ಶುಕ್ರವಾರ, ಏಪ್ರಿಲ್ 23, 2021
22 °C

ಹಾನಗಲ್ ಪುರಸಭೆ ಉದ್ಘಾಟನೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಗಲ್: ಪಟ್ಟಣದ ಆಡಳಿತ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ಬೇಕೆನ್ನುವ ಎಲ್ಲರ ಕನಸು ಈಗ ಸಾಕಾರಗೊಂಡಿದ್ದು, ಇದೇ 9 ರಂದು ನೂತನ ಪುರಸಭೆ ಕಾರ್ಯಾಲಯ ಉದ್ಘಾಟನೆಗೊಳ್ಳಲಿದೆ.ಸುಮಾರು 40 ವರ್ಷಗಳಿಂದ ಸುಸಜ್ಜಿತ ಕಟ್ಟಡವಿಲ್ಲದೆ ಇದ್ದ ಪುರಸಭೆಗೆ ಇದೀಗ ಸುಯೋಗ.

1973 ರಲ್ಲಿ ಪುರಸಭೆಯಾಗಿ ಪರಿವರ್ತನೆಗೊಂಡಾಗ ಇಲ್ಲಿನ ಹಳೆ ಬಸ್ ನಿಲ್ದಾಣ ಪ್ರದೇಶದಲ್ಲಿದ್ದ ಧರ್ಮಶಾಲೆಯ ಕಟ್ಟಡದಲ್ಲಿ ಕಚೇರಿ ಇತ್ತು. ಪೌರ ಕಾರ್ಮಿಕರ ಮನೆಗಳು ಈ ಕಚೇರಿಗೆ ಹೊಂದಿಕೊಂಡಿದ್ದವು.ಪುರಸಭೆ ಪ್ರಥಮ ಅಧ್ಯಕ್ಷ ಇಂದಿನ ಸಚಿವ ಸಿ.ಎಂ. ಉದಾಸಿ ಪುರಸಭೆ ಕಚೇರಿ ಸ್ಥಳಾಂತರಿಸಿ ಕುಮಾರೇಶ್ವರ ಮಠದ ಸಮೀಪದ ಗ್ರಾಮಕೇಂದ್ರದಲ್ಲಿ ಪ್ರತಿಷ್ಠಾಪಿಸಿದರು. 1988ರಿಂದ ಗ್ರಾಮಕೇಂದ್ರ ಕಟ್ಟಡದಲ್ಲಿದ್ದ ಪುರಸಭೆ ಕಚೇರಿ ಪಟ್ಟಣ ಬೆಳೆದಂತೆಲ್ಲ ಸಣ್ಣದೆನಿಸತೊಡಗಿತು. ಹಳೆಯ ಕಟ್ಟಡ ಸೂಕ್ತ ದುರಸ್ತಿ ಇಲ್ಲದೆ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು.ಪುರಸಭೆ ಕಟ್ಟಡಕ್ಕೆ ಹೈಟೆಕ್ ಸ್ಪರ್ಶ ನೀಡಿ ಆಡಳಿತ ಚುಕುರುಗೊಳಿಸಬೇಕು ಎಂಬ ಉದ್ದೇಶದಿಂ ಪುರಸಭೆ ಪ್ರಥಮವಾಗಿ ಆರಂಭಗೊಂಡ ಸ್ಥಳದಲ್ಲಿ (ಹಳೆ ಬಸ್ ನಿಲ್ದಾಣ ಪ್ರದೇಶ) ಸಿದ್ಧಗೊಂಡಿದ್ದ ಪುರಸಭೆಯ ಸಮುದಾಯ ಭವನವನ್ನು ಸುಮಾರು ರೂ. 30 ಲಕ್ಷ ವೆಚ್ಚದಲ್ಲಿ ಪರಿವರ್ತಿಸಿ ಸುಂದರ ಮತ್ತು ಸುಸಜ್ಜಿತ ಕಚೇರಿಯನ್ನಾಗಿ ನಿರ್ಮಾಣ ಮಾಡಲಾಗಿದೆ.ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಾಧಿಕಾರಿಗಳ ಪ್ರತ್ಯೇಕ  ಸುಸಜ್ಜಿತ ಕೊಠಡಿಗಳು, ವಿವಿಧ ವಿಭಾಗದ ನೌಕರರಿಗೆ ಪ್ರತ್ಯೇಕ ವಿಭಾಗಗಳು, ಕರ ವಸೂಲಿ ವಿಭಾಗಕ್ಕೆ ಪ್ರತ್ಯೆಕ ಕಟ್ಟಡ, ಆರೋಗ್ಯ ವಿಭಾಗ, ಇಂಟರ್‌ನೆಟ್, ಸುಸಜ್ಜಿತ ಗಣಕೀಕರಣ ವ್ಯವಸ್ಥೆ, ಅತ್ಯುತ್ತಮ ಸಭಾಂಗಣಗಳು ಗಮನ ಸೆಳೆಯುತ್ತಿವೆ,  ಆವರಣದಲ್ಲಿ ಹೂದೋಟ, ವಾಹನ ನಿಲುಗಡೆ ವ್ಯವಸ್ಥೆಯೂ ನಿರ್ಮಾಣವಾಗುತ್ತಿದೆ. ಈ ಜಾಗೆ ಒಟ್ಟು 9 ಗುಂಟೆ ಇದ್ದು, ಅಂದಾಜು ನಾಲ್ಕು ಗುಂಟೆ ಜಾಗೆಯಲ್ಲಿ ಕಟ್ಟಡವಿದೆ.ನೂತನ ಪುರಸಭೆ ಎದುರಿನ ಹಳೆ ಬಸ್‌ನಿಲ್ದಾಣದ ಸುತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.

ನ. 9 ರಂದು ಲೋಕೋಪಯೋಗಿ ಸಚಿವ ಸಿ ಎಂ ಉದಾಸಿ ಕಾರ್ಯಾಲಯ ಉದ್ಘಾಟಿಸುವರು.ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷೆ ಹಸೀನಾಬಿ ನಾಯ್ಕನವರ ವಹಿಸುವರು. ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಗಣ್ಯರಾದ ಬಿ. ಎಸ್. ಅಕ್ಕಿವಳ್ಳಿ,  ಎ. ಎಸ್. ಬಳ್ಳಾರಿ, ಎಂ. ಬಿ. ಕಲಾಲ, ಎಸ್. ಕೆ. ಪೀರಜಾದೆ, ಕಲ್ಯಾಣಕುಮಾರ ಶೆಟ್ಟರ, ಲಕ್ಷ್ಮವ್ವ ಹಳೇಕೋಟಿ,  ಸರೋಜಾ ಹುಳ್ಳಿಕಾಸಿ, ಶಕುಂತಲಾ ಪವಾಡಿ, ಮುಖ್ಯಾಧಿಕಾರಿ ಎ. ರಮೇಶ ಉಪಸ್ಥಿತರಿರುವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.