ಬುಧವಾರ, ಏಪ್ರಿಲ್ 14, 2021
24 °C

ಹಾಳುಸುರಿವ ಪ್ರವಾಸಿ ಮಂದಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ಸರ್ಕಾರದ ಯೋಜನೆಗಳು ಹೇಗೆ ವಿಫಲಗೊಳ್ಳುತ್ತವೆ ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ಪಟ್ಟಣದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 13ರಲ್ಲಿರುವ ಪ್ರವಾಸಿ ಮಂದಿರವನ್ನು ನೋಡಬಹುದು. ಪ್ರವಾಸಿ ಮಂದಿರ ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದಿದ್ದರೂ ಅದಕ್ಕಿನ್ನೂ ಉದ್ಘಾಟನೆಯ ಭಾಗ್ಯವೇ  ದೊರೆತಿಲ್ಲ!ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 13ರ ಬೆಂಗಳೂರು ರಸ್ತೆಯಲ್ಲಿ ಎತ್ತರದ ದಿಬ್ಬದ ಮೇಲೆ ಸುಂದರವಾದ ಸ್ಥಳದಲ್ಲಿ ನಿರ್ಮಾಣಗೊಂಡಿರುವ ಪ್ರವಾಸಿ ಮಂದಿರಕ್ಕೆ ಏಕೋ ಏನೋ ಉದ್ಘಾಟನೆಯ ಮುಹೂರ್ತವೇ ಕೂಡಿಬಂದಿಲ್ಲ. ಪ್ರವಾಸಿಗರ ಅನುಕೂಲಕ್ಕಾಗಿಯೇ ಎಂಬಂತೆ ಪ್ರವಾಸಿ ಮಂದಿರ ಭರದಿಂದಲೇ ನಿರ್ಮಾಣಗೊಂಡಿತು.  ಹೊಸದಾಗಿ ನಿರ್ಮಾಣಗೊಂಡ ಪ್ರವಾಸಿ ಮಂದಿರವನ್ನು ನೋಡಿ ಎಲ್ಲರೂ ಸಂತಸಪಟ್ಟರು. ಆದರೆ ಕಟ್ಟಡ ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದರೂ ಉದ್ಘಾಟನೆಯನ್ನೇ ಕಾಣದೇ ಕಟ್ಟಡ ಶಿಥಿಲಗೊಳ್ಳುತ್ತಿದೆ.ಪ್ರವಾಸಿ ಮಂದಿರ ಎತ್ತರದ ಸ್ಥಳದಲ್ಲಿರುವುದರಿಂದ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ ಎಂದು ಸಂಬಂಧಿಸಿದ ಇಲಾಖೆ ತಿಳಿಸಿದರೆ, ಅದು ಸೂಕ್ತ ಕಾರಣವೇ ಅಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ. ಪ್ರವಾಸಿ ಮಂದಿರವನ್ನು ಉಪಯೋಗಿಸದೇ ಇರುವುದರಿಂದಾಗಿ ಕಟ್ಟಡದ ಹಂಚುಗಳೆಲ್ಲ ಮುರಿದುಬಿದ್ದಿವೆ. ಒಳಕೋಣೆಗಳು ಧೂಳು ತುಂಬಿ ಹಾಳು ಸುರಿಯುತ್ತಿವೆ. ಕಟ್ಟಡದ ಎಲ್ಲ ಕಿಟಕಿ, ಬಾಗಿಲುಗಳೂ ತುಕ್ಕು ಹಿಡಿದಿವೆ. ಪ್ರವಾಸಿ ಮಂದಿರವನ್ನು ಕಾವಲು ಕಾಯಲು ತಾತ್ಕಾಲಿಕವಾಗಿ ಒಬ್ಬ ವ್ಯಕ್ತಿಯನ್ನು ನೇಮಿಸಲಾಗಿದೆ.ಪ್ರವಾಸಿ ಮಂದಿರವನ್ನು ಅಧಿಕೃತವಾಗಿ ಉದ್ಘಾಟಿಸಲಾಗದಿದ್ದರೂ, ಈಗಾಗಲೇ ಅದು ಅನಧಿಕೃತವಾಗಿ ಬಳಕೆಯಾಗುತ್ತಿದೆ ಎಂಬ ದೂರುಗಳೂ ಇವೆ. ‘ಗುಂಡು’ ಹಾಕುವವರಿಗೆ ಇದರಷ್ಟು ಅನುಕೂಲಕರ ಸ್ಥಳ ಮತ್ತೊಂದಿಲ್ಲ ಎಂದು ಅಲ್ಲಿಗೆ ಹೋಗಿಬಂದವರೂ  ಹೇಳುತ್ತಾರೆ.ಪ್ರವಾಸಿಗರಿಗೆ ಬಳಕೆಯಾಗಬೇಕಾಗಿರುವ ಕಟ್ಟಡವೊಂದು ಹೀಗೆ ದುರ್ಬಳಕೆಯಾಗುತ್ತಿರುವುದಕ್ಕೆ ಸಾರ್ವಜನಿಕರೂ ಬೇಸರಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಬರುವ ಪ್ರವಾಸಿ ಮಂದಿರಕ್ಕೆ ಬೇಕಾಗುವ ಅನುಕೂಲತೆಗಳನ್ನು ಶೀಘ್ರದಲ್ಲಿಯೇ ಕಲ್ಪಿಸಬೇಕು. ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪ್ರವಾಸಿ ಮಂದಿರ ಉದ್ಘಾಟಿಸಿ, ಪ್ರವಾಸಿಗರಿಗೆ ಅನುಕೂಲ ಒದಗಿಸಿಕೊಡಬೇಕು. ಜನಪ್ರತಿನಿಧಿಗಳು ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ನಾಗರಿಕ ಹಿತರಕ್ಷಣಾ ವೇದಿಕೆ, ವಂದೇಮಾತರಂ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.