ಶುಕ್ರವಾರ, ಜೂನ್ 18, 2021
27 °C

ಹಕ್ಕು ಪಡೆಯಲು ಸಂಘರ್ಷ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯುವ ಹೋರಾಟದ ಹೆಸರಿನಲ್ಲಿ ಸಂಘರ್ಷಕ್ಕೆ ಇಳಿಯಬಾರದು ಎಂದು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕರಪ್ಪ ಹೇಳಿದರು.ನಗರದಲ್ಲಿ ಶುಕ್ರವಾರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಮತ್ತು ವಿವಿಧ ಸಮಾಜಗಳ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಹಕ್ಕುಗಳನ್ನು ಪಡೆಯಲು ಗಾಂಧೀಜಿ ಹಾಕಿಕೊಟ್ಟ ಅಹಿಂಸಾತ್ಮಕ ಹಾದಿಯಲ್ಲಿ ಮುಂದುವರಿಯಬೇಕು. ಹಿಂದುಳಿದ ವರ್ಗದವರು ಎಂದು ಹೇಳಿಕೊಳ್ಳುವುದಕ್ಕೆ ಯಾವುದೇ ಹಿಂಜರಿಕೆ ಬೇಡ. ಹಿಂದುಳಿದ ವರ್ಗದವರು ಕಾಯಕ ಪ್ರವೃತ್ತಿ ಉಳ್ಳವರು. ಇಂದು ಸಮಾಜ ಮುಂದುವರಿದಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರಿಗೂ ಅವಕಾಶವಿದೆ. ಶಿಕ್ಷಣದ ಕೊರತೆ, ಅಜ್ಞಾನ, ಕೌಶಲ ಇಲ್ಲದಿರುವುದು ನಾವು ಹಿಂದುಳಿಯಲು ಕಾರಣವಾಗಿದೆ.

ಹಿಂದುಳಿದವರ ಅಭಿವೃದ್ಧಿಗೆ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ  1 ಸಾವಿರ ಕೋಟಿ ಮೀಸಲಿಡಲು ಒಪ್ಪಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರೂ750 ಕೋಟಿ ಮೊತ್ತ ಮೀಸಲಿಟ್ಟಿದ್ದರು. ಸರ್ಕಾರಕ್ಕೆ ಯಾರ ಮೇಲೂ ದ್ವೇಷ ಇಲ್ಲ ಎಂದರು.ಹಿಂದುಳಿದ ವರ್ಗಗಳ ಆಯೋಗಕ್ಕೆ ಸದಸ್ಯರ ನೇಮಕಾತಿ ಆಗಿದೆ. ಮುಂದೆ ಒಬ್ಬ ಸಚಿವರನ್ನು ನೇಮಕ ಮಾಡಬೇಕು. ಪ್ರತ್ಯೇಕ ಸಚಿವಾಲಯ ಇರಬೇಕು. ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು. ಈ ಹಿಂದಿನ ಅಧ್ಯಕ್ಷರು ಜಾತಿಗಣತಿಗೆ ಮುಂದಾಗಿರಲಿಲ್ಲ. ಇನ್ನು ಮುಂದೆ ಮೂರು ತಿಂಗಳಲ್ಲಿ ಜಾತಿ ಗಣತಿ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ವಿವಿಧ ಸಮುದಾಯದ ನಿಖರ ಜನಸಂಖ್ಯೆ ತಿಳಿದುಬರಲಿದೆ ಎಂದು ಅಭಿಪ್ರಾಯಪಟ್ಟರು.ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡ ಬಿ.ಎಂ. ಸತೀಶ್ ಮಾತನಾಡಿ, ಸಾದರು ಲಿಂಗಾಯತ ಸಮುದಾಯದವರು ತಮ್ಮನ್ನು ಹಿಂದೂ ಸಾದರು ಎಂದು ಹೇಳಿಕೊಂಡು 2ಎ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದರು. ಅದರ ವಿರುದ್ಧ ಹೋರಾಟದ ಸಲುವಾಗಿ ಒಕ್ಕೂಟ ಸ್ಥಾಪಿಸಲಾಯಿತು. ಹಿಂದುಳಿದ ವರ್ಗಗಳ ಹಿತಾಸಕ್ತಿ ರಕ್ಷಿಸುವ ಸಲುವಾಗಿ ಹಲವಾರು ಹೋರಾಟ ನಡೆಸಲಾಗಿದೆ ಎಂದು ವಿವರಿಸಿದರು.ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆಂಗೋ ಹನುಮಂತಪ್ಪ, ಮಾಜಿ ಶಾಸಕ ಕೆ. ಮಲ್ಲಪ್ಪ, ದಿಳ್ಳೆಪ್ಪ, ಎಚ್. ಶಂಕರ್, ಉಮಾಪತಿ, ನಾಗರತ್ನಾ, ಗುಬ್ಬಿ ಬಸವರಾಜ್ ಇತರರು ಇದ್ದರು. ಎ. ನಾಗರಾಜ್ ಸ್ವಾಗತಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.