ಮೊದಲಿನಿಂದಲೂ ಪ್ರಕೃತಿಯೊಂದಿಗೆ ಹೋರಾಡುತ್ತಾ ಬಂದಿರುವ ರೈತರ ಪಾಲಿಗೆ ಕೇವಲ ಕೃಷಿಯಿಂದಲೇ ಜೀವನ ನಿರ್ವಹಣೆ ಕಷ್ಟ. ಹಾಗಾಗಿ ಬಹುತೇಕ ರೈತ ಕುಟುಂಬಗಳು ಕೃಷಿಯ ಜೊತೆಗೆ ಒಂದಿಲ್ಲೊಂದು ಉಪಕಸುಬಿನಲ್ಲಿ ತೊಡಗಿಸಿಕೊಂಡಿವೆ.

ಇದರಿಂದ ಮಾತ್ರ ಲಾಭ ಗಳಿಸಬಹುದು ಎಂಬುದನ್ನು ಕಂಡುಕೊಂಡಿವೆ.
ಇಂಥ ಕೃಷಿ ಸಂಬಂಧಿ ಲಾಭದಾಯಕ ಪೂರಕ ಕಸುಬಿನಲ್ಲಿ ಹಂದಿ ಸಾಕಣೆಯೂ ಒಂದು. ಇದಕ್ಕೆ ಕಾರಣ ಇಂದು ಹಂದಿ ಮಾಂಸಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಕಡಿಮೆ ವೆಚ್ಚದಲ್ಲಿ ಪಾಲನೆ ಮಾಡಿ ಹೆಚ್ಚು ಲಾಭ ಗಳಿಸಬಹುದು ಎಂಬುದು. ಹೀಗಾಗಿಯೇ ಎಷ್ಟೋ ಜನ ಹಂದಿ ಸಾಕಣೆಯನ್ನು ಮುಖ್ಯ ಕಸುಬಾಗಿ ಮಾಡಿಕೊಂಡಿದ್ದಾರೆ.

ಈ ವಿಷಯದಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ನಮ್ಮ ದೇಶದಲ್ಲೂ ಅಸ್ಸಾಂ, ಕೇರಳ ಮತ್ತು ಉತ್ತರಪ್ರದೇಶಗಳಲ್ಲಿ ಹಾಗೂ ಕರ್ನಾಟಕದ ಮೈಸೂರು, ಮಡಿಕೇರಿ, ಬೆಂಗಳೂರು ಮುಂತಾದ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಹಂದಿ ಸಾಕಣೆ ಕಾಣಬಹುದು.

ಚಿಕ್ಕಮಗಳೂರು ಜಿಲ್ಲೆಯ ಕೆಳಗೂರು ಗ್ರಾಮದ ಮಡನೆರಳು ಹಂದಿ ಫಾರಂನಲ್ಲಿ ಅಮರ್ ಡಿಸೋಜ ಮತ್ತು ನಿಶಾ ಡಿಸೋಜ ದಂಪತಿ ವೈಜ್ಞಾನಿಕ ಕ್ರಮದಲ್ಲಿ ಹಂದಿ ಸಾಕಣೆ ಮಾಡಿ ಲಾಭ ಗಳಿಸುತ್ತಿದ್ದಾರೆ. ಅವರಿಗೆ ಈ ವಿಷಯದಲ್ಲಿ ಆರಂಭಿಕ ಮಾರ್ಗದರ್ಶನ ನೀಡಿದವರು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಶ್ರೀನಿವಾಸಮೂರ್ತಿ.

ಸುಮಾರು 15 ಲಕ್ಷ ರೂಪಾಯಿ ಬಂಡವಾಳದೊಂದಿಗೆ ಪ್ರಾರಂಭವಾದ ಈ ಉದ್ಯಮ ಈಗ ವರ್ಷಕ್ಕೆ 12 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದೆ. ಇವರ ಬಳಿ ಸುಮಾರು 350 ಹಂದಿಗಳಿವೆ. ಇವೆಲ್ಲಾ ವಿದೇಶಿ ತಳಿಗಳಾದ ಯಾರ್ಕ್ಶರ್ ಮತ್ತು ಡ್ಯುರಾಕ್. ಇದರಲ್ಲಿ ಡ್ಯುರಾಕ್ ತಳಿಯಲ್ಲಿ ಕೊಬ್ಬಿನಾಂಶ ಕಡಿಮೆ ಮತ್ತು ಮಲೆನಾಡು ಬಯಲು ಸೀಮೆಗೆ ಹೊಂದುವುದರಿಂದ ಇದಕ್ಕೆ ಬೇಡಿಕೆ ಜಾಸ್ತಿ.

ಸ್ಥಳೀಯವಾಗಿ ನಡೆಯುವ ಸಮಾರಂಭಗಳಿಗೆ, ಹೋಟೆಲ್ ಮತ್ತು ಕ್ಲಬ್ಗಳಿಗೆ ಹಂದಿ ಮಾಂಸವನ್ನು ಕಿಲೊಗೆ 120 ರಿಂದ 140 ರೂಪಾಯಿವರೆಗೂ ಮಾರಾಟ ಮಾಡುತ್ತಾರೆ. ಹಂದಿ ಮರಿಗಳನ್ನು ಮಂಗಳೂರು, ಕೇರಳ ಮುಂತಾದ ಕಡೆ ಮಾರುತ್ತಾರೆ. ನಿಶಾ ಅವರಂತೂ ಹಂದಿ ಮಾಂಸದ ವಿವಿಧ ಖಾದ್ಯಗಳನ್ನು ತಯಾರಿಸಿ ಮದುವೆ ಸಮಾರಂಭ, ಪಾರ್ಟಿ ಇನ್ನಿತರೆ ಕಡೆ ಪೂರೈಸುತ್ತಾರೆ.

ಮುಂದಿನ ದಿನಗಳಲ್ಲಿ ಕೇರಳ ವಿಶ್ವವಿದ್ಯಾನಿಲಯದಲ್ಲಿ ಬಹು ಬೇಡಿಕೆಯ ಹಂದಿ ಮಾಂಸದ ಸಾಸೇಜ್ ತಯಾರಿಕಾ ತರಬೇತಿ ಪಡೆಯುವ ಉದ್ದೇಶ ಹೊಂದಿದ್ದಾರೆ. ಈ ವಿಷಯದಲ್ಲಿ ಚಿಕ್ಕಮಗಳೂರಿನ ಪಶುಸಂಗೋಪನೆ ಇಲಾಖೆ ಹಿರಿಯ ವೈದ್ಯ ಡಾ. ನಾಗರಾಜ್ ಮತ್ತು ಮೂಡಿಗೆರೆಯ ವಲಯ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರಜ್ಞರಾದ ತ್ಯಾಗರಾಜ್ ಮತ್ತು ಡಾ. ಚಂದ್ರಶೇಖರ್ ಅವರಿಂದ ಮಾರ್ಗದರ್ಶನವೂ ದೊರೆಯುತ್ತಿದೆ.

ಹಂದಿ ಸಾಕಣೆಯ ಜೊತೆಗೆ ಈ ದಂಪತಿ ತಮ್ಮ 30 ಎಕರೆ ಜಾಗದಲ್ಲಿ ಕಾಫಿ, ಮೆಣಸು, ಏಲಕ್ಕಿ, ಬತ್ತ ಬೆಳೆದು ಲಾಭ ಗಳಿಸುತ್ತಿದ್ದಾರೆ. ಈ ಬೆಳೆಗಳಿಗೆ ಹಂದಿ, ದನ ಮತ್ತು ಕೋಳಿ ಗೊಬ್ಬರವನ್ನು ಕಾಂಪೋಸ್ಟ್ ಮಾಡಿ ಉಪಯೋಗಿಸುತ್ತಿದ್ದಾರೆ.

ಗಿರಿರಾಜ, ಸ್ವರ್ಣಧಾರ ತಳಿಯ 50 ಕೋಳಿಗಳನ್ನು ಸಾಕಿದ್ದಾರೆ. ಇದರ ಮೊಟ್ಟೆಯನ್ನು 6 ರೂ. ಗೆ ಮಾರಾಟ ಮಾಡುತ್ತಾರೆ. 11 ಮಿಶ್ರ ತಳಿ ಹಸುಗಳೂ ಇವರ ಬಳಿ ಇವೆ. ಜೊತೆಗೆ ಮೀನು ಸಾಕಣೆಯನ್ನೂ ಕೈಗೊಂಡು ಕಾಟ್ಲ್ ಜಾತಿಯ ಸುಮಾರು 600 ಮೀನುಗಳನ್ನು ಸಾಕಿದ್ದಾರೆ.

ಇದಕ್ಕೆಲ್ಲಾ ಹಂದಿ ಪದಾರ್ಥಗಳನ್ನು ಆಹಾರವನ್ನಾಗಿ ನೀಡುತ್ತಾರೆ. ಹಂದಿ ಮಾಂಸಕ್ಕೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಸಾಕುವ ಪ್ರಾಣಿಗಳಲ್ಲಿ ಹಂದಿ ನಂಬರ್ 1 ಎನ್ನುತ್ತಾರೆ ಅಮರ್.
ಮಾಹಿತಿಗೆ ಅವರ ಸಂಪರ್ಕ ಸಂಖ್ಯೆ 90085 74833.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.