ಗುರುವಾರ , ಫೆಬ್ರವರಿ 25, 2021
29 °C
ನೆನಪಿನ ಗಣಿ | ಕಾದಂಬರಿಗಾರ್ತಿ ತ್ರಿವೇಣಿ ಕುರಿತು ಮಗಳು ಮೀರಾ ಶಂಕರ್ ಹುಡುಕಾಟ

ಹುಟ್ಟಿದಾಗಲೇ ಇಲ್ಲವಾದ ಅಮ್ಮನ ಹುಡುಕಾಟದಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಟ್ಟಿದಾಗಲೇ ಇಲ್ಲವಾದ ಅಮ್ಮನ ಹುಡುಕಾಟದಲ್ಲಿ...

ಅವಳು ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿಯವರ ಮಗಳು’.

ನಾನು ಎಲ್ಲೇ ಹೋದರೂ, ಅಲ್ಲಿದ್ದ ಜನರಿಗೆ ಇವಳು ತ್ರಿವೇಣಿಯವರ ಮಗಳು ಅಂತ ಪರಿಚಯ ಮಾಡಿಕೊಟ್ಟಾಗ ಎಲ್ಲರೂ ನನ್ನನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದರು. ಕೆಲವರಿಗೆ ನನ್ನನ್ನು ಕಂಡರೆ  ಪ್ರೀತಿ, ಕರುಣೆ ಉಕ್ಕಿ ಬರುತ್ತಿತ್ತು. ಚಿಕ್ಕವಳಿದ್ದ ನನ್ನನ್ನು ಎಲ್ಲರೂ ಪ್ರೀತಿಯಿಂದ ಕಾಣುತ್ತಿದ್ದರು, ಕೆನ್ನೆಗಳನ್ನು ಹಿಂಡುತ್ತಿದ್ದರು. ಅಪರಿಚಿತರು ಪ್ರೀತಿಯಿಂದ ನನ್ನ ಗಲ್ಲಗಳನ್ನು ಸವರಲು ಬಂದರೆ, ಅವರಿಂದ ಒಮ್ಮೊಮ್ಮೆ ಕೋಪಿಸಿಕೊಂಡು ದೂರ ಸರಿಯುತ್ತಿದ್ದೆ, ತುಂಬಾ ಮುದ್ದು ಮಾಡಿದಾಗ ಮಾತ್ರ ನನ್ನ ಮುಖವನ್ನು ಸವರಲು ಬಿಡುತ್ತಿದ್ದೆ. ‘ತ್ರಿವೇಣಿ ಮಗಳು’ ಎಂದವರು ಗುರುತಿಸಿದರೂ, ನನಗೆ ‘ತ್ರಿವೇಣಿ’ ಯಾರು ಅನ್ನುವುದೇ ಗೊತ್ತಿರಲಿಲ್ಲ. ನನ್ನ ಮೇಲಿನ ಅವರ ಗಮನ ವಿಶೇಷವೆನಿಸುತ್ತಿರಲಿಲ್ಲ. ಏಕೆಂದರೆ ನನಗೆ ಬುದ್ಧಿ ಬಂದಾಗಿನಿಂದಲೂ ಇದು ಅಭ್ಯಾಸವಾಗಿಬಿಟ್ಟಿತ್ತು. ಆ ಕಾರಣದಿಂದ ನಾನೇನು ಗರ್ವಪಟ್ಟಿರಲಿಲ್ಲ.ನಾನು ಹುಟ್ಟಿದಾಗಿನಿಂದ ನನ್ನನ್ನು ಎತ್ತಿ ಆಡಿಸಿ ಬೆಳೆಸಿದವರು ನನ್ನ ಅಜ್ಜಿ ತಂಗಮ್ಮ. ಈ ಅಜ್ಜಿಯನ್ನೇ (ಅಮ್ಮನ ತಾಯಿ) ನಾನು ಅಮ್ಮ ಎಂದುಕೊಂಡಿದ್ದೆ. ಈ ಪ್ರಪಂಚವನ್ನು ಕಣ್ಣುಬಿಟ್ಟು ನೋಡಿದಾಗಿನಿಂದ ನನ್ನನ್ನು ಮುದ್ದಿಸಿ, ಸಾಕಿ ಬೆಳೆಸಿದ್ದರಿಂದ ಅಜ್ಜಿಯೇ ನನ್ನ ತಾಯಿ ಸ್ಥಾನವನ್ನು ವಹಿಸಿಕೊಂಡಿದ್ದಳು.ಎಷ್ಟೋ ಬಾರಿ ನನ್ನ ಅಜ್ಜಿ ಕಣ್ಣಲ್ಲಿ ನೀರು ತುಂಬಿಕೊಂಡು, ಮನೆಯಲ್ಲಿದ್ದ ಕಪ್ಪು ಬಿಳುಪಿನ ದೊಡ್ಡ ಫೋಟೋದಲ್ಲಿ ಮಂದಹಾಸ ಬೀರುತ್ತಿದ್ದ ಹೆಂಗಸನ್ನು ತೋರಿಸಿ ‘ನೋಡು ನಿನ್ನ ಅಮ್ಮ’ ಎನ್ನುತ್ತಿದ್ದಳು. ಅಮ್ಮನ ಫೋಟೋ ನೋಡಿದಾಗಲೂ ನನಗೇನೂ ಅನಿಸುತ್ತಿರಲಿಲ್ಲ. ನನ್ನ ಪಾಲಿಗೆ ಅದೊಂದು ಭಾವಚಿತ್ರವಾಗಿತ್ತು ಅಷ್ಟೇ. ನಾನೆಂದೂ ಆ ಭಾವಚಿತ್ರದಲ್ಲಿದ್ದ ಹೆಂಗಸಿನ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಜೀವಂತವಾಗಿರುವ ವ್ಯಕ್ತಿಯನ್ನು ಮುಟ್ಟಿ, ಅವರ ಇರುವಿಕೆಯನ್ನು ಅನುಭವಿಸುವಂತೆ, ಫೋಟೋದಲ್ಲಿದ್ದ ಅಮ್ಮನನ್ನು ಮುಟ್ಟಿ, ಅವಳ ಇರುವಿಕೆ, ಅವಳ ಪ್ರೀತಿ, ಕಾಳಜಿ, ಆಪ್ತತೆಯನ್ನು ಅನುಭವಿಸಲಾಗದಿದ್ದ ಮೇಲೆ ಅದರ ಪ್ರಯೋಜನವೇನು ಅನ್ನುವುದು ನನ್ನ ಪ್ರಶ್ನೆಯಾಗಿತ್ತು.ಆಕೆ ಜೀವಂತವಾಗಿದ್ದರೆ ಅವಳನ್ನು ನಾನು ನೋಡಬಹುದಾಗಿತ್ತು, ಅಜ್ಜಿಯ ಜೊತೆ ಆಡಿದಂತೆ ಅವಳ ಮಡಿಲಲ್ಲಿ ಆಡಬಹುದಿತ್ತು!  ಇದ್ಯಾವ ಸುಖವನ್ನು ನೀಡದ ಆಕೆಯ ಆ ಭಾವಚಿತ್ರದ ಬಗ್ಗೆ ನನಗೆ ಇದ್ದುದು ನಿರ್ಲಿಪ್ತತೆಯಷ್ಟೇ. ಮಕ್ಕಳಿಗೆ ಚಿತ್ರಗಳಲ್ಲಿರುವ ದೇವರನ್ನು ತೋರಿಸಿ ಇವನು ರಾಮ, ಈಕೆ ಪಾರ್ವತಿ, ಈತ ಗಣಪತಿ ಎಂದು ಹೇಳುವಂತೆ ಅಜ್ಜಿ ಹೇಳುತ್ತಿದ್ದಳು. ಹೌದು, ನನ್ನಮ್ಮ ನನಗೆ ದೇವರಷ್ಟೇ ಅಪರಿಚಿತ, ಸಮೀಪಿಸಲಾಗದ ಅಗೋಚರವಾಗಿದ್ದ ವ್ಯಕ್ತಿ.ಅಜ್ಜಿಯನ್ನು ನಾನು ಅಮ್ಮ ಎಂದುಕೊಂಡಿದ್ದೆನಷ್ಟೇ? ನನ್ನ ಸಹಪಾಠಿಗಳ ತಾಯಂದಿರ ಕಪ್ಪು ಕೂದಲಂತೆ ನನ್ನ ಅಮ್ಮನ ಕೂದಲು ಏಕೆ ಕಪ್ಪಗಿಲ್ಲ ಎಂದು ಬಿಳಿಕೂದಲಿನ ಅಜ್ಜಿಯನ್ನು ನೋಡಿದಾಗಲೆಲ್ಲ ಅನ್ನಿಸುತ್ತಿತ್ತು. ಬೆಳೆದಂತೆಲ್ಲ ನನ್ನ ಜೀವನ ಸಾಮಾನ್ಯರಂತಿಲ್ಲ ಅನ್ನುವುದು ನನಗೆ ಮನವರಿಕೆಯಾಗತೊಡಗಿತು.ನನ್ನನ್ನು ಕನಿಕರದಿಂದ ದುಃಖದಿಂದ ನೋಡುವವರೇ ಹೆಚ್ಚಾಗಿದ್ದರು. ಕೆಲವರು ನನ್ನನ್ನು ನೋಡಿದಾಗಲೆಲ್ಲ ತಮ್ಮತಮ್ಮೊಳಗೆ ಗುಸುಗುಸು ಅನ್ನುತ್ತಿದ್ದರು. ನನ್ನ ಎದುರಿಗೆ ಮಾತನಾಡಬಾರದು ಎಂದು ಬೇರೆ ಕಡೆ ಹೋಗಿ, ನನ್ನನ್ನು ನೋಡುತ್ತಾ ಏನೇನೋ ಮಾತನಾಡುತ್ತಿದ್ದರು. ಅವರ ಮಾತಿನ ಒಂದು ಮುಖ್ಯ ಭಾಗ– ನಾನು ಹುಟ್ಟಿದ ಹತ್ತೇ ದಿನಕ್ಕೆ ಅಮ್ಮ ತೀರಿಕೊಂಡಿದ್ದಳಂತೆ. ಆದರೆ ಇದ್ಯಾವುದೂ ನನಗೆ ಬಾಧಿಸುತ್ತಿರಲಿಲ್ಲ. ಏಕೆಂದರೆ ಈ ಸಂಗತಿ ಒಂದು ಪ್ರಾಯದವರೆಗೂ ನನಗೆ ಅರ್ಥವಾಗಿರಲಿಲ್ಲ. ಆದರೆ ನಾನು ಬೆಳೆದಂತೆ ಈ ಕಟುಸತ್ಯ ನನಗೆ ಅರ್ಥವಾಗತೊಡಗಿತು.‘ತಾಯಿಯ ಮುಖವನ್ನು ನೋಡದ ದೌರ್ಭಾಗ್ಯ ಈ ಹುಡುಗಿಗೆ ಬರಬಾರದಿತ್ತು’ ಎಂದು ಕೆಲವರು ನನಗೆ ನೇರವಾಗಿಯೇ ಹೇಳಿದ್ದುಂಟು. ‘ತಾಯಿಯ ಜೀವವನ್ನೇ ತೆಗೆದುಕೊಂಡ ನತದೃಷ್ಟ ಕೂಸು’ ಅಂತಲೂ ಮೆಲ್ಲಗೆ ನನ್ನನ್ನು ನೋಡಿ ಹೇಳಿದ್ದುಂಟು. ನನ್ನನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದ ಜನರು ಅಮ್ಮನನ್ನು, ಆಕೆಯ ಕಾದಂಬರಿಗಳನ್ನು, ಆಕೆಯೊಂದಿಗಿನ ಒಡನಾಟವನ್ನು ನನ್ನೆದುರು ಪದೇ ಪದೇ ನೆನಪಿಸಿಕೊಂಡು, ‘ಇಂತಹ ಮಹಾನ್ ಸಾಧಕಿಯ ಮಗಳು ನೀನು’ ಎನ್ನುತ್ತಿದ್ದರು. ನಾನು ದೊಡ್ಡವಳಾದಂತೆ, ಬದುಕು ಅರ್ಥವಾಗತೊಡಗಿದಂತೆ ನನ್ನ ನೋವು, ಸಂಕಟ, ಯಾರಿಗೂ ಬೇಡ. ಅಮ್ಮ ಯಾರೆನ್ನುವ ಸತ್ಯ ಅರಿವಾದ ದಿನ, ನನ್ನ ಜೀವನದ ಅತ್ಯಂತ ಕೆಟ್ಟದಿನವಾಗಿತ್ತು. ಆ ದಿನದ ನಂತರ ನಾನು ನೆಮ್ಮದಿಯನ್ನು ಕಳೆದುಕೊಂಡೆ. ವ್ಯಗ್ರತೆಯಿಂದ ಕೂಡಿದ ಅಂದಿನ ನನ್ನ ಮನಸ್ಥಿತಿಯನ್ನು– ‘ಯಾರೋ ನನಗೆ ವಿಶ್ವಾಸ ದ್ರೋಹ ಮಾಡಿದ್ದಾರೆ, ಗಾಯದ ಮೇಲೆ ಬರೆ ಎಳೆದಿದ್ದಾರೆ’ ಎಂದು ಬಣ್ಣಿಸಬಹುದಾಗಿತ್ತು.ನಾನು ಕಾಣದ ಅಮ್ಮನನ್ನು ಎಲ್ಲರೂ ಪ್ರೀತಿಸುತ್ತಿದ್ದಾರೆ, ಗಂಟೆಗಟ್ಟಲೇ ಗುಣಗಾನ ಮಾಡುತ್ತಾರೆ, ಅವಳ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಆದರೆ ನನಗೆ ಏಕೆ ಅಮ್ಮನ ಪ್ರೀತಿ ಸಿಗಲಿಲ್ಲ, ಆಕೆಯ ವಾತ್ಸಲ್ಯದ ಅಪ್ಪುಗೆ ಸಿಗಲಿಲ್ಲ ಅನಿಸುತ್ತಿತ್ತು. ಆಕೆಯ ಭಾವಚಿತ್ರವನ್ನು ನೋಡುತ್ತಾ ಸದಾ ಕುಳಿತಿರುತ್ತಿದ್ದೆ. ಮೊನಾಲಿಸಾಳ ಮುಖದ ಮಂದಹಾಸ ಮತ್ತು ಯಾವ ದಿಕ್ಕಿನಿಂದ ನೋಡಿದರೂ, ನನ್ನನ್ನೇ ನೋಡುತ್ತಿದ್ದಾಳೆ ಅನ್ನುವಂತಿದ್ದ ಅಮ್ಮನ ಕಣ್ಣುಗಳು– ಹತ್ತಿರವಿದ್ದರೂ ದೂರದಲ್ಲಿದ್ದರೂ ನನ್ನನ್ನೇ ನೋಡುತ್ತಿದ್ದಾಳೆ ಅನ್ನುವಷ್ಟರ ಮಟ್ಟಿಗೆ ಭಾವನಾತ್ಮಕವಾಗಿ ನಾನು ಅಮ್ಮನ ಭಾವಚಿತ್ರದೊಂದಿಗೆ ಸಂಬಂಧ ಕಲ್ಪಿಸಿಕೊಳ್ಳತೊಡಗಿದೆ. ನನ್ನನ್ನು ಒಬ್ಬಳೇ ಬಿಟ್ಟು ಹೋಗಿದ್ದಕ್ಕಾಗಿ ಅವಳ ಮೇಲೆ ನನಗೆ ವಿಪರೀತ ಸಿಟ್ಟು ಬರುತ್ತಿತ್ತು. ಇಡೀ ಕರ್ನಾಟಕದಲ್ಲಿ ಆಕೆ ಕೀರ್ತಿವಂತಳಾಗಿದ್ದಳು, ಅತ್ಯುತ್ತಮ ಲೇಖಕಿಯೆಂದು ಹೆಸರು ಪಡೆದಿದ್ದಳು, ಆದರೆ ನನಗೆ ಮಾತ್ರ ಆಕೆ ನೇಪಥ್ಯವಾಗಿಬಿಟ್ಟಿದ್ದಳು.ತ್ರಿವೇಣಿ ಕನ್ನಡದ ಜನಪ್ರಿಯ ಲೇಖಕಿಯಾಗಿ, ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದವರು. ಆದರೆ ನನಗೆ ಆಕೆ ಕೇವಲ ತಾಯಿಯಾಗಿ ಇರುವಂತಾಗಿದ್ದರೆ ಸಾಕೆನಿಸುತ್ತಿತ್ತು. ನನಗೆ ಆಕೆ ಜನಪ್ರಿಯ ಕಾದಂಬರಿಗಾರ್ತಿಯಾಗಿ, ಕಥೆಗಾರ್ತಿಯಾಗಿ ಬೇಕಿರಲಿಲ್ಲ. ಅಮ್ಮ ಜೀವನದಲ್ಲಿ ಎಂದೂ ನನಗೆ ಸಿಗಲಾರಳು ಅನ್ನುವ ಸತ್ಯ ತಿಳಿದ ಕ್ಷಣ ನನಗೆ ಜಗತ್ತೇ ಶೂನ್ಯವೆನಿಸಿಬಿಟ್ಟಿತ್ತು. ನಾನು ದೇವರನ್ನು ದೂಷಿಸತೊಡಗಿದೆ.ಕೊನೆಗೊಮ್ಮೆ, ನಾನು ಅಮ್ಮನ ಹುಡುಕಾಟವನ್ನು ಪ್ರಾರಂಭಿಸಿದೆ. ಅದು ಆಕೆ ಜೀವಿತಾವಧಿಯಲ್ಲಿ ಬರೆದ ಎಲ್ಲ ಕಾದಂಬರಿಗಳು ಮತ್ತು ಸಣ್ಣಕತೆಗಳನ್ನು ಓದುವ ಮೂಲಕ.ಯಾರು ನನ್ನ ನಿಜವಾದ ತಾಯಿ? ಆಕೆಯ ಯೋಚನೆಗಳೇನು? ಆ ಯೋಚನೆಗಳಿಗೆ ಆಕೆ ನೀಡುತ್ತಿದ್ದ ಕಾರಣಗಳು, ಆಕೆ ಯಾವುದನ್ನು ಇಷ್ಟಪಡುತ್ತಿದ್ದಳು... ಎಲ್ಲವನ್ನೂ ಅವಳ ಸಾಹಿತ್ಯದ ಮೂಲಕ ಅರ್ಥಮಾಡಿಕೊಳ್ಳುತ್ತಾ ಹೋದೆ. ಸುಮಾರು 50 ವರ್ಷಗಳ ಹಿಂದೆಯೇ ಆಕೆ ಬರೆದಿದ್ದ ಕ್ರಾಂತಿಕಾರಕ ಕಥೆಗಳೆಂದರೆ ಈಗಲೂ ನನಗೆ ಇಷ್ಟ. ಎಷ್ಟೋ ಬಾರಿ ಆಕೆಯ ಕಥೆಗಳಲ್ಲಿನ ಸ್ತ್ರೀಪಾತ್ರಗಳನ್ನು ಅರ್ಥಮಾಡಿಕೊಳ್ಳುತ್ತಾ, ನಾನೂ ಅದರಿಂದ ಪ್ರಭಾವಿತಳಾಗಿ ರೂಪುಗೊಂಡೆನೋ ಅಥವಾ ನನ್ನೊಳಗಿನ ಸ್ವರೂಪವೇ ಆ ರೀತಿಯೋ ಅನ್ನುವುದು ನನಗೆ ಗೊತ್ತಿಲ್ಲ.ಈಗ ‘ಕಾದಂಬರಿಗಾರ್ತಿ ತ್ರಿವೇಣಿ’ ಹಾಗೂ ‘ನನ್ನಮ್ಮ ತ್ರಿವೇಣಿ’ ಇಬ್ಬರನ್ನೂ ಅನ್ವೇಷಣೆ ಮಾಡುವ ಕಾಲ ಬಂದಿತ್ತು. ಅಮ್ಮನೊಂದಿಗೆ ನೇರ ಪರಿಚಯವಿದ್ದವರು, ಅವಳೊಂದಿಗೆ ಒಡನಾಡಿದವರು, ಕುಟುಂಬದವರು, ಸಂಬಂಧಿಕರು, ಸ್ನೇಹಿತರನ್ನು ಹುಡುಕಾಡಿದೆ. ಅಮ್ಮನ ಸ್ವಭಾವ ಹೇಗಿತ್ತು? ಆಕೆ ಹೇಗೆ ಮಾತನಾಡುತ್ತಿದ್ದಳು? ಆಕೆಯ ಅನಾರೋಗ್ಯಕ್ಕೆ ಕಾರಣವೇನು? ಆಕೆಯ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಕಾರಣವಾದರೂ ಏನಿದ್ದೀತು? ಬರವಣಿಗೆ ಪ್ರಾರಂಭಿಸುವ ಮುನ್ನ ಅವರ ಸಿದ್ಧತೆ ಹೇಗಿರುತ್ತಿತ್ತು?– ಇಂತಹ ಹಲವು ಪ್ರಶ್ನೆಗಳನ್ನು ಅಮ್ಮನ ಜೊತೆ ಒಡನಾಡಿದವರ ಹತ್ತಿರ ಕೇಳುತ್ತಲೇ ಇರುತ್ತಿದ್ದೆ. ಆ ಮೂಲಕ ಅಮ್ಮನ ಅಂತರಾಳವನ್ನು ಪ್ರವೇಶಿಸಬೇಕು ಅನ್ನುವ ಆಸೆ ನನ್ನದಾಗಿತ್ತು. ಹೀಗೆ ಅಮ್ಮನ ಬಗ್ಗೆ ತಿಳಿದುಕೊಂಡಂತೆಲ್ಲಾ, ಆಕೆಯ ಅಂತರಂಗವನ್ನು ಅರ್ಥ ಮಾಡಿಕೊಳ್ಳುತ್ತಾ ಹೋದೆ.ನನ್ನ ತಾಯಿ ತ್ರಿವೇಣಿ ಸೆ. 1, 1928ರಂದು ಮೈಸೂರಿನಲ್ಲಿ ಜನಿಸಿದರು. ತಂಗಮ್ಮ – ಬಿ.ಎಂ. ಕೃಷ್ಣಸ್ವಾಮಿ ಅವರ ತಂದೆತಾಯಿ. ಅಮ್ಮನ ಜನ್ಮನಾಮ ಭಾಗೀರಥಿ ಎಂದಾಗಿತ್ತು. ಆದರೆ ದಾಖಲೆಗಳಲ್ಲಿ ಆಕೆಯ ಹೆಸರು ‘ಅನಸೂಯ’ ಎಂದು ನಮೂದಿಸಲಾಗಿತ್ತು. ಅಮ್ಮನಿಗೆ ಚಿಕ್ಕವಳಾಗಿದ್ದನಿಂದಲೂ ಬರೆಯುವ ಹವ್ಯಾಸವಿತ್ತು. ಹೀಗೆ ತಾನು ಬರೆದಿದ್ದೆಲ್ಲವನ್ನೂ ಸಂಕೋಚದಿಂದ ಯಾರು ಓದಬಾರದೆಂದು ತನ್ನ ಕಪಾಟಿನಲ್ಲಿ ಮುಚ್ಚಿಡುತ್ತಿದ್ದಳಂತೆ. ಒಮ್ಮೆ ನನ್ನ ಅಜ್ಜಿ ತಂಗಮ್ಮ ಕಪಾಟನ್ನು ತೆಗೆದು, ಮಗಳು ಬರೆದಿಟ್ಟಿದ್ದೆಲ್ಲವನ್ನೂ ಓದಿ, ‘ಅಂಚು... ಎಷ್ಟು ಚೆನ್ನಾಗಿ ಬರೆಯುತ್ತಿಯೇ ನೀನು! ಇದನ್ನು ಯಾರಿಗಾದರೂ ಪ್ರಕಾಶಕರಿಗೆ ಕಳುಹಿಸಿಕೊಡು, ಖಂಡಿತ ಇದನ್ನ  ಪ್ರಕಟಿಸ್ತಾರೆ’ ಎಂದು ಒತ್ತಾಯ ಮಾಡಿದ್ದಳಂತೆ. ಅಮ್ಮ ಬರವಣಿಗೆಯನ್ನು ಮುಂದುವರೆಸಿಕೊಂಡು ಹೋಗಲು ಮೊದಲು ಉತ್ತೇಜನ ನೀಡಿದ್ದೇ ಅವರ ಅಮ್ಮ.ಅಮ್ಮ ಪದವಿ ಶಿಕ್ಷಣ ಮುಗಿಸಿ, ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡ ಮೇಲೆ ‘ತ್ರಿವೇಣಿ’ ಎಂಬ ಹೆಸರಿನಲ್ಲಿ ಕತೆ, ಕಾದಂಬರಿಗಳನ್ನು ಬರೆಯಲಿಕ್ಕೆ ಪ್ರಾರಂಭಿಸಿದ್ದಳು. ಗಾಂಧೀಜಿಯವರ ಚಿತಾಭಸ್ಮವನ್ನು ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲಾಯಿತು ಅನ್ನುವ ಸುದ್ದಿಯನ್ನು ಕೇಳಿದಾಗ, ಅದರಲ್ಲಿನ ‘ತ್ರಿವೇಣಿ’ ಅನ್ನುವ ಹೆಸರು ಅಮ್ಮನನ್ನು ಆಕರ್ಷಿಸಿತ್ತು. ಮುಂದೇ ಅದೇ ಹೆಸರನ್ನು ತಮ್ಮ ಸಾಹಿತ್ಯಿಕ ಬರವಣಿಗೆಗೆ ಬಳಸಿಕೊಂಡು ‘ತ್ರಿವೇಣಿ’ ಹೆಸರಿನಲ್ಲಿ ಜನಪ್ರಿಯ ಕಾದಂಬರಿಗಾರ್ತಿಯಾದರು.ಅಮ್ಮನ ಕೊನೆಯ ತಮ್ಮ ಮೈಸೂರಿನಲ್ಲಿ ನೆಲೆಸಿರುವ ರಂಗನಾಥ್. ಅವರು ಕಂಡ ಹಾಗೆ, ಅಮ್ಮನಿಗೆ ಮಕ್ಕಳೆಂದರೆ ಪಂಚಪ್ರಾಣ, ಬಡ ಮಕ್ಕಳೆಂದರೆ ವಿಪರೀತ ಕಾಳಜಿ. ಎಷ್ಟೋ ಬಾರಿ ಅವರ ಶಾಲೆಯ ಫೀಸನ್ನು ಕೂಡ ಕಟ್ಟಿಬಿಡುತ್ತಿದ್ದಳು. ಸುಳ್ಳು ಹೇಳುವುದು, ಸಣ್ಣಬುದ್ಧಿ ತೋರಿಸುವುದನ್ನು ಕಂಡರೆ ಅಮ್ಮನಿಗೆ ಆಗುತ್ತಿರಲಿಲ್ಲ. ಯಾರಾದರೂ ಸುಖಾಸುಮ್ಮನೇ ಸುಳ್ಳು ಹೇಳಿದರೆ ಆಕೆಗೆ ಸಿಟ್ಟು ನೆತ್ತಿಗೇರುತ್ತಿತ್ತು. ಪುಸ್ತಕಗಳನ್ನು ಓದಿ ಹಿಂತಿರುಗಿಸುತ್ತೇವೆ ಅಂತ ಹೇಳಿ ತೆಗೆದುಕೊಂಡು ಹೋದ ಪುಸ್ತಕಗಳನ್ನು ಹಿಂದಿರುಗಿಸದವರ ಮೇಲೂ ವಿಪರೀತ ಬೇಸರಪಡುತ್ತಿದ್ದಳು.ಕೆಲವೊಮ್ಮೆ ತನ್ನ ಕೈಸೋಲುವವರೆಗೂ ಪುಟ್ಟಗಟ್ಟಲೇ ಬರೆಯುತ್ತಿದ್ದಳು. ಕೆಲವೊಮ್ಮೆ ಅನೇಕ ದಿನಗಳವರೆಗೆ ಏನನ್ನೂ ಬರೆಯುತ್ತಿರಲಿಲ್ಲ. ಅಸ್ತಮಾ ಅವರ ದೇಹವನ್ನು ವಿಪರೀತ ಬಳಲುವಂತೆ ಮಾಡುತ್ತಿತ್ತು. ಪದವಿಯ ನಂತರ ಒಂದು ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿ, ಆ ನಂತರ ಅನಾರೋಗ್ಯ ಸಮಸ್ಯೆಯಿಂದಾಗಿ ನೌಕರಿ ಮುಂದುವರೆಯಲಿಲ್ಲ. ಅಸ್ತಮಾ ಉಲ್ಬಣಗೊಳ್ಳುತ್ತಿತ್ತು.  ಇದರಿಂದಾಗಿ ನಿದ್ದೆ ಇಲ್ಲದೇ ಎಷ್ಟೋ ರಾತ್ರಿಗಳನ್ನು ಕಳೆಯುತ್ತಿದ್ದಳು. ಹಾಸಿಗೆಯಲ್ಲಿ ನರಳುತ್ತಲೇ ದಿನಗಳನ್ನು ಮುಂದೂಡುತ್ತಿದ್ದಳು. ತನಗಿರುವ ಕಾಯಿಲೆಯ ಬಗ್ಗೆ ಮಾನಸಿಕವಾಗಿ ನೋವು ಅನುಭವಿಸುತ್ತಿದ್ದಳು. ಇದಕ್ಕೆ ಒಂದು ಘಟನೆಯನ್ನು  ರಂಗನಾಥ್ ನೆನಪಿಸಿಕೊಳ್ಳುತ್ತಾರೆ:ಒಮ್ಮೆ ತ್ರಿವೇಣಿ ತಮ್ಮ ಕುಟುಂಬದವರ ಜೊತೆ ಸಿನಿಮಾ ನೋಡಲಿಕ್ಕೆ ಥಿಯೇಟರ್‌ಗೆ ಹೋಗಿದ್ದಳು. ಸಿನಿಮಾದಲ್ಲಿ ಒಂದು ದೃಶ್ಯವಿತ್ತು. ಹೊಡೆದಾಟದ ದೃಶ್ಯವೊಂದರಲ್ಲಿ ನಾಯಕನ ಕಣ್ಣಿಗೆ ವಿಲನ್ ಮಣ್ಣನ್ನು ಎರಚುತ್ತಾನೆ. ಈ ದೃಶ್ಯವನ್ನು ಕ್ಯಾಮೆರಾ ಎದುರಿಗೆ ಮಣ್ಣನ್ನು ಎರಚಿದಂತೆ ಶೂಟ್ ಮಾಡಲಾಗಿತ್ತು. ಹಾಗಾಗಿ ಸಿನಿಮಾ ನೋಡುವಾಗ ಆ ಮಣ್ಣು ತಮ್ಮ ಮೇಲೆ ಬೀಳುತ್ತಿದೆ ಎನ್ನುವಂತೆ ಭಾಸವಾಗುತ್ತಿತ್ತು. ತ್ರಿವೇಣಿ ಈ ದೃಶ್ಯ ನೋಡಿದಾಕ್ಷಣ ವಿಪರೀತ ಸೀನತೊಡಗಿದರು. ಮೊದಲೇ ದೂಳೆಂದರೆ ಆಗದ ಆಕೆಗೆ, ರೀಲ್‌ನಲ್ಲಿದ್ದ ದೃಶ್ಯವನ್ನು ನೋಡಿದಾಗಲೂ ಯಾರೋ ತಮ್ಮ ಮುಖಕ್ಕೆ ಮಣ್ಣು ತೂರಿದಂತೆ ಅನ್ನಿಸಿತ್ತು.ಅನಾರೋಗ್ಯದ ನಡುವೆಯೂ, ತನ್ನನ್ನು ನೋಡಲು ಇಲ್ಲವೇ ಕಷ್ಟ ಅಂತ ಹೇಳಿಕೊಂಡು ಯಾರೇ ಬಂದರೂ, ಅವರ ಕಷ್ಟಸುಖಗಳನ್ನು ಅಮ್ಮ ವಿಚಾರಿಸುತ್ತಿದ್ದಳು. ಅದಕ್ಕೆ ಪರಿಹಾರವನ್ನು ಕೂಡ ತಿಳಿಸುತ್ತಿದ್ದಳು. ಅವರು ಅನುಭವಿಸಿದ ಬಡತನ, ಕಷ್ಟಗಳನ್ನು ಕೇಳಿಕೊಂಡು, ಅದನ್ನು ತಾನೇ ಅನುಭವಿಸಿದಂತೆ ಬರೆಯುತ್ತಿದ್ದಳು. ‘ಅವಳ ಮನೆ’ ಕಾದಂಬರಿಯಲ್ಲಿ ಬಡತನದ ಕಷ್ಟನಷ್ಟಗಳನ್ನು, ಅದರ ಸೂಕ್ಷ್ಮವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಳು. ಅದು ತ್ರಿವೇಣಿ ಬರವಣಿಗೆಯ ಸತ್ವವಾಗಿತ್ತು. ಯಾವುದೇ ವಿಷಯವಾದರೂ ಅದನ್ನು ಸುಲಭವಾಗಿ ಗ್ರಹಿಸಿ ಅದನ್ನು ಬರವಣಿಗೆಯ ಮೂಲಕ ಸುಂದರ ರೂಪವನ್ನು ಕೊಡುತ್ತಿದ್ದಳು. ವಿಮರ್ಶಕರು ಮತ್ತು ಓದುಗರ ಅಭಿಪ್ರಾಯಗಳನ್ನು ಅಮ್ಮ ಸಮಾನವಾಗಿ ಸ್ವೀಕರಿಸುತ್ತಿದ್ದಳು.ಹೊಗಳಿದಾಗ ಖುಷಿಯಾಗುವುದು, ಟೀಕಿಸಿದಾಗ ಕುಗ್ಗುವುದು– ಯಾವುದು ಆಕೆಗೆ ಆಗುತ್ತಿರಲಿಲ್ಲ. ಇದಕ್ಕೆ ಇನ್ನೊಂದು ಘಟನೆಯನ್ನು ಸ್ಮರಿಸಿಕೊಳ್ಳಬಹುದು. ಒಮ್ಮೆ ತ್ರಿವೇಣಿ ಮುಂಬೈಯಿಂದ ಮೈಸೂರಿಗೆ ಟ್ರೇನ್‌ನಲ್ಲಿ ಬರುವಾಗ ಆಕೆಯ ಪಕ್ಕ ಕೂತಿದ್ದ ಒಬ್ಬ ಕನ್ನಡಿಗ ಪ್ರಯಾಣಿಕನ ಹತ್ತಿರ ತನ್ನ ಪರಿಚಯ ಮುಚ್ಚಿಟ್ಟು– ‘ತ್ರಿವೇಣಿ ಕಾದಂಬರಿಗಳನ್ನು ಓದಿದ್ದೀರಾ?’ ಎಂದು ಕೇಳಿದಳಂತೆ. ಅವರ ಪ್ರಶ್ನೆಗೆ ಆ ಪ್ರಯಾಣಿಕ ಸುಮಾರು ಒಂದು ಗಂಟೆಯ ಕಾಲ ತ್ರಿವೇಣಿ ಕಾದಂಬರಿಗಳಲ್ಲಿನ ಋಣಾತ್ಮಕ ಅಂಶಗಳನ್ನು ತೆಗಳಿದ್ದರ ಜೊತೆಗೆ, ಆಕೆಯ ಕಾದಂಬರಿಗಳಲ್ಲಿ ಮನರಂಜನೆ ಇಲ್ಲ, ಓದುಗರಿಗೆ ಬೇಕಾದ ವಿಷಯ ಇಲ್ಲವೇ ಇಲ್ಲ ಅಂತ ವಾದಿಸಿದ. ಆತನ ಮಾತುಗಳನ್ನು ಶಾಂತವಾಗಿ ಕೇಳುತ್ತಿದ್ದ ತ್ರಿವೇಣಿ ಕೊನೆಯವರೆಗೂ ಆ ಪ್ರಯಾಣಿಕನಿಗೆ ‘ತಾನೇ ತ್ರಿವೇಣಿ’ ಎಂದು ಪರಿಚಯ ಮಾಡಿಕೊಡಲೇ ಇಲ್ಲ. ಆದರೆ ಮನೆಗೆ ಬಂದ ಮೇಲೆ ಆ ಘಟನೆಯನ್ನು ನೆನಪಿಸಿಕೊಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕಳು. ಆ ಪ್ರಯಾಣಿಕ ನೀಡಿದ ತನ್ನ ಅಭಿಪ್ರಾಯವನ್ನು ಧನಾತ್ಮಕವಾಗಿ ತೆಗೆದುಕೊಂಡು, ತನ್ನ ಬರವಣಿಗೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳುತ್ತೇನೆ ಅಂತ ಹೇಳಿದಳು.‘ತ್ರಿವೇಣಿ ಒಳ್ಳೆಯ ಮನಸ್ಸಿನವಳಾಗಿದ್ದಳು. ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಮೌನಕ್ಕೆ ಹೆಚ್ಚು ಪ್ರಾಧಾನ್ಯ ನೀಡುತ್ತಿದ್ದಳು’ ಅಂತ ಅಮ್ಮನ ಸ್ನೇಹಿತೆ ವಿಶಾಲಾಕ್ಷ್ಮಮ್ಮ ಮತ್ತು ಹತ್ತಿರದ ಸಂಬಂಧಿಕರಾಗಿರುವ ಸುಮಿತ್ರಮ್ಮ  ನೆನಪಿಸಿಕೊಳ್ಳುತ್ತಾರೆ. ಅವರು ನೋಡಿರುವ ಪ್ರಕಾರ, ‘‘ತ್ರಿವೇಣಿ ಎಷ್ಟು ಭಾವುಕಳೋ, ಅಷ್ಟೇ ಶಾಂತವಾಗಿರುತ್ತಿದ್ದಳು. ಮಕ್ಕಳ ಜೊತೆಗಿನ ಆಕೆಯ ಬಾಂಧವ್ಯವನ್ನು ವರ್ಣಿಸುವುದು ತುಂಬಾ ಕಷ್ಟ. ಮಕ್ಕಳೊಂದಿಗೆ ತುಂಬಾ ಆತ್ಮೀಯವಾಗಿ ಬೆರೆಯುತ್ತಾ ಆಕೆಯೂ ಮಗುವಾಗಿಬಿಡುತ್ತಿದ್ದಳು. ತನ್ನೊಂದಿಗೆ ಮಾತನಾಡುವ ಮತ್ತು ಬೇರೆಯವರು ಮಾತನಾಡುವಾಗ ಅವರನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಅವರ ಮುಖದಲ್ಲಿನ ಭಾವನೆಗಳು, ಹಾವಭಾವಗಳು ಆಕೆಗೆ ಆಸಕ್ತಿಯನ್ನು ಹುಟ್ಟಿಸುತ್ತಿದ್ದವು.ಇದು ಕೂಡ ಆಕೆಯ ಕಾದಂಬರಿಗಳಲ್ಲಿನ ಪಾತ್ರಗಳ ಸೂಕ್ಷ್ಮತೆಗೆ ಸಹಾಯವಾಗುತ್ತಿತ್ತು. ಮನಃಶಾಸ್ತ್ರದಲ್ಲಿ ಚಿನ್ನದ ಪದಕವನ್ನು ಪಡೆದಿದ್ದ ಆಕೆ ಜನರ ಮಾನಸಿಕ ತೊಳಲಾಟವನ್ನು ಸುಲಭವಾಗಿ ಅರ್ಥಮಾಡಿಕೊಂಡು ಅವರ ಜೊತೆ ಮಾತುಕತೆಯನ್ನು ನಡೆಸುತ್ತಿದ್ದಳು. ಹೊರಗಡೆ ಹೋದಾಗ, ಬಸ್ ಟ್ರೇನ್‌ಗಳಲ್ಲಿ ಪ್ರಯಾಣ ಮಾಡುವಾಗ, ಜೊತೆಗಿರುವ ಜನರನ್ನು, ಅವರ ಮನಸಿನ ತೊಳಲಾಟಗಳನ್ನು ಅರ್ಥಮಾಡಿಕೊಳ್ಳಲು ಅವರನ್ನು ಸೂಕ್ಷ್ಮವಾಗಿ ನೋಡುತ್ತಿದ್ದಳು. ನಾವು ನೋಡಿದಂತೆ ತ್ರಿವೇಣಿ ಒಬ್ಬ ಹೆಸರಾಂತ ಲೇಖಕಿಯಾಗಿ ಮಾತ್ರವಲ್ಲದೇ, ಪರಿಪೂರ್ಣ ಗೃಹಿಣಿಯಾಗಿಯೂ ಕೂಡ ಆಪ್ತವಾಗುತ್ತಿದ್ದಳು’’.ತ್ರಿವೇಣಿಯ ಮದುವೆ ಪ್ರಸಂಗ ಕೂಡ ಸ್ವಾರಸ್ಯಕರವಾಗಿತ್ತು ಅಂತ ಅಮ್ಮನ ಹಿರಿಯ ಅಕ್ಕ ಪ್ರಭಾವತಿ ಹೇಳಿದ ಫಟನೆ ಇಲ್ಲಿ ಪ್ರಸ್ತುತವೆನಿಸುತ್ತದೆ. ‘‘ನನ್ನ ಮದುವೆ ಆಗಲೇ ನಿಶ್ಚಯವಾಗಿತ್ತು. ಆ ಸಮಯದಲ್ಲಿ ನಾನು, ಹತ್ತಿರದ ಸಂಬಂಧಿ ಶಂಕರ್ ಮತ್ತು ತ್ರಿವೇಣಿ ಮನೆಯ ಹೊರಗಡೆ ಕುಳಿತು ಮಾತನಾಡುತ್ತಿದ್ದೆವು. ‘ಅಕ್ಕನ ಮದುವೆ ನಿಶ್ಚಯವಾಯ್ತು, ಇನ್ನು ನಿನ್ನ ಮದುವೆ ಯಾವಾಗ?’ ಎಂದು ಶಂಕರ್, ತ್ರಿವೇಣಿಯನ್ನು ರೇಗಿಸಿಬಿಟ್ಟ.ಆ ಮಾತನ್ನು ಕೇಳಿ ತ್ರಿವೇಣಿ ಬೇಸರಗೊಂಡು ಅಲ್ಲಿಂದ ಎದ್ದು ಹೊರಟುಹೋದಳು. ತ್ರಿವೇಣಿ ಇದ್ದ ಕಡೆಗೆ ಹೋದ ಶಂಕರ್ ಬೇಸರಕ್ಕೆ ಕಾರಣ ಕೇಳಿದ. ‘ತಾನು ಅಸ್ತಮಾ ಕಾಯಿಲೆ ಇರುವವಳು, ತನ್ನನ್ನು ಯಾರು ಮದುವೆಯಾಗುತ್ತಾರೆ ಅಂತ ಗೊತ್ತಿದ್ದರೂ, ನನ್ನನ್ನು ರೇಗಿಸುತ್ತಿಯಾ’ ಎಂದು ತ್ರಿವೇಣಿ ಹೇಳಿದಾಗ ಶಂಕರ್‌ ಕ್ಷಮೆ ಕೇಳಿದರ. ಅಷ್ಟು ಮಾತ್ರವಲ್ಲ, ‘ಕಾಯಿಲೆ ಇರುವ ನನ್ನಂಥವಳನ್ನು ಮದುವೆಯಾಗಲಿಕ್ಕೆ ಯಾರು ಮುಂದೆ ಬರುತ್ತಾರೆ’ ಎನ್ನುವ ತ್ರಿವೇಣಿ ಅವರ ಅಳಲಿಗೆ ಉತ್ತರವಾಗಿ– ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಶಂಕರ್ ಆ ಕ್ಷಣವೇ ಹೇಳಿದ ಹಾಗೂ ಎಲ್ಲರನ್ನೂ ಒಪ್ಪಿಸಿ ತ್ರಿವೇಣಿಯನ್ನು ಮದುವೆಯಾಗಿಯೇಬಿಟ್ಟ. ಮುಂದೆ ಆಕೆಯ ಎಲ್ಲ ಸಾಧನೆಯ ಹಿಂದೆ ಶಂಕರ್ ಬೆನ್ನಲುಬಾಗಿದ್ದ, ಅಂತಹ ದೊಡ್ಡ ಮನಸ್ಸು ಅವನದ್ದು”.

‘‘ನಮ್ಮ ಕುಟುಂಬದಲ್ಲಿ ಹೆಚ್ಚಿನವರು ಬರಹಗಾರರಾಗಿ ಜನಪ್ರಿಯರಾಗಿದ್ದಾರೆ. ನಮ್ಮ ದೊಡ್ಡಪ್ಪ ಬಿಎಂಶ್ರೀ, ಚಿಕ್ಕಮ್ಮ ವಾಣಿ ಇವರೆಲ್ಲಾ ಆಗಿನ ಕಾಲದಲ್ಲಿ ಜನಪ್ರಿಯ ಸಾಹಿತಿಗಳಾಗಿ ಗುರುತಿಸಿಕೊಂಡಿದ್ದರಿಂದ ತ್ರಿವೇಣಿ ಕೂಡ ಆ ನಿಟ್ಟಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲಿಕ್ಕೆ ದೊಡ್ಡಮ್ಮ ಮತ್ತು ಚಿಕ್ಕಮ್ಮ ಕೂಡ ಪರೋಕ್ಷವಾಗಿ ಪ್ರೇರಣೆಯಾಗಿದ್ದರು’’ ಎಂದು ಅವರ ತಂಗಿ ಆರ್ಯಾಂಬಾ ಪಟ್ಟಾಭಿ ನೆನಪಿಸಿಕೊಳ್ಳುತ್ತಾರೆ.ತ್ರಿವೇಣಿ ಮೂಲತಃ ಮನಃಶಾಸ್ತ್ರದ ವಿದ್ಯಾರ್ಥಿಯಾಗಿದ್ದರಿಂದ, ತನ್ನ ಕಾದಂಬರಿಯಲ್ಲಿ ಈ ಅಂಶವನ್ನು ಅತ್ಯಂತ ಪರಿಣಾಮಕಾರಿಯಾಗಿ ಬರೆಯಲಿಕ್ಕೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದರು. ನಿಮ್ಹಾನ್ಸ್‌ಗೆ ಭೇಟಿ ನೀಡಿ, ಅಲ್ಲಿದ್ದ ರೋಗಿಗಳ ಮನೋ ವಿಶ್ಲೇಷಣೆ ಹಾಗೂ ಅಧ್ಯಯನ ಮಾಡಿ ಬರೆದ ಸಣ್ಣ ಕಥೆಗಳ ಸಂಕಲನ ‘ಮುಚ್ಚಿದ ಬಾಗಿಲು’. ತಮ್ಮ ಕಾದಂಬರಿಗಳ ಮೂಲಕ ಮನೋರೋಗಕ್ಕೆ ಮುಖ್ಯ ಕಾರಣಗಳನ್ನು ಪರಾಮರ್ಶಿಸಿ, ಅವರನ್ನು ಸೂಕ್ಷ್ಮ ಸಂವೇದನೆಯಿಂದ ನೋಡಬೇಕೆಂದು ತಿಳಿಯಪಡಿಸಿದರು. ನಾನು ಅರ್ಥಮಾಡಿಕೊಂಡಂತೆ ತ್ರಿವೇಣಿ ಕಾದಂಬರಿಗಳಲ್ಲಿ ನೀತಿಬೋಧನೆ ಮಾಡುತ್ತಿರಲಿಲ್ಲ. ಮನಃಶಾಸ್ತ್ರಕ್ಕೆ ಸಂಬಂಧಪಟ್ಟ ಅಮ್ಮನ ಕಾದಂಬರಿ ಮತ್ತು ಕಥೆಗಳನ್ನು ನಾನು ಓದಿದಾಗ ಮನೋರೋಗದಿಂದ ಬಳಲುತ್ತಿರುವ ಕುಟುಂಬಗಳ ವಿಷಯವನ್ನೇ ಆಯ್ದುಕೊಂಡು ಸಮಾಜಕ್ಕೆ ಒಂದು ಧನಾತ್ಮಕ ಸಂದೇಶವನ್ನು ಕಾದಂಬರಿಯ ಮೂಲಕ ನೀಡಿದ್ದಾರೆ.ಅಮ್ಮನ ಬಗ್ಗೆ ಎಲ್ಲರೂ ಮಾತನಾಡುವುದನ್ನು ಕೇಳಿದಾಗ, ಈಗ ನನಗೆ ತುಂಬಾ ಖುಷಿಯಾಗುತ್ತದೆ. ನನ್ನ ಅಮ್ಮ ಯಾರು? ಅವಳ ಮನಸ್ಸು ಎಂತಹದ್ದು? ಎನ್ನುವ ಅವಳ ಹುಡುಕಾಟವನ್ನು ನಾನು ಅವಳ ಕಥೆ, ಕಾದಂಬರಿಗಳನ್ನು ಓದುವ ಮೂಲಕ ಅರ್ಥಮಾಡಿಕೊಂಡಿರುವೆ. ಬೇರೆಯವರು ಅಮ್ಮನ ಬಗ್ಗೆ ಹೇಳಿದ್ದೆಲ್ಲವೂ ಈಗ ನನಗೆ ನಿಜವೆನಿಸುತ್ತಿದೆ. ಅಮ್ಮನ ವ್ಯಕ್ತಿತ್ವವೂ ಆಕೆಯ ಬರವಣಿಗೆಯಷ್ಟೇ ಶ್ರೇಷ್ಠವಾಗಿತ್ತು ಅನ್ನುವುದು ನಾನು ಕಂಡುಕೊಂಡ ಸತ್ಯ. ಅಮ್ಮನ ಖಾಸಗಿ ಡೈರಿಯನ್ನು ನಾನು ಓದಿರುವೆ. ಅದರಲ್ಲಿ ಯಾವುದೇ ಕಥೆ, ಕಾದಂಬರಿ ಬರೆಯುವ ಮುನ್ನ ಅದಕ್ಕೆ ಸಂಬಂಧಿಸಿದಂತೆ ಮಾಡಿಕೊಂಡಿರುವ ಟಿಪ್ಪಣಿಗಳಿವೆ. ನನಗೆ ಕೂಡ ಏನಾದರೂ ಬರೆಯುವ ಮುನ್ನ ಟಿಪ್ಟಣಿ ಬರೆಯುವ ಸ್ವಭಾವವಿದೆ. ಎಲ್ಲೋ ಒಂದು ಕಡೆ ನನಗೆ ಅರಿವಿಲ್ಲದೇ ಅಮ್ಮನ ಈ ಗುಣ ನನಗೂ ಬಂದಿರಬಹುದು ಅನ್ನುವ ಸಣ್ಣ ಖುಷಿಯಿದೆ.ಕನ್ನಡ ಸಾಹಿತ್ಯ ಲೋಕ ತ್ರಿವೇಣಿಯವರನ್ನು ಕಳೆದುಕೊಂಡು ಸುಮಾರು ಐವತ್ತು ವರ್ಷಗಳಾಗುತ್ತಾ ಬಂದಿದೆ. ಇಂದಿಗೂ ಆಕೆಯ ಕಾದಂಬರಿಗಳು ಜನಪ್ರಿಯವಾಗಿವೆ. ಅಸಂಖ್ಯ ಅಭಿಮಾನಿಗಳು, ಓದುಗರು ಇಂದಿಗೂ ಇದ್ದಾರೆ. ಎಷ್ಟೋ ಜನರ ಜೀವನದ ಮೇಲೆ ಅವಳ ಕ್ರಾಂತಿಕಾರಿ ಕಥಾವಸ್ತುಗಳು ಪರಿಣಾಮ ಬೀರಿವೆ. ಇಂತಹ ಮಹಾನ್ ಲೇಖಕಿ, ‘ಕಾದಂಬರಿಗಾರ್ತಿ ತ್ರಿವೇಣಿಯ ಮಗಳು’ ಎಂದು ಹೇಳಲಿಕ್ಕೆ ನನಗೆ ಅಭಿಮಾನವಿದೆ, ಹೆಮ್ಮೆಯಿದೆ. ಇವತ್ತಿಗೂ ತ್ರಿವೇಣಿ ಮಗಳು ಅಂದಾಕ್ಷಣ ಜನರು ತೋರಿಸುವ ಪ್ರೀತಿ, ಆದರವನ್ನು ನೋಡಿದರೆ, ನಾನು ಅದಕ್ಕೆ ಅರ್ಹಳಲ್ಲ ಅನಿಸಿದರೂ, ಸಹೃದಯರ ಪ್ರೀತಿ ನೋಡಿ ಕಣ್ಣು ಹನಿಗೂಡುತ್ತದೆ.ನನ್ನ ತಾಯಿಯನ್ನು ಆಕೆಯ ಪುಸ್ತಕಗಳಲ್ಲಿ ಕಂಡೆ. ಅವಳ ಪ್ರೀತಿ ನನಗೆ ಸಿಗಲಿಲ್ಲ ಅಂತ ಎಷ್ಟೋ ಬಾರಿ ಕಣ್ಣೀರು ಹಾಕಿದ್ದಿದೆ. ತ್ರಿವೇಣಿ ಕಥೆ ಕಾದಂಬರಿಗಳನ್ನು ಓದಿ ನಾವೂ ಪ್ರಭಾವಿತರಾಗಿ ಬರವಣಿಗೆ ಪ್ರಾರಂಭಿಸಿದೆವು ಅಂತ ಹೇಳುವವರ ಕಣ್ಣುಗಳಲ್ಲಿ ಅಮ್ಮ ನನಗೆ ಕಾಣಿಸುತ್ತಾಳೆ. ಆಕೆಯ ಬದುಕಿನ ಬಗ್ಗೆ ವಿದ್ವಾಂಸರು, ಲೇಖಕಿಯರು ಮಾತನಾಡುವಾಗ ಅಮ್ಮ ನನ್ನ ಜೊತೆಯಿರುವಂತೆ ಭಾಸವಾಗುತ್ತದೆ. ಅವಳ ಪುಸ್ತಕಗಳನ್ನು ವಿಮರ್ಶೆ ಮಾಡಿದಾಗ, ಅಲ್ಲಿ ಬರುವ ಪಾತ್ರಗಳನ್ನು ಓದಿದಾಗ– ತ್ರಿವೇಣಿ ಕೇವಲ ತಾಯಿ ಮಾತ್ರವಲ್ಲದೇ, ನನಗೆ ಒಬ್ಬ ಒಳ್ಳೆಯ ಸ್ನೇಹಿತೆಯಾಗಿ, ಮಾರ್ಗದರ್ಶಿಯಾಗಿ ಇರುತ್ತಿದ್ದಳೇನೋ ಅನ್ನಿಸುತ್ತದೆ.ಅಮ್ಮ ಕೇವಲ 35ನೇ ವರ್ಷಕ್ಕೆ ತೀರಿಕೊಂಡಳು ಅನ್ನುವುದು ನಂಬಲು ಕಷ್ಟವಾದ ಸಂಗತಿ. ಆಕೆ ಹೃದಯಾಘಾತ ಅಥವಾ ಗರ್ಭಸ್ರಾವದ ಬೇನೆಯಿಂದ ತೀರಿಕೊಂಡಳು ಅನ್ನುವುದು ನಿಜವಲ್ಲ. ಅಮ್ಮ ‘ಪಲ್ಮನರಿ ಎಂಬಾಲಿಸಂ’ ಎಂಬ ಕಾರಣದಿಂದ ತೀರಿಕೊಂಡಳು ಅನ್ನುವುದು ಇತ್ತೀಚೆಗೆ ನಾನು ತಿಳಿದುಕೊಂಡ ಸತ್ಯ.  ಆ ದಿನ ನನ್ನ ಅಜ್ಜಿ ಆಸ್ಪತ್ರೆಗೆ ಹೋಗಿ ತಿಂಡಿಕೊಟ್ಟು ಮನೆಗೆ ಮರಳಿದ್ದರು. ನಮ್ಮ ಸಂಬಂಧಿಕರೊಬ್ಬರು ಅವರ ಜೊತೆಗಿದ್ದರು. ಅಮ್ಮ ಕುರ್ಚಿಯಲ್ಲಿ ಹಿಂದಕ್ಕೆ ಒರಗಿ ಕುಳಿತಿದ್ದಳು. ಅವಳನ್ನು ಎಬ್ಬಿಸಲು ಹೆಸರು ಕರೆದಾಗ ಉತ್ತರ ಬರಲಿಲ್ಲವೆಂದು ಅಲುಗಾಡಿಸಿದಾಗ ಅವಳ ತಲೆ ಪಕ್ಕಕ್ಕೆ ವಾಲಿತು.ಅಮ್ಮ ಒಂದೇ ಒಂದು ಶಬ್ದ ಮಾಡದೆ, ನರಳಾಟವಿಲ್ಲದೆ, ಶಾಂತವಾಗಿ ಈ ಪ್ರಪಂಚವನ್ನು ತೊರೆದಿದ್ದಳು. ಅವಳ ದೇಹವನ್ನು ಎಡಬಿಡದೇ ಕಾಡುತ್ತಿದ್ದ ಅಸ್ತಮಾ ಕಾಯಿಲೆಯ ಜೊತೆ ಒಂದೊಂದು ಉಸಿರಿಗೂ ಜೀವನ ಪೂರ್ತಿ ಸೆಣಸಾಡಿ ಅಲ್ಪವಯಸ್ಸಿಗೆ ಸೋತು ಹೋದಳು. ಜುಲೈ 29, 1963ರಂದು ಆಕೆ ತೀರಿಕೊಂಡಳು. ಅಮ್ಮನ ಹೆರಿಗೆ ಮಾಡಿದ್ದ ಡಾಕ್ಟರ್ ಸ್ಟೀವನ್ಸ್‌ರನ್ನು ಮೈಸೂರಿನ ಮಹಾರಾಣಿ ಪ್ರತ್ಯೇಕವಾಗಿ ಬರಹೇಳಿ– ‘ಏನಾಯಿತು? ಹೇಗಾಯಿತು?’ ಎಂದು ವಿಚಾರಿಸಿದ್ದರಂತೆ. ಇಂತಹ ಮಹಾನ್ ಕಾದಂಬರಿಗಾರ್ತಿಯನ್ನು ಕಳೆದುಕೊಂಡ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಹಾರಾಣಿ ಹೇಳಿದರಂತೆ.ನನ್ನ ಅಮ್ಮ, ಮಗಳ ರೂಪದಲ್ಲಿ ನನಗೆ ಮತ್ತೆ ದಕ್ಕಿದ್ದಾಳೆ. ನನ್ನ ಮಗಳ ರೂಪದಲ್ಲಿ ಅಮ್ಮ ನನ್ನ ಜೊತೆ ಇದ್ದಾಳೆ, ಯಾವಾಗಲೂ ಇರುತ್ತಾಳೆ ಅನ್ನುವ ನಂಬಿಕೆ ಇದೆ. ನಂಬಿಕೆಗಿಂತ ದೊಡ್ಡ ಶಕ್ತಿ ಯಾವುದಿದೆ? ಈ ನಂಬಿಕೆಯೇ ನನ್ನ ಬದುಕಿನ ಸ್ಫೂರ್ತಿಯಾಗಿದೆ, ಶಕ್ತಿಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.