ಗುರುವಾರ , ಮೇ 13, 2021
16 °C

ಸ್ವಾಗತಾರ್ಹ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತ್ಯೇಕ ರಾಷ್ಟ್ರ ರಚನೆಯ ಗುರಿಯಿಟ್ಟುಕೊಂಡು ಮೂರು ದಶಕಗಳಿಂದ ಸಶಸ್ತ್ರ ಹೋರಾಟ ನಡೆಸಿಕೊಂಡು ಬಂದ ನಿಷೇಧಿತ `ಉಲ್ಫಾ~ (ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ) ನಾಯಕರು ಕೊನೆಗೂ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿರುವುದು ಸ್ವಾಗತಾರ್ಹ ಬೆಳವಣಿಗೆ. ಎರಡು ವರ್ಷಗಳಿಂದ ಸಂಧಾನ ಮಾತುಕತೆಗೆ ನಡೆಸುತ್ತಿದ್ದ ತೆರೆಮರೆಯ ಪ್ರಯತ್ನ ಈಗ ಫಲಿಸಿರುವುದು ಹಿಂಸೆಯಿಂದ ತತ್ತರಿಸಿ ಹೋಗಿರುವ ಅಸ್ಸಾಂ ರಾಜ್ಯದ ಜನರಿಗೆ ಸದ್ಯಕ್ಕಂತು ನೆಮ್ಮದಿ ಸಿಕ್ಕಂತಾಗಿದೆ. ಸೇನೆ ಮತ್ತು ಉಲ್ಫಾ ಅನಿರ್ದಿಷ್ಟಾವಧಿವರೆಗೆ ಪರಸ್ಪರ ಸಶಸ್ತ್ರಗಳನ್ನು ಬಳಸುವಂತಿಲ್ಲ. ಜೊತೆಗೆ ಎಲ್ಲಿಯೂ ಹಿಂಸಾಕೃತ್ಯಗಳನ್ನು ನಡೆಸದಿರಲು ಉಲ್ಫಾ ಒಪ್ಪಿರುವುದು ಕೇಂದ್ರ ಮತ್ತು ಅಸ್ಸಾಂ ಸರ್ಕಾರ ನಿಟ್ಟುಸಿರು ಬಿಡುವಂತಾಗಿರುವುದು ಒಳ್ಳೆಯ ಬೆಳವಣಿಗೆ. ಈ ಒಪ್ಪಂದದಿಂದ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆ ಪ್ರಕ್ರಿಯೆಗೆ ಹಾದಿ ಸುಗಮವಾದಂತಾಗಿದೆ. ಉಲ್ಫಾ ಹೋರಾಟಗಾರರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮತ್ತು ಪ್ರತ್ಯೇಕತೆಗಾಗಿ ನಡೆಸುವ ಹೋರಾಟವನ್ನು ಕೈಬಿಟ್ಟು ಅವರ ಬೇಡಿಕೆಗಳಿಗೆ ರಾಜಕೀಯ ಪರಿಹಾರ ಕಂಡುಹಿಡಿಯಲು ಈ ತ್ರಿಪಕ್ಷೀಯ ಒಪ್ಪಂದ ಸಹಾಯವಾಗಬಹುದೆಂಬ ವಿಶ್ವಾಸ ಗರಿಗೆದರಿದಂತಾಗಿದೆ. ಈಶಾನ್ಯ ರಾಜ್ಯಗಳಲ್ಲಿ ವಿಶೇಷವಾಗಿ ಅಸ್ಸಾಂನಲ್ಲಿ ಸ್ಥಳೀಯರ ಹಕ್ಕುಬಾಧ್ಯತೆಗಳು ಮತ್ತು ಅವರ ಸಂಸ್ಕೃತಿ ಮತ್ತು ಕಲೆಗಳನ್ನು ಸಂರಕ್ಷಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಅಸ್ಸಾಂನ ಸಾರ್ವಭೌಮತ್ವವನ್ನು ಕಾಪಾಡಬೇಕೆನ್ನುವ ಉಲ್ಫಾ ಬೇಡಿಕೆಯನ್ನು ಕೇಂದ್ರ ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸುವುದಕ್ಕೆ ಮುಂದಾದರೆ ಸದ್ಯದ ಒಪ್ಪಂದಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಿದಂತಾಗುವುದು.ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆಯ ನಾಯಕ ರಾಜ್‌ಕೋವಾ ಮತ್ತು ಇತರರೊಡನೆ ನಡೆಸಿರುವ ಮಾತುಕತೆ ಯಶಸ್ವಿಯಾಗಿರುವುದೇ ನಿಜಕ್ಕೂ ಒಂದು ಸಾಧನೆ. ಮೂರು ದಶಕಗಳ ಪ್ರತ್ಯೇಕತಾವಾದಿಗಳ ಹಿಂಸಾಚಾರವನ್ನು ಹತ್ತಿಕ್ಕಲು ಇದುವರೆಗೂ ಸೇನೆಯನ್ನು ಬಳಸಲಾಗಿದೆ. ಈ ಹೋರಾಟದಲ್ಲಿ ಸೈನಿಕರು ಮತ್ತು ಪ್ರತ್ಯೇಕತಾವಾದಿ ಉಲ್ಫಾ ಕಾರ್ಯಕರ್ತರು ಸೇರಿದಂತೆ ಸುಮಾರು 20 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಉಲ್ಫಾ ನಡೆಸಿದ ಬಾಂಬ್ ಸ್ಫೋಟ, ರೈಲು ಹಳಿಗಳ ನಾಶ, ರೈಲು ಸ್ಫೋಟ ಮತ್ತು ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ನಡೆದ ಹಿಂಸಾಕೃತ್ಯಗಳಿಂದ ನೂರಾರು ಮಂದಿ ಅಮಾಯಕರು ಪ್ರಾಣ ತೆತ್ತಿದ್ದಾರೆ. ಸರ್ಕಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾರ ನಷ್ಟವಾಗಿದೆ.ಈಶಾನ್ಯರಾಜ್ಯಗಳಿಗೆ ಹಬ್ಬಿರುವ ಉಲ್ಫಾ ಹಿಂಸೆಯಿಂದ ಆ ಭಾಗದಲ್ಲಿ ಅಶಾಂತಿ ಹಲವು ವರ್ಷಗಳಿಂದ ತಾಂಡವವಾಡುತ್ತಿದೆ. ಈ ದೃಷ್ಟಿಯಿಂದ ಪ್ರತ್ಯೇಕತಾವಾದಿ ಸಂಘಟನೆಯ ಜೊತೆ ಶಾಂತಿ ಸಂಧಾನದ ಮಾತುಕತೆ ನಡೆಸಿರುವುದು ನಿಜಕ್ಕೂ ಒಂದು ಮೈಲಿಗಲ್ಲು. ವಾಸ್ತವವಾಗಿ ಈಶಾನ್ಯ ರಾಜ್ಯಗಳಲ್ಲಿ ಕಾನೂನು ವ್ಯವಸ್ಥೆ ಎನ್ನುವುದೇ ಇಲ್ಲ. ಸ್ಥಳೀಯ ಪಾಳೇಗಾರರದ್ದೇ ಆಳ್ವಿಕೆ. ಆದರೂ ಈ ರಾಜ್ಯಗಳನ್ನು ಭಾರತದಲ್ಲಿಯೇ ಉಳಿಸಿಕೊಳ್ಳಬೇಕೆನ್ನುವ ಕಾರಣಕ್ಕಾಗಿ ಕೋಟ್ಯಂತರ ರೂಪಾಯಿಯನ್ನು ಕೇಂದ್ರ ಸರ್ಕಾರ ಖರ್ಚು ಮಾಡುತ್ತಿದೆ. ಇದು ಅನಿವಾರ್ಯ ಕೂಡ. ಅಲ್ಲಿ ಶಾಂತಿ ಸ್ಥಾಪನೆ ಆಗಿ ಅಭಿವೃದ್ಧಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೆ ಬಂದರೆ ಆ ಜನರ ವಿಶ್ವಾಸ ಗಳಿಸಲು ಸಾಧ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.