ಶನಿವಾರ, ಮೇ 21, 2022
25 °C

`ಹೈಕೋರ್ಟ್: ನಾಯ್ಕರ್ ವಿಶೇಷ ಪಾತ್ರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಧಾರವಾಡ ಹೈಕೋರ್ಟ್ ಪೀಠ ಸ್ಥಾಪನೆಯಾಗುವಲ್ಲಿ ದಿವಂಗತ ಡಿ.ಕೆ.ನಾಯ್ಕರ್ ಅವರು ಪ್ರಮುಖ ಪಾತ್ರ ವಹಿಸಿದ್ದರು' ಎಂದು ರಾಜ್ಯ ಮೂಲಸೌಕರ್ಯ ಹಾಗೂ ವಾರ್ತಾ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದರು.ಕಾಳಿದಾಸ ವಿದ್ಯಾವರ್ಧಕ ಸಂಘವು ದಿ.ಡಿ.ಕೆ.ನಾಯ್ಕರ್ ಅವರ 87 ಜನ್ಮದಿನದ ಅಂಗವಾಗಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಸಮಾಜದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ನೂತನವಾಗಿ ಆಯ್ಕೆಯಾದ ಜಿಲ್ಲೆಯ ಶಾಸಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ನಾಯ್ಕರ್ ದೇವರಾಜ ಅರಸು ಅವರ ಜೊತೆಗೆ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ದರು. ಈ ಭಾಗಕ್ಕೆ ಮಲಪ್ರಭಾ ಕುಡಿಯುವ ನೀರು ಬರುವಲ್ಲಿ ನಾಯ್ಕರ್ ಅವರದ್ದು ವಿಶೇಷವಾದ ಪಾತ್ರವಿದೆ. ಆದ್ದರಿಂದ ಶೀಘ್ರದಲ್ಲಿಯೇ ಅವರ ಮೂರ್ತಿಯೊಂದು ಧಾರವಾಡ ನಗರದಲ್ಲಿ ಪ್ರತಿಷ್ಠಾಪನೆಯಾಗಲಿದೆ' ಎಂದರು.ಮಾಜಿ ಸಚಿವ ಎಸ್.ಆರ್.ಮೋರೆ, `ನಾಯ್ಕರ್ ಅವರು ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದರು. ಇಂದಿನ ಹದಗೆಟ್ಟ ರಾಜಕಾರಣವನ್ನು ನಾಯ್ಕರ್ ಅವರು ನೋಡಿದ್ದರೆ ಖಂಡಿತವಾಗಿಯೂ ಒಪ್ಪುತ್ತಿರಲಿಲ್ಲ. ಇಂಥ ರಾಜಕಾರಣದಿಂದ ನಾಯ್ಕರ್ ದೂರವಿದ್ದರು. ಅವರಿಂದಲೇ ನಾನು ರಾಜಕಾರಣಕ್ಕೆ ಬಂದೆ. ಅವರು ಮಂತ್ರಿಗಳಾಗಿದ್ದಾಗ ಉತ್ತರ ಕರ್ನಾಟಕಕ್ಕೆ ಏನನ್ನಾದರೂ ಮಾಡಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಗ್ಲಾಸ್‌ಹೌಸ್ ನಿರ್ಮಾಣ ಮಾಡಿದರು.ಶೋಷಿತ ವರ್ಗದ ಜನರಿಗೋಸ್ಕರ ವಿಶೇಷವಾದ ಕಾಳಜಿ ಹೊಂದಿದ ರಾಜಕಾರಣಿಯಾಗಿದ್ದರು' ಎಂದು ಹೇಳಿದರು.

`ಉತ್ತಮ ವ್ಯಕ್ತಿತ್ವ ಹಾಗೂ ಸಜ್ಜನಿಕೆಯ ಗುಣವನ್ನು ಹೊಂದಿದ ನಾಯ್ಕರ್ ಅವರ ಕುರಿತಾದ ಒಂದು ಪುಸ್ತಕ ಹೊರಬರಬೇಕು ಆ ಪುಸ್ತಕ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಮನೆಯಲ್ಲಿ ಇರುವಂತಾಗಬೇಕು' ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಸಲಹೆ ನೀಡಿದರು.ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಾಯ್ಕರ್ ಪತ್ನಿ ಯಲ್ಲಮ್ಮ ನಾಯ್ಕರ್, ಶಾಸಕರಾದ ವಿನಯ ಕುಲಕರ್ಣಿ, ಸಿ.ಎಸ್.ಶಿವಳ್ಳಿ, ಪಾಲಿಕೆ ಸದಸ್ಯ ದೀಪಕ ಚಿಂಚೋರೆ, ಎಸ್.ಎಂ.ಚಿಕ್ಕಣ್ಣವರ, ಮಾಜಿ ಶಾಸಕರಾದ ಕೆ.ಎನ್.ಗಡ್ಡಿ ಹಾಗೂ ಅಜ್ಜಂಪೀರ್ ಖಾದ್ರಿ, ಶಿವಾ ನಾಯ್ಕ, ಮಾಜಿ ಮೇಯರ್ ದಾನಪ್ಪ ಕಬ್ಬೇರ, ಕೆ.ಬಿ.ಕಲ್ಲನ್ನವರ, ಡಾ.ಮಹೇಶ ನಾಲವಾಡ, ಎಸ್.ಎನ್.ಪಾಟೀಲ ಮತ್ತಿತರರು ಇದ್ದರು. ನಾಗರಾಜ ಗುರಿಕಾರ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.