ಮಂಗಳವಾರ, ಜನವರಿ 28, 2020
18 °C

‘ಆದಾಯ ವೃದ್ಧಿಸುವ ತಾಂತ್ರಿಕತೆ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು. ಅವುಗಳನ್ನು ಶೇಖರಿಸಲು ಶೇಖರಣಾ ಘಟಕಗಳು, ಶೀತಲ ಗೃಹಗಳು ಅಗತ್ಯವಾಗಿವೆ. ಕಡಿಮೆ ಖರ್ಚಿನ ಆದಾಯ ಹೆಚ್ಚಿಸುವ ಉತ್ಪಾದನಾ ತಾಂತ್ರಿಕತೆಗಳೂ ಇಂದು ಅಗತ್ಯವಾಗಿವೆ’ ಎಂದು ಕೃಷಿ ವಿಶ್ವ­ವಿದ್ಯಾಲಯದ ಪ್ರಭಾರ ಕುಲಪತಿ ಡಾ.ಎಚ್.ಎಸ್.ವಿಜಯಕುಮಾರ್‌ ಪ್ರತಿಪಾದಿಸಿದರು.ಕೃಷಿ ವಿ.ವಿ.ಯ ವಿಸ್ತರಣಾ ನಿರ್ದೇಶನಾಲಯವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಹಾಗೂ ಕೃಷಿ ವಿದ್ಯಾರ್ಥಿಗಳಿಗೆ ಭಾನು­ವಾರ ಆಯೋಜಿಸಿದ್ದ ಆಹಾರ ಭದ್ರತೆ­ಗಾಗಿ ತಂತ್ರಜ್ಞಾನ ವರ್ಗಾವಣೆ ಕಾರ್ಯಾ­ಗಾರ ಉದ್ಘಾಟಿಸಿ ಮಾತನಾಡಿದರು.‘ಸಂಶೋಧನಾ ಕೇಂದ್ರಗಳಲ್ಲಿ ಅವಿ­ಷ್ಕಾರ­ಗೊಂಡ ತಾಂತ್ರಿಕತೆಗಳು ರೈತರನ್ನು ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯದಿಂದ ವಿಜ್ಞಾನಿ­ಗಳನ್ನು ರೈತರ ಸಂಪರ್ಕ ಕೇಂದ್ರಗಳಿಗೆ ನಿಯೋಜಿಸಲಾಗಿದೆ. ಪ್ರತಿ 15 ದಿನಗಳಿ­ಗೊಮ್ಮೆ ವಿಜ್ಞಾನಿಗಳು ರೈತರ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವಿಸ್ತರಣಾ ಕಾರ್ಯಕರ್ತರು ಹಾಗೂ ರೈತರೊಂ­ದಿಗೆ ಚರ್ಚಿಸಿ ಕೃಷಿ ತಾಂತ್ರಿಕ ಪರಿಹಾರ­ಗಳನ್ನು ನೀಡಲಿದ್ದಾರೆ’ ಎಂದರು.‘ರೈತರ ಹುಟ್ಟುವಳಿಗಳಿಗೆ ಸೂಕ್ತ ಬೆಲೆ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೃಷಿ ಬೆಲೆ ಆಯೋಗವನ್ನು ರಚಿಸುತ್ತಿದ್ದು ಒಂದು ಉತ್ತಮ ಬೆಳವಣಿಗೆ ಆಗಿದೆ. ಕೃಷಿ ಉತ್ಪಾದ­ನೆಯು ವ್ಯವಸ್ಥಿತವಾಗಿ ಮೌಲ್ಯವರ್ಧನೆ­ಗೊಂಡು ಬಳಕೆದಾರರನ್ನು ತಲುಪ­ಬೇಕಾ­ಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರ­ಗಳ ಮುಖಾಂತರ ಇಂತಹ ಕಾರ್ಯ­ಕ್ರಮಗಳನ್ನು ವಿವಿಧ ಆವರಣಗಳಲ್ಲಿ ಏರ್ಪಡಿಸಲಾಗುವುದು’ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ವಿಸ್ತರಣಾ ನಿರ್ದೇಶಕ ಡಾ.ಎಂ.ಬಿ.ಚೆಟ್ಟಿ, ‘ಕೃಷಿ ಉತ್ಪಾದನೆಯ ಬಹುಪಾಲು ನಷ್ಟವಾ­ಗು­ತ್ತಿದ್ದು, ಉತ್ಪಾದನೆ, ಸಂಸ್ಕರಣೆ, ಶೇಖರಣೆ, ವರ್ಗೀಕರಣ ಹಾಗೂ ಮಾರಾಟದಂತಹ ಕ್ರಿಯೆಗಳು ರೈತರನ್ನು ತಲುಪಬೇಕಾದ ಅಗತ್ಯವಿದೆ’ ಎಂದರು.ತಾಂತ್ರಿಕ ಸಮಾವೇಶದಲ್ಲಿ ಆಹಾರ ಭದ್ರತೆಗಾಗಿ ಸಮಗ್ರ ಕೃಷಿ ಪದ್ಧತಿ ಕುರಿತು ಡಾ.ಪ್ರಕಾಶ ಭಟ್, ಸಾವ­ಯವ ಕೃಷಿ–ಚನ್ನಬಸಪ್ಪ ಕೋಂಬಳೆ, ಪರಿವರ್ತಿತ ಬೆಳೆಗಳ ಪಾತ್ರ ಕುರಿತು ಡಾ.ಬಿ.ಎಂ.ಖಾದಿ, ಸಸ್ಯ ಸಂರಕ್ಷಣೆಯ ಪಾತ್ರ–ಡಾ.ವಿ.ಐ.ಬೆಣಗಿ, ಕೊಯ್ಲೋ­ತ್ತರ ತಂತ್ರಜ್ಞಾನ–ಡಾ.ಸರೋಜಿನಿ ಕರಕಣ್ಣವರ, ಮಣ್ಣು ಮತ್ತು ಸಂರಕ್ಷಣೆ ಕುರಿತು ಡಾ.ಎಂ.ವಿ.ಮಂಜುನಾಥ ಹಾಗೂ ಕೃಷಿಯಲ್ಲಿಯಾಂತ್ರೀಕರಣ–ಡಾ.ಸತೀಶ ದೇಸಾಯಿ ಹಾಗೂ ಸ್ನೇಹ ತಂಡದ ವಿದ್ಯರ್ಥಿಗಳಾದ ವೀರೇಶ ಅಂತೂರ ತೃಣ ಧಾನ್ಯಗಳ ಪಾತ್ರ, ಮಹೇಶ ಹಂಪಣ್ಣವರ ದಾಸ್ತಾನುಗಳ ಮಹತ್ವ ಹಾಗೂ ಗಂಗೂಬಾಯಿ ಮನಗೂಳಿ ದ್ವಿದಳ ಧಾನ್ಯಗಳ ಪಾತ್ರ ಕುರಿತು ವಿಚಾರ ಮಂಡಿಸಿದರು.ಸುಮಾರು 300 ಕೃಷಿಕರು ಮತ್ತು ಕೃಷಿ ಮಹಿಳೆಯರು ಹಾಗೂ ಸ್ನೇಹ ತಂಡದ 200 ವಿದ್ಯಾರ್ಥಿಗಳು ಹಾಜರಿದ್ದರು.

ಡಾ.ಎಸ್.ಟಿ. ನಾಯಕ ಸ್ವಾಗತಿಸಿದರು ಮತ್ತು ಡಾ.ಪಿ.ಎಸ್.ಹೂಗಾರ ವಂದಿಸಿದರು.

ಪ್ರತಿಕ್ರಿಯಿಸಿ (+)