ಶನಿವಾರ, ಜನವರಿ 25, 2020
18 °C
ಜಿಎಸ್ಎಸ್ ಶಿಷ್ಯರಿಂದ ಗುರು ಸ್ಮರಣೆ

ಹುಟ್ಟಿದ್ದ ಷ್ಟೇ ಶಿಕಾರಿಪುರ; ಬೆಳೆದಿದ್ದು ಅಖಂಡ ಕರ್ನಾಟಕ

ಪ್ರಜಾವಾಣಿ ವಾರ್ತೆ/ ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?’..., ‘ಹಣತೆ ಹಚ್ಚುತ್ತೇನೆ ನಾನು, ಇರುವ ಕತ್ತಲೆಯನ್ನು ದೂರು ಅಟ್ಟುತ್ತೇನೆಂಬ ಭ್ರಮೆಯಿಂದಲ್ಲ, ನನ್ನ ಮುಖ ನೀನು, ನಿನ್ನ ಮುಖ ನಾನು ನೋಡಬಹುದೆಂಬ ಒಂದೇ ಆಸೆಯಿಂದ’...ಇಂತಹ ಕವನಗಳ ಮೂಲಕ ಕನ್ನಡದ ಮನಸ್ಸು–ಹೃದಯಗಳನ್ನು ಗೆದ್ದ ರಾಷ್ಟ್ರಕವಿ ಜಿಎಸ್‌ಎಸ್‌ (ಜಿ.ಎಸ್‌.ಶಿವರುದ್ರಪ್ಪ) ಹುಟ್ಟಿದ್ದು ಜಿಲ್ಲೆಯ ಶಿಕಾರಿಪುರದಲ್ಲಿ. ಹುಟ್ಟಿದ್ದು ಶಿಕಾರಿಪುರದಲ್ಲಿ ಎನ್ನುವುದು ಬಿಟ್ಟರೆ, ಅವರಿಗೆ ಶಿವಮೊಗ್ಗ ಜಿಲ್ಲೆ ಜತೆ ಬೇರೆ ರೀತಿಯ ನಂಟುಗಳಿಲ್ಲ.ಅವರ ತಂದೆ ಶಾಂತವೀರಯ್ಯ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರಿಂದ ವರ್ಗಾವಣೆ ಅನಿವಾರ್ಯವಾಗಿತ್ತು. ಹೀಗೆ ವರ್ಗಾವಣೆಯಾಗಿ ಶಿಕಾರಿಪುರಕ್ಕೆ ಬಂದಾಗ ಶಿವರುದ್ರಪ್ಪ ಜನಿಸಿದ್ದರು.  ಅವಾಗ ಅವಿಭಜಿತ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ, ಕೊಟ್ಟಿಹಾಳ್‌ನಲ್ಲಿ ಕೆಲವರ್ಷ ಪ್ರಾಥಮಿಕ ಶಿಕ್ಷಣ ಮುಗಿಸಿದರು. ತದನಂತರದ ಶಿವಮೊಗ್ಗದ ನಂಟು ಬೆಳೆದಿದ್ದು ಮತ್ತೆ ಅವರು ಉಪನ್ಯಾಸಕರಾಗಿ ಈಗಿನ ಸಹ್ಯಾದ್ರಿ ಕಾಲೇಜಿಗೆ ಬಂದಾಗಲೇ. ಶಿಕಾರಿಪುರದಲ್ಲಿ ಹುಟ್ಟಿದ ಕಾರಣಕ್ಕೆ ಶಿಕಾರಿಪುರದ ನಗರದ ಹೃದಯಭಾಗದ ರಸ್ತೆಗೆ ಈಚೆಗೆ ಜಿ.ಎಸ್‌.ಶಿವರುದ್ರಪ್ಪ ರಸ್ತೆ ಎಂದು ನಾಮಕರಣ ಮಾಡಲಾಗಿದೆ.ಆಗಿನ ಇಂಟರ್‌ಮೀಡಿಯಟ್‌ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಬಂದ (1953–54) ಜಿ.ಎಸ್‌.ಶಿವರುದ್ರಪ್ಪ ಅವರನ್ನು ಅವರ ವಿದ್ಯಾರ್ಥಿ ಹಾಗೂ 80ನೇ ಮಡಿಕೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ನಾ.ಡಿಸೋಜ ಹೆಮ್ಮೆಯಿಂದ ಸ್ಮರಿಸುತ್ತಾರೆ.‘ಸರಳವಾದ ಬಿಳಿ ಉಡುಪು, ದುಂಡನೆಯ ಮುಖ, ಮೆದುವಾದ ಮಾತು. ತುಂಬಾ ಆಕರ್ಷಕವಾದ ರೀತಿಯಲ್ಲಿ ಅವರು ಪಾಠ ಮಾಡುತ್ತಿದ್ದರು. ಮಾಸ್ತಿಯವರ ‘ಯಶೋಧರಾ’ ನಾಟಕ ಅಂದು ನಮಗೆ ಪಠ್ಯಪುಸ್ತಕವಾಗಿತ್ತು. ಅದನ್ನು ಕಲಿಸುವಾಗಲಂತೂ ಜಿಎಸ್‌ಎಸ್‌ ಅವರು ತನ್ಮಯರಾಗುತ್ತಿದ್ದರು. ಬೇಂದ್ರೆ, ಕುವೆಂಪು ಮತ್ತಿತರರ ಕವಿಗಳ ಕವಿತೆಗಳ ಸಾಲುಗಳನ್ನು ಉದಾಹರಿಸುತ್ತ, ಬುದ್ಧ, ಅವನ ಹೆಂಡತಿ ಯಶೋಧರೆ, ಶಿಷ್ಯ ಆನಂದ–ಇವರೆಲ್ಲರ ವ್ಯಕ್ತಿತ್ವ ನಮ್ಮ ಮುಂದೆ ಬಂದು ನಿಲ್ಲುವಂತೆ ಮಾಡುತ್ತಿದ್ದರು. ಅವರ ಪಾಠಕ್ಕೆ ನಾನೆಷ್ಟು ಮನಸೋತಿದ್ದೆನೆಂದರೆ, ಮೊದಲ ಪರೀಕ್ಷೆಯಲ್ಲಿ ನಾನು ಆ ನಾಟಕದ ಬಗ್ಗೆ ಬರೆದ ಬರಹದ ಪಕ್ಕದಲ್ಲಿ ಜಿಎಸ್‌ಎಸ್‌ ನುಡಿ ಎಂದು ಬರೆದಿದ್ದೆನು. ತರಗತಿಯಲ್ಲಿ ಅದನ್ನು ಮೆಚ್ಚಿ ನಾಲ್ಕು ಮಾತುಗಳನ್ನು ಹೇಳಿದ ನೆನಪು’ ಎಂದು ಡಿಸೋಜ ನೆನಪಿನಂಗಳ ಬಿಚ್ಚಿಡುತ್ತಾರೆ.ಜಿಎಸ್‌ಎಸ್‌ ಆಗಷ್ಟೇ ಬಿ.ಎ. ಆನರ್ಸ್‌ ಮುಗಿಸಿ ಮೈಸೂರು ಮಹಾರಾಜ ಕಾಲೇಜಿಗೆ ಉಪನ್ಯಾಸಕರಾಗಿ ಬಂದಾಗ (1952–1953) ಅವರ ಶಿಷ್ಯರಾಗಿದ್ದವರು ನಗರದ ಕಮಲಾ ನೆಹರೂ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಪಂಚಾಕ್ಷರಿ ಅವರು. ಎಳೆಯ ವಯಸ್ಸಿನ ಉಪನ್ಯಾಸಕ ಜಿಎಸ್‌ಎಸ್‌ರನ್ನು ಕಂಡಿದ್ದು ತಮ್ಮದೇ ಮಾತಿನಲ್ಲಿ ಕಟ್ಟಿಕೊಡುವುದು ಹೀಗೆ.‘ಸ್ವಾರಸ್ಯಕರವಾಗಿ ಪಾಠ ಮಾಡುತ್ತಿದ್ದರು. ಅವರದೇ ವಿಶಿಷ್ಟ ಶೈಲಿ. ಪಠ್ಯದ ಆಚೆಗೂ ಹರಿಯುವ ಪಾಠ. ಆ ಎಳೆಯ ವಯಸ್ಸಿನಲ್ಲಿ ನಮಗೆಲ್ಲಾ ಮಾದರಿಯಾಗಿದ್ದರು’ ಎಂದು ಸ್ಮರಿಸುತ್ತಾರೆ.‘ಅವಾಗಷ್ಟೇ ಅವರ ಮೊದಲ ಕವನ ಸಂಕಲನ ‘ಸಾಮಗಾನ’ ಬಿಡುಗಡೆಯಾಗಿತ್ತು. ಇದಕ್ಕೆ ಕುವೆಂಪು ಮುನ್ನುಡಿ ಬರೆದಿದ್ದರು. ಗಾಯಕಿ ಎಚ್‌.ಆರ್‌.ಲೀಲಾವತಿ ನನ್ನ ಕ್ಲಾಸ್‌ಮೇಟ್‌. ಜಿಎಸ್‌ಎಸ್‌ ಅವರ ಆರಂಭದ ಕವಿತೆಗಳನ್ನು ಹಾಡುವ ಮೂಲಕ ಜಿಎಸ್‌ಎಸ್‌ ಅವರನ್ನು ಜನಪ್ರಿಯಗೊಳಿಸಿದ್ದರು. ಅಂದು ಕಾಲೇಜಿನಿಂದ ಪ್ರಕಟವಾಗುತ್ತಿದ್ದ ‘ಪ್ರಬುದ್ಧ ಕರ್ನಾಟಕ’ದಲ್ಲಿ ಜಿಎಸ್‌ಎಸ್‌ ಅವರ ಬಹಳಷ್ಟು ಕವಿತೆಗಳು ಪ್ರಕಟವಾಗುತ್ತಿದ್ದವು. ಜಿಎಸ್‌ಎಸ್‌ ನಮಗೆ ಪಾಠ ಮಾಡಬೇಕಾದರೆ ಅವರಿನ್ನೂ ಎಂ.ಎ. ಓದುತ್ತಿದ್ದರು. ಆವಾಗ ಬಿ.ಎ. ಆನರ್ಸ್ ಮುಗಿಸಿದವರಿಗೆ ಈ ರೀತಿ

ಅವಕಾಶ ಇತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಸೋಮವಾರಕ್ಕೆ ಸರಿಯಾಗಿ 82ನೇ ವರ್ಷಕ್ಕೆ ಕಾಲಿಟ್ಟ ಪ್ರೊ.ಪಂಚಾಕ್ಷರಿ.

ಪ್ರತಿಕ್ರಿಯಿಸಿ (+)