ಭಾನುವಾರ, ಜನವರಿ 19, 2020
23 °C
ಕೊಚ್ಚಿನ್ ಅಡಿಕೆ ಮತ್ತು ಸಾಂಬಾರು ಬೆಳೆ ಅಭಿವೃದ್ಧಿ ನಿರ್ದೇಶಕ ಡಾ.ಹೋಮಿ ಚೆರಿಯನ್‌ ಸಲಹೆ

‘ಔಷಧಮುಕ್ತ ಸಾಂಬಾರು ಪದಾರ್ಥ ಪೂರೈಕೆ ಸವಾಲು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಔಷಧಮುಕ್ತ ಸಾಂಬಾರು ಪದಾರ್ಥ ಪೂರೈಕೆ ಸವಾಲು’

ಶಿವಮೊಗ್ಗ: ಹೊರದೇಶಗಳಲ್ಲಿ ಔಷಧಮುಕ್ತ ಸಾಂಬಾರು ಬೆಳೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಬೆಳೆಗಾರರು ಕೀಟನಾಶಕ ಬಳಕೆ ಕಡಿಮೆ ಮಾಡುವ ಆಧುನಿಕ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೊಚ್ಚಿನ್ ಅಡಿಕೆ ಮತ್ತು ಸಾಂಬಾರು ಬೆಳೆ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಹೋಮಿ ಚೆರಿಯನ್‌ ಸಲಹೆ ನೀಡಿದರು.ನಗರದ ನವಿಲೆಯ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದಲ್ಲಿ ಕೊಚ್ಚಿನ್ ಅಡಿಕೆ ಮತ್ತು ಸಾಂಬಾರು ಬೆಳೆ ಅಭಿವೃದ್ಧಿ ನಿರ್ದೇಶನಾಲಯ ಸಂಯುಕ್ತವಾಗಿ ಸಾಂಬಾರು ಬೆಳೆ ಕುರಿತು ಹಮ್ಮಿಕೊಂಡಿರುವ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ದೇಶದ ಮಣ್ಣು ಹಾಗೂ ವಾತಾವರಣ ಸಾಂಬಾರು ಬೆಳೆಗೆ ಯೋಗ್ಯವಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಸಾಂಬಾರು ಪದಾರ್ಥ ರಫ್ತು ಮಾಡುವ ದೇಶವೂ ಭಾರತವಾಗಿದೆ. ಆದರೆ, ಗುಣಮಟ್ಟ ಕಾಯ್ದುಕೊಂಡು ಆಮದುದಾರರನ್ನು ಆಕರ್ಷಿಸುವಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ ಎಂದರು.ಇಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಂಬಾರು ಬೆಳೆ ಉತ್ಪಾದನೆಯಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಈ ನಿಟ್ಟಿನಲ್ಲಿ ನಮ್ಮ ದೇಶ ಹಿಡಿತವನ್ನು ಕಾಪಾಡಿಕೊಳ್ಳಬೇಕಾದರೆ ಉತ್ಪಾದನೆ ಜತೆಗೆ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಿದೆ ಎಂದರು.ಆಮದಾರರು ಔಷಧಮುಕ್ತ ಸಾಂಬಾರು ಬೆಳೆಯನ್ನು ಎದುರು ನೋಡುತ್ತಿದ್ದಾರೆ. ಅವರಿಗೆ ಅಂತಹ ಬೆಳೆಯನ್ನು ನೀಡಲು ಬೆಳೆಗಾರರಿಗೆ ಔಷಧಮುಕ್ತ ಬೇಸಾಯದ ಕ್ರಮಗಳನ್ನು ತಿಳಿಸಿಕೊಡಬೇಕು ಎಂದರು.ಅಂತರ ಬೆಳೆ: ಕೊಯಮತ್ತೂರಿನ ಟಿಎನ್‌ಎ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ.ಎನ್‌.ಕುಮಾರ್ ಮಾತನಾಡಿ, ಅಡಿಕೆ ಮತ್ತು ತೆಂಗು ಬೆಳೆ ಈ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಹಾಗಾಗಿ ಈ ಬೆಳೆಗಳೊಂದಿಗೆ ಸಾಂಬಾರು ಪದಾರ್ಥಗಳನ್ನೂ ಬೆಳೆದರೆ ಉತ್ತಮ ಲಾಭ ಪಡೆಯಬಹುದು. ಈ ನಿಟ್ಟಿನಲ್ಲಿ ರೈತರು ಗಮನ ಹರಿಸಬೇಕು ಎಂದರು.ಸಾಂಬಾರು ಪದಾರ್ಥಗಳನ್ನ ಬೆಳೆಯುವಾಗ ವಾತಾವರಣ ಬದಲಾವಣೆಯಿಂದ ಬೆಳೆ ಹಾನಿಯಾಗುವ ಸಾಧ್ಯತೆಗಳಿದ್ದು, ಕೆಲವು ಸಂಶೋಧನೆಗಳ ಲಾಭ ಪಡೆದು, ರೈತರು ಇಳುವರಿ ಹೆಚ್ಚಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.ಸಮನ್ವಯತೆ ದೊಡ್ಡ ಸವಾಲು: ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯಗಳ ವಿಶೇಷಾಧಿಕಾರಿ ಡಾ.ಪಿ.ಎಂ.ಸಾಲಿಮಠ ಮಾತನಾಡಿ, ಸಾಂಬಾರು ಪದಾರ್ಥಗಳ ಉತ್ಪಾದನೆ ಮತ್ತು ಗುಣಮಟ್ಟ ಎರಡಲ್ಲೂ ಸಮನ್ವಯತೆ ಕಾಯ್ದುಕೊಳ್ಳುವುದು ಈಗ ದೊಡ್ಡ ಸವಾಲಾಗಿದೆ ಎಂದರು. ಸಮ್ಮೇಳನದಲ್ಲಿ ನವಿಲೆ ಕೃಷಿ ಕಾಲೇಜಿನ ಡೀನ್ ಡಾ.ಎಂ. ಮಂಜುನಾಥ್ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನ ಅಧ್ಯಕ್ಷ ಡಾ.ಎ.ಎಸ್.ಕುಮಾರಸ್ವಾಮಿ, ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಾ.ಎಂ.ವಿಶ್ವನಾಥ ಉಪಸ್ಥಿತರಿದ್ದರು.ಸಮ್ಮೇಳನದಲ್ಲಿ ವಿಶ್ವವಿದ್ಯಾಲಯ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಬಿ.ಸತ್ಯನಾರಾಯಣರೆಡ್ಡಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಂಶೋಧನಾ ವಿಭಾಗದ ಸಹಾಯಕ ನಿರ್ದೇಶಕ ಡಾ.ವೈ.ವಿಶ್ವನಾಥಶೆಟ್ಟಿ ವಂದಿಸಿದರು. ಚೇತನ್‌ ಮತ್ತು ತಂಡ ಪ್ರಾರ್ಥಿಸಿದರು.

ಪ್ರತಿಕ್ರಿಯಿಸಿ (+)