ಮಂಗಳವಾರ, ಮೇ 18, 2021
31 °C

ಸ್ಫೋಟಿಸಿದ ರಾಕೆಟ್; ಸಾಗರದಲ್ಲಿ ಪತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯೋಂಗ್‌ಯಾಂಗ್ (ಐಎಎನ್‌ಎಸ್/ಪಿಟಿಐ/ ಆರ್‌ಐಎ ನೊವೊಸ್ತಿ/ ಎಎಫ್‌ಪಿ): ಅಂತರ ರಾಷ್ಟ್ರೀಯ ಸಮುದಾಯದ ಎಚ್ಚರಿಕೆಗಳನ್ನು ಕಡೆಗಣಿಸಿ ಉತ್ತರ ಕೊರಿಯಾ ಶುಕ್ರವಾರ ಹಾರಿಬಿಟ್ಟ ಉಪಗ್ರಹ ಮಾರ್ಗ ಮಧ್ಯೆ ಸ್ಫೋಟಿಸಿ ಸಮುದ್ರಕ್ಕೆ ಬಿದ್ದಿದೆ. ಆ ಮೂಲಕ ಎರಡು ದಶಕಗಳ ಅದರ ಕನಸು ಭಗ್ನವಾಗಿದೆ.ಆಕಾಶದತ್ತ ಚಿಮ್ಮಿದ ಒಂದೇ ನಿಮಿಷದಲ್ಲಿ ರಾಕೆಟ್ ಉರಿದು ಸಮುದ್ರಕ್ಕೆ ಬೀಳುವ ಮೂಲಕ, ಇಡೀ ವಿಶ್ವ ಕುತೂಹಲದಿಂದ ಎದುರು ನೋಡುತ್ತಿದ್ದ ಕ್ಷಣ ಅನಿರೀಕ್ಷಿತ ಅಂತ್ಯ ಕಂಡಿತು. ಉಪಗ್ರಹ ಉಡಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿದ್ದ ಕೊರಿಯಾ ಈ ವೈಫಲ್ಯದಿಂದ ಜಾಗತಿಕ ಮಟ್ಟದಲ್ಲಿ ಮುಖಭಂಗ ಅನುಭವಿಸುವಂತಾಯಿತು.ಹಳದಿ ಸಮುದ್ರದ ಕಿನಾರೆಯಲ್ಲಿರುವ ಪ್ಯೋಂಗ್‌ಯಾಂಗ್ ದ್ವೀಪದ ಬಳಿ ಹೊಸದಾಗಿ ನಿರ್ಮಿಸಲಾದ ಉಡಾವಣಾ ನೆಲೆಯಿಂದ ಶುಕ್ರವಾರ ಬೆಳಿಗ್ಗೆ 7.39ಕ್ಕೆ ರಾಕೆಟ್ ಹಾರಿ ಬಿಡಲಾಯಿತು. ಗೆಲಾಕ್ಸಿ-3 ಎಂಬ ಉಪಗ್ರಹವನ್ನು ಹೊತ್ತ 30 ಮೀಟರ್ ಉದ್ದದ ಉನ್ಹಾ-3 ಹೆಸರಿನ ರಾಕೆಟ್ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೊದಲೇ ಛಿದ್ರಗೊಂಡು ಸಮುದ್ರಕ್ಕೆ ಬಿತ್ತು.ಘಟನೆ ನಡೆದ ಎರಡು ಗಂಟೆಗಳ ನಂತರ (ಬೆಳಿಗ್ಗೆ 9ಕ್ಕೆ) ಈ ಬಗ್ಗೆ ಸರ್ಕಾರದ ಅಧಿಕೃತ ಹೇಳಿಕೆ ಹೊರಬಿದ್ದಿದ್ದು, ಉಡಾವಣೆ ವಿಫಲವಾಗಿದ್ದನ್ನು ಒಪ್ಪಿಕೊಂಡಿದೆ. `ನಮ್ಮ ವಿಜ್ಞಾನಿಗಳು, ತಂತ್ರಜ್ಞರು ವೈಫಲ್ಯಕ್ಕೆ ನಿಖರವಾದ ಕಾರಣ ಕಂಡುಹಿಡಿಯಲು ವೈಜ್ಞಾನಿಕ ತನಿಖೆ ನಡೆಸಲಿದ್ದಾರೆ~ ಎಂದು ಪ್ರಕಟಣೆ ತಿಳಿಸಿದೆ. ಘಟನೆಯಲ್ಲಿ ಯಾವುದೇ ಸಾವು, ನೋವಿನ ವರದಿಯಾಗಿಲ್ಲ ಎಂದು ಸುದ್ದಿವಾಹಿನಿಗಳು ಹೇಳಿವೆ.  ದೇಶದ ಸಂಸ್ಥಾಪಕ ಅಧ್ಯಕ್ಷ ಎರಡನೇ ಕಿಮ್ ಸುಂಗ್ ಶತಮಾನೋತ್ಸವದ ಸಂದರ್ಭದಲ್ಲಿ ಉಪಗ್ರಹ ಉಡಾವಣೆಗೆ ಮುಂದಾಗಿದ್ದ ಕೊರಿಯಾ, ಆ ಮೂಲಕ ತನ್ನ ಶಕ್ತಿ, ಸಾಮರ್ಥ್ಯ ಬಿಂಬಿಸುವ ಉದ್ದೇಶ ಹೊಂದಿತ್ತು. ಇದಕ್ಕಾಗಿ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳಂಥ ಬಲಾಢ್ಯ ದೇಶಗಳನ್ನು ಎದುರು ಹಾಕಿಕೊಂಡಿತ್ತು. ಆದರೆ, ಇದೀಗ ಅನಿರೀಕ್ಷಿತ ವೈಫಲ್ಯದಿಂದ ಅದಕ್ಕೆ ತೀವ್ರ ಹಿನ್ನಡೆ ಆದಂತಾಗಿದೆ.ಸಮರ್ಥನೆ: `ರಾಕೆಟ್ ಪರೀಕ್ಷಾರ್ಥ ಉಡಾವಣೆಯಲ್ಲಿ ವೈಫಲ್ಯಗಳು ಸಹಜ. ಈಗಾಗಲೇ ಇಂಥ ಮೂರು ಯತ್ನಗಳು ವಿಫಲವಾಗಿದ್ದು ಇದರಿಂದ ಧೃತಿಗೆಡಬೇಕಾಗಿಲ್ಲ. ಈ ಘಟನೆಯಿಂದ ರಾಷ್ಟ್ರದ ಉಪಗ್ರಹ ಯೋಜನೆ ಕೊನೆಗೊಳ್ಳುವುದೂ ಇಲ್ಲ. ವೈಫಲ್ಯಕ್ಕೆ ಕಾರಣ ಕಂಡುಹಿಡಿಯಲಾಗುವುದು. ಎರಡು ಅಥವಾ ಮೂರು ವರ್ಷಗಳಲ್ಲಿ ಮತ್ತೆ ಇಂತಹ ಪ್ರಯತ್ನಕ್ಕೆ ಕೈಹಾಕಲಾಗುವುದು~ ಎಂದು ಉಸ್ತುವಾರಿ ಹೊತ್ತಿದ್ದ ಬಾಹ್ಯಾಕಾಶ ಮತ್ತು ರಾಕೆಟ್ ತಂತ್ರಜ್ಞಾನ ತಜ್ಞ ಕ್ರಿಸ್ಟಿಯನ್ ಲಾರ್ಡಿಯರ್ ಹೇಳಿದ್ದಾರೆ.`ರಾಕೆಟ್‌ನಲ್ಲಿ ಇಂಧನ ಪೂರೈಕೆ, ಚಾಲನ ಅಥವಾ ಮಾರ್ಗದರ್ಶನ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ಕೂಡಾ ಅಂಥದ್ದೇ ಸಮಸ್ಯೆ ಇರಬಹುದು~ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಹದ್ದಿನ ಕಣ್ಣು; ಸರ್ವವೂ ಸೆರೆ

ವಾಷಿಂಗ್ಟನ್ (ಪಿಟಿಐ): ಮೊದಲಿನಿಂದಲೂ ಕ್ಷಿಪಣಿ ಉಡಾವಣೆ ಮೇಲೆ ತೀವ್ರ ನಿಗಾ ಇಟ್ಟಿದ್ದ ಅಮೆರಿಕ, ಕ್ಷಿಪಣಿ ಉಡಾವಣೆಯ ಪ್ರತಿ ಹಂತವನ್ನೂ ಉಪಗ್ರಹದಿಂದ ಸೆರೆ ಹಿಡಿದಿದೆ. ಉತ್ತರ ಕೊರಿಯಾದ ಅಧಿಕೃತ ಪ್ರಕಟಣೆ ಹೊರ ಬೀಳುವ ಮೊದಲೇ ಈ ವಿಷಯವನ್ನು ಅಮೆರಿಕದ ರಕ್ಷಣಾ ಅಧಿಕಾರಿಗಳು ಬಹಿರಂಗಗೊಳಿಸಿದ್ದಾರೆ.ಹಳದಿ ಸಮುದ್ರದ ಮೇಲೆ ಹಾರಿದ ತೆಪೊ ಡಾಂಗ್-2 ಕ್ಷಿಪಣಿ ಕೆಲ ಕ್ಷಣಗಳಲ್ಲಿಯೇ ಸ್ಫೋಟಗೊಂಡು ಸೋಲ್‌ಗೆ ಪಶ್ಚಿಮದಲ್ಲಿರುವ 165 ಕಿ.ಮೀ ದೂರದ ಸಮುದ್ರಕ್ಕೆ ಬಿದ್ದಿದೆ. ಕ್ಷಿಪಣಿಯ ಯಾವುದೇ ಚೂರು ನೆಲಕ್ಕೆ ಅಪ್ಪಳಿಸಿಲ್ಲ ಎಂದು ಉತ್ತರ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನೊರಾಡ್) ತಿಳಿಸಿದೆ.

ಜಿ- 8 ಒಕ್ಕೂಟ ಟೀಕೆ

ಉತ್ತರ ಕೊರಿಯಾವು ಉಪಗ್ರಹ ಉಡಾವಣೆ ಮೂಲಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಜಿ-8 ರಾಷ್ಟ್ರಗಳ ಒಕ್ಕೂಟ ಟೀಕಿಸಿದೆ.ಅಮೆರಿಕ ವ್ಯಂಗ್ಯ 

`ಉತ್ತರ ಕೊರಿಯಾ ಹಸಿವಿನಿಂದ ಬಳಲುತ್ತಿರುವ ಜನರಿಗೆ ಹಣವನ್ನು ವಿನಿಯೋಗಿಸುವ ಬದಲು ಅನಗತ್ಯವಾಗಿ ಶಸ್ತ್ರಾಸ್ತ್ರಗಳಿಗೆ ದುಂದು ವೆಚ್ಚ ಮಾಡುತ್ತಿದೆ~ ಎಂದು ಅಮೆರಿಕ ಟೀಕಿಸಿದೆ. `ಒಟ್ಟಾರೆ ಕೊರಿಯಾದ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಒಂದು ದೊಡ್ಡ ವೈಫಲ್ಯ~ ಎಂದು ಇದೇ ವೇಳೆ ಲೇವಡಿ ಮಾಡಿದೆ.ತುರ್ತು ಸಭೆ

ಉಪಗ್ರಹ ಉಡಾವಣೆ ಸುದ್ದಿ ತಿಳಿಯುತ್ತಿದ್ದಂತೆಯೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳು ಶುಕ್ರವಾರ ತುರ್ತು ಸಭೆ ನಡೆಸಿದವು.ಭದ್ರತಾ ಮಂಡಳಿ ನಿರ್ಣಯಗಳ ಉಲ್ಲಂಘನೆ ಮತ್ತು ಮುಂದಿನ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ವಿಶ್ವಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.