ಬಹುತೇಕ ಚಿಕ್ಕ ಮಕ್ಕಳಿಗೆ ಶಾಲೆ ಎಂದರೆ ಜೈಲು. ಅಲ್ಲಿಗೆ ಹೋದರೆ, ಬೆಳಿಗ್ಗೆಯಿಂದ ಸಂಜೆವರೆಗೆ ಕೂಡಿ ಹಾಕುತ್ತಾರೆ. ಒಳಗೆ ಹೋಗಿ ಸಿಕ್ಕಿ ಹಾಕಿಕೊಂಡರೆ ಸಾಕು, ಮಾತನಾಡಲು ಮಾಡಲು ಅವಕಾಶವಿಲ್ಲ. ಜೋರಾಗಿ ಬಾಯಿ ಮಾಡುವಂತಿಲ್ಲ. ದುಃಖವಾದರೆ ಅಳುವಂತಿಲ್ಲ. ಇಂತಹ ಕೆಲವು ಕಾರಣಗಳಿಗಾಗಿ ಬಹಳಷ್ಟು ಮಕ್ಕಳು ಶಾಲೆಗೆ ಹೋಗಲು ಎಲ್ಲಿಲ್ಲದ ಹಠ ಮಾಡುತ್ತವೆ.

ಅವರನ್ನು ಶಾಲೆಗೆ ಕಳುಹಿಸಲು ಪಾಲಕರು ಆಸೆ, ಆಮಿಷೆಗಳ ಮೂಲಕ ಇಂದ್ರ ಚಂದ್ರರನ್ನೇ ಧರೆಗೆ ಕರೆತರಬೇಕು. ಅದಕ್ಕೂ ಜಗ್ಗದಿದ್ದರೆ, ಒಂದೆರಡು ಏಟು ಹಾಕಿ ಜೋರು ಮಾಡಬೇಕು. ಒಟ್ಟಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಪಾಲಕರಿಗೆ ಹರಸಾಹಸ ಕೆಲಸವೇ ಸರಿ.

ಆದರೆ, ಇಂತಹ ಮಕ್ಕಳಿಗೆ ಅಪವಾದ ಎನ್ನುವಂತೆ ರಾಣೆಬೆನ್ನೂರಿನ ಬಾಲಕನೊಬ್ಬ ಎಲ್ಕೆಜಿಯಿಂದ ಹಿಡಿದು ಮೂರನೇ ತರಗತಿವರೆಗೆ ಅಂದರೆ, ಸತತ ಐದು ವರ್ಷಗಳ ಕಾಲ ಶಾಲೆ ಆರಂಭವಿರುವ ಎಲ್ಲ ದಿನಗಳಲ್ಲಿ ಒಂದೇ ಒಂದುದಿನ ಶಾಲೆ ತಪ್ಪಿಸದೇ ನಿರಂತರ ಹಾಜರಿ ಇರುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.

ಅಲ್ಲದೇ, ಶಾಲೆಯ ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾನೆ.

ಹೌದು, ಇದು ಆಶ್ಚರ್ಯವಾದರೂ ಸತ್ಯ. ತಿಳಿವಳಿಕೆ ಇದ್ದು, ಯಾವುದೋ ಒಂದು ಆದರ್ಶಕ್ಕೆ ಅಂಟಿಕೊಂಡು ಉದ್ಯೋಗದಲ್ಲಿ ರಜೆ ಇಲ್ಲದೇ ಕೆಲಸ ಮಾಡಿದ ಸಾಧಕರಿದ್ದಾರೆ. ಆದರೆ, ಅದಾವುದರ ಪರಿವೇ ಇಲ್ಲದ ಈ ಎಂಟು ವರ್ಷದ ಪೋರನ ಸಾಧನೆ ಮಾತ್ರ ಆಶ್ಚರ್ಯದ ಸಂಗತಿಯೇ.

ರಾಣೆಬೆನ್ನೂರಿನ ಸೈಕಲ್ ಹಾಗೂ ಅದರ ಬಿಡಿಭಾಗಗಳ ವ್ಯಾಪಾರಿ ರಾಮಣ್ಣ-ವಿಜಯಾ ಅಗಡಿ ಅವರ ಪುತ್ರ ಕಾರ್ತಿಕ ಎಂಬಾತನೇ ಈ ಸಾಧನೆ ಮಾಡಿದ ವಿದ್ಯಾರ್ಥಿ.

ಮೂರನೇ ವಯಸ್ಸಿನಲ್ಲಿಯೇ ಈತನನ್ನು ರಾಣೆಬೆನ್ನೂರಿನ ಓಂ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಈತನಿಗೆ ಎಲ್ಕೆಜಿಗೆ ಪ್ರವೇಶ ಪಡೆದ ಈತ ಮೊದಲ ಎರಡು ವರ್ಷ ಈತನ ತಂದೆ ತಾಯಿಗಳೊಂದಿಗೆ ಇಲ್ಲವೇ ಅಜ್ಜಿಯೊಂದಿಗೆ ಶಾಲೆಗೆ ತೆರಳುತ್ತಿದ್ದನು. ಹೀಗಾಗಿ ಮೊದಲ ಎರಡು ವರ್ಷದಲ್ಲಿ ಆತ ಶಾಲೆ ಬಿಡುವ ಯಾವುದೇ ಪ್ರಮೆಯೇ ಬರದ ಕಾರಣ ಶಾಲೆಯಲ್ಲಿ ನೂರಕ್ಕೆ ನೂರರಷ್ಟು ಹಾಜರಿ ಪಡೆದಿದ್ದನು. ಆಗ ಶಾಲೆಯ ಆಡಳಿತ ಮಂಡಳಿ ಈತನ ಭಾವ ಚಿತ್ರದೊಂದಿಗೆ ಅಭಿನಂದನಾ ಪತ್ರವನ್ನು ಶಾಲೆಯ ಸೂಚನಾ ಫಲಕಕ್ಕೆ ಹಾಕಿ ಅಭಿನಂದಿಸಿತು.

ಆ ಎರಡು ವರ್ಷದಲ್ಲಿ ಸಂಪೂರ್ಣವಾಗಿ ಶಾಲೆಯ ವಾತಾವರಣಕ್ಕೆ ಹೊಂದಿಕೊಂಡ ಈತ ಒಂದನೇ ತರಗತಿಗೆ ಬಂದಾಗ ಸ್ವತಂತ್ರವಾಗಿ ಶಾಲೆಗೆ ತೆರಳಲು ಶುರುಮಾಡಿದ. ಆಗಲೂ ಕೂಡಾ ಮಳೆ, ಚಳಿ, ಬಿಸಿಲು ಇದ್ದರೂ ಶಾಲೆ ಬಿಡುವುದಾಗಿ ಹೇಳಿಲ್ಲ. ಅವರ ಮನೆಯವರು ಬಿಡಿಸಲು ಮುಂದಾಗಿಲ್ಲ. ಹೀಗಾಗಿ ಮೂರನೇ ವರ್ಷವೂ ನೂರಕ್ಕೆ ನೂರರಷ್ಟು ಹಾಜರಿ ಪಡೆದು ಶಾಲೆಯಲ್ಲಿ ಹಾಜರಿಯಲ್ಲಿ `ಹ್ಯಾಟ್ರಿಕ್ ಸಾಧಕ' ಎಂದು ಗುರುತಿಸಿಕೊಂಡಿದ್ದಾನೆ.

ಅದೇ ವರ್ಷದ ವಾರ್ಷಿಕೋತ್ಸವದಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಕೆ.ಚಂದ್ರಶೇಖರ ಅವರು ಅತಿಥಿಗಳಾಗಿ ಆಗಮಿಸಿದ್ದರು. ಆ ಸಮಾರಂಭದಲ್ಲಿ ಶಾಲೆಯ ಆಡಳಿತ ಮಂಡಳಿ ಕಾರ್ತಿಕಗೆ `ಹ್ಯಾಟ್ರಿಕ್ ಸಾಧಕ' ಎಂದು ಗೌರವ ನೀಡಿತು. ಆಗಿನ್ನು ಆತನಿಗೆ ಕೇವಲ ಆರು ವರ್ಷ. ಅದಾದ ನಂತರ ಸ್ಪೂರ್ತಿಗೊಂಡ ಕಾರ್ತಿಕ ಶಾಲೆಗೆ ಮೊದಲು ಆದ್ಯತೆ ನೀಡುತ್ತಾ ಎಂತಹದೇ ಸಂದರ್ಭ ಬಂದರೂ ಶಾಲೆಗೆ ಬರುವುದನ್ನು ಮಾತ್ರ ತಪ್ಪಿಸಿಲ್ಲ.

ಡ್ರಿಪ್ ಇದ್ದರೂ ಶಾಲೆಗೆ ಹಾಜರ್
ಒಂದೊಮ್ಮೆ ಕಾರ್ತಿಕ್ ಬಿಳಿ ರಕ್ತ ಕಣಗಳ ಕೊರತೆಯಾಗಿ ತೀವ್ರ ಜ್ವರದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದನು. ಕೈಯಲ್ಲಿ ಡ್ರಿಪ್ನ ಸಿರೀಂಜ್ ಇಟ್ಟುಕೊಂಡೇ ಶಾಲೆಗೆ ತೆರಳಿ ಹಾಜರಿ ದಾಖಲೆಯನ್ನು ಉಳಿಸಿಕೊಂಡಿದ್ದಾನೆ. ಶಾಲೆಯಿಂದ ಸಂಜೆ ವಾಪಸ್ಸಾದ ನಂತರ ಮತ್ತೆ ಡ್ರಿಪ್ ಹಚ್ಚಿಸಿಕೊಂಡಿದ್ದಾನೆ ಎಂದು ಆತನ ತಾಯಿ ವಿಜಯಾ ಅವರು ಮಗನ ಶಾಲೆಯ ಪ್ರೇಮವನ್ನು ವಿವರಿಸುತ್ತಾರೆ.

ಊರಿಗೂ ಬರುವುದಿಲ್ಲ
ಶಾಲೆ ಇದ್ದಾಗ ಕುಟುಂಬದವರು ಯಾವುದೇ ಟೂರ್ ಹಾಕಿಕೊಳ್ಳುವುದಿಲ್ಲ. ಏಕೆಂದರೆ, ಮನೆಯವರು ಹೋಗಲು ರೆಡಿಯಾದರೂ, ಈತ ಮಾತ್ರ ನಿರಾಕರಣೆ ಮಾಡುತ್ತಾನೆ. ಮನೆಯವರು ಅನಿವಾರ್ಯವಾಗಿ ಹೋಗುವ ಪ್ರಸಂಗ ಬಂದರೆ, ಈತನನ್ನು ಅದೇ ಊರಿನಲ್ಲಿರುವ ಅಜ್ಜಿಯ ಮನೆಯಲ್ಲಿ ಬಿಟ್ಟು ಹೋಗಬೇಕಾಗುತ್ತದೆ. ಹೀಗಾಗಿ ನಾವು ಆತನಿಗೆ ಒತ್ತಾಯ ಮಾಡುವುದಿಲ್ಲ ಎಂದು ಆತನ ತಂದೆ ರಾಮಣ್ಣ ಅಗಡಿ ತಿಳಿಸುತ್ತಾರೆ.

ಶಾಲೆಯಲ್ಲಿ ಜಾಣ
ಕೇವಲ ಶಾಲೆಗೆ ಹಾಜರಾಗುವುದರಲ್ಲಿ ಅಷ್ಟೇ ಅಲ್ಲದೇ, ಶಾಲೆಯ ಪಠ್ಯ ಚಟುವಟಿಕೆಗಳಲ್ಲಿ ಕಾರ್ತಿಕ ಪ್ರತಿ ವರ್ಷ ಉತ್ತಮ ಸಾಧನೆ ಮಾಡುತ್ತಾ ಬಂದಿದ್ದಾನೆ. ನಿರಂತರವಾಗಿ ಶಾಲೆಗೆ ಬರಲು ಆತನಲ್ಲಿನ ಗಟ್ಟಿಯಾದ ಮನೋಭಾವವನೇ ಕಾರಣ. ಆತನ ಜಾಣ್ಮೆ ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಲಿ ಎನ್ನುವ ಉದ್ದೇಶದಿಂದಲೇ ಆತನನ್ನು ಶಾಲೆಯ ವತಿಯಿಂದ ಸನ್ಮಾನಿಸಿದ್ದೇವೆ ಎಂದು ತಿಳಿಸುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಮಾಗಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.