ಭಾನುವಾರ, ಜೂನ್ 13, 2021
22 °C

ಹೂಳು, ಒತ್ತುವರಿಗೆ ಕಮಲಾಪುರ ಕೆರೆ ಬಲಿ

ಪ್ರಜಾವಾಣಿ ವಾರ್ತೆ/ ಅನಂತ ಜೋಶಿ Updated:

ಅಕ್ಷರ ಗಾತ್ರ : | |

ಕಮಲಾಪುರ (ಹೊಸಪೇಟೆ): ವಿಜಯ­ನಗರ ಅರಸರ ಕಾಲದಲ್ಲಿ ನಿರ್ಮಾಣ­ವಾದ ಐತಿಹಾಸಿಕ ಕಮಲಾಪುರ ಕೆರೆಗೆ ಒತ್ತುವರಿ ಮತ್ತು ಹೂಳು ಎಂಬ ಭೂತಗಳು ಬೆಂಬಿಡದೆ ಕಾಡುತ್ತಿವೆ.ಒಟ್ಟು 476 ಎಕರೆ ಪ್ರದೇಶದಲ್ಲಿ ಹರಿಡಿಕೊಂಡಿದ್ದ ಈ ಕೆರೆ ಒಂದು ಕಾಲದಲ್ಲಿ ವಿಜಯನಗರ ಅರಸರ ರಾಜಧಾನಿ ಹಂಪಿ ಜನರ ಜೀವನಾಡಿ­ಯಾಗಿತ್ತು. ಅಂದಿನಿಂದಲೂ ಈ ಪ್ರದೇಶದ 1200ಗೂ ಎಕರೆಗೂ ಅಧಿಕ ಪ್ರದೇಶಕ್ಕೆ ನೀರಾವರಿ ಹಾಗೂ ಮೀನುಗಾರಿಕೆ ಅನುಕೂಲ ಕಲ್ಪಿಸಿತ್ತು. ಆದರೆ, ಕೆರೆಯಲ್ಲಿ ಹೂಳು ಹಾಗೂ ಒತ್ತುವರಿಯಿಂದಾಗಿ ಕೆರೆಯಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ.ಈ ಕುರಿತು ಸಣ್ಣ ನೀರಾವರಿ ಇಲಾಖೆ ನಾಲ್ಕು ವರ್ಷಗಳ ಹಿಂದೆಯೆ ವರದಿ ಸಲ್ಲಿಸಿದೆ. ಅದರೆ, ಸರ್ಕಾರ ಅಥವಾ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿರುವ ಕೃಷಿ ಚಟುವಟಿಕೆಗಳಿಂದಾಗಿ ವೇಗವಾಗಿ ಹೂಳು ತುಂಬಲಾ­ರಂಭಿಸಿದೆ.  ಆರಂಭದಲ್ಲಿ ಒಟ್ಟು 28 ಅಡಿ ಆಳವಿದ್ದ ಈ ಕೆರೆ 1950ರ ಮಾಹಿತಿಯಂತೆ 6 ಅಡಿ, 1991ರಲ್ಲಿ 12 ಮತ್ತು ಸದ್ಯ ಅಂದಾಜು 15 ಅಡಿಯಷ್ಟು ಹೂಳು ತುಂಬಿಕೊಂಡಿದೆ ಎಂದು ಅಂದಾಜಿಸಲಾಗಿದೆ.  ಮಳೆಯ ನೀರು ಸೇರಿದಂತೆ ವರ್ಷದ 11 ತಿಂಗಳು ನೀರು ಕೊಡುವ ರಾಯ, ಬಸವಣ್ಣ ಹೆಸರಿನ ವಿಜಯನಗರ ಕಾಲದ ಕಾಲುವೆಗಳು ಸೇರಿದಂತೆ ತುಂಗಭದ್ರಾ ಜಲಾಶಯದ ಪವರ್‌ ಕೆನಾಲ್‌ ತೂಬಿನಿಂದಲೂ ಕೆರೆ ನೀರನ್ನು ಹರಿಸಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ವರ್ಷದುದ್ದಕ್ಕೂ ಜನ ಜಾನುವಾರು ಸೇರಿದಂತೆ ಎರಡು ಬೆಳೆ ಬೆಳೆಯಲು ರೈತರಿಗೆ ಈ ಕೆರೆಯೇ ಆಧಾರವಾಗಿದೆ. 

ಅಲ್ಲದೆ ಹಿಂದೆ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಮಾದರಿ ಯೋಜನೆಯೊಂದನ್ನು ರೂಪಿಸಿತ್ತು. ಆದರೆ ಆ ಯೋಜನೆ ಈವರೆಗೂ ಕಡತದಲ್ಲಿ ದೂಳು ತಿನ್ನುತ್ತಿದೆ.  ಕಮಲಾಪುರ ರೈತ ಸಂಘದ ಅಧ್ಯಕ್ಷ­ರಾಗಿದ್ದ ದಿವಂಗತ ಸೀತಾರಾಮಸಿಂಗ್ ಅವರು ಕೆರೆ ಒತ್ತುವರಿ ತೆರವುಗೊಳಿಸುವಂತೆ 1991ರಲ್ಲಿಯೆ ಹೋರಾಟಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಆದರೂ ಯಾವುದೇ ಪ್ರಯೋಜನವಿಲ್ಲ.ತಾಲ್ಲೂಕಿನಲ್ಲಿರುವ 14 ಸಣ್ಣ ಕೆರೆಗಳು ಸೇರಿದಂತೆ ಸಣ್ಣ ನೀರಾವರಿ ಇಲಾಖೆ 5 ದೊಡ್ಡ ಕೆರೆಗಳು ಮಳೆಗಾಲದಲ್ಲಿಯ ನೀರು ನಿಲ್ಲದಂತಹ ಪರಿಸ್ಥಿತಿಗೆ ಬಂದು ತಲುಪಿರುವಾಗ ಅಂತರ್ಜಲ ವೃದ್ಧಿಯ ಮೂಲವೂ ದಿನೇ ದಿನೇ ಕ್ಷೀಣಿಸುತ್ತಿದೆ.ಕೃಷಿ, ಕುಡಿಯುವ ನೀರು, ಪಕ್ಷಿ ಸಂಕುಲ, ಜನ ಜಾನುವಾರುಗಳ ಆಶ್ರಯ ತಾಣವಾದ ಕಮಲಾಪುರ ಕೆರೆ ರಕ್ಷಿಸುವ ನಿಟ್ಟಿನಲ್ಲಿ ಹಿಂದೆಯೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲದೆ ಸರ್ಕಾರದ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎನ್.ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.