ಮಂಗಳವಾರ, ಮೇ 11, 2021
24 °C

ಹೊಟ್ಟೆ ತುಂಬಿಸಲು ಹಾಳೆ ತಟ್ಟೆ

ಗೀತಸದಾ ಮೋಂತಿಮಾರು Updated:

ಅಕ್ಷರ ಗಾತ್ರ : | |

ಮದುವೆ-ಮುಂಜಿಗಳಲ್ಲಿ, ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಬಳಸುತ್ತಿದ್ದರೂ `ಹಾಳೆ ತಟ್ಟೆ' ಹೆಚ್ಚಿನವರಿಗೆ, ಅದರಲ್ಲೂ ಮುಖ್ಯವಾಗಿ ಪಟ್ಟಣಿಗರಿಗೆ ತಿಳಿಯದ ವಸ್ತು. ಊಟ ಉಪಹಾರಗಳಲ್ಲಿ ಪ್ಲಾಸ್ಟಿಕ್, ಗಾಜು ಮತ್ತು ಸ್ಟೀಲ್ ತಟ್ಟೆಗಳಿಂದ ಬೇಸತ್ತವರು ಇವುಗಳನ್ನು ತೊಳೆಯುವ ಉಸಾಬರಿ ಬೇಡ ಎನ್ನುವವರಿಗೆ ವರದಾನ ಈ `ಹಾಳೆ ತಟ್ಟೆ'.ಅಡಿಕೆ ಹಾಳೆಯಿಂದ ತಯಾರಿಸುವ ತಟ್ಟೆ ಇದು. ಬೇಸಾಯಗಾರರು ಬಿಸಾಡುವ ಅಡಿಕೆಯ ಬಿಳಿ ಹಾಳೆಗೆ ರೂಪುಕೊಟ್ಟು ಇದನ್ನು ತಯಾರಿಸಲಾಗುವುದು. ಹೀಗೆ ನಿರುಪಯುಕ್ತ ವಸ್ತುವಿನಿಂದ ಹೆಚ್ಚಿನ ಲಾಭವನ್ನೂ ಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೊಯ್ಲ ಗ್ರಾಮದ ಕೃಷಿಕ ಎರ್ಮಡ್ಕ ಗಣೇಶ. ಸುಮಾರು ಆರು ವರ್ಷಗಳಿಂದ ಇದೇ ಉದ್ಯೋಗದಲ್ಲಿ ತೊಡಗಿ ಉತ್ತಮ ಆದಾಯ ಗಳಿಸುತ್ತಿದ್ದಾರೆ ಇವರು.ವಿದ್ಯಾಭ್ಯಾಸ ಮೊಟಕುಗೊಳಿಸಿ ಕುಟುಂಬದ ಜವಾಬ್ದಾರಿ ಹೊರಬೇಕಾಗಿ ಬಂದಾಗ ಸ್ವಾವಲಂಬಿಯಾಗಿ ಜೀವನಕ್ಕಾಗಿ ಕಂಡುಕೊಂಡ ಉದ್ಯೋಗ ಇದು. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಪುತ್ತೂರಿನ ಯೋಜನಾ ಕಚೇರಿಯಲ್ಲಿ ಆಯೋಜಿಸಿದ `ಉದ್ಯಮ ಶೀಲತಾ ತರಬೇತಿ' ಕಾರ್ಯಾಗಾರದಲ್ಲಿ ಭಾಗವಹಿಸಿ ತರಬೇತಿ ಪಡೆದರು. ನಂತರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಿಂದ ವಿಟ್ಲ ಸಮೀಪದ `ಇಕೋ ವಿಷನ್' ಇವರಿಂದ ಯಂತ್ರೋಪಕರಣಗಳನ್ನು ಖರೀದಿಸಿ ಹಾಳೆತಟ್ಟೆ ತಯಾರಿಯಲ್ಲಿ ತೊಡಗಿದರು.ತಯಾರಿ ಹೇಗೆ ?

ಹಾಳೆತಟ್ಟೆ ತಯಾರಿಸಲು ಉಪಯೋಗಿಸುವ ಅಡಿಕೆ ಹಾಳೆಗಳು ಮುಖ್ಯವಾಗಿ ನೀರುಕಲೆ ಮತ್ತು ಫಂಗಸ್ ಇಲ್ಲದೆ ಸ್ವಚ್ಛವಾಗಿದ್ದು ಒಣಗಿರಬೇಕು. ಒಂದು ಅಡಿಕೆ ಹಾಳೆಯಲ್ಲಿ ಸರಾಸರಿ 1-3 ಹಾಳೆತಟ್ಟೆಯನ್ನು ತಯಾರಿಸಬಹುದು. ಎರಡು ಆಕಾರಗಳಲ್ಲಿ ಇದನ್ನು ತಯಾರಿಸುತ್ತಾರೆ. ಒಂದು ಅಡಿಕೆ ಹಾಳೆಗೆ 70 ಪೈಸೆ ಕೊಟ್ಟು ನೆರೆಹೊರೆಯವರ ತೋಟಗಳಿಂದ ಖರೀದಿಸುತ್ತಾರೆ.`ಹಾಳೆಗಳನ್ನು ಶುಚಿಗೊಳಿಸಿ ಸುಮಾರು ಎರಡು ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಬೇಕು. ಯಂತ್ರದ ಅಚ್ಚಿನಲ್ಲಿಟ್ಟಾಗ ಬಿಸಿಯಾದ ಹಾಳೆಯು ಬೇಕಾದ ಆಕಾರ ಪಡೆದುಕೊಳ್ಳುತ್ತದೆ. ಆಮೇಲೆ ಇದನ್ನು ಬಿಸಿಲಿನಲ್ಲಿಟ್ಟು ಸುಮಾರು ಮೂರು ಗಂಟೆ ಒಣಗಿಸಿ ಸ್ಟೀಲಿನ ಸ್ಕ್ರಬ್ಬರ್‌ನಿಂದ ಪುನಃ ಸ್ವಚ್ಛಗೊಳಿಸಿ ಪಾಲಿಶ್ ಮಾಡಬೇಕು. ಇದರಿಂದ ಉತ್ತಮ ಗುಣಮಟ್ಟದ ಹಾಗೂ ಅಂದವಾದ ತಟ್ಟೆಯು ತಯಾರಾಗುತ್ತದೆ' ಎನ್ನುತ್ತಾರೆ ಇವರು.ತೋಟದಿಂದ ಸಂಗ್ರಹಿಸಿದ ಅಡಿಕೆ ಹಾಳೆಗಳನ್ನು ಬೆಳಗಿನ ಸಮಯದಲ್ಲಿಯೇ ಮನೆಗೆ ತರಬೇಕಾಗುತ್ತದೆ. ನೀರು, ಮಂಜುಹನಿ ಬೀಳದಂತೆ ಜೋಪಾನ ಮಾಡಬೇಕಾಗುತ್ತದೆ. ಇಲ್ಲವಾದರೆ ಫಂಗಸ್ ಬಂದು ಕಲೆಗಳಾಗಿ ಗುಣಮಟ್ಟ ಕಡಿಮೆಯಾಗುತ್ತದೆ ಎನ್ನುತ್ತಾರೆ.ಯಂತ್ರದಲ್ಲಿ ಏಕಕಾಲಕ್ಕೆ ಮೂರು ತಟ್ಟೆಗಳನ್ನು ತಯಾರಿಸುತ್ತಿದ್ದು, ದಿನಕ್ಕೆ ಸುಮಾರು ಒಂದೂವರೆ ಸಾವಿರ ಹಾಳೆತಟ್ಟೆಗಳನ್ನು ತಯಾರಿಸುತ್ತಾರೆ. ನೂರು ಹಾಳೆತಟ್ಟೆಗಳನ್ನು ಸೇರಿಸಿ ಒಂದು ಬಂಡಲ್‌ನಂತೆ ಮಾಡಿ ಇಕೋ ವಿಷನ್‌ನವರಿಗೆ ಮಾರಾಟ ಮಾಡುತ್ತಾರೆ. ತಟ್ಟೆ ತಯಾರಿಸಿ ಉಳಿದ ಹಾಳೆಯ ಚೂರುಗಳು ಹಸುಗಳಿಗೆ ಉತ್ತಮ ಮೇವು ಎನ್ನುತ್ತಾರೆ ಗಣೇಶ.ಉತ್ತಮ ಮಾರುಕಟ್ಟೆ

ಹಾಳೆ ತಟ್ಟೆಗಳಿಗೆ ಸದಾ ಉತ್ತಮ ಮಾರುಕಟ್ಟೆಯಿದೆ. ಬಫೆ ಮಾದರಿಯ ಊಟ ತಿಂಡಿಗಳು ಹೆಚ್ಚಾಗಿರುವ ಸಭೆ ಸಮಾರಂಭಗಳಲ್ಲಿ, ಆರತಕ್ಷತೆ, ಮದುವೆ, ಮುಂಜಿ ಮುಂತಾದ ಮಂಗಳ ಕಾರ್ಯಗಳಲ್ಲಿ, ಹೋಟೆಲುಗಳಲ್ಲಿ, ಶಾಲಾ ಕಾಲೇಜುಗಳ ಪಿಕ್‌ನಿಕ್‌ಗಳಲ್ಲಿ ಮತ್ತು ಕಾರ್ಮಿಕರ ಉಪಹಾರಕ್ಕಾಗಿ ಹೆಚ್ಚಾಗಿ ಬಳಕೆಯಾಗುತ್ತದೆ.ಒಂದು ಹಾಳೆತಟ್ಟೆಗೆ 2 ರೂಪಾಯಿ ದರ ಇದ್ದು ಸುತ್ತಮುತ್ತಲಿನವರು ಇವರ ಮನೆಯಿಂದಲೇ ಬಂದು ಹೆಚ್ಚಿನ ಪ್ರಮಾಣದಲ್ಲಿ ಹಾಳೆತಟ್ಟೆಗಳನ್ನು ಖರೀದಿಸುತ್ತಾರೆ. ಒಬ್ಬರು ಸಹಾಯಕರಿದ್ದರೂ ಸಾಕು, ಶ್ರದ್ಧೆ ಮತ್ತು ಶ್ರಮವಿದ್ದರೆ ಯಾರು ಬೇಕಾದರೂ ಈ ಕೆಲಸವನ್ನು ಕೈಗೊಳ್ಳಬಹುದು ಎನ್ನುವ ಇವರು ಹಾಳೆತಟ್ಟೆಯ ತಯಾರಿಯಲ್ಲಿರುವ ಹೆಚ್ಚಿನ ಕೆಲಸಗಳನ್ನು ಸ್ವತಃ ಮಾಡುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.