ಮಂಗಳವಾರ, ಜನವರಿ 21, 2020
19 °C

‘ಪ್ರಚಂಡ ಶಕ್ತಿ’ಗೆ ಮಾರುಹೋದ ಗಣ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): 20ನೇ ಶತಮಾನದ ಜಾಗತಿಕ ರಾಜಕಾರಣದ ಪ್ರಚಂಡ ಶಕ್ತಿಯಾದ ನೆಲ್ಸನ್‌ ಮಂಡೇಲಾ ಅವರ ನಿಧನಕ್ಕೆ ಭಾರತದ ಪ್ರಧಾನಿ ಮನ ಮೋಹನ್‌ ಸಿಂಗ್‌ ಸೇರಿದಂತೆ ಇಡೀ ಜಗತ್ತು ಕಂಬನಿ ಮಿಡಿದಿದೆ. ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ, ಇಸ್ರೇಲ್‌ ಅಧ್ಯಕ್ಷ ಶಿಮೋನ್‌ ಪೆರಿಸ್‌, ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಸೇರಿದಂತೆ ಎಲ್ಲಾ ಗಣ್ಯರು ಅವರ ವ್ಯಕ್ತಿತ್ವ ಸ್ಮರಿಸಿದ್ದಾರೆ.ಅವರೊಬ್ಬ ನಿಜವಾದ ಗಾಂಧಿವಾದಿ

– ಭಾರತದ ಪ್ರಧಾನಿ ಮನಮೋಹನ್‌ ಸಿಂಗ್‌

‘ನಮ್ಮ ಪ್ರಜಾತಾಂತ್ರಿಕ ರಾಷ್ಟ್ರದ ಮೊದಲ ಅಧ್ಯಕ್ಷರಾದ, ಎಲ್ಲರ ಪ್ರೀತಿಪಾತ್ರರಾದ ಮಂಡೇಲಾ ಅವರ ಅಗಲಿಕೆಯಿಂದ ಒಬ್ಬ ಸುಪುತ್ರನನ್ನು ಕಳೆದುಕೊಂಡಿದ್ದೇವೆ. ನಮ್ಮ ಜನತೆ ಒಬ್ಬ ತಂದೆಯನ್ನು ಕಳೆದುಕೊಂಡಿದ್ದಾರೆ.

– ಜಾಕೊಬ್‌ ಜುಮಾ, ದಕ್ಷಿಣ ಆಫ್ರಿಕಾ ಅಧ್ಯಕ್ಷ.

ಜಗತ್ತಿನ ಲಕ್ಷಾಂತರ ಜನರಂತೆ ನಾನೂ ಮಂಡೇಲಾ ಅವರಿಂದ ಸ್ಫೂರ್ತಿ ಪಡೆದವನು. ನನ್ನ ರಾಜಕೀಯ ಹೋರಾಟ ಆರಂಭವಾಗಿದ್ದೂ ವರ್ಣಭೇದ ವಿರುದ್ಧದ ಹೋರಾಟದ ಮೂಲಕವೇ.  ಅಂತಹ ಮಹಾನ್‌ ನಾಯಕನನ್ನು ಜಗತ್ತು ಮತ್ತೆ ಕಾಣುವುದು ಕಷ್ಟ. ಅವರೀಗ ನಮ್ಮೊಂದಿಗಿಲ್ಲ, ಚರಿತ್ರೆಯ ಭಾಗವಾಗಿದ್ದಾರೆ.

– ಬರಾಕ್‌ ಒಬಾಮ, ಅಮೆರಿಕ ಅಧ್ಯಕ್ಷ.

ಅವರು ನ್ಯಾಯಕ್ಕಾಗಿ ಹೋರಾಡಿದ ಮಹಾಪ್ರಚಂಡ. ವೈಯಕ್ತಿಕ ಹಿತಾಸಕ್ತಿಗಳನ್ನು ಮರೆತು ಜೀವನದುದ್ದಕ್ಕೂ ಜನಾಂಗೀಯ ದಮನದ ವಿರುದ್ಧ ಹೋರಾಟ ನಡೆಸಿದವರು. ಅವರ ಘನತೆವೆತ್ತ ವ್ಯಕ್ತಿತ್ವ, ಮೇರು ಸದೃಶ ಸಾಧನೆ ಇಡೀ ಜಗತ್ತಿಗೆ ಮಾದರಿ.

– ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಬಾನ್‌ ಕಿ ಮೂನ್‌.

ರಾಷ್ಟ್ರದ ಒಳಿತಿಗಾಗಿ ಅವಿರತವಾಗಿ ಹೋರಾಡಿದವರು ಮಂಡೇಲಾ. ಅವರ ಹೋರಾಟದ ಫಲವಾಗಿಯೇ ದಕ್ಷಿಣ ಆಫ್ರಿಕಾ ಇಂದು ಶಾಂತಿಯ ನಾಡಾಗಿದೆ.

 – ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌.

ಮಂಡೇಲಾ ಬರೀ ನಮ್ಮ ಕಾಲದ ಮಹಾಪುರುಷ ಅಲ್ಲ; ಅವರೊಬ್ಬ ಸಾರ್ವಕಾಲಿಕ ಮಹಾಪುರುಷ. ಸ್ವಾತಂತ್ರ್ಯ– ಸಮಾನತೆಗಾಗಿ ಅವರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ

– ಡೇವಿಡ್‌ ಕ್ಯಾಮೆರಾನ್‌, ಬ್ರಿಟನ್‌ ಪ್ರಧಾನಿ.

ದಕ್ಷಿಣ ಆಫ್ರಿಕಾ ಹಾಗೂ ಜಗತ್ತಿಗೆ ಅವರು ನೀಡಿದ ಕೊಡುಗೆ ಚರಿತ್ರಾರ್ಹ.

– ಕ್ಸಿ ಜಿನ್‌ಪಿಂಗ್‌, ಚೀನಾ ಅಧ್ಯಕ್ಷ.

ಆಧುನಿಕ ಕಾಲದ ಉದಾತ್ತ ರಾಜಕಾರಣಿಗಳಲ್ಲಿ ಒಬ್ಬರು. ಅತ್ಯಂತ ಕಷ್ಟ ನಿಷ್ಠುರಗಳನ್ನು ಎದುರಿಸಿದ್ದ ಅವರು ಕಡೆಯವರೆಗೂ ಮಾನವೀಯತೆ ಹಾಗೂ ನ್ಯಾಯಪರತೆಯ ಆದರ್ಶಗಳಿಗೆ ಬದ್ಧವಾಗಿದ್ದರು.

– ವ್ಲಾಡಿಮಿರ್‌ ಪುಟಿನ್‌, ರಷ್ಯಾ ಅಧ್ಯಕ್ಷ.

ಅವರೊಬ್ಬ ರಾಜಕೀಯ ನಾಯಕ ಎಂಬುದಕ್ಕಿಂತ ಹೆಚ್ಚಾಗಿ ನೈತಿಕ ನಾಯಕರಾಗಿ ಜನಮಾನಸದಲ್ಲಿ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತಾರೆ

– ಟೋನಿ ಅಬಾಟ್‌,   ಆಸ್ಟ್ರೇಲಿಯಾ ಪ್ರಧಾನಿ.

ಅವರು ಪ್ರಜಾಪ್ರಭುತ್ವದ ಸ್ಫೂರ್ತಿಯುತ ಪ್ರತಿಪಾದಕ ಹಾಗೂ ಗೌರವಾನ್ವಿತ ಸಂಧಾನಕಾರರಾಗಿದ್ದರು 

– ಶಿಮೋನ್‌ ಪೆರೆಸ್‌, ಇಸ್ರೇಲ್‌ ಅಧ್ಯಕ್ಷ.

ಮೈಸೂರಿಗೂ ಬಂದಿದ್ದರು...

 ಮೈಸೂರಿಗೆ ನೆಲ್ಸನ್‌ ಮಂಡೇಲಾ ಭೇಟಿ ನೀಡಿದ ನೆನಪಿಗಾಗಿ ಹೈವೈ ವೃತ್ತದ ಬಳಿಯಿರುವ ರಸ್ತೆಗೆ ನೆಲ್ಸನ್ ಮಂಡೇಲಾ ಹೆಸರು ಇಡಲಾಗಿದೆ.

ಮೈಸೂರು: ಎಂಬತ್ತರ ದಶಕದಲ್ಲಿ ನೆಲ್ಸನ್‌ ಮಂಡೇಲಾ ಮೈಸೂರಿಗೆ ಭೇಟಿ ನೀಡಿದ್ದರು. ಆಗ ಅವರಿಗೆ ಕಲಾ ಮಂದಿರ ದಲ್ಲಿ ಪೌರ ಸನ್ಮಾನ ನೀಡಲಾಗಿತ್ತು. ಅಂದು ಕಲಾಮಂದಿರ ತುಂಬಿ ತುಳು ಕುತ್ತಿತ್ತು. ಭವ್ಯ ವೇದಿಕೆ ಮೇಲೆ ಮಂಡೇಲಾ ಮಾತನಾಡಿದ್ದರು.‘ಭಾರತದ ಜನ ಸ್ವಾತಂತ್ರ್ಯಕ್ಕಾಗಿ  ಹೋರಾಟ ಮಾಡಿದರು. ಅದು ದಕ್ಷಿಣ ಆಫ್ರಿಕದ ಜನರಲ್ಲಿ ಹೋರಾಟದ ಪ್ರಜ್ಞೆ ಮೂಡಿಸಿ ಪ್ರೇರಣೆ ನೀಡಿತು. ದಶಕ ಗಟ್ಟಲೆ ಜೈಲಿನಲ್ಲಿ ಇದ್ದುದಕ್ಕೆ ನನಗೆ ಪಶ್ಚಾತ್ತಾಪವಿಲ್ಲ.

ಸ್ವಾತಂತ್ರ್ಯದ ಹೋರಾಟ– ಸ್ವಾತಂತ್ರ್ಯದ ಉಸಿರಾಟ  ನಮ್ಮ ಗುರಿ. ಹೀಗಾಗಿ ನನ್ನ ಜನತೆ ಕೊನೆಯ ಉಸಿರು ಇರುವವರೆಗೆ ಹೋರಾಟವನ್ನು ಮುಂದುವರಿಸುತ್ತಾರೆ’ ಎಂದು ಅಂದು ಭಾವಪರವಶರಾಗಿ ಮಂಡೇಲಾ ಮಾತನಾಡಿದ್ದರು.

ಆ ಸಮಾರಂಭದಲ್ಲಿ ಕಮ್ಯುನಿಸ್ಟರು, ಸೋಷಲಿಸ್ಟರು, ಜನಸಂಘ, ಕಾಂಗ್ರೆಸ್‌ ಹೀಗೆ ಎಲ್ಲ ಪಕ್ಷದವರೂ ಸೇರಿದ್ದರು. ಆ ದಿನ ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ ಎಂದು ಹಿರಿಯ ಪತ್ರಕರ್ತ ಈಚನೂರು ಕುಮಾರ್ ಸ್ಮರಿಸಿಕೊಂಡರು.

ಮೂರು ಮದುವೆ, ಆರು ಮಕ್ಕಳು...

ಜೋಹಾನ್ಸ್‌ಬರ್ಗ್‌:
  95 ವರ್ಷಗಳ ತುಂಬು ಜೀವನ ನಡೆಸಿದ ಮಂಡೇಲಾ ಮೂವರನ್ನು ವಿವಾಹವಾಗಿದ್ದರು. ಮೊದಲಿಗೆ 1944ರಲ್ಲಿ ಎವೆಲಿನ್‌ ನೊಟೊಕೊ ಅವರನ್ನು ಮದುವೆಯಾಗಿ ದಾಂಪತ್ಯ ಬದುಕಿಗೆ ಕಾಲಿಟ್ಟರು. ಇವರಿಗೆ ನಾಲ್ವರು ಮಕ್ಕಳು. ಇಬ್ಬರ ಸಂಬಂಧ 1957ರಲ್ಲಿ ಕೊನೆಗೊಂಡಿತು.

ನಂತರ 1958ರಲ್ಲಿ ವಿನ್ನಿ ಮದಿಕೆಜೆಲಾ ಅವರನ್ನು ವರಿಸಿದರು. ಈ ದಾಂಪತ್ಯದಿಂದ ಇಬ್ಬರು ಹೆಣ್ಣು ಮಕ್ಕಳು. 1996ರಲ್ಲಿ ಈ ಸಂಬಂಧಕ್ಕೂ ತೆರೆಬಿತ್ತು. ಕೊನೆಯದಾಗಿ 1998ರಲ್ಲಿ ಗ್ರಾಕಾ ಮ್ಯಾಶೆಲ್‌ ಅವರನ್ನು ವಿವಾಹವಾದರು. ತಮ್ಮ ಮೊದಲನೇ ದಾಂಪತ್ಯದ ಮಗ ಮಾಕ್‌ಗಥೋ 2005ರಲ್ಲಿ ಏಡ್ಸ್‌ನಿಂದ ಸಾವಿಗೀಡಾದ ನಂತರ ಮಂಡೇಲಾ ಅವರು ಎಚ್‌ಐವಿ ವಿರುದ್ಧದ ಜಾಗೃತಿಯಲ್ಲೂ ತೊಡಗಿಸಿಕೊಂಡಿದ್ದರು.

ಪ್ರತಿಕ್ರಿಯಿಸಿ (+)