ಭಾನುವಾರ, ಏಪ್ರಿಲ್ 11, 2021
25 °C

ಹೀಗಾದರೆ ಕ್ರಿಕೆಟ್ ಉದ್ಧಾರ ಹೇಗೆ...?

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಹೀಗಾದರೆ ಕ್ರಿಕೆಟ್ ಉದ್ಧಾರ ಹೇಗೆ...?

ಆಗ ಭಾರತ ಕೂಡ ದುರ್ಬಲ ತಂಡ!1975ರ ವಿಶ್ವಕಪ್‌ನ ಮೊದಲ ಪಂದ್ಯವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಇಂಗ್ಲೆಂಡ್‌ನ 334 ರನ್‌ಗಳ ಬೃಹತ್ ಮೊತ್ತಕ್ಕೆ ಎದುರಾಗಿ ಭಾರತ ಗಳಿಸಿದ್ದು ಕೇವಲ 132/3. ಸುನಿಲ್ ಗಾವಸ್ಕರ್ 60 ಓವರ್‌ಗಳ ಆ ಪಂದ್ಯದ ಇನಿಂಗ್ಸ್ ಆರಂಭಿಸಿ 36 ರನ್ ಗಳಿಸಿ ಔಟಾಗದೆ ಉಳಿದಿದ್ದರು. ಭಾರತ ಆ ಚಾಂಪಿಯನ್‌ಷಿಪ್‌ನಲ್ಲಿ ಈಸ್ಟ್ ಆಫ್ರಿಕಾ ಎದುರು ಮಾತ್ರ ಗೆಲುವು ದಾಖಲಿಸಿತ್ತು. 1979ರಲ್ಲಿ ಎಲ್ಲಾ ಪಂದ್ಯಗಳನ್ನು ಸೋತಿತ್ತು.ಅಕಸ್ಮಾತ್ ಭಾರತ ದುರ್ಬಲ ತಂಡ ಎಂದು 1983ರ ವಿಶ್ವಕಪ್‌ಗೆ ಅವಕಾಶ ನೀಡದಿದ್ದರೆ ಕಪಿಲ್ ದೇವ್ ಲಾರ್ಡ್ಸ್ ಅಂಗಳದಲ್ಲಿ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಿತ್ತೇ? ಈಗ ನೋಡಿ ಏಕದಿನ ಕ್ರಿಕೆಟ್‌ನಲ್ಲಿ ದೋನಿ ಪಡೆ ಎರಡನೇ ರ್ಯಾಂಕ್‌ನಲ್ಲಿದೆ.

ಟೆಸ್ಟ್‌ನಲ್ಲಿ ಅಗ್ರಸ್ಥಾನ ಹೊಂದಿದೆ. ಹಣದ ವಿಚಾರದಲ್ಲಿ ಬಿಸಿಸಿಐ ಶ್ರೀಮಂತ ಮಂಡಳಿ! ಹಾಗೇ, ಲಂಕಾ, ಪಾಕ್ ಕೂಡ ಒಂದು ಹಂತದಲ್ಲಿ ದುರ್ಬಲ ತಂಡಗಳೇ. ಅವೆಲ್ಲಾ ವಿಶ್ವಕಪ್ ಗೆಲ್ಲಲಿಲ್ಲವೇ?2015ರ ವಿಶ್ವಕಪ್‌ಗೆ ತಂಡಗಳ ಸಂಖ್ಯೆಯನ್ನು ಹತ್ತಕ್ಕಿಳಿಸಲಾಗುವುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೇಳಿದೆ. ಈ ಮಾತಿನ ಅರ್ಥವೆಂದರೆ ಐರ್ಲೆಂಡ್, ಹಾಲೆಂಡ್, ಕೆನಡಾ, ಕೀನ್ಯಾದಂತಹ ತಂಡಗಳನ್ನು ನೀವು ಮುಂದಿನ ವಿಶ್ವಕಪ್‌ನಲ್ಲಿ ಕಾಣಲು ಸಾಧ್ಯವಿಲ್ಲ.ಹಾಗಾದರೆ, ಐಸಿಸಿ ಕೇವಲ ಹಣ ಮಾಡಲು ಕ್ರಿಕೆಟ್ ಬಾಲ ಹಿಡಿದುಕೊಂಡಿದೆಯೇ?ಅಂತಹದೊಂದು ಅನುಮಾನ ಶುರುವಾಗಲು ಕಾರಣವಿದೆ. ನಿಜ, ಈ ತಂಡಗಳು ಕ್ರಿಕೆಟ್ ಆಡುವಾಗ ಕ್ರೀಡಾಂಗಣಗಳು ಭರ್ತಿಯಾಗುತ್ತಿಲ್ಲ. ಟಿವಿಯಲ್ಲಿ ಅಂದಿನ ದಿನ ಹೆಚ್ಚು ಜಾಹೀರಾತು ಬರುವುದಿಲ್ಲ. ಆ ಪಂದ್ಯಗಳಿಗೆ ಪ್ರಾಯೋಜಕರ ಸಂಖ್ಯೆಯೂ ಕಡಿಮೆ. ಅಲ್ಪ ಮೊತ್ತಕ್ಕೆ ಆಲ್‌ಔಟ್ ಆಗುವ ಕಾರಣ ಅಷ್ಟೊಂದು ಆಸಕ್ತಿ ಮೂಡಿಸುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಐಸಿಸಿಯ ಆದಾಯಕ್ಕೆ ಕತ್ತರಿ ಬೀಳುತ್ತಿದೆ.ಇದೇ ಕಾರಣಕ್ಕೆ ತಂಡಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುವುದು ಎಂದು ಐಸಿಸಿ ಹೇಳುತ್ತಿದೆಯೇ? ಹೀಗಾದರೆ ಕ್ರಿಕೆಟ್ ಆಟವನ್ನು ಜಾಗತಿಕಗೊಳಿಸಲು ಸಾಧ್ಯವೇ?ಮುಂದಿನ ವಿಶ್ವಕಪ್‌ನಲ್ಲಿ ಮೊದಲ ಏಳು ಸ್ಥಾನಗಳಿಗೆ ರ್ಯಾಂಕಿಂಗ್ ಆಧಾರದ ಮೇಲೆ ನೇರ ಪ್ರವೇಶ ನೀಡುವ ಸಾಧ್ಯತೆ ಇದೆ. ಆದರೆ ಉಳಿದ ಮೂರು ಸ್ಥಾನಗಳಿಗೆ ಅರ್ಹತಾ ಸುತ್ತಿನಲ್ಲಿ ಪೈಪೋಟಿ ನಡೆಸಿ ಪ್ರವೇಶ ಪಡೆಯಬೇಕಾಗುತ್ತದೆ. ಐಸಿಸಿ ತೆಗೆದುಕೊಳ್ಳಲಿರುವ ಇಂತಹ ಕೆಲ ನಿರ್ಧಾರಗಳನ್ನು ಗಮನಿಸಿದರೆ ವೆಸ್ಟ್‌ಇಂಡೀಸ್, ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳ ಸ್ಥಾನ ಕೂಡ ಗ್ಯಾರಂಟಿ ಇಲ್ಲ.ಈಗಾಗಲೇ ಐಸಿಸಿಯ ನಿರ್ಧಾರಕ್ಕೆ ಭಾರಿ ಟೀಕೆಗಳು ಉದ್ಭವಿಸುತ್ತಿವೆ. ದುರ್ಬಲ ಹಾಗೂ ಕ್ರಿಕೆಟ್ ಶಿಶುಗಳು ಎನಿಸಿರುವ ದೇಶಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇಂಗ್ಲೆಂಡ್ ವಿರುದ್ಧ ಗೆದ್ದು ಅಚ್ಚರಿ ಮೂಡಿಸಿರುವ ಐರ್ಲೆಂಡ್ ತಂಡದ ನಾಯಕ ವಿಲಿಯಮ್ ಪೋಟರ್‌ಫೀಲ್ಡ್ ಕೂಡ ಐಸಿಸಿ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.ದೊಡ್ಡ ಮಟ್ಟದ ಟೂರ್ನಿಗಳಲ್ಲಿ ಅವಕಾಶ ನೀಡದಿದ್ದರೆ ನಮ್ಮ ದೇಶದಲ್ಲಿ ಕ್ರಿಕೆಟ್ ಬೆಳೆಯುವುದಾದರೂ ಹೇಗೆ? ಉತ್ತಮ ತಂಡಗಳನ್ನು ಎದುರಿಸುವುದು ಯಾವಾಗ? ನಮಗೆ ಅನುಭವ ಸಿಗುವುದಾದರೂ ಹೇಗೆ ಎಂಬ ಪ್ರಶ್ನೆ ಹಾಕುತ್ತಿದ್ದಾರೆ. ಐಸಿಸಿ ಹೇಳಿಕೆಯಿಂದ ಆಟಗಾರರ ಉತ್ಸಾಹವೇ ಕುಸಿದು ಹೋಗಿದೆ ಎಂಬುದು ಕೀನ್ಯಾ ಕ್ರಿಕೆಟ್ ಮಂಡಳಿಯ ಆರೋಪ.ಆದರೆ ವಿಶ್ವಕಪ್‌ನಲ್ಲಿ ಸಮತೋಲನ ಕಾಪಾಡಿಕೊಂಡು ಹೋಗಲು ತಂಡಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಅನಿವಾರ್ಯ. ಒಮ್ಮೊಮ್ಮೆ ಅಚ್ಚರಿ ಫಲಿತಾಂಶ ಹೊರಹೊಮ್ಮಬಹುದು. ಅದು ಅಪರೂಪಕ್ಕೊಮ್ಮೆ ಎನ್ನುತ್ತಾರೆ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೂನ್ ಲಾರ್ಗಟ್.ನಿಮಗೆ ಗೊತ್ತಿರಬಹುದು, ಫುಟ್‌ಬಾಲ್ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ 200ಕ್ಕೂ ಹೆಚ್ಚು ದೇಶಗಳು ಪೈಪೋಟಿ ನಡೆಸುತ್ತವೆ. ಬಳಿಕ ವಿಶ್ವಕಪ್ ಫೈನಲ್ಸ್ ಚಾಂಪಿಯನ್‌ಷಿಪ್‌ನಲ್ಲಿ 32 ದೇಶಗಳು ಪಾಲ್ಗೊಳ್ಳುತ್ತವೆ. ಫುಟ್‌ಬಾಲ್ ಜಾಗತಿಕ ಜನಪ್ರಿಯ ಕ್ರೀಡೆಯಾಗಿ ರೂಪಗೊಳ್ಳಲು ಇದೂ ಒಂದು ಕಾರಣ. ಆದರೆ ಕ್ರಿಕೆಟ್‌ನಲ್ಲಿ ಆ ರೀತಿ ಆಗುತ್ತಿಲ್ಲ.ಅಚ್ಚರಿ ಎಂದರೆ ಟ್ವೆಂಟಿ-20 ವಿಶ್ವಕಪ್‌ಗೆ 16 ತಂಡಗಳಿಗೆ ಸ್ಥಾನ ನೀಡಲಾಗುವುದು ಎಂದು ಐಸಿಸಿ ಹೇಳಿದೆ. ಈ ಉದ್ದೇಶ ಕೂಡ ಅರ್ಥವಾಗುವಂಥದ್ದು. ಚುಟುಕು ಕ್ರಿಕೆಟ್ ಆಗಿರುವುದರಿಂದ ದುರ್ಬಲ ದೇಶಗಳಿಗೆ ಸ್ಥಾನ ನೀಡಿದರೂ ಇಲ್ಲಿ ಹಣಕ್ಕೇನು ಕೊರತೆ ಇಲ್ಲ. ಇದೇ ಮಾತನ್ನು ಕೆನಡಾ ತಂಡದ ನಾಯಕ ಆಶೀಶ್ ಬಾಗೈ ಹೇಳಿದ್ದಾರೆ.ಕೆನಡಾ, ಹಾಲೆಂಡ್, ಐರ್ಲೆಂಡ್‌ನಂತಹ ತಂಡಗಳು ಪದೇಪದೇ ದೊಡ್ಡ ದೇಶಗಳೊಂದಿಗೆ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಹಾಗಾಗಿ ಅವು ಕೊನೆಪಕ್ಷ ನಾಲ್ಕು ವರ್ಷಗಳಿಗೊಮ್ಮೆಯಾದರೂ ದೊಡ್ಡ ಟೂರ್ನಿಗಳಲ್ಲಿ ಕಾಣಿಸಿಕೊಳ್ಳಲು ತವಕಿಸುವುದು ಸಹಜ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಆ ತಂಡಗಳಿಗೆ ಎಕ್ಸ್‌ಪೋಸರ್ ಬೇಡವೇ? ಇದನ್ನೇಕೆ ಐಸಿಸಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಕೇವಲ ಕ್ರಿಕೆಟ್ ಆಟವನ್ನು ವಾಣಿಜ್ಯ ದೃಷ್ಟಿಯಲ್ಲಿ ನೋಡಲು ಮುಂದಾಗುತ್ತಿರುವುದು ಏಕೆ ಎನ್ನುವ ಪ್ರಶ್ನೆಗಳು ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿವೆ.ಈಗ ನೋಡಿ, ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ತಂಡ ಗೆದ್ದಿರುವುದು ಆ ದೇಶದ ಕ್ರೀಡಾ ಪ್ರೇಮಿಗಳಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ. ಕೆವಿನ್ ಒಬ್ರಿಯನ್ ಕೇವಲ 50 ಎಸೆತಗಳಲ್ಲಿ ವೇಗದ ಶತಕ ಗಳಿಸಿ ವಿಶ್ವಕಪ್ ದಾಖಲೆ ನಿರ್ಮಿಸಿರುವುದು ಆ ದೇಶದ ಯುವಕರಿಗೆ ಸ್ಫೂರ್ತಿಯಾಗಿದೆ. ಅಲ್ಲಿನ ಪ್ರಧಾನಿ ಕೂಡ ಈ ಸಾಧನೆಯನ್ನು ಕೊಂಡಾಡಿದ್ದಾರೆ.

ಹಾಗೇ, ಕ್ರಿಕೆಟ್ ಅಭಿಮಾನಿಗಳು ಕೂಡ ದುರ್ಬಲ ತಂಡಗಳ ಪಂದ್ಯಗಳನ್ನು ವೀಕ್ಷಿಸಬೇಕು. ಅದಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಆ ದೇಶಗಳು ಆಡುವ ಪಂದ್ಯದ ಟಿಕೆಟ್‌ನ ಹಣವನ್ನು ಕಡಿಮೆ ಮಾಡಬೇಕು.ಅಕಸ್ಮಾತ್ ಐಸಿಸಿ ತನ್ನ ನಿರ್ಧಾರಕ್ಕೆ ಅಂಟಿಕೊಂಡರೆ ಕ್ರಿಕೆಟ್ ಕೇವಲ ಏಳೆಂಟು ದೇಶಗಳ ಸ್ವತ್ತು ಆಗಿರಲಿದೆಯೇ ಹೊರತು ಜಾಗತಿಕ ಕ್ರೀಡೆ ಎನಿಸಿಕೊಳ್ಳಲಾರದು. ಹೆಚ್ಚು ಮಂದಿಯನ್ನು ಆಕರ್ಷಿಸಲಾರದು. ಕ್ರಿಕೆಟ್‌ಗೆ ಮತ್ತಷ್ಟು ಪ್ರಚಾರ ಸಿಗಲಾರದು. ಹಣ ಮುಖ್ಯವಾದರೆ ಕ್ರಿಕೆಟ್ ಮುಂದೊಮ್ಮೆ ಜೀವ ಕಳೆದುಕೊಳ್ಳಬಹುದು!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.