ಸೋಮವಾರ, ಆಗಸ್ಟ್ 2, 2021
21 °C

ಹಕ್ಕು ಪಡೆಯಲು ಸಂಘಟಿತ ಹೋರಾಟ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ದುಡಿಯುವ ವರ್ಗ ಸಾಮಾಜಿಕ ಹೊಣೆಗಾರಿಕೆ ಅರಿತು ತಮ್ಮ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಮಾಡಬೇಕು ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ ಕರೆ ನೀಡಿದರು.ಭಾರತ ಕಮ್ಯುನಿಸ್ಟ್ ಪಕ್ಷ, ಎಐಟಿಯುಸಿ, ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಗರದಲ್ಲಿ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದೇಶದಲ್ಲಿರುವ 41 ಕೋಟಿ ದುಡಿಯುವ ವರ್ಗದ ಪೈಕಿ 5 ಕೋಟಿ ಮಂದಿ ಮಾತ್ರ ಭವಿಷ್ಯನಿಧಿ ಸೌಲಭ್ಯ ಹೊಂದಿದ್ದಾರೆ. ಉಳಿದ 36 ಕೋಟಿ ಮಂದಿ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಸರ್ಕಾರದ ಅಂಕಿ ಸಂಖ್ಯೆಗಳೇ ತಿಳಿಸಿವೆ. ಇಎಸ್‌ಐ ಸೌಲಭ್ಯ ಸಹ ಕೇವಲ 2.76 ಕೋಟಿ ಮಂದಿಗೆ ಮಾತ್ರ ದೊರೆಯುತ್ತಿದೆ ಎಂದು ವಿವರಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದೇಶಿ ಕಂಪೆನಿಗಳಿಗೆ ಮಣೆ ಹಾಕುತ್ತಿವೆ. ಕುಡಿಯುವ ನೀರು ಸರಬರಾಜು ಮಾಡುವುದನ್ನು ಸಹ ವಿದೇಶಿ ಕಂಪೆನಿಗಳಿಗೆ ಗುತ್ತಿಗೆ ನೀಡುವ ಹುನ್ನಾರ ನಡೆಯುತ್ತಿದೆ. ಸರ್ಕಾರದ ಇಂತಹ ನೀತಿಗಳ ವಿರುದ್ಧ ದುಡಿಯುವ ವರ್ಗ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ಮಾತನಾಡಿ, ನಗರಸಭೆ ವತಿಯಿಂದ ಮೇ 2ರಂದು ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಜಿ. ಚಂದ್ರಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಎ.ಪಿ. ಪುಂಡಲೀಕರಾವ್, ವೈ. ಹನುಮಂತಪ್ಪ, ಜಿ. ತಿಪ್ಪೇಸ್ವಾಮಿ, ಪಿ. ಪ್ರಕಾಶ್, ಜಿ.ಸಿ. ಸುರೇಶ್‌ಬಾಬು, ಪ್ರೇಮಕುಮಾರ್, ಗಂಗಮ್ಮ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.