ಸೋಮವಾರ, ಜನವರಿ 27, 2020
14 °C
ನವದೆಹಲಿಯಲ್ಲಿ ಮುಂದುವರೆದ ಸರ್ಕಾರ ರಚನೆ ಕಸರತ್ತು

‘ಆಮ್‌ ಆದ್ಮಿ’ ನಿರ್ಧಾರವೇ ಅಂತಿಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆಮ್‌ ಆದ್ಮಿ’ ನಿರ್ಧಾರವೇ ಅಂತಿಮ

ನವದೆಹಲಿ: (ಪಿಟಿಐ): ದೇಶದ ರಾಜಧಾನಿ ದೆಹಲಿಯಲ್ಲಿ ಸರ್ಕಾರ ರಚನೆಯಾಗುತ್ತದೆಯೋ ಅಥವಾ ಅದು ರಾಷ್ಟ್ರ­ಪತಿ ಆಡಳಿತಕ್ಕೆ ಒಳಪಡುತ್ತದೆಯೋ ಎಂಬ ಕುತೂಹಲಕ್ಕೆ ಸೋಮವಾರ ತೆರೆ ಬೀಳುವ ಸಾಧ್ಯತೆ ಇದೆ.ಕಾಂಗ್ರೆಸ್‌ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಸಂಬಂಧಿ­ಸಿದಂತೆ ಅಭಿಪ್ರಾಯ ನೀಡುವಂತೆ ‘ಆಮ್‌ ಆದ್ಮಿ’ ಪಕ್ಷ (ಎಎಪಿ) ದೆಹಲಿ  ಪ್ರಜೆಗಳನ್ನು ಕೋರಿದೆ. ಈ  ಕುರಿತು ಜನ­ರಿಂದ ಅಭಿಪ್ರಾಯ ಸಂಗ್ರಹಿಸಿದ ನಂತರ ಸೋಮವಾರ ತೀರ್ಮಾನ­ವನ್ನು  ಬಹಿರಂಗಪಡಿಸುವುದಾಗಿ ಪಕ್ಷ ಮಂಗಳ­ವಾರ ಹೇಳಿಕೊಂಡಿದೆ.‘ಸರ್ಕಾರ ರಚನೆ ಕುರಿತು ದೆಹಲಿ ನಾಗರಿಕರಿಗೆ 25 ಲಕ್ಷ ಪ್ರತಿಗಳನ್ನು ಹಂಚಿಕೆ ಮಾಡಿ  ಅವರ ಅಭಿಪ್ರಾಯ ಸಂಗ್ರಹಿಸ­ಲಾಗುವುದು. ಜನರು ಭಾನುವಾರದ ಒಳಗಾಗಿ ತಮ್ಮ ನಿಲುವು ತಿಳಿಸಬಹುದು’ ಎಂದು ಪಕ್ಷದ ನೂತನ ಚುನಾಯಿತ ಶಾಸಕರು, ರಾಜಕೀಯ ವ್ಯವಹಾರಗಳ ಸಮಿತಿಯ ಸಭೆ ಬಳಿಕ ಎಎಪಿ ಅಧ್ಯಕ್ಷ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದರು.‘ಜನರಿಂದ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಸೋಮವಾರ ನಮ್ಮ ನಿಲುವು ಬಹಿರಂಗಗೊಳಿಸುತ್ತೇವೆ. ಅಲ್ಲದೇ ಅದೇ ದಿನ ಪಕ್ಷದ ತೀರ್ಮಾನವನ್ನು ಲೆಫ್ಟಿನೆಂಟ್‌ ಗವರ್ನರ್‌ ಅವರಿಗೂ ತಿಳಿಸುತ್ತೇವೆ’ ಎಂದು ಕೇಜ್ರಿವಾಲ್‌ ಸುದ್ದಿಗಾರರಿಗೆ ಹೇಳಿದರು.ಸರ್ಕಾರ ರಚನೆ ಸಂಬಂಧ ಚರ್ಚಿಸಲು ಲೆ. ಗವರ್ನರ್‌ ನಜೀಬ್‌ ಜಂಗ್‌ ಅವರು ಕಳೆದ ವಾರ ಎಎಪಿಗೆ ಆಹ್ವಾನ ನೀಡಿದ್ದರು. ಗವರ್ನರ್‌ ಅವರಿಂದ ಆಮಂತ್ರಣ ಸ್ವೀಕರಿಸಿದ ಎಎಪಿ, ತಮ್ಮ 18 ಷರತ್ತುಗಳಿಗೆ ಒಪ್ಪುವುದಾದರೆ ಬೆಂಬಲ ಪಡೆದುಕೊಳ್ಳುವುದಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿತ್ತು. 16 ಅಂಶಗಳನ್ನು ಆಡಳತಾತ್ಮಕ ನಿರ್ಧಾರದ ಮೂಲಕ ಜಾರಿಗೊಳಿಸಬಹುದು ಎಂದು ಕಾಂಗ್ರೆಸ್‌ ಹೇಳಿದೆ. ಆದರೆ, ಇದುವ­ರೆಗೂ ಬಿಜೆಪಿ ಯಾವುದೇ ವಿವರಣೆ ನೀಡುವ ಗೋಜಿಗೆ ಹೋಗಿಲ್ಲ ಎಂದರು.‘ಎಎಪಿ ಸರ್ಕಾರ ರಚಿಸಬೇಕೆಂದು ಪಕ್ಷದ ಕೆಲ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರವನ್ನು ಉರುಳಿಸುವುದರ ಒಳಗಾಗಿ ಎಎಪಿ ಸರ್ಕಾರ ಎರಡು ಅಥವಾ ಮೂರು ಒಳ್ಳೆಯ ಕೆಲಸಗಳನ್ನು ಮಾಡಬೇಕೆಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ  ಇತರರ ಪಕ್ಷಗಳ ಜತೆಗೂಡಿ ಸರ್ಕಾರ ರಚಿಸಬಾರದು ಎಂದು ಮತ್ತೆ ಕೆಲವರು ಹೇಳಿದ್ದಾರೆ’ ಎಂದು ಕೇಜ್ರಿವಾಲ್‌ ವಿವರಿಸಿದರು.

ಪ್ರತಿಕ್ರಿಯಿಸಿ (+)