರುವಂತಿದೆ ನಮ್ಮ ನಾಯಕರ ಚಟುವಟಿಕೆಗಳು. ಇದಕ್ಕೆ ಜನಸಾಮಾನ್ಯರ ಕುತೂಹಲ, ಕೆರಳಿಕೆಗಳ ಧಾಟಿಯಲ್ಲಿ ಅಸಮಾಧಾನ ಸ್ಪಷ್ಟವಾಗಿ ಗೋಚರಿಸುತ್ತದೆ.  ಇದಕ್ಕೆ ಒಂದು ವರ್ಗದವರ ಪ್ರಕಾರ ಇದೀಗ ಚುರುಕುಗೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ವಿವಿಧ ಅಂಗಗಳು ಕಾರಣ. ಮತ್ತೊಂದು ವರ್ಗದವರ ಪ್ರಕಾರ `ಉಪ್ಪು ತಿಂದವ ನೀರು ಕುಡಿಯಲೇ ಬೇಕು~. ಕೆಲವರು ಸಿಟ್ಟಿನಿಂದಲೇ `ಕಳ್ಳನ ಹೆಂಡತಿ....?~ ಗಾದೆಯ ಮೂಲಕ ರಾಜಕಾರಣದಲ್ಲಿ ಕುಸಿದಿರುವ ನೈತಿಕತೆಯ ಬಗ್ಗೆ ಅಸಹ್ಯ ವ್ಯಕ್ತಪಡಿಸುತ್ತಾರೆ.ನಿನ್ನೆ ಮೊನ್ನೆಯವರೆಗೂ ಅಸಾಮಾನ್ಯರಂತೆ ಮೆರೆದಾಡುತ್ತಿದ್ದವರನ್ನು ಸೆರೆಮನೆಯಲ್ಲಿರಿಸಿರುವುದು ಆರೋಗ್ಯಕರ ಸಮಾಜದ ಕುರುಹು ಎನ್ನುವ ಮಾತು ಎಲ್ಲೆಡೆಯಿಂದಲೂ ಕೇಳಿಬರುತ್ತಿದೆ.ಕೆಟ್ಟ ಕೆಲಸ ಮಾಡಿ ಸೆರೆಮನೆ ಸೇರುವುದು ಸಾಮಾನ್ಯ. ಆದರೆ, ಸೃಜನಶೀಲತೆ ಅಥವಾ ಮೇಧಾವಿತನವು ಸಹ ಸೆರೆಮನೆಗೆ ದಾರಿತೋರಿಸಿರುವ ಪ್ರಸಂಗಗಳು ಇತಿಹಾಸದಲ್ಲಿ ಕಂಡುಬರುತ್ತವೆ. ಮೇಧಾವಿಗಳನ್ನು ಸೆರೆಮನೆಗೆ ಕಳುಹಿಸುವುದಕ್ಕೆ ಅವರ ಅಸಾಂಪ್ರದಾಯಿಕ ವರ್ತನೆಗಳೇ ಕಾರಣವೆನ್ನುವುದು ಮನೋವಿಜ್ಞಾನಿಗಳ ಅಭಿಪ್ರಾಯ.

 

ಇದನ್ನು ಸಹಿಸಲು ಆಗದಿದ್ದಾಗ ಅಥವಾ ಗ್ರಹಿಸಲಾಗದೆ ಇದ್ದಾಗ ಮಾನಸಿಕ ಅಸ್ವಸ್ಥರು, ದುರ್ನಡತೆಯ ಪ್ರಚೋದಕರು ಅಥವಾ ಸಮಾಜದ ಹಿತಕ್ಕೆ ಧಕ್ಕೆ ತರುವಂಥವರು ಎನ್ನುವ ಹಣೆಪಟ್ಟಿ ಕಟ್ಟಿ ಸಾರ್ವಜನಿಕರ ಸಂಪರ್ಕದಿಂದ ದೂರವಿಡುವ ಕೆಟ್ಟಚಾಳಿ ಹಿಂದಿನಿಂದಲೂ ಇದೆ.ಇಂದು ಅಧಿಕಾರಕ್ಕೆ ಬರುವ ರಾಜಕೀಯ ಮುಂದಾಳುಗಳ ಮನಸ್ಸು ಮತ್ತು ಗುರಿ ಒಂದೇ ಆಗಿರುತ್ತದೆ. ಹಣಕ್ಕಾಗಿಯೇ ಅಧಿಕಾರ. ದುರಂತವೆಂದರೆ ಪ್ರಜೆಗಳ ಆಳಾಗಿ ಕೆಲಸ ಮಾಡುವುದಾಗಿ ಮಾತು ಕೊಟ್ಟು ಅವುಗಳನ್ನೇ ಉಲ್ಲಂಘಿಸುವಂತಹವರ ಸಂಖ್ಯೆ ಬೆಳೆಯುತ್ತಲೇ ಇದೆ. ಇಂತಹವರು ಎಸಗುವ ಅಪರಾಧಗಳನ್ನು ಕಾನೂನು ಪುಸ್ತಕಗಳಲ್ಲಿ ಹೊಸ ಅಧ್ಯಾಯವನ್ನಾಗಿ ಸೇರಿಸುವಂತಹ ಸಮಯ ಇದಾಗಿದೆ.ಇವರು ಎಸಗುವ ಅಪರಾಧಗಳು ಸಾಮಾನ್ಯ ಸ್ವರೂಪದವಲ್ಲ. ನಯವಂಚನೆಯೂ ಅಲ್ಲ. ಎಲ್ಲವೂ ನೇರ ವಂಚನೆ. ಪರಮಾಧಿಕಾರದ ಮಹಾಭ್ರಮೆಯಿಂದ ಹುಟ್ಟಿದಂತಹ ದುರಾಚಾರ. ಅಧಿಕಾರವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವ ಸಲುವಾಗಿ ಇರುವಂತಹ ಎಲ್ಲ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುವಂತಹರಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ ಎನ್ನುತ್ತಾರೆ ಪ್ರಜೆಗಳು.ಅಪರಾಧದ ಸ್ವಭಾವದಲ್ಲಿ ಕೆಲವೊಮ್ಮೆ ಆಕಸ್ಮಿಕತೆ ಮತ್ತು ಅಸಹಾಯಕತೆಯ ಕಾರಣಗಳು ಇರಬಲ್ಲದು. ಆದರೆ ಇಂದಿನ ರಾಜಕಾರಣಿಗಳು ಎಸಗುವ ಅಪರಾಧದಲ್ಲಿ ಗೊತ್ತಿದ್ದೇ ಮಾಡುವಂತಹ ನೇರ ವಂಚನೆಯೇ ಹೆಚ್ಚು. ಇಂತಹ ವ್ಯಕ್ತಿತ್ವವನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದರೆ ಖಂಡಿತವಾಗಿಯೂ ಅವರಲ್ಲಿರುವ ದೋಷ ಸ್ಪಷ್ಟವಾಗಿ ಗೊಚರಿಸುತ್ತದೆ.ಇಂತಹ ವ್ಯಕ್ತಿಗಳು ಬಾಲ್ಯದಿಂದಲೇ ತಮ್ಮ ಕೆಟ್ಟ ಗುಣಗಳನ್ನು ಪ್ರದರ್ಶಿಸಿರುತ್ತಾರೆ. ಇವರ ಶೈಕ್ಷಣಿಕ ಸಾಧನೆಗಳು, ಸಾಮಾಜಿಕ ಹೊಣೆಗಾರಿಕೆ, ನಾಗರಿಕ ಸಂಹಿತೆಗಳ ಅರಿವು ಮತ್ತು ಮುಂದಾಳುತನದ ಗುಣಗಳನ್ನು ಪರಾಮರ್ಶೆ ಮಾಡುವ ಅಗತ್ಯವೇ ಇರುವುದಿಲ್ಲ. ಮಂತ್ರಿಮಂಡಲದ ಹಲವಾರು ಸಚಿವರು ಸೆರೆಮನೆಗೆ ಹೋಗುವಂತಹ ಕೆಲಸಗಳನ್ನು ಮಾಡಿದ್ದಾರೆ ಎನ್ನುವುದಷ್ಟೇ ಸಾಕು.ಅಧಿಕಾರದ ಅಮಲಿನಿಂದಲೇ ಇಂತಹ ಅಪರಾಧಗಳು ಸಾಧ್ಯವೆನ್ನುವ ಮಾತಿಗೆ ಹೆಚ್ಚಿನ ಮಹತ್ವವಿದೆ ಎನಿಸುತ್ತದೆ. ಅಚಾತುರ್ಯದಿಂದ ಉಂಟಾಗುವಂತಹ ಕಾನೂನು ಉಲ್ಲಂಘನೆ ಅಥವಾ ಸದಾಚಾರದ ಉಲ್ಲಂಘನೆಗಿಂತಲೂ ಭಿನ್ನವಾದಂತಹ ವರ್ತನೆ ಸೆರೆಮನೆಯತ್ತ ಮುಖಮಾಡಿರುವ ರಾಜಕಾರಣಿಗಳಲ್ಲಿ ಕಂಡುಬರುತ್ತದೆ.ಇವರಲ್ಲಿ ಅನೇಕರು ಭಗವಂತನ ಹೆಸರಿನಲ್ಲಿಯೇ ಅಪರಾಧವನ್ನು ಮುಚ್ಚಿಡುವಂತಹ ಗುಣಗಳನ್ನು ಹೊಂದಿರುತ್ತಾರೆ. ಕದ್ದ ಒಡವೆಯ ಒಂದು ಪಾಲನ್ನು ದೇವರಿಗೋ, ಮಠಗಳಿಗೋ ದಕ್ಷಿಣೆ ಅಥವಾ ಕಾಣಿಕೆಯ ರೂಪದಲ್ಲಿ ಕೊಡುವುದು. ಇದು ಪಾಪಪ್ರಜ್ಞೆ ಅಥವಾ ಕಳಂಕ ಭಾವವನ್ನು ಹಿಮ್ಮೆಟ್ಟುವಂತಹ ಕ್ರಿಯೆಯಾಗಿರುವುದಿಲ್ಲ ಎನ್ನುವುದೇ ಗಮನಿಸಬೇಕಾಗಿರುವ ಅಂಶ. ಅಹಂಕಾರದ ಛಾಪು ಇಲ್ಲಿಯೂ ಎದ್ದು ಕಾಣಿಸಿಕೊಳ್ಳುತ್ತದೆ.ಇಂತಹ ವರ್ತನೆಗಳು ದಿಢೀರನೆ ಗೋಚರಿಸುವುದಿಲ್ಲ. ಸಹವಾಸ, ಸನ್ನಿವೇಶಗಳಿಂದ ಹೀಗಾಗುತ್ತದೆ ಎನ್ನುವ ವಿಚಾರಧಾರೆ ಇಲ್ಲಿ ಅನ್ವಯಿಸಲಾಗದು. ಏಕೆಂದರೆ, ಅಪರಾಧದ ಮಜಲುಗಳು ಮನಸ್ಸಿನಲ್ಲಿಯೇ ಹುದುಗಿರುತ್ತವೆ. ಇವರ ಬಾಲ್ಯ, ಹರೆಯ ಮತ್ತು ಯೌವನದ ಚಟುವಟಿಕೆಗಳನ್ನು ಇಣುಕಿ ನೋಡಿದರೆ ಎಲ್ಲವೂ ತಿಳಿಯುತ್ತದೆ.ಗೆಳೆಯರನ್ನು ದೂಷಿಸುವುದು, ಶಿಕ್ಷಕರನ್ನು ಹಿಂಸಿಸುವುದು, ಅತಿ ವಿನಯ, ಅತಿಯೆನಿಸುವ ಆಚರಣೆಗಳು ಮತ್ತು ಅಪರಿಮಿತ ದೈವ ಭಕ್ತಿ, ಜೋತಿಷ್ಯದಲ್ಲಿ ಗಾಢ ನಂಬಿಕೆ, ಅತಿಯೆನಿಸುವಷ್ಟು ಅಹಂವಿಶ್ವಾಸ, ಸವಿಮಾತುಗಳಿಂದ ತುಂಬಿರುವಂತಹ ವರ್ತನೆಗಳು ಪ್ರಧಾನವಾಗಿ ಕಾಣಿಸಿಕೊಳ್ಳುತ್ತದೆ. ಮನೆಯ ವಾತಾವರಣವು ಇಂತಹ ವರ್ತನೆಗಳನ್ನು ಎಷ್ಟೋ ಸಲ ಪೋಷಿಸುತ್ತದೆ.ಹೀಗಾಗಿ ಮನೆಯೇ ಇಂತಹ ದುರ್ನಡತೆಗಳಿಗೆ ಪ್ರೇರಣೆಯಾಗಿರಬಲ್ಲದು. ಆದರೆ, ಈ ವರ್ತನೆಗಳು ಎಲ್ಲ ರಾಜಕಾರಣಿಗಳಲ್ಲೂ, ಅಧಿಕಾರದಲ್ಲಿರುವವರಲ್ಲಿಯೂ ಇರುವುದಿಲ್ಲ. ಕೆಲವು ಅಧಿಕಾರಸ್ಥ ರಾಜಕಾರಣಿಗಳಂತೂ ಮನೆಮಂದಿಯನ್ನು ಅಧಿಕಾರದ ಆವರಣದಿಂದ ತುಂಬಾ ದೂರವೇ ಇರಿಸಿರುತ್ತಾರೆ. ಇವೆಲ್ಲ ನಮ್ಮ ರಾಜ್ಯದಲ್ಲಿಯೇ  ಕಾಣಿಸಿಕೊಂಡ  ನಿದರ್ಶನಗಳು.ಈಗ ಸೆರೆಮನೆಯಲ್ಲಿರುವ ಮುಂದಾಳುಗಳು ಹೇಗೆ ಕಾಲಹರಣ ಮಾಡುತ್ತಿದ್ದಾರೋ ತಿಳಿಯದು . ಆದರೆ ಗಾಂಧೀಜಿಯವರು ಸೆರೆಮನೆಯಲ್ಲಿದ್ದಾಗ ಅಮೆರಿಕದ ಹೆನ್ರಿ ಡೆವಿಡ್ ತೊರೊ (1817-1862) ಅವರ `ಸಿವಿಲ್ ಡಿಸ್‌ಒಬಿಡಿಯನ್ಸ್~ ಓದಿ ಅದರಿಂದ ಪ್ರಭಾವಿತರಾದರೆಂದು ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.ತೆರಿಗೆ ಪಾವತಿಸಲಿಲ್ಲ ಎನ್ನುವ ಕಾರಣದಿಂದ ತೋರೋ ಸೆರೆವಾಸವನ್ನು ಅನುಭವಿಸಬೇಕಾಗಿ ಬಂತು. ಈ ಸಮಯದಲ್ಲಿ ಸಾರ್ವತ್ರಿಕ ಅಸಹಕಾರದ ತತ್ವದ ಬಗ್ಗೆ ವಿವರವಾಗಿ ಬರೆದಿದ್ದರು. ಅನ್ಯಾಯವೆಂಬುದರ ಅರಿವಾದಾಗ ಅದನ್ನು ಪ್ರತಿಭಟಿಸುವ ಹೊಣೆಗಾರಿಕೆ ವ್ಯಕ್ತಿಗಿರುತ್ತದೆ. ಆದರೆ ಇದು ಹಿಂಸೆ ಇರದಂತಹ ಪ್ರಕ್ರಿಯೆಯೇ ಆಗಿರಬೇಕೆಂದು ಆಗ್ರಹಿಸಿದ್ದರು.ಯಾವುದೇ ಸರ್ಕಾರವು ಅನ್ಯಾಯವೆನ್ನುವ ರೀತಿಯಲ್ಲಿ ವ್ಯಕ್ತಿಯನ್ನು ಬಂಧಿಸಿದ್ದರೆ ನಿಜವಾಗಿಯೂ ಸತ್ಯಸಂಧರಿರಬೇಕಾದ ಸ್ಥಳವು ಸೆರೆಮನೆಯೇ ಆಗಿರುತ್ತದೆ ಎನ್ನುವ ಅವರ ಅಭಿಪ್ರಾಯವು ಮಹಾತ್ಮ ಗಾಂಧೀಜಿಯವರ ರಾಜಕಾರಣದ ಚಿಂತನೆಗಳಿಗೆ ತಾತ್ವಿಕ ಬಲವನ್ನು ಒದಗಿಸಿತ್ತು.ಅಮೆರಿಕದ ತೊರೋ ಮಾತುಗಳಿಂದ ಪ್ರಭಾವಿತರಾಗಿದ್ದ ಗಾಂಧೀಜಿಯವರಿಂದ ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ ಜೂ. ಪ್ರಭಾವಿತರಾದರು. ಇಂದಿನ ದಿನಗಳಲ್ಲಿ ಸೆರೆಮನೆ ಸೇರಿರುವ ರಾಜಕಾರಣಿಗಳ ಮೇಲೆ ಇಂಥ ಪ್ರಭಾವಗಳು ಆಗಬಲ್ಲದೇ?

-

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.