ಮಂಗಳವಾರ, ಜನವರಿ 21, 2020
29 °C
ಡಿಸಿಸಿ ಬ್ಯಾಂಕ್‌ ಧೋರಣೆಗೆ ಅಸಮಾಧಾನ

‘ಕೃಷಿ ಸಾಲ ವಿತರಣೆಯಲ್ಲೂ ತಾರತಮ್ಯ’

ಪ್ರಜಾವಾಣಿ ವಾರ್ತೆ/ ಭೀಮಸೇನ ಚಳಗೇರಿ Updated:

ಅಕ್ಷರ ಗಾತ್ರ : | |

ಕೊಪ್ಪಳ: ನೂತನ ಜಿಲ್ಲೆಯಾಗಿ ಕೊಪ್ಪಳ ಅಸ್ತಿತ್ವಕ್ಕೆ ಬಂದು 15 ವರ್ಷಗಳೇ ಕಳೆದಿವೆ. ಈಗಲೂ ಜಿಲ್ಲಾ ಕೇಂದ್ರೀಯ ಬ್ಯಾಂಕ್‌ (ಡಿಸಿಸಿ ಬ್ಯಾಂಕ್)ಮಾತ್ರ ಉಭಯ ಜಿಲ್ಲೆಗಳಿಗೆ ಒಂದೇ ಇದೆ. ಆದರೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಜಿಲ್ಲೆಯ ರೈತರಿಗೆ ಕೃಷಿ ಸಾಲ ವಿತರಣೆಯಲ್ಲಿ ಡಿಸಿಸಿ ಬ್ಯಾಂಕ್‌ನಿಂದ ತಾರತಮ್ಯವಾ­ಗುತ್ತಿದೆ ಎಂಬ ಅಸಮಾಧಾನ ಜಿಲ್ಲೆಯಲ್ಲಿ ವ್ಯಕ್ತವಾಗುತ್ತಿದೆ.ಜಿಲ್ಲಾ ಸಹಕಾರ ಸಂಘಗಳ ನಿಬಂಧ­ಕರ ಕಚೇರಿ ಮೂಲಗಳು ಹೇಳುವಂತೆ ಜಿಲ್ಲೆಯಲ್ಲಿ 101 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಲಕ್ಷಕ್ಕೂ ಅಧಿಕ ಸಂಖ್ಯೆಯ ರೈತರು ಈ ಸಂಘಗಳ ಸದಸ್ಯತ್ವವನ್ನು ಹೊಂದಿದ್ದಾರೆ.ಆದರೆ, ಜಿಲ್ಲೆಗೆ ಸಂಬಂಧಿಸಿದಂತೆ 2012–13ನೇ ಸಾಲಿಗಾಗಿ ಡಿಸಿಸಿ ಬ್ಯಾಂಕ್‌ 33 ಸಾವಿರ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಒಟ್ಟು ₨ 64 ಕೋಟಿ ಸಾಲ ವಿತರಣೆ ಮಾಡುವ ಗುರಿ ನಿಗದಿಪಡಿಸಿತ್ತು. ಈ ಪೈಕಿ ಕೇವಲ 12,400 ಜನ ರೈತರಿಗೆ ₨ 30 ಕೋಟಿ ಸಾಲ ವಿತರಣೆ ಮಾಡಲಾಗಿದೆ.ಇದೇ ಅವಧಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ₨ 146 ಕೋಟಿ ಸಾಲ ವಿತ­ರಣೆ ಗುರಿ ಇತ್ತು. ಈ ಪೈಕಿ 35,590 ಜನ ರೈತರಿಗೆ ಒಟ್ಟು ₨ 86 ಕೋಟಿ ಕೃಷಿ ಸಾಲ ವಿತರಣೆ ಮಾಡಲು ಡಿಸಿಸಿ ಬ್ಯಾಂಕ್‌ ಅನುಮತಿ ನೀಡಿದೆ. ಹೀಗಾಗಿ ಸಾಲ ಪಡೆದ ರೈತರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ, ಜಿಲ್ಲೆಯಲ್ಲಿ ಸಾಲ ಪಡೆಯಲು ಅರ್ಹರು ಸಾಕಷ್ಟು ಸಂಖ್ಯೆಯಲ್ಲಿದ್ದರೂ, ಕಡಿಮೆ ಸಂಖ್ಯೆಯ ರೈತರಿಗೆ ಸಾಲ ನೀಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂಬ ಅಸಮಾಧಾನ ಸಹಕಾರ ಕ್ಷೇತ್ರದಲ್ಲಿ ಸಕ್ರಿಯ­ರಾಗಿರುವವರಲ್ಲಿ ಕಂಡು ಬರುತ್ತಿದೆ.ಈ ಅಸಮಾಧಾನಕ್ಕೆ ಇನ್ನೂ ಇತರ ಕಾರಣಗಳೂ ಇವೆ ಎಂದು ಹೆಸರು ಹೇಳಲು ಇಚ್ಛಿಸದ ಕೆಲವು ಸಹಕಾರಿ ಧುರೀಣರು ಹೇಳುತ್ತಾರೆ.

ರಾಯಚೂರು ಜಿಲ್ಲೆಗೆ ಹೋಲಿಸಿ­ದರೆ, ಕೊಪ್ಪಳ ಜಿಲ್ಲೆಯಲ್ಲಿ ಸಾಲ ಪಡೆಯುವವರ ಸಂಖ್ಯೆ ಕಡಿಮೆ ಇದೆ. ಆದರೆ, ಸಾಲ ಮರುಪಾವತಿ ವಿಷಯಕ್ಕೆ ಬಂದಾಗ ಕೊಪ್ಪಳ ಜಿಲ್ಲೆಯ ಸಾಧ­ನೆಯೇ ಹೆಚ್ಚು. ಹೀಗಿದ್ದರೂ ಸಾಲ ನೀಡು­ವಾಗ ಮಾತ್ರ ತಾರತಮ್ಯ ನಡೆಯುತ್ತಿದೆ ಎಂಬ ವಾದವನ್ನು ಇದೇ ಧುರೀಣರು ಮುಂದಿಡುತ್ತಾರೆ.ಈ ತಾರತಮ್ಯ ನಿವಾರಣೆಗೆ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಮಂಡಳಿಯಲ್ಲಿ­ರುವ ಜಿಲ್ಲೆಯನ್ನು ಪ್ರತಿನಿಧಿಸುವ ನಿರ್ದೇ­ಶಕರ ಪಾತ್ರ ಮಹತ್ವದ್ದು. ಆದರೆ, ಜಿಲ್ಲೆಯನ್ನು ಪ್ರತಿನಿಧಿಸುವ ನಿರ್ದೇಶಕರಿಂದ ಅಂತಹ ಪ್ರಯತ್ನ ನಡೆಯುತ್ತಿಲ್ಲ ಎಂದೂ ವಿಷಾದ ವ್ಯಕ್ತಪಡಿಸುತ್ತಾರೆ.

ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಮಂಜುನಾಥ ಸಿದ್ದಾಪುರ ಅವರು ಈ ಆರೋಪವನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ.‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಹೆಚ್ಚಿನ ಸಂಖ್ಯೆಯ ರೈತರಿಗೆ ಸಾಲ ವಿತರಣೆಯೂ ಸೇರಿದಂತೆ ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ನಿರ್ದೇಶಕರಿಂದ ಇನ್ನೂ ಹೆಚ್ಚಿನ ಪ್ರಯತ್ನ ನಡೆಯಬೇಕು ಎಂಬುದನ್ನು ಒಪ್ಪುತ್ತೇನೆ. ಆದರೆ, ಆ ನಿಟ್ಟಿನಲ್ಲಿ ಪ್ರಯತ್ನವೇ ನಡೆದಿಲ್ಲ ಎಂಬುದನ್ನು ಒಪ್ಪಲಿಕ್ಕಾಗದು’ ಎಂದು ಅಭಿಪ್ರಾಯಪಡುತ್ತಾರೆ.‘ರಾಯಚೂರು ಜಿಲ್ಲೆಯ ಬಹುತೇಕ ಎಲ್ಲ ತಾಲ್ಲೂಕುಗಳು ನೀರಾವರಿ ಸೌಲ­ಭ್ಯಕ್ಕೆ ಒಳಪಟ್ಟಿವೆ. ಹೀಗಾಗಿ ಅಲ್ಲಿನ ಹೆಚ್ಚಿನ ಸಂಖ್ಯೆಯ ರೈತರು ಸಾಲ ಪಡೆ­ಯುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ಅಂತಹ ಸ್ಥಿತಿ ಇಲ್ಲ. ಗಂಗಾವತಿ ಮತ್ತು ಕೊಪ್ಪಳ ಜಿಲ್ಲೆಯ ಕೆಲ ಭಾಗ ಮಾತ್ರ ನೀರಾವರಿಗೆ ಒಳಪಟ್ಟಿದೆ. ಹೀಗಾಗಿ ಈ ಜಿಲ್ಲೆಯಲ್ಲಿ ಸ್ವಾಭಾವಿಕವಾಗಿ ಕಡಿಮೆ ಸಂಖ್ಯೆಯ ರೈತರು ಕೃಷಿ ಸಾಲ ಪಡೆ­ಯುತ್ತಿದ್ದಾರೆ’ ಎಂದೂ ವಿವರಿಸುತ್ತಾರೆ.‘ಸಾಲ ಮರುಪಾವತಿ ವಿಷಯಕ್ಕೆ ಬಂದಾಗ ಕೊಪ್ಪಳ ಜಿಲ್ಲೆಯ ರೈತರೇ ಮುಂಚೂಣಿಯಲ್ಲಿ ಇರುತ್ತಾರೆ’ ಎಂದೂ ಹೇಳಲು ಮರೆಯಲಿಲ್ಲ.

ಮತ್ತೊಬ್ಬ ಹಿರಿಯ ಸಹಕಾರಿ ಧುರೀಣ ರಮೇಶ ವೈದ್ಯ ಅವರು ಸಹ ಇದೇ ವಾದವನ್ನು ಮುಂದಿಡುತ್ತಾರೆ. ‘ಕಳೆದ ನಾಲ್ಕೈದು ವರ್ಷಗಳಲ್ಲಿ ಕೊಪ್ಪಳ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿಯೂ ಸುಧಾರಣೆ ಕಂಡು ಬಂದಿದೆ. ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳಲ್ಲಿ ದಾಳಿಂಬೆ ಹಾಗೂ ಇತರ ತೋಟಗಾರಿಕಾ ಬೆಳೆಗಳತ್ತ ರೈತರು ಒಲವು ತೋರುತ್ತಿದ್ದಾರೆ. ಹೀಗಾಗಿ ಕೃಷಿ ಸಾಲ ಪಡೆಯುವ ರೈತರ ಸಂಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಪ್ರಮಾಣ ಇನ್ನೂ ಹೆಚ್ಚಿಸಲು ಪ್ರಯತ್ನ ನಡೆದಿದೆ’ ಎಂದು ಹೇಳುತ್ತಾರೆ.ಕೃಷಿ ಸಾಲ ವಿತರಣೆ ಸೇರಿದಂತೆ ಆಡಳಿತಾತ್ಮಕವಾಗಿ ಜಿಲ್ಲೆಗೆ ಸಂಬಂಧಿಸಿದ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯಬೇಕು ಎಂಬ ದೃಷ್ಟಿಯಿಂದ ಕೊಪ್ಪಳದಲ್ಲಿ ಡಿಸಿಸಿ ಬ್ಯಾಂಕಿನ ಉಪಪ್ರಧಾನ ವ್ಯವಸ್ಥಾಪಕರ ಕಚೇರಿ ಸ್ಥಾಪನೆಗೆ ಪ್ರಯತ್ನ ಸಹ ನಡೆದಿದೆ ಎಂದು ರಮೇಶ ವೈದ್ಯ ತಿಳಿಸಿದರು.

ಪ್ರತಿಕ್ರಿಯಿಸಿ (+)