ಶನಿವಾರ, ಮೇ 8, 2021
18 °C
ವಿಶ್ವ ರಕ್ತದಾನಿಗಳ ದಿನ ಇಂದು

ಹುಬ್ಬಳ್ಳಿಗೂ ಕಾಡುತ್ತಿದೆ ರಕ್ತದ ಕೊರತೆ...

ರಾಮಕೃಷ್ಣ ಸಿದ್ರಪಾಲ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಒಂದು ಹನಿ ರಕ್ತ ಉಳಿಸೀತು ಜೀವ' ಎನ್ನುವ ಮಾತು ಸಂಕಷ್ಟದಲ್ಲಿರುವ ರೋಗಿಗಳ ಮಟ್ಟಿಗೆ ಬಹಳ ಅಮೂಲ್ಯವಾದದ್ದು. `ರಕ್ತದಾನ ಮಾಡಿ ಜೀವ ಉಳಿಸಿ' ಎಂದು ವಿಶ್ವದೆಲ್ಲಡೆಯಿಂದ ಸ್ವಯಂ ಪ್ರೇರಿತವಾಗಿಯೇ ಧ್ವನಿಯೊಂದು ಕೇಳಿ ಬರುತ್ತಲೇ ಇರುತ್ತದೆ.ಕಾರಣವಿಷ್ಟೆ, ಇಂದು ವಿಶ್ವ ರಕ್ತದಾನಿಗಳ ದಿನ. ಪ್ರತಿ ವರ್ಷ ಜೂನ್ 14ನ್ನು ರಕ್ತದಾನಿಗಳ ದಿನವಾಗಿ ಆಚರಿಸಲಾಗುತ್ತಿದೆ. ಬಹಳಷ್ಟು ಸಂದರ್ಭಗಳಲ್ಲಿ ಅಗತ್ಯವಾದ ರಕ್ತ ರೋಗಿಗಳಿಗೆ ಸಿಗುವುದಿಲ್ಲ.ಅಪಘಾತಗಳಾದಾಗ ತುರ್ತು ರಕ್ತ ಅಗತ್ಯವಿದ್ದಾಗ ರೋಗಿಯ ರಕ್ತಕ್ಕೆ ಹೊಂದಾಣಿಕೆಯಾಗುವ ರಕ್ತವನ್ನು ನೀಡಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಪರದಾಡುವ ಬದಲು ಬ್ಲಡ್‌ಬ್ಯಾಂಕ್‌ಗಳಿಗೆ ತೆರಳಿದರೆ ಸಾಕು ಅಗತ್ಯದ ರಕ್ತ ಲಭ್ಯ. ಆದರೂ ಎಲ್ಲ ಸಂದರ್ಭಗಳಲ್ಲಿಯೂ ರೋಗಿಗಳಿಗೆ ಅಗತ್ಯದ ರಕ್ತವೇನೂ ಸಿಗುವುದಿಲ್ಲ. ಅದಕ್ಕಾಗಿ ಸಾಕಷ್ಟು ಪರದಾಡಲೇಬೇಕಾಗುತ್ತದೆ.ಹುಬ್ಬಳ್ಳಿ-ಧಾರವಾಡದ ಅವಳಿ ನಗರದಲ್ಲಿ  6-8 ಖಾಸಗಿ ಬ್ಲಡ್ ಬ್ಯಾಂಕ್‌ಗಳಿವೆ.  ಅಗತ್ಯದ ಬ್ಲಡ್‌ಬ್ಯಾಂಕ್ ಜನರು ಧಾವಿಸುವುದು ಕಿಮ್ಸನತ್ತ ಇಲ್ಲವೇ ಸತ್ತೂರು ಬಳಿಯ ಎಸ್.ಡಿ.ಎಂ.ವೈದ್ಯಕೀಯ ಕಾಲೇಜಿನತ್ತ. ಇಲ್ಲವೇ ಧಾರವಾಡದ ರೋಟರಿ, ಹುಬ್ಬಳ್ಳಿ ಲಯನ್ಸ್ ಬ್ಲಡ್ ಬ್ಯಾಂಕ್ ಹಾಗೂ ನವನಗರದ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಬ್ಯಾಂಕ್‌ಗಳಿವೆ.  ಕಿಮ್ಸನ ಬ್ಲಡ್‌ಬ್ಯಾಂಕ್ ಅಧಿಕಾರಿಗಳ ಪ್ರಕಾರ ದಿನದ 24 ಗಂಟೆಯೂ ತಮ್ಮಲ್ಲಿ ರೋಗಿಗಳಿಗೆ ಅಗತ್ಯದ ರಕ್ತ ಲಭ್ಯ, ಅಪರೂಪಕ್ಕೆ ಒಮ್ಮಮ್ಮೆ ಒಂದೇ ಗುಂಪಿನ ರಕ್ತ ಬಹಳಷ್ಟು ಅಗತ್ಯವಿದ್ದಾಗ ಇಲ್ಲವೇ `ಒ' ನೆಗೆಟಿವ್‌ನಂತಹ ಅಪರೂಪದ ರಕ್ತದ ಗುಂಪು ಕೊರತೆ ಬೀಳಬಹುದು ಎನ್ನುತ್ತಾರೆ.ಬಹಳಷ್ಟು ಜನರು ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಪ್ರಮುಖ ರಾಜಕಾರಣಿಗಳ ಜನ್ಮದಿನ ಮತ್ತಿತರ ಪ್ರಮುಖ ಸಂದರ್ಭಗಳಲ್ಲಿ  ಸ್ವಯಂ ಪ್ರೇರಿತವಾಗಿ ಬಂದು ರಕ್ತವನ್ನು ದಾನ ಮಾಡುತ್ತಾರೆ. ಇಲ್ಲವೇ ರಕ್ತದಾನ ಶಿಬಿರಗಳಾದಾಗ ಬಂದು ರಕ್ತವನ್ನು ನೀಡುತ್ತಾರೆ. ಆದರೆ ಪ್ರಮಾಣ ಕಡಿಮೆ ಎನ್ನುತ್ತಾರೆ.ಇನ್ನುಳಿದಂತೆ ಬಹಳಷ್ಟು ಖಾಸಗಿ ಆಸ್ಪತ್ರೆಗಳು, ಲ್ಯಾಬ್‌ಗಳು ಬ್ಲಡ್ ಬ್ಯಾಂಕ್ ಸೌಲಭ್ಯವನ್ನು ನಗರದಲ್ಲಿ ಹೊಂದಿದ್ದು ಅಲ್ಲಿಯೂ ಇಂತಹ ಸಂದರ್ಭಗಳಲ್ಲಿ ಜನರು ರಕ್ತದಾನ ಮಾಡುತ್ತಾರೆ.ಹುಬ್ಬಳ್ಳಿಯಲ್ಲಿ ದಿನವೊಂದಕ್ಕೆ 100 ಬಾಟಲ್ ರಕ್ತ ಕನಿಷ್ಠ ಅಗತ್ಯವಿರುತ್ತದೆ. ಅದರೆ ಅಷ್ಟು ಪ್ರಮಾಣದಲ್ಲಿ ಅಗತ್ಯದ ರಕ್ತ ಸಿಗುತ್ತಿಲ್ಲ ಎನ್ನುವ ಮಾತು ಹಲವು ಬ್ಲಡ್‌ಬ್ಯಾಂಕ್‌ಗಳಿಂದ ಕೇಳಿಬಂದಿದೆ.ರಕ್ತದಾನಕ್ಕೆ ಅರಿವಿನ ಕೊರತೆ

`ಉತ್ತರ ಕರ್ನಾಟಕದಲ್ಲಿ ಜನರಲ್ಲಿ ಶಿಕ್ಷಣ ಕೊರತೆಯಿದೆ. ಹೀಗಾಗಿ ರಕ್ತವನ್ನು ದಾನ ಮಾಡಿದರೆ ಎಲ್ಲಿ ಅಶಕ್ತರಾಗುತ್ತೇವೆಯೋ, ರೋಗ ಬಂದುಬಿಡುತ್ತದೆಯೋ ಎನ್ನುವ ಆತಂಕ ಜನಸಾಮಾನ್ಯರಲ್ಲಿದೆ.ಹೀಗಾಗಿ ರಕ್ತದಾನ ಮಾಡಲು ಜನರು ಹಿಂದೇಟು ಹಾಕುತ್ತಾರೆ. ವಿವಾಹ ವಾರ್ಷಿಕೋತ್ಸವ, ಹುಟ್ಟುಹಬ್ಬ, ರಕ್ತದಾನ ಶಿಬಿರ ಮತ್ತಿತರ ಸಂದರ್ಭಗಳಲ್ಲಿ ಮಾತ್ರವೇ ರಕ್ತದಾನ ಮಾಡುತ್ತಾರೆ. ಹೀಗಾಗಿ ನಮಗಂತೂ ಶೇ 30ರಷ್ಟು ರಕ್ತದ ಕೊರತೆ ಬೀಳುತ್ತದೆ. ಬಹಳಷ್ಟು ಸಂದರ್ಭದಲ್ಲಿ ನಾವು ರೋಗಿಗಳ ಸಂಬಂಧಿಕರಿಗೆ ಬೇಕಾಗುವ ರಕ್ತದ ಗುಂಪಿನ ವ್ಯಕ್ತಿಯನ್ನು ಕರೆತನ್ನಿ ಎಂದು ಕೂಡ ಹೇಳುತ್ತೇವೆ' ಎನ್ನುತ್ತಾರೆ ಹೊಸೂರು ರಸ್ತೆಯ ಗೋಕುಲ ಕ್ರಾಸ್‌ನಲ್ಲಿರುವ ಜೀವಣ್ಣವರ ಬ್ಲಡ್‌ಬ್ಯಾಂಕ್‌ನ ಡಾ.ಜೀವಣ್ಣವರ.ವಿಶೇಷವಾಗಿ ಜನರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಬೇಕು. ರಕ್ತದಾನದಿಂದ ಯಾವುದೇ ರೀತಿಯಲ್ಲಿಯೂ ವ್ಯಕ್ತಿಗೆ ಹಾನಿಯಾಗುವುದಿಲ್ಲ, ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು `ಪ್ರಜಾವಾಣಿ'ಗೆ ತಿಳಿಸಿದರು.ನಗರದ ಯುರೇಕಾ ಟವರ್‌ನಲ್ಲಿರುವ ಎಂ.ಆರ್.ಡಯಾಗ್ನೊಸ್ಟಿಕ್ ರಿಸರ್ಚ್ ಸೆಂಟರ್‌ನವರ ಪ್ರಕಾರ ಹುಬ್ಬಳ್ಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ರಕ್ತದಾನಿಗಳಿಲ್ಲ. ಹೀಗಾಗಿ ಬಹಳಷ್ಟು ಸಂದರ್ಭಗಳಲ್ಲಿ ರಕ್ತದಾನಿಗಳ ಕೊರತೆ ಎದುರಾಗುತ್ತದೆ ಎನ್ನುತ್ತಾರೆ.ಆದರೆ ಲಯನ್ಸ್ ಬ್ಲಡ್ ಬ್ಯಾಂಕ್‌ನ ಡಾ.ಮುರಳೀಧರ ರಾವ್ ಅವರ ಪ್ರಕಾರ ಹುಬ್ಬಳ್ಳಿಯಲ್ಲಿ ಮೊದಲಿಗೆ ಹೋಲಿಸಿದರೆ ರಕ್ತದಾನಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎನ್ನುತ್ತಾರೆ. ಜನರಲ್ಲಿ ಸ್ವಲ್ಪ ಮಟ್ಟಿಗೆ ರಕ್ತದಾನದ ಬಗ್ಗೆ ಜಾಗೃತಿ ಮೂಡಿದೆ.ಹೀಗಾಗಿ ಅಷ್ಟಾಗಿ ರಕ್ತದಾನಿಗಳ ಕೊರತೆ ನಮಗೆ ಕಾಡುವುದಿಲ್ಲ. ಆದರೂ ಇನ್ನಷ್ಟು ಜನಜಾಗೃತಿ ಆಗಬೇಕು ಎಂದು ಅವರು ಹೇಳುತ್ತಾರೆ.*ರಕ್ತದಾನ ಮಾಡಿ, ಆರೋಗ್ಯವಂತರಾಗಿ

*ರಕ್ತದಾನ ಮಾಡುವ ಮುನ್ನ ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ 

*ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆಯಂತೆ ವರ್ಷಕ್ಕೆ 4 ಸಲ ಮಾತ್ರ ರಕ್ತದಾನ ಮಾಡಬಹುದು

*ರಕ್ತದಾನಕ್ಕೆ ವಯೋಮಿತಿ 18ರಿಂದ 55 ವರ್ಷ

*ರಕ್ತದಾನ ಮಾಡುವುದರಿಂದ ವ್ಯಕ್ತಿಗೆ ಯಾವುದೇ ಅಡ್ಡ ಪರಿಣಾಮವೂ ಇಲ್ಲ

*ವೈದ್ಯರ ಪ್ರಕಾರ ರಕ್ತದಾನದಿಂದ ಆರೋಗ್ಯಕ್ಕೆ ಲಾಭ. ಹೊಸ ರಕ್ತದ ಉತ್ಪತ್ತಿಗೆ ಸಹಕಾರಿ. ಅಶುದ್ಧ ರಕ್ತವಿದ್ದರೆ  ದೇಹದಿಂದ ಹೊರಹೋಗುತ್ತದೆ

*ಆಗಾಗ ರಕ್ತದಾನ ಮಾಡುವುದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು, ದೇಹದ ಫಿಟ್‌ನೆಸ್ ಕಾಯ್ದುಕೊಳ್ಳಲು ಸಹಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.