ಮಂಗಳವಾರ, ಮೇ 11, 2021
21 °C

ಹಾಕಿ: ಭಾರತಕ್ಕೆ ಮಣಿದ ಚೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಭಾರತಕ್ಕೆ ಮಣಿದ ಚೀನಾ

ಓರ್ಡೊಸ್, ಚೀನಾ (ಪಿಟಿಐ): ಚೀನಾ ಪ್ರಬಲ ಸವಾಲು ಎನಿಸಲೇ ಇಲ್ಲ. ಆದ್ದರಿಂದ ಭಾರತಕ್ಕೆ ಗೆಲುವು ಕಷ್ಟವಾಗಲೇ ಇಲ್ಲ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕಾರ್ಯಾಚರಣೆ ಭಾರತಕ್ಕೆ ಶುಭವೆನಿಸಿತು. ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಭಾರತಕ್ಕೆ ನಿರೀಕ್ಷೆಗೆ ತಕ್ಕ ಫಲವೇ ಸಿಕ್ಕಿತು. ಚುರುಕಿನ ಆಟವಾಡುವ ಮೂಲಕ 5-0 ಗೋಲುಗಳ ಅಂತರದಿಂದ ಆತಿಥೇಯರನ್ನು ಸುಲಭವಾಗಿ ಮಣಿಸಿ, ಪಾಯಿಂಟುಗಳ ಪಟ್ಟಿಯಲ್ಲಿ ಖಾತೆ ತೆರೆಯಿತು.ತನ್ನ ನಾಲ್ವರು ಪ್ರಮುಖ ಆಟಗಾರರು ಗಾಯಗೊಂಡಿದ್ದರಿಂದ ದುರ್ಬಲವಾದ ಚೀನಾ ಹೆಚ್ಚು ಗೋಲುಗಳ ಅಂತರದಿಂದ ಸೋಲಬಾರದೆನ್ನುವ ಆಶಯ ಹೊಂದಿತ್ತು. ಅದು ಆಡಿದ ರೀತಿಯೂ ಈ ಅಂಶವನ್ನು ಸ್ಪಷ್ಟವಾಗಿ ಎತ್ತಿ ತೋರಿಸಿತು. ಆದರೂ ಐದು ಗೋಲುಗಳನ್ನು ಗಳಿಸುವಲ್ಲಿ ಭಾರತದವರು ಯಶಸ್ವಿಯಾದರು.ಪಂದ್ಯದುದ್ದಕ್ಕೂ ಚೀನಾದವರು ರಕ್ಷಣೆಯ ಆಟಕ್ಕೆ ಒತ್ತು ನೀಡಿದರೂ, ಭಾರತದ ದಾಳಿಯ ಮುಂದೆ ಭದ್ರ ಕೋಟೆಯಾಗಿ ಉಳಿಯಲಿಲ್ಲ. ಐದನೇ ನಿಮಿಷದಲ್ಲಿಯೇ ವಿಜಯಿ ತಂಡಕ್ಕೆ ಗೋಲು ದಕ್ಕಿತು. ಗುರ್ವಿಂದರ್ ಸಿಂಗ್ ಚಾಂದಿ ತಮ್ಮ ಹಿಡಿತಕ್ಕೆ ಸಿಕ್ಕ ಚೆಂಡನ್ನು ಮಿಂಚಿನ ವೇಗದಲ್ಲಿ ಗೋಲು ಪೆಟ್ಟಿಗೆ ಸೇರಿಸಿದರು. ಅದು ಆತಿಥೇಯರಿಗೆ ಮೊದಲ ಆಘಾತ.ಬಹುಬೇಗ ಭಾರತ ಮುನ್ನಡೆ ಸಾಧಿಸುತ್ತಿದ್ದಂತೆಯೇ ಇನ್ನು ದೊಡ್ಡ ಆಘಾತ ಕಾಯ್ದಿದೆ ಎನ್ನುವುದು ಚೀನಾಕ್ಕೆ ಸ್ಪಷ್ಟವಾಯಿತು. ಆದ್ದರಿಂದ ಫಾರ್ವರ್ಡ್‌ನಲ್ಲಿ ಕೇವಲ ಒಬ್ಬ ಆಟಗಾರನನ್ನು ಬಿಟ್ಟು ಬಾಕಿ ಎಲ್ಲರೂ ರಕ್ಷಣೆಯ ಕಡೆಗೆ ಗಮನ ನೀಡಿದರು. ಇದರಿಂದಾಗಿ ಭಾರತಕ್ಕೆ ಇನ್ನಷ್ಟು ಅನುಕೂಲವೇ ಆಯಿತು. ಎದುರಾಳಿಗಳ ಮುನ್ಪಡೆಯ ಒತ್ತಡ ಕಡಿಮೆ ಇದ್ದರಿಂದ ದಾಳಿಯನ್ನು ಹೆಚ್ಚು ಬಲಗೊಳಿಸಿಕೊಳ್ಳಲು ಅವಕಾಶ ಸಿಕ್ಕಿತು.ಚೀನಾದವರು ರಕ್ಷಣಾ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿದರೂ, ಅದಕ್ಕೆ ತಕ್ಕ ಶಕ್ತಿಯುತವಾದ ಕೋಟೆ ನಿರ್ಮಾಣವಾಗಲಿಲ್ಲ. ವಿಜಯಿ ತಂಡದವರು ಸುಲಭವಾಗಿ ಚೆಂಡನ್ನು ಗೋಲ್ ಆವರಣಕ್ಕೆ ಸಾಗಿಸಲು ಸಾಧ್ಯವಾಯಿತು. 21ನೇ ನಿಮಿಷದಲ್ಲಿ ಯುವರಾಜ್ ವಾಲ್ಮೀಕಿ ಅವರು ಎದುರಾಳಿ ಗೋಲ್ ಕೀಪರ್ ಕ್ಸಿ ರುಯಿ ಅವರು ಒಮ್ಮೆ ಹಿಂದಕ್ಕೆ ತಳ್ಳಿದ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಬಾರಿಸಿದರು.ಅದಕ್ಕೂ ಮುನ್ನ 15ನೇ ನಿಮಿಷದಲ್ಲಿ ಯುವರಾಜ್ ಹಾಗೂ 19ನೇ ನಿಮಿಷದಲ್ಲಿ ರಾಜ್ಪಾಲ್ ಸಿಂಗ್ ಅವರು ಗೋಲು ಗಳಿಸಲು ಸಿಕ್ಕ ಎರಡು ಉತ್ತಮ ಅವಕಾಶಗಳನ್ನು ಪೋಲು ಮಾಡಿದ್ದರು. ಇಂಥ ತಪ್ಪುಗಳು ಆನಂತರ ಮರುಕಳಿಸದಂತೆ ಭಾರತದವರು ಆಡಿದ್ದು ಸಮಾಧಾನ. ರೂಪಿಂದರ್ ಪಾಲ್ ಸಿಂಗ್ ವಿರಾಮದ ನಂತರದ ಆಟದಲ್ಲಿ ತಮ್ಮ ತಂತ್ರಗಾರಿಗೆಯ ಆಟದಿಂದ ಗಮನ ಸೆಳೆದರು.41ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಆಕರ್ಷಕ ಡ್ರ್ಯಾಗ್ ಫ್ಲಿಕ್‌ನಿಂದ ರೂಪಿಂದರ್ ಗೋಲಾಗಿ ಪರಿವರ್ತಿಸಿದರು. ಆಗ ಅಂತರವು 3-0 ಆಯಿತು. ಆನಂತರ ನಾಲ್ಕನೇ ಗೋಲ್ ಬಂದ ರೀತಿ ಮಾತ್ರ ಅದ್ಭುತ. ವಿಕಾಸ್ ಶರ್ಮ ಅವರು ಚೆಂಡನ್ನು ಎದುರಾಳಿ ಗೋಲ್ ಆವರಣದಲ್ಲಿ ಸಮಯೋಚಿತವಾಗಿ ನಿಯಂತ್ರಿಸಿದರು.ರಕ್ಷಣಾ ಆಟಗಾರರನ್ನು ವಂಚಿಸಿ ಅವರು ತಳ್ಳಿದ ಚೆಂಡನ್ನು ರೋಷನ್ ಮಿಂಜ್ ಅಷ್ಟೇ ವೇಗದಲ್ಲಿ ನಾಯಕ ರಾಜ್ಪಾಲ್ ಸುಪರ್ದಿಗೆ ಒಪ್ಪಿಸಿದರು. ತಂಡದ ಗೆಲುವಿನಲ್ಲಿ ತಮ್ಮಿಂದ ಒಂದಾದರೂ ಗೋಲು ಕೊಡುಗೆ ಇರಬೇಕೆನ್ನುವ ಉತ್ಸಾಹದಲ್ಲಿದ್ದ ರಾಜ್ಪಾಲ್ ಸ್ಟಿಕ್ ಕೋನವನ್ನು ಬದಲಿಸಿದರು ಚೆಂಡು ಗೋಲು ಪೆಟ್ಟಿಗೆ ದಾರಿ ಹಿಡಿದು ಹೋಯಿತು.ಚೀನಾ ಗೋಲ್ ಕೀಪರ್ ಆಗ ಚೆಂಡು ತಡೆಯುವ ಸ್ಥಿತಿಯಲ್ಲಿ ಇರಲಿಲ್ಲ. ಆದ್ದರಿಂದ ಅಸಹಾಯಕರಾಗಿ ಸ್ಟಿಕ್ ಅನ್ನು ಪ್ಯಾಟ್‌ಗೆ ಅಪ್ಪಳಿಸಿಕೊಂಡು ತಮ್ಮ ಅಸಮಾಧಾನ ಹೊರಹಾಕಿದರು. ಭಾರತದ ಖಾತೆಗೆ ಇನ್ನೊಂದು ಗೋಲ್ ಸೇರಿದ್ದು ವಿ.ರಘುನಾಥ್ ಪ್ರಯತ್ನದಿಂದ. 62ನೇ ನಿಮಿಷದಲ್ಲಿ ಅವರು ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿಸಿದರು.ಪಂದ್ಯದ ಕೊನೆಯ ಕೆಲವು ನಿಮಿಷಗಳ ಆಟ ಬಾಕಿ ಇದ್ದಾಗ ಕೋಚ್ ಮೈಕಲ್ ನಾಬ್ಸ್ ಅವರು ಅವಸರದಲ್ಲಿ ಆಟಗಾರರನ್ನು ಬದಲಿಸುವ ಮೂಲಕ ಎಲ್ಲರಿಗೂ ಇಲ್ಲಿನ ಟರ್ಫ್ ವಾತಾವರಣವನ್ನು ಅರಿಯುವ ಅವಕಾಶ ಮಾಡಿಕೊಟ್ಟಿದ್ದು ವಿಶೇಷ. ಹೊಸ ಕೋಚ್ ನಾಬ್ಸ್ ಮಾರ್ಗದರ್ಶನದಲ್ಲಿ ಪಳಗಿರುವ ಭಾರತವು ಭಾನುವಾರದ ಪಂದ್ಯದಲ್ಲಿ ಜಪಾನ್ ವಿರುದ್ಧ ಆಡಲಿದೆ.ಶನಿವಾರದ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಕೊರಿಯಾದವರು 3-2 ಗೋಲುಗಳ ಅಂತರದಿಂದ ಜಪಾನ್ ವಿರುದ್ಧ ಗೆಲುವು ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.