ಶನಿವಾರ, ಮೇ 15, 2021
24 °C

ಹಾಡು, ಆಟ ಆಡು!

-ಡಿ.ಕೆ. ರಮೇಶ್ Updated:

ಅಕ್ಷರ ಗಾತ್ರ : | |

ಪಾಠದ ಚೀಲ ಹೊತ್ತು ಶಾಲೆಗೆ ಹೋಗುವಾಗ ಎದುರಾಗುತ್ತಿತ್ತು ಗ್ರೀಟಿಂಗ್ ಕಾರ್ಡುಗಳ ಒಂದು ಅಂಗಡಿ. ಅದರ ತುಂಬಾ ಸಿನಿಮಾ ಗೀತೆಗಳ ಪುಸ್ತಕ. ಹಾಡಿನ ಸಾಹಿತ್ಯದ ಜೊತೆಗೆ ಬರೆದವರಾರು, ಹಾಡಿದವರು ಯಾರು ಎಂಬ ಮಾಹಿತಿ. ತಪ್ಪಿಲ್ಲದಂತೆ ಪದ ಗುನುಗಿಕೊಳ್ಳಲು ಆ ಪುಸ್ತಕಗಳು ಶ್ರಮಿಸುತ್ತಿದ್ದವು.`ಗಂಧದ ಗುಡಿ'ಯೋ `ಮುಠಾಮೇಸ್ತ್ರಿ'ಯೋ ಅಥವಾ `ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ'ಯೋ ಚಿಕ್ಕವರ ಬಾಯಲ್ಲಿ ನಲಿದಾಡುತ್ತಿದ್ದವು. ಪಿ.ಬಿ. ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಆಶಾ ಭೋಂಸ್ಲೆ ಆಗಿಬಿಟ್ಟೆವು ಎಂಬ ಖುಷಿ ಪುಟಾಣಿಗಳಿಗೆ.ಕಾಲ ಬದಲಾಯಿತು. ನೋಡನೋಡುತ್ತಿದ್ದಂತೆ ಡಿಜಿಟಲ್ ಯುಗ ಆವರಿಸಿಕೊಂಡಿತು. ಕಂಪ್ಯೂಟರ್ ತೆರೆಯ ಮೇಲೆ ಬೇಕೆಂದ ಸಿನಿಮಾ, ಬೇಕಾದಾಗ ನೋಡುವ ಕಾಲ ಬಂದುಬಿಟ್ಟಿತು. ಅಂಥ ಯುಗದಲ್ಲಿಯೂ ಬೇರೆಯವರ ಎದುರು ಹಾಡುವ, ಒಬ್ಬರೇ ಹಾಡಿಕೊಳ್ಳುವ ಹುಕಿ ಕಡಿಮೆ ಆಗಲಿಲ್ಲ. ಒಂದೇ ಕೊರತೆ.ಹಾಡುಗಳಿಗೆ ಗೀತ ಸಾಹಿತ್ಯ ಸಿಗುತ್ತಿಲ್ಲ ಎಂಬುದು. ಆ ಇಲ್ಲದಿರುವಿಕೆಯೇ ಹೊಸ ಅನ್ವೇಷಣೆಗೆ ನಾಂದಿ ಹಾಡಿತು. ಹಾಡು ಸಂಸ್ಕೃತಿಯನ್ನು ಹುಟ್ಟುಹಾಕುತ್ತಿರುವ ಜಾಲತಾಣಗಳಲ್ಲಿ ಕನ್ನಡದ ಯುವ ಮನಸ್ಸುಗಳು ರೂಪಿಸಿದ `ಕರಾವೋಕೆ ಗರಾಜ್' (www.karaokegarage.com) ಕೂಡ ಒಂದು.`ಕರಾವೋಕೆ ಗರಾಜ್' ಎಂದು ಹೆಸರಿಡಲು ಕಾರಣವಿದೆ.  ತಪ್ಪುಗಳನ್ನು ಸರಿಪಡಿಸಿಕೊಂಡು ಉತ್ತಮ ಗಾಯನದತ್ತ ಕರೆದೊಯ್ಯುವ ಗ್ಯಾರೇಜು ಇದು. `ಕರಾವೋಕೆ' ಎಂಬುದು ಜಪಾನಿ ಪದ. ಹವ್ಯಾಸಿ ಹಾಡುಗಾರರು ಅದಾಗಲೇ ಸಿದ್ಧವಾಗಿರುವ ರಾಗಕ್ಕೆ ಕಂಠ ನೀಡುವ ಜನಪ್ರಿಯ ಮನರಂಜನಾ ಮಾಧ್ಯಮ ಎಂಬುದು ಅದರ ಅರ್ಥ.

ಹಾಡ್ತಾ ಹಾಡ್ತಾ ರಾಗ...

ಜಾಲತಾಣದ ಮೊದಲ ಪುಟವನ್ನು ತೆರೆಯುತ್ತಿದ್ದಂತೆ ಹಾಡುಗಳ ರಾಶಿಯೊಂದು ಎದುರುಗೊಳ್ಳುತ್ತದೆ. ಇಷ್ಟದ ಹಾಡೊಂದರ ಮೇಲೆ ಕ್ಲಿಕ್ಕಿಸಿದರೆ ಹಾಡಿನ ಶೀರ್ಷಿಕೆ, ಅದರ ಒಟ್ಟು ಅವಧಿ, ಹಾಗೂ ಮೂಲಗಾಯಕರಂತೆಯೇ ಹಾಡಿ ಅತಿಹೆಚ್ಚು ಅಂಕಗಳಿಸಿದವರ ಹೆಸರು ಮೂಡುತ್ತದೆ. ಅದರ ಕೆಳಗೆ `ಸ್ಟಾರ್ಟ್ ಸಿಂಗಿಂಗ್' ಎಂಬ ಬಟನ್ ಉಂಟು.ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪಿನ ಮೈಕ್ರೋಫೋನ್ ಸಿದ್ಧಮಾಡಿಕೊಳ್ಳುವುದಷ್ಟೇ ನಿಮ್ಮ ಕೆಲಸ. ಉಳಿದ ಮುನ್ನೆಚ್ಚರಿಕೆಗಳನ್ನು ಜಾಲತಾಣ ನೀಡುತ್ತದೆ. ನಂತರ ಮೂಲಗಾಯಕರ ಸಮಸಮಕ್ಕೆ ನೀವೂ ಹಾಡಬಹುದು. ಒಂದೆಡೆ ಮೂಲ ಹಾಡಿನ ಸಾಹಿತ್ಯ ತೆರೆಯ ಮೇಲೆ ಮೂಡುತ್ತದೆ. ಮತ್ತೊಂದೆಡೆ ನಿಮ್ಮ ಶ್ರುತಿ ಮೂಲ ಗಾಯಕರ ಶ್ರುತಿಗೆ ಹತ್ತಿರವಾಗಿದೆಯೇ ಎಂಬುದನ್ನೂ ಲೆಕ್ಕ ಹಾಕುತ್ತದೆ. ಪಕ್ಕದಲ್ಲಿಯೇ ಹಾಡಿನ ದೃಶ್ಯಗಳೂ ಮೂಡಿಬರುತ್ತವೆ. ಕಡೆಗೆ ನೀವೆಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನೋಡಿ ಖುಷಿ ಪಡಬಹುದು.ವೀಡಿಯೊ ಗೇಮ್‌ಗಳನ್ನು ಒಬ್ಬರೂ ಆಡಬಹುದು. ಗೆಳೆಯರೊಂದಿಗೂ ಆಡಬಹುದು. ಸ್ನೇಹಿತರ ಕಾರಿಗಿಂತಲೂ ನಮ್ಮ ಕಾರು ಹೇಗೆ ಸ್ಪರ್ಧೆಯಲ್ಲಿ ಗೆದ್ದಿತು ಎಂಬುದನ್ನು ನೋಡಿ ಆನಂದಿಸಬಹುದು. ಅದೇ ರೀತಿ ಜಾಲತಾಣದಲ್ಲಿ ಹಾಡುಗಳ ಆಟ ನಡೆಯುತ್ತದೆ. `ನನ್ನ ಹಾಡು ನನ್ನದು' ಎಂದು ಬೀಗುತ್ತಲೋ `ಒಲಿದಂತೆ ಹಾಡುವೆನಯ್ಯ' ಎಂದು ವಿನಯದಿಂದಲೂ ಗೆಳೆಯರಿಗೆ ಸವಾಲು ಎಸೆಯಬಹುದು.ನಿರಂತರ ಹಾಡುತ್ತ ಹೋದರಷ್ಟೇ ರಾಗ ಸಿದ್ಧಿಸುತ್ತದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಅದನ್ನು ಕಾರ್ಯರೂಪಕ್ಕೆ ಇಳಿಸುತ್ತಿದೆ ಜಾಲತಾಣ. ಹಿನ್ನೆಲೆ ಸಂಗೀತವನ್ನು ನೀಡಿ ಹಾಡಿಸುವ ಇತರೆ ಕರಾವೋಕೆ ಜಾಲತಾಣಗಳಿಗಿಂತ ಇದು ಒಂದು ಹೆಜ್ಜೆ ಮುಂದಿದೆ. ತಪ್ಪುಗಳನ್ನು ತಿದ್ದಿಕೊಳ್ಳಲು ಇಲ್ಲಿ ಅವಕಾಶಗಳುಂಟು. ಅಲ್ಲದೆ ನೀವು ಹಾಡಬಯಸುವ ನೆಚ್ಚಿನ ಹಾಡುಗಳ ಪಟ್ಟಿಯನ್ನೂ ನೀಡಬಹುದು.ಕನ್ನಡ, ತಮಿಳು, ಹಿಂದಿ, ತೆಲುಗು, ಇಂಗ್ಲಿಷ್ ಹೀಗೆ ಸುಮಾರು ಮುನ್ನೂರು ಹಾಡುಗಳ ಪುಟ್ಟ ಖಜಾನೆ ಇಲ್ಲಿದೆ. ಯೂಟ್ಯೂಬ್‌ನಲ್ಲಿ ಲಭ್ಯವಿರುವ ಹಾಡುಗಳನ್ನು ಸಂಗ್ರಹಿಸಿ ಅದರ ಸಾಹಿತ್ಯವನ್ನು ಹುಡುಕಿ ಆಸಕ್ತರಿಗೆ ನೀಡಲಾಗುತ್ತಿದೆ. ಕೇವಲ ಆರು ತಿಂಗಳ ಹಿಂದಷ್ಟೇ ಕಣ್ತೆರೆದ ಜಾಲತಾಣ ಜನಪ್ರಿಯತೆಯ ತುತ್ತತುದಿಗೇರಿದೆ. ದಿನವೊಂದಕ್ಕೆ ಎರಡು ಸಾವಿರದಿಂದ 3,000 ನೆಟಿಜನ್‌ಗಳು ಭೇಟಿ ನೀಡುತ್ತಿದ್ದಾರೆ. ಜಾಲತಾಣದ ಕೆಲಸಗಳಿಗೆ ಮಾರುಹೋಗಿ ಉತ್ತಮ ಫೀಡ್‌ಬ್ಯಾಕ್‌ಗಳನ್ನು ಕೊಡುತ್ತಿದ್ದಾರೆ.

ಹಾಡೆ ಹಾದಿಯ ತೋರಿತು

ಜಾಲತಾಣದ ಹಿಂದೆ ದುಡಿಯುತ್ತಿರುವವರು ಒಟ್ಟು ಏಳು ಮಂದಿ. ಷಿಕಾಗೊದ ಇಲ್ಲಿನೋಯಿಸ್ ತಾಂತ್ರಿಕ ಸಂಸ್ಥೆಯಿಂದ ಕಂಪ್ಯೂಟರ್ ಸ್ನಾತಕೋತ್ತರ ಪದವಿ ಪಡೆದ ಶಂಕರ್ ಮಹೇಶ್ ಇದರ ಕಾರ್ಯನಿರ್ವಾಹಕ ಅಧಿಕಾರಿ. ಹುವಾಯಿ, ಮೋಟರೋಲ ಹಾಗೂ ಬೈಡಿಸೈನ್ ಕಂಪೆನಿಗಳಲ್ಲಿ ಒಟ್ಟು 9 ವರ್ಷಗಳ ಕಾಲ ದುಡಿದ ಅನುಭವ ಇವರಿಗೆ.ಜಾಲತಾಣದ ಸಹಸಂಸ್ಥಾಪಕರಲ್ಲಿ ಒಬ್ಬರಾದ ಶಿವರಂಜನ್ ಐಬಿಎಂ, ಜಿಇಯಂಥ ಪ್ರತಿಷ್ಠಿತ ಕಂಪೆನಿಗಳಲ್ಲಿ ಸೇವಾನುಭವ ಹೊಂದಿದವರು. ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಇವರು ಈಗ ಜಾಲತಾಣದ ಮಾರುಕಟ್ಟೆ ಹಾಗೂ ಮಾರಾಟ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ. ಶ್ಯಾಂ, ವಿನಯ್ ಕಶ್ಯಪ್, ಉದಯ ಚಂದ್ರನ್, ವೆಂಕಟೇಶ್ ಜಾಲತಾಣದ ಇತರೆ ಸದಸ್ಯರು.`ಕರಾವೋಕೆ ಗರಾಜ್' ಹುಟ್ಟಿನ ಹಿಂದೆ ಪುಟ್ಟ ಕತೆ ಇದೆ. ಮೈಸೂರಿನವರಾದ ಶಂಕರ್ ಹಾಗೂ ಶಿವರಂಜನ್ ಬಾಲ್ಯದ ಗೆಳೆಯರು. ಮರಿಮಲ್ಲಪ್ಪ ಶಾಲೆಯಿಂದ ಆರಂಭವಾದ ಸ್ನೇಹ ಮುಂದೆ ಜೀವಮಾನದ ಗೆಳೆತನವಾಗಿ ಬದಲಾಯಿತು. ಇಬ್ಬರಿಗೂ ಸಿನಿಮಾ ಹಾಡುಗಳನ್ನು ಕೇಳುವ ಹುಚ್ಚು. ಕೇಳಿದರಷ್ಟೇ ಸಾಕೆ? ಹಾಡಲೂ ಬರಬೇಕು. ತಾವೇ ಹೇಳಿಕೊಳ್ಳುವಂತೆ ಇಬ್ಬರೂ ಪ್ರಸಿದ್ಧ ಬಾತ್‌ರೂಂ ಹಾಡುಗಾರರು! ಆದರೆ ಎಲ್ಲಿ ತಪ್ಪಾಗಿ ಹಾಡುತ್ತೇವೋ ಎಂಬ ಭಯದಿಂದಾಗಿ ಉತ್ತಮ ಗಾಯಕರಾಗಲು ಸಾಧ್ಯವಾಗಲಿಲ್ಲ.ಹೊರಗೆ ಗೀತಸಾಹಿತ್ಯದ ಕೊರತೆ. ಅಂತರ್ಜಾಲದ ಥೈಲಿಯಲ್ಲಿಯೂ ಅವುಗಳ ಸಂಖ್ಯೆ ಹೆಚ್ಚಿರಲಿಲ್ಲ.  ಕೆಲವೊಮ್ಮೆ ಹಾಡು ಕೇಳುವಾಗ ವಾದ್ಯಗಳ ಹೊಳೆಯಲ್ಲಿ ಸಾಹಿತ್ಯ ಕೊಚ್ಚಿ ಹೋಗುತ್ತಿತ್ತು. ಮೂಲಗಾಯಕರು ಏನು ಹಾಡುತ್ತಿದ್ದಾರೆ ಎಂಬ ಗೊಂದಲ ಮೂಡುತ್ತಿತ್ತು.ಅಂಥ ಸಮಯದಲ್ಲಿ ಅಪ್ಲಿಕೇಷನ್ ರೂಪಿಸುವ ಜಾಗತಿಕ ಮಟ್ಟದ ಸ್ಪರ್ಧೆಯೊಂದು ಏರ್ಪಾಟಾಯಿತು. ಒಂದು ರಾತ್ರಿಯೊಳಗೆ ಇಡೀ ಅಪ್ಲಿಕೇಷನ್ ರೂಪುಗೊಳ್ಳಬೇಕು. ಅದು ಜನರಿಗೆ ಉಪಯುಕ್ತವಾಗಿರಬೇಕು ಎಂಬುದು ಸ್ಪರ್ಧೆಯ ನಿಯಮ. ಸರಿ, ಇಬ್ಬರೂ ತಯಾರಿ ನಡೆಸಿದರು. ಮೊಬೈಲ್‌ನಲ್ಲಿ ಹಾಡು ಅರಳುತ್ತಿದ್ದಂತೆ ಅದರ ಸಾಹಿತ್ಯವೂ ಮೂಡುವ ಅಪ್ಲಿಕೇಷನ್ ಸೃಷ್ಟಿಯಾಯಿತು.ಹತ್ತು ಹದಿನೈದು ಹಾಡುಗಳನ್ನು ಸೇರಿಸಿ ರೂಪಿಸಿದ ತೀರಾ ಸರಳ ಅಪ್ಲಿಕೇಷನ್ ಅದು. ಆದರೆ ದಿನಕಳೆದಂತೆ ಅದರ ಜನಪ್ರಿಯತೆ ಹೆಚ್ಚತೊಡಗಿತು. ಹಾಡಿಗೆ ಸಾಹಿತ್ಯ ಒದಗಿಸಿದರಷ್ಟೇ ಸಾಲದು. ಇನ್ನೂ ಮಾಡಬೇಕಾದ ಕೆಲಸ ಬಹಳಷ್ಟಿದೆ ಎಂಬುದು ಅರಿವಾಯಿತು. ಇಬ್ಬರೂ ತಕ್ಷಣ ಕೈ ತುಂಬ ಸಂಬಳ ಕೊಡುತ್ತಿದ್ದ ಸಾಫ್ಟ್‌ವೇರ್ ವೃತ್ತಿಯನ್ನು ತೊರೆದರು.ಅದಾಗಲೇ ಸುಪ್ರಸಿದ್ಧವಾಗಿದ್ದ ಜಾಲತಾಣ ಗಾನಾಕ್ಕೆ (www.gaana.com) ಅಪ್ಲಿಕೇಷನ್‌ಗಳನ್ನು ರೂಪಿಸಿ ಹಣ ಬರುವಂತೆ ನೋಡಿಕೊಂಡರು. ಸ್ಪರ್ಧೆಯಿಂದ ಬಂದ ಬಹುಮಾನದ ಮೊತ್ತವನ್ನೂ ಕೂಡಿಟ್ಟರು. ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ `ಕರವೋಕೆ ಗರಾಜ್'ನ  ಕಚೇರಿ ಆರಂಭವಾಯಿತು.

ಹೊಸ ಚಿತ್ರಗಳಿಗೆ ವೇದಿಕೆ

ಬಿಡುಗಡೆಯಾಗಲಿರುವ ಹೊಸ ಚಿತ್ರಗಳಿಗೂ ಜಾಲತಾಣ ವೇದಿಕೆಯಾಗುತ್ತಿದೆ. ಪವನ್‌ಕುಮಾರ್ ನಿರ್ದೇಶನದ `ಲೂಸಿಯಾ' ಚಿತ್ರ ಜಾಲತಾಣವನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ. ಚಿತ್ರದ ನೆಚ್ಚಿನ ಹಾಡುಗಳನ್ನು ಜಾಲತಾಣದಲ್ಲಿ ಹಾಡಬಹುದು. ಮೂಲ ಗಾಯಕರಂತೆಯೇ ಹಾಡಿ ಹೆಚ್ಚು ಅಂಕಪಡೆದ ಗಾಯಕರಿಗೆ `ಲೂಸಿಯಾ'ದ ಮೊದಲ ಪ್ರದರ್ಶನವನ್ನು ನೋಡುವ ಅವಕಾಶ ಕಲ್ಪಿಸಲಾಗಿದೆ.ವಿಶೇಷ ಎಂದರೆ ಮೊದಲ ಪ್ರದರ್ಶನಕ್ಕೆ ಬರಲಿರುವ ತಾರೆಯರ ಜೊತೆ ಚಿತ್ರವನ್ನು ಸವಿಯಬಹುದು. `ಲೂಸಿಯಾ'ದ `ತಿನ್ಬೇಡ ಕಮ್ಮಿ' ಹಾಡು ಅತಿ ಹೆಚ್ಚು ಜನರಿಂದ ಹಾಡಿಸಿಕೊಂಡಿದೆ ಎನ್ನುವುದು ವಿಶೇಷ. ಅದೇ ರೀತಿ ಚಿತ್ರದ ಇತರೆ ಹಾಡುಗಳಿಗೂ ಹೊಸ ಗಾಯಕರು ಜಾಲತಾಣದ ಬೆನ್ನುಬಿದ್ದಿದ್ದಾರೆ.ಹೊಸ ಗಾಯಕರ ಹಾಡುಗಳನ್ನು ಜಾಲತಾಣ ಹೇಗೆ ವಿಶ್ಲೇಷಿಸುತ್ತದೆ ಎಂಬುದು ಕುತೂಹಲದ ಸಂಗತಿ. ಮೊದಲು ಮೂಲಗಾಯನದ ಗುಣಮಟ್ಟಕ್ಕೆ ಗರಿಷ್ಠ ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಹಾಡುಗಾರರು ಅದಕ್ಕೆ ಸರಿಸಮನಾಗಿ ಹಾಡುತ್ತ ಹೋದರೆ ತೆರೆಯ ಮೇಲೆ ಹಸಿರು ಗುರುತುಗಳು ಮೂಡುತ್ತ ಹೋಗುತ್ತವೆ.ಸ್ವಲ್ಪ ಕಡಿಮೆ ದರ್ಜೆಯಲ್ಲಿ ಹಾಡಿದ್ದರೆ ಕೇಸರಿ, ಇನ್ನೂ ಕೆಳಮಟ್ಟದ ಗಾಯನವಾಗಿದ್ದರೆ ಕೆಂಪು ಗುರುತುಗಳು ಕಾಣಿಸುತ್ತವೆ. ಅಭ್ಯಾಸಕ್ಕೂ ಅವಕಾಶವಿರುವುದರಿಂದ ಹಾಡುಗಾರರು ಪದೇ ಪದೇ ಹಾಡಿ ಪರಿಣತಿ ಸಾಧಿಸಬಹುದು. ನಂತರ ತಮ್ಮ ಹಾಡನ್ನು ಜಾಲತಾಣಕ್ಕೆ ಸಲ್ಲಿಸಬಹುದು.

ಕಲಿಸುವ ಕಾಯಕ

ಹೊಸ ಗಾಯಕರ ಧ್ವನಿಯನ್ನು ಮುದ್ರಿಸಿ ಬಿಡುಗಡೆ ಮಾಡುವ ಗುರಿ ತಂಡದ ಮುಂದಿದೆ. ಈ ವರ್ಷದ ಅಂತ್ಯದ ವೇಳೆಗೆ ಸುಮಾರು ಎರಡು ಸಾವಿರ ಹಾಡುಗಳನ್ನು ಸಂಗ್ರಹಿಸಿ ಪ್ರಚುರ ಪಡಿಸುವ ಕೆಲಸ ಆರಂಭವಾಗಿದೆ. ಸಿನಿಮಾ ಹಾಡುಗಳನ್ನು ಮಾತ್ರವಲ್ಲದೆ ಜನಪದ ಗೀತೆ, ಮಕ್ಕಳ ಹಾಡುಗಳನ್ನು ಸಂಗ್ರಹಿಸುವ ಯತ್ನವೂ ನಡೆಯುತ್ತಿದೆ. ಮೊಬೈಲ್‌ನಲ್ಲಿಯೂ ಹಾಡು ಗುನುಗಿಕೊಳ್ಳುವ ಅಪ್ಲಿಕೇಷನ್ ತಯಾರಾಗುತ್ತಿದೆ. ಅದು ಕೆಲವೇ ದಿನಗಳಲ್ಲಿ ಆಸಕ್ತರ ಕೈ ಸೇರಲಿದೆ.`ಗಾಯಕರಾರೂ ಜನ್ಮಜಾತ ಪ್ರತಿಭೆಗಳಲ್ಲ. ಬದಲಿಗೆ ಶ್ರಮದಿಂದ ಮೇಲೆ ಬಂದವರು. ತಿದ್ದಿ, ಪ್ರೋತ್ಸಾಹಿಸಿದರೆ ಎಂತಹವರೂ ದೊಡ್ಡ ಪ್ರತಿಭೆಗಳಾಗಬಹುದು' ಎಂದು ನಂಬಿದೆ ತಂಡ. ಜಾಲತಾಣ ಸಂಗೀತ ಗುರುವಾಗಲಿದೆಯೇ ಎಂಬ ಪ್ರಶ್ನೆಗೆ ಮುಗುಳ್ನಗುತ್ತಾರೆ ಶಂಕರ್ ಮಹೇಶ್. ಅವರ ಅಂತಿಮ ಗುರಿ ಜಾಲತಾಣವನ್ನು ಹಾಗೆ ಮಾಸ್ಟರ್ ಮಾಡುವುದೇ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.