ಗುರುವಾರ , ಫೆಬ್ರವರಿ 25, 2021
17 °C

‘ಚಿತ್ರಕಲೆ ವಿಶ್ವಭಾಷೆ; ಕಲಾವಿದ ವಿಶ್ವಮಾನ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಚಿತ್ರಕಲೆ ವಿಶ್ವಭಾಷೆ; ಕಲಾವಿದ ವಿಶ್ವಮಾನ್ಯ’

ಹಾಸನ: ‘ಚಿತ್ರಕಲೆ ವಿಶ್ವಭಾಷೆ, ಇದರಿಂದಾಗಿ ಚಿತ್ರಕಲಾವಿದ ವಿಶ್ವಮಾನ್ಯನಾಗಿದ್ದಾನೆ’ ಎಂದು ಲೇಖಕ ಗೊರೂರು ಶಿವೇಶ್ ತಿಳಿಸಿದರು.ಹಾಸನ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಾಸನದಲ್ಲಿ ಆಯೋಜಿಸಿದ್ದ ಚಿತ್ರಕಲಾ ಶಿಕ್ಷಕರ ಕಲಾಕೃತಿಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಲೇಖಕನಿಗೆ ಭಾಷೆ ಮತ್ತು ಪ್ರಾಂತ್ಯಗಳ ಮಿತಿಯಿದ್ದರೆ, ಚಿತ್ರಕಲಾವಿದನಿಗೆ ಆ ಮಿತಿಯಿಲ್ಲ. ಅನುವಾದದ ಅಗತ್ಯವಿಲ್ಲ. ಆಯಾ ಕಾಲಘಟ್ಟಗಳೇ ಶಿಲ್ಪಿ, ಕಲಾವಿದರನ್ನು ರೂಪಿಸುತ್ತವೆ.  ರಾಜಾ ರವಿವರ್ಮ, ಲಿಯಾನಾರ್ಡೊ ಡಾವಿಂಚಿ, ಜಕಣಾಚಾರಿಯಂಥವರು ರೂಪುಗೊಳ್ಳಲು ಆ ಕಾಲದಲ್ಲಿ ಕಲಾಕಾರರಿಗೆ ಇದ್ದ ಅಪಾರ ಮಾನ್ಯತೆ, ಬೇಡಿಕೆಯೂ ಕಾರಣ. ಎರಡನೇ ಮಹಾಯುದ್ದ ಮುಗಿದ ಸಂದರ್ಭದಲ್ಲಿ ಪ್ರಖ್ಯಾತ ಚಿತ್ರಕಲೆಗಳನ್ನು ಸಂರಕ್ಷಿಸಲು ತೆಗೆದುಕೊಂಡಕಾಳಜಿ ಗಮನಿಸಿದರೆ ಚಿತ್ರಕಲೆಗಿದ್ದ ಮಹತ್ವದ ಅರಿವಾಗುತ್ತದೆ’ ಎಂದರು.ಕಲಾವಿದ ಬಿ.ಎಸ್. ದೇಸಾಯಿ, ‘ಅಮೂರ್ತ ಚಿತ್ರಗಳ ರಚನೆ ಸುಲಭವೆಂದು ಭಾವಿಸಲಾಗಿದೆ. ಆದರೆ ಬಣ್ಣಗಳ ಬಳಕೆ ಮತ್ತು ಅವಕಾಶ ಭಿನ್ನ ನೆಲೆಯ ಅರ್ಥಗಳನ್ನು ಕೊಡುವುದರಿಂದ ಬಣ್ಣಗಳನ್ನು ಸಶಕ್ತವಾಗಿ ಮತ್ತು ಕೌಶಲ್ಯಯುಕ್ತವಾಗಿ ಹೊರಹೊಮ್ಮಿಸುವಲ್ಲಿ ಕಲಾವಿದನ ಸೃಜನಶೀಲತೆ ವ್ಯಕ್ತವಾಗುತ್ತದೆ’ ಎಂದರು.ಹಿರಿಯ ಚಿತ್ರಕಲಾ ಶಿಕ್ಷಕ ಎಸ್.ವೈ ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನ ಕಲಾವಿದರಾದ ಶಿವಕುಮಾರ್ ಕೆಸರಮಡು ರಚಿಸಿದ ಅಮೂರ್ತ ಚಿತ್ರ ಕುರಿತ ಸಂವಾದದಲ್ಲಿ ಕಲಾವಿದರಾದ ವಿಶ್ವಕರ್ಮಾಚಾರ್‌, ಕವಿ ಎನ್.ಎಲ್. ಚೆನ್ನೇಗೌಡ, ನಿರ್ಮಲಾ ಕಲಾಶಾಲೆಯ ಪ್ರಾಂಶುಪಾಲ ಆರ್.ಸಿ. ಕಾರದಕಟ್ಟಿ ಹಾಗೂ ವಿವಿಧ ಚಿತ್ರಕಲಾ ಶಾಲೆಗಳ ಮಕ್ಕಳು ಭಾಗವಹಿಸಿದ್ದರು.ಎನ್.ಲಕ್ಷ್ಮಿ  ಸ್ವಾಗತಿಸಿದರು, ಈರಯ್ಯ ಮಠಪತಿ ವಂದಿಸಿದರು. ಹೆಚ್.ಎಸ್.ಮಂಜುನಾಥ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.