ಶನಿವಾರ, ಮೇ 8, 2021
27 °C

ಸೌಲಭ್ಯಗಳಿಲ್ಲದ ಗ್ರಂಥಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಭಾವಿ: ತಾಲ್ಲೂಕಿನಾದ್ಯಂತ ಅನೇಕ ಗ್ರಂಥಾಲಯಗಳಿದ್ದು, ಅದರಲ್ಲಿ ಕೆಲವು ಬಾಗಿಲನ್ನೇ ತರೆವುದಿಲ್ಲ. ಇನ್ನು ಕೆಲವು ಬಾಗಿಲು ತೆರೆದರೂ, ಅಲ್ಲಿ ಪುಸ್ತಕಗಳು ಕಾಣುವುದಿಲ್ಲ. ಪುಸ್ತಕಗಳಿದ್ದರೆ ಕುಳಿತು ಓದುವ ಪರಿಸರವಿಲ್ಲ. ಹೀಗೆ ಅವ್ಯವಸ್ಥೆಯ ಸುಳಿಯಲ್ಲಿ ನಲುಗುತ್ತಿರುವ ಗ್ರಂಥಾಲಯಗಳು ಓದುಗರು ದೂರವಾಗುತ್ತಲಿವೆ ಎಂಬ ಆತಂಕ ಶುರುವಾಗಿದೆ.ಗ್ರಂಥಾಲಯಗಳೆಂದರೆ  ಉಪಯುಕ್ತವಾದ ಪುಸ್ತಕ, ಸ್ವಚ್ಛ ಪರಿಸರ, ಸರಿಯಾದ ಆಸನ, ಒಳ್ಳೆಯ ಕಟ್ಟಡ ಹೀಗೆ ಅಗತ್ಯ ಮೂಲಸೌಲಭ್ಯಗಳನ್ನು ಹೊಂದಿರಲೇಬೇಕು. ಆಗ ಮಾತ್ರ ಓದುವ ಹವ್ಯಾಸ ಉಳ್ಳವರು, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಬರುತ್ತಾರೆ. ಆದರೆ ಪಟ್ಟಣದ ಎಸ್.ಬಿ.ಸಿ ಕಾಲೊನಿಯಲ್ಲಿರುವ ಜಿಲ್ಲಾ ಗ್ರಂಥಾಲಯದ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದು, ಆಸನಗಳ ವ್ಯವಸ್ಥೆಯಂತೂ ಕೇಳುವವರಿಲ್ಲ.ಪಟ್ಟಣದ ಎಸ್.ಬಿ.ಸಿ ಕಾಲೊನಿಯಲ್ಲಿ 1980 ರಲ್ಲಿ ನಿರ್ಮಿಸಲಾದ ಜಿಲ್ಲಾ ಗ್ರಂಥಾಲಯ ಕಟ್ಟಡ ಈಗ ಶಿಥಿಲಾವಸ್ಥೆಯಲ್ಲಿದ್ದು, ಅದರ ಛಾವಣಿಯ ಸಿಮೆಂಟ್ ಕಿತ್ತು ಹೋಗಿದೆ. ಅಸ್ತಿಪಂಜರದಂತೆ ಕಾಣುವ ಕಬ್ಬಿಣದ ಸರಳುಗಳು ಯಾವುದೇ ಹಂತದಲ್ಲಿ ತಲೆಯ ಮೇಲೆ ಬೀಳುವ ಆತಂಕವನ್ನು ತಂದೊಡ್ಡಿವೆ.1990 ರಲ್ಲಿ ಈ ಗ್ರಂಥಾಲಯವನ್ನು ಮಂಡಲ ಗ್ರಂಥಾಲಯವೆಂದು ಮಾರ್ಪಡಿಸಲಾಯಿತು. ಕಟ್ಟಡ ನಿರ್ಮಿಸಿ ಮೂರು ದಶಕಗಳಾಗಿದ್ದು, ಸದ್ಯ ಈ ಗ್ರಂಥಾಲಯಕ್ಕೆ ಚಿಕಿತ್ಸೆಯ ಅವಶ್ಯಕತೆ ಇದೆ. ಅಂದಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ತಮ್ಮದೇ ಸ್ಥಳದಲ್ಲಿ ಗ್ರಂಥಾಲಯ ನಿರ್ಮಿಸಿದ್ದರು. ಹೀಗಾಗಿ ಈಗ ಗ್ರಂಥಾಲಯ ಇಲಾಖೆಯು ಈ ಕಟ್ಟಡದ ದುರಸ್ತಿಗೆ ಮುಂದಾಗುತ್ತಿಲ್ಲ, ಈಗಿನ ಕೃಷ್ಣಾ ಭಾಗ್ಯ ಜಲ ನಿಗಮವು ಈ ಕಟ್ಟಡ ದುರಸ್ತಿ ಮಾಡಿಸಬೇಕು.ಇಲ್ಲವೇ ಈ ಕಟ್ಟಡವನ್ನು ಇಲಾಖೆಯ ಹೆಸರಿಗೆ ಬದಲಾಯಿಸಿದರೆ ಮಾತ್ರ ಗ್ರಂಥಾಲಯ ಇಲಾಖೆಯಿಂದ  ಈ ಕಟ್ಟಡದ ದುರಸ್ತಿ ಮಾಡಲು ಸಾಧ್ಯವಾಗುತ್ತದೆ ಎಂದು ಗ್ರಂಥ ಪಾಲಕ ಬಹಿಬೂಬಸಾಬ ನಾವದಗಿ ಹೇಳುತ್ತಾರೆ.

ಅಲ್ಲದೆ ಮಳೆ ಬಂದರೆ ಸಾಕು, ಮೇಲ್ಛಾವಣಿ ಸೋರುತ್ತಿದ್ದು, ಪುಸ್ತಕಗಳು ನೀರಿನಲ್ಲಿ ನೆನೆಯುವಂತಾಗಿದೆ. ಗ್ರಂಥಾಲಯದ ಸುತ್ತ ಅನೇಕ ಶಾಲೆ ಕಾಲೇಜುಗಳಿದ್ದು, ಗ್ರಂಥಾಲಯಕ್ಕೆ ಬರುವ ಜನ ಹೆಚ್ಚಾಗಿದ್ದಾರೆ.ಆದರೆ ಅವರಿಗೆ ಉಪಯುಕ್ತವಾಗುವ ಯಾವುದೇ ಪುಸ್ತಕಗಳಿಲ್ಲದೇ ಇರುವುದರಿಂದ ನಿರಾಸೆಯಿಂದ ಹಿಂದಿರುಗುತ್ತಾರೆ. ಗತಕಾಲದ ವೈಭವವನ್ನು ಸಾರುವ ಪುಸ್ತಕಗಳು ನೀರಿನಲ್ಲಿ ನೆನೆದು, ದೂಳಿನ ಕವಚ ಹೊದ್ದು ಕಪಾಟಿನಲ್ಲಿ ಕೊಳೆಯುತ್ತಿವೆ. ಇನ್ನೊಂದು ಆಶ್ಚರ್ಯದ ಸಂಗತಿಯಂದರೆ ಈ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ 4 ವರ್ಷಗಳಾಗಿವೆ. ವಿದ್ಯುತ್ ತಂತಿಗಳು ಬಾವಲಿಂತೆ ಜೋತಾಡುತ್ತಿವೆ. ಇಲ್ಲಿದ್ದ ಕಸಗುಡಿಸುವ ನೌಕರನ ಹುದ್ದೆ ಕೂಡಾ ರದ್ದಾಗಿದೆ. ಮೇಲ್ಛಾವಣಿ ಬೀಳುವ ಭಯದಿಂದ ಯಾರೊಬ್ಬರೂ ಈ ಗ್ರಂಥಾಲಯ ಕಟ್ಟಡದ ಒಳಗೆ ಹೋಗುವುದಿಲ್ಲ. ಹೊರಗೇ ನಿಂತು ಎರಡು ಪುಟ ತಿರುವಿ ಹಾಕಿ ಹಿಂದಿರುಗುವಂತಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಆಕ್ಬರ ನಾಲತ್ವಾಡ ಹೇಳುತ್ತಾರೆ.

ಇಲ್ಲಿರುವ ಗ್ರಂಥ ಪಾಲಕರು ತಕ್ಕಮಟ್ಟಿಗೆ ಪುಸ್ತಕಗಳ ರಕ್ಷಣೆ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿದರೂ ಯಾವುದೇ ರೀತಿಯ ಸೌಲಭ್ಯ ಮಾತ್ರ ಸಿಗದಿರುವುದು ಓದುಗರರ ಮನ ನೋಯಿಸಿದೆ.

ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಸರಿಯಾದ ಮೂಲಸೌಕರ‌್ಯ ಹಾಗೂ ಉತ್ತಮ ಪುಸ್ತಕಗಳನ್ನು ಒದಗಿಸಿ ಓದುವ ಆಸಕ್ತಿ ಹೆಚ್ಚಿಸಬೇಕಾದ ಗ್ರಂಥಾಲಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ವಿದ್ಯಾರ್ಥಿಗಳು ಮತ್ತು ಪ್ರತಿಭಾವಂತರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಂಥಾಲಯದ ಮೇಜರ್ ಸರ್ಜರಿ ಮಾಡಿ ಉತ್ತಮ ಕಟ್ಟಡ ಹಾಗೂ ಒಳ್ಳಯ ಪುಸ್ತಕ ನೀಡಬೇಕು ಎಂದು ಇಲ್ಲಿನ ಜನರ ಬೇಡಿಕೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.