ಗುರುವಾರ , ಮೇ 19, 2022
21 °C

ಹಿಂದೂ ಪ್ರಾಪಂಚಿಕ ಧರ್ಮವಲ್ಲ- ಶಿವಸುಂದರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮನುಸ್ಮೃತಿ ಆಧರಿಸಿ, ಶ್ರೇಣೀಕರಣವನ್ನೇ ಉಸಿರಾಡುತ್ತಿರುವ ಹಿಂದೂ ಧರ್ಮವನ್ನು ಪ್ರಾಪಂಚಿಕ ಧರ್ಮ ಎನ್ನಲು ಸಾಧ್ಯವಿಲ್ಲ' ಎಂದು ಅಂಕಣಕಾರ ಶಿವಸುಂದರ್ ಅಭಿಪ್ರಾಯಪಟ್ಟರು. ದಲಿತ ಸಂಘರ್ಷ ಸಮಿತಿ-ಕರ್ನಾಟಕ ನಯನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ಮಂಗ್ಳೂರ ವಿಜಯ ಸಂಗ್ರಹಾನುವಾದ `ಹಿಂದೂ ಧರ್ಮದ ತತ್ವಜ್ಞಾನ' ಕೃತಿ ಬಿಡುಗಡೆ ಮಾಡಿ ಮಾತನಾಡಿದರು.`ಒಂದು ವರ್ಗದ ಪರವಾಗಿ ಸಂಪತ್ತು ಹಾಗೂ ಅಧಿಕಾರದ ಕ್ರೋಢೀಕರಣಕ್ಕೆ ಕಾರಣವಾಗಿರುವ ಧರ್ಮ ಅಸಮಾನತೆಯನ್ನು ಉಸಿರಾಡುತ್ತಿರುವಾಗ ಅದನ್ನು ಧರ್ಮ ಎನ್ನಲು ಸಾಧ್ಯವಿಲ್ಲ' ಎಂದು ಸ್ಪಷ್ಟಪಡಿಸಿದರು. `ಶೂದ್ರರು, ಮಹಿಳೆಯರು ಹಾಗೂ ಬಡವರಿಗೆ ಬ್ರಾಹ್ಮಣವಾದ ಮತ್ತು ಬಂಡವಾಳವಾದವೇ ಮುಖ್ಯ ಶತ್ರುಗಳು ಎಂದು ಅಂಬೇಡ್ಕರ್ ಹೇಳಿದ್ದರು.

ಅಂತೆಯೇ ನವ ಬಂಡವಾಳವಾದವು ನವ ಬ್ರಾಹ್ಮಣರನ್ನು ಸೃಷ್ಟಿಸುತ್ತಿದೆ. ಹಾಗಾಗಿಯೇ ವಿವಿಧ ಜಾತಿಗಳ ಶ್ರೀಮಂತರು ಆರ್ಥಿಕವಾಗಿ ಬೆಳೆದಾಗ ತಮ್ಮ ಸಮರ್ಥನೆಗೆ ಬ್ರಾಹ್ಮಣವಾದವನ್ನು ಬಳಸುತ್ತಾರೆ. ಜಾತಿ ನಾಶವಾಗದ ಹೊರತು ಸಮಾನತೆ ಸಾಧ್ಯವಾಗುವುದಿಲ್ಲ ಎಂದರು.`ಎಲ್ಲಾ ಜಾತಿ, ವರ್ಗಗಳ ಜನರ ನಡುವೆ ದೇಶದ ಸಂಪತ್ತು ಸಮಾನವಾಗಿ ಹಂಚಿಕೆ ಆಗಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಒಬ್ಬ ಬ್ರಾಹ್ಮಣ ಮತ್ತು ದಲಿತ ಎರಡು ಎಕರೆ ಜಮೀನಿನಲ್ಲಿ ದುಡಿದಾಗ ಸಹ ಜೀವನ ಆರಂಭವಾಗುತ್ತದೆ. ಇದು ಸಹಭೋಜನಕ್ಕೆ ದಾರಿ ಮಾಡಿಕೊಡುತ್ತದೆ. ಕ್ರಮೇಣವಾಗಿ ಜಾತಿ, ವರ್ಗಗಳ ಬುನಾದಿ ಕುಸಿದು ಬೀಳಲಿದೆ ಎಂಬ ಸ್ಪಷ್ಟ ಕಲ್ಪನೆಯನ್ನು ಅಂಬೇಡ್ಕರ್ ಹೊಂದಿದ್ದರು. ಆದರೆ ಅಂಬೇಡ್ಕರ್ ಅವರ ಪರಿಕಲ್ಪನೆ ಇಂದಿಗೂ ಕನಸಾಗಿ ಉಳಿದಿದೆ' ಎಂದು ಹೇಳಿದರು.`ಹಿಂದೂ ಧರ್ಮದ ತತ್ವಜ್ಞಾನ' ಕೃತಿ ಸಂಗ್ರಹಾನುವಾದ ಲೇಖಕ ಮಂಗ್ಳೂರ ವಿಜಯ, `ಧರ್ಮದ ಮೂಲ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಅಂಶಗಳು ಹಿಂದೂ ಧರ್ಮದಲ್ಲಿ ಇಲ್ಲದಿರುವಾಗ, ಅದನ್ನು ಧರ್ಮ ಎನ್ನಲು ಸಾಧ್ಯವಿಲ್ಲ. ಶೋಷಿತ ಸಮುದಾಯಗಳ ವಿಮೋಚನೆಗೆ ಅಂಬೇಡ್ಕರರ ಪುಸ್ತಕಗಳು ಮುನ್ನುಡಿಯಾಗಲಿವೆ. ಅಂತಹ ಪುಸ್ತಕಗಳ ಅಧ್ಯಯನದಲ್ಲಿ ಹೆಚ್ಚು ತೊಡಗಬೇಕು' ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಪ್ರೊ.ಬಿ.ಗಂಗಾಧರಮೂರ್ತಿ ಮಾತನಾಡಿ, `ಅಂಬೇಡ್ಕರ್ ಅವರ ಬೌದ್ಧಿಕ, ವೈಚಾರಿಕ, ವೈಜ್ಞಾನಿಕ ಮನೋಭಾವವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವ ದಲಿತ ಮುಖಂಡರು, ಅಂಬೇಡ್ಕರ್ ಅವರಿಗೆ ಮಸಿ ಬಳಿಯುವ ಕೆಲಸದಲ್ಲಿ ತೊಡಗಿರುವುದು ವಿಷಾದನೀಯ. ಅಂಬೇಡ್ಕರರ ಪುಸ್ತಕಗಳನ್ನು ಓದುವ ಮೂಲಕ ತಾತ್ವಿಕ ಗಟ್ಟಿತನವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಈ ಮೂಲಕ ವ್ಯಕ್ತಿಗಳಲ್ಲಿ ಕುಸಿಯುತ್ತಿರುವ ನೈತಿಕ ಮೌಲ್ಯಗಳನ್ನು ಪುನಶ್ಚೇತನಗೊಳಿಸಬಹುದು' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.