ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರಧ್ವಜ’ವೇ ಎಲ್ಲ; ಲಾಭ ಲೆಕ್ಕಾಚಾರ ಇಲ್ಲಿಲ್ಲ!

Last Updated 12 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಹಳ್ಳಿಯಿಂದ ದಿಲ್ಲಿವರೆಗೆ, ವಿಧಾನಸೌಧ, ಕೆಂಪುಕೋಟೆ, ದೇಶದ ರಾಯಭಾರಿ ಕಚೇರಿ... ಹೀಗೆ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ, ಘನತೆ, ಸ್ವಾಭಿಮಾನದ ಸಂಕೇತವಾಗಿ ಹಾರಾಡುವ ನಮ್ಮ ‘ರಾಷ್ಟ್ರಧ್ವಜ’ದ ನಿರ್ಮಾಣಕ್ಕೆ ‘ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‘ (ಬಿಐಎಸ್) ಸಂಸ್ಥೆಯಿಂದ ಮಾನ್ಯತೆ ಪಡೆದ ಸಂಸ್ಥೆ– ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ.

ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕೃತವಾಗಿ ರಾಷ್ಟ್ರಧ್ವಜಗಳನ್ನು ಪೂರೈಕೆ ಮಾಡುವ ಈ ಸಂಘದ ಬೆಂಗೇರಿಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಈಗ ರಾತ್ರಿ –ಹಗಲು ಧ್ವಜ ತಯಾರಿ ಕೆಲಸ ಭರದಿಂದ ನಡೆಯುತ್ತಿದೆ. ಸ್ವಾತಂತ್ರ್ಯ ದಿನ ಸಮೀಪಿಸುತ್ತಿದ್ದಂತೆ ಈ ಚಟುವಟಿಕೆ ಇನ್ನಷ್ಟು ಚುರುಕುಗೊಳ್ಳುತ್ತದೆ. ಕಳೆದ ಮೂರು ತಿಂಗಳಿನಲ್ಲಿ (ಮೇ, ಜೂನ್‌, ಜುಲೈ ಮತ್ತು ಆ. 5ರವರೆಗೆ) ಮಾತ್ರ ವಿವಿಧ ಅಳತೆಗಳ 59.77 ಲಕ್ಷ ರಾಷ್ಟ್ರಧ್ವಜಗಳನ್ನು ನಿರ್ಮಿಸಿರುವ ಸಂಘ, ರೂ. 58.19 ಲಕ್ಷ ಮೌಲ್ಯದ ಧ್ವಜಗಳನ್ನು ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ. ಹಾಗೆಂದು ಇಲ್ಲಿ ‘ಲಾಭ’ದ ಲೆಕ್ಕಾಚಾರ ಇಲ್ಲ. ಗಾಂಧೀ ತತ್ವಪಾಲನೆ, ಗಾಂಧೀ ತತ್ವ ಪ್ರಣೀತ ಸಂಸ್ಥೆಯ ‘ನೋ ಪ್ರಾಫಿಟ್‌, ನೋ ಲಾಸ್‌ ವ್ಯವಹಾರ’ ಇದು!

ಸ್ವಾತಂತ್ರ್ಯಾ ನಂತರ ಧಾರವಾಡ ತಾಲ್ಲೂಕಿನ ಗರಗ ಖಾದಿ ಕೇಂದ್ರದಿಂದ ಬಟ್ಟೆ ಪಡೆದುಕೊಂಡು, ಬಿಐಎಸ್ ಮಾನ್ಯತೆ ಪಡೆದಿದ್ದ ಮುಂಬೈ ಮೂಲದ ಖಾಸಗಿ ಸಂಸ್ಥೆಯೊಂದು ರಾಷ್ಟ್ರಧ್ವಜಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿತ್ತು. 2004ರಲ್ಲಿ ಬಿ.ಎಸ್.ಪಾಟೀಲ ಅವರು ಬೆಂಗೇರಿ ಖಾದಿ ಸಂಘದ ಅಧ್ಯಕ್ಷರಾದ ನಂತರ ಇಲ್ಲಿ ರಾಷ್ಟ್ರಧ್ವಜ ನಿರ್ಮಾಣದ ಕಲ್ಪನೆ ಚಿಗುರೊಡೆಯಿತು.


‘ರಾಷ್ಟ್ರಧ್ವಜ ತಯಾರಿಸಲು 2006ರ ಫೆ. 18ರಂದು ಬಿಐಎಸ್‌ನಿಂದ ಅನುಮತಿ ಸಿಕ್ಕಿತು. ಆದರೆ ತಯಾರಿ ಆರಂಭಿಸಿದ್ದು 2007–08ರಲ್ಲಿ. ಅಂದಿನಿಂದ, ಒಂದೇ ಕಡೆ ಬಟ್ಟೆ, ಬ್ಲೀಚಿಂಗ್ ಸೇರಿದಂತೆ ಧ್ವಜ ನಿರ್ಮಾಣದ ಎಲ್ಲ ಪ್ರಕ್ರಿಯೆ ನಡೆಯುವ ಏಕೈಕ ಸಂಸ್ಥೆ ಎಂಬ ಕೀರ್ತಿ ನಮ್ಮ ಸಂಘಕ್ಕೆ ಸಲ್ಲುತ್ತದೆ. ವರ್ಷದಿಂದ ವರ್ಷಕ್ಕೆ ಧ್ವಜ ನಿರ್ಮಾಣ ಮತ್ತು ಮಾರಾಟದಲ್ಲಿ ಪ್ರಗತಿ ಸಾಧಿಸುತ್ತಲೇ ಬಂದ ಸಂಘ, ಈಗ ವ್ಯವಹಾರ ವೃದ್ಧಿಸಿಕೊಂಡು ‘ಎ’ ಪ್ಲಸ್‌ ಗ್ರೇಡ್‌ ಪಡೆದಿದೆ’ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಎಚ್‌.ಎನ್‌. ಅಂಟೀನ.

‘ಹಿಂದಿನ ವರ್ಷದ ವ್ಯವಹಾರ ನೋಡಿಕೊಂಡು ಪ್ರಸಕ್ತ ವರ್ಷದ ಗುರಿ ನಿಗದಿಪಡಿಸಿ ಧ್ವಜ ನಿರ್ಮಿಸಲಾಗುತ್ತದೆ. ಈ ಬಾರಿ ಸುಮಾರು ರೂ. 2 ಕೋಟಿಯ ಧ್ವಜ ಮಾರಾಟ ನಿರೀಕ್ಷೆ ಇದೆ. ಎಲ್ಲ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳು ತಲಾ ಮೂರು ರಾಷ್ಟ್ರಧ್ವಜ ಖರೀದಿಸಬೇಕು ಎಂದು ರಾಜ್ಯ ಸರ್ಕಾರದ ಕಳೆದ ವರ್ಷ ಹೊರಡಿಸಿದ್ದ ಆದೇಶದಿಂದಾಗಿ 2013–14ರ ಸಾಲಿನಲ್ಲಿ ಬೇಡಿಕೆ ಇಮ್ಮಡಿ ಆಗಿತ್ತು. ಮೊನ್ನೆಯಷ್ಟೆ ಡೆಹರಾಡೂನ್‌ಗೆ ರೂ. 82,560 ಮೊತ್ತದ ಧ್ವಜಗಳನ್ನು ಮಾರಾಟ ಮಾಡಲಾಗಿದೆ’ ಎಂದರು.

ಧ್ವಜ ನಿರ್ಮಿಸಲು ಎಪಿಎಂಸಿ ಅಥವಾ ಜಿನ್ನಿಂಗ್‌ ಮಿಲ್‌ಗಳಿಂದ ಹತ್ತಿ ಅರಳಿ ಖರೀದಿಸಲಾಗುತ್ತದೆ. ಜೈದಾರ ಹತ್ತಿ ಬಟ್ಟೆಯಿಂದಲೇ ಧ್ವಜ ನಿರ್ಮಿಸಲಾಗುತ್ತದೆ. ಹತ್ತಿಯ ಗುಣಮಟ್ಟ ಪರೀಕ್ಷೆ ಮಾಡಿ ಖರೀದಿಸಲಾಗುತ್ತದೆ. ಎಲ್ಲ ಪ್ರಕ್ರಿಯೆ ಪಾರದರ್ಶಕವಾಗಿ, ಟೆಂಡರ್‌ ಮೂಲಕ ನಡೆಯುತ್ತದೆ. ಎಲ್ಲೋ ಹಳ್ಳಿಗಾಡಿನಲ್ಲಿ ಬೆಳೆದ ಹತ್ತಿ ರಾಷ್ಟ್ರಧ್ವಜವಾಗಿ, ಜಾಗತಿಕವಾಗಿ ಬಾನೆತ್ತರದಲ್ಲಿ ಹಾರಾಡುವ ಪರಿ ಒಂದು ವಿಸ್ಮಯ!
‘ಧ್ವಜ ಸಂಹಿತೆಯ ನಿಯಮಾವಳಿಗಳಿಗೆ ಯಾವುದೇ ದಕ್ಕೆ ಬಾರದಂತೆ, ಗೌರವ, ಘನತೆ ಕಾಪಾಡಿಕೊಂಡು ನಮ್ಮಲ್ಲಿ ರಾಷ್ಟ್ರಧ್ವಜ ತಯಾರಿಸಲಾಗುತ್ತದೆ. ಹತ್ತಿ ಖರೀದಿಯಿಂದ ಆರಂಭಿಸಿ ನೂಲು, ನೇಯ್ದು ಬಟ್ಟೆಯಾಗಿ, ಹೊಲಿಗೆ ಹಾಕಿ, ಅಶೋಕ ಚಕ್ರ ಲಾಂಛನ ಅಳವಡಿಸಿ ರಾಷ್ಟ್ರಧ್ವಜ ಸಿದ್ಧವಾಗುವಷ್ಟರಲ್ಲಿ 15ರಿಂದ 18 ಬಾರಿ ಪರಿಶೀಲನೆಗೆ ಒಳಗಾಗುತ್ತದೆ’ ಎನ್ನುತ್ತಾರೆ ಅಂಟೀನ.

ಒಂಬತ್ತು ವಿವಿಧ ಅಳತೆಗಳಲ್ಲಿ ರಾಷ್ಟ್ರಧ್ವಜಗಳನ್ನು ತಯಾರಿಸಲಾಗುತ್ತದೆ. ಈ ಪೈಕಿ ಅತಿ ದೊಡ್ಡ ಆಕಾರದ (21X14 ಅಡಿ) ಮೂರು ಧ್ವಜಗಳನ್ನು ರಾಜ್ಯದ ನರಗುಂದ, ಮಧ್ಯಪ್ರದೇಶದ ಗ್ವಾಲಿಯರ್‌, ಮಹಾರಾಷ್ಟ್ರದ ರಾಯಗಡದಲ್ಲಿ ಪ್ರತಿವರ್ಷ ಹಾರಿಸಲಾಗುತ್ತದೆ. ಅತಿ ಚಿಕ್ಕ ಅಳತೆಯ (6X4 ಇಂಚು) ಧ್ವಜಗಳು ಟೇಬಲ್‌ಗಳ ಮೇಲಿಡಲು ಬಳಕೆಯಾಗುತ್ತವೆ.

ಒಮ್ಮೆ ಖರೀದಿಸಿದ ಧ್ವಜವನ್ನು ಜೋಪಾನವಾಗಿಟ್ಟುಕೊಂಡರೆ ಎರಡು ಮೂರು ಬಾರಿ ಬಳಸಬಹುದು. ಹಾಗೆಂದು ಮಳೆಗೆ ತೊಯ್ದರೆ, ಇಸ್ತ್ರಿ ಮಾಡುವುದಾಗಲಿ, ಹರಿದರೆ ಮತ್ತೆ ಹೊಲಿಗೆ ಹಾಕುವುದಾಗಲಿ ಸಲ್ಲ. ಅಕಸ್ಮಾತ್ ಹರಿದಲ್ಲಿ ಅದನ್ನು ನಾಲ್ವರು ಹಿರಿಯರ ಸಮ್ಮುಖದಲ್ಲಿ ಮಣ್ಣಿನಲ್ಲಿ ಹೂಳಬೇಕು ಅಥವಾ ಶ್ರೀಗಂಧದ ಕಟ್ಟಿಗೆಯಲ್ಲಿ ಸುಡಬೇಕು ಎನ್ನುತ್ತದೆ ಧ್ವಜ ಸಂಹಿತೆ.

ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಬರುತ್ತಿದ್ದಂತೆ ಪ್ಲಾಸ್ಟಿಕ್‌ ಧ್ವಜಗಳ, ನಕಲಿ ಧ್ವಜಗಳ ಮಾರಾಟ ಹೆಚ್ಚುತ್ತದೆ. ಧ್ವಜ ಸಂಹಿತೆ ಉಲ್ಲಂಘಿಸಿದ, ಬಿಐಎಸ್‌ ಮಾನದಂಡ ಹೊರತಾದ ಧ್ವಜಗಳ ಮಾರಾಟ ಕಾನೂನುಬಾಹಿರ. ಆದರೆ ಅದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗುತ್ತಿಲ್ಲ. ಅದರಲ್ಲೂ ಬೆಂಗಳೂರಿನ ಬೀದಿಬದಿಗಳಲ್ಲಿ ಧ್ವಜಗಳು ಹರಾಜು ಆಗುತ್ತವೆ. ಎಲ್ಲಿಂದಲೋ, ಯಾವುದೋ ಬಟ್ಟೆಯಿಂದ ತಯಾರಿಸಿದ ಧ್ವಜಗಳಿಂದ ದೇಶದ ಘನತೆ, ಗೌರವಕ್ಕೆ ಕುಂದು, ಗಾಂಧೀ ಅವರ ಕನಸು– ಕಲ್ಪನೆಗೆ ಧಕ್ಕೆ’ ಎಂದು ಅಭಿಪ್ರಾಯಪಡುತ್ತಾರೆ ಅಪ್ಪಟ ಗಾಂಧೀವಾದಿ, ಖಾದಿಧಾರಿ ಅಂಟೀನ.

ರಾಜ್ಯ ಸರ್ಕಾರ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯ್ತಿ ಕಚೇರಿಗಳಲ್ಲಿ ದಿನವೂ ರಾಷ್ಟ್ರ ಧ್ವಜಾರೋಹಣವನ್ನು ಕಳೆದ ವರ್ಷದಿಂದ ಕಡ್ಡಾಯಗೊಳಿಸಿದೆ. ಪ್ರತಿ ಪಂಚಾಯ್ತಿ ಕನಿಷ್ಠ ಮೂರು ರಾಷ್ಟ್ರಧ್ವಜಗಳನ್ನು ಅಧಿಕೃತ ಖಾದಿ ಸಂಸ್ಥೆಗಳಿಂದಲೇ ಖರೀದಿಸಬೇಕು ಎಂದೂ ಸುತ್ತೋಲೆ ಹೊರಡಿಸಿತ್ತು. ಪಂಚಾಯತ್‌ ರಾಜ್‌ ಕಚೇರಿಗಳಲ್ಲಿ ಹಾರಿಸಲು 3X2 ಅಡಿ ಉದ್ದಗಲ ಅಳತೆಯ ಧ್ವಜವನ್ನೇ ಬಳಸಲಾಗುತ್ತಿದೆ. ಹೀಗಾಗಿ ಈ ಅಳತೆಯ ಧ್ವಜಗಳಿಗೆ ಕಳೆದ ವರ್ಷ ಬೇಡಿಕೆ ಹೆಚ್ಚಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಧ್ವಜದ ದರ ಶೇ 25ರಿಂದ 40ರಷ್ಟು ಏರಿಕೆಯಾಗಿದೆ. ಹತ್ತಿ ಸಹಿತ ಧ್ವಜ ತಯಾರಿಗೆ ಬಳಸುವ ಕಚ್ಛಾ ಸಾಮಗ್ರಿಗಳ ಬೆಲೆ ಹೆಚ್ಚಿದ್ದರಿಂದ ದರ ಹೆಚ್ಚಿಸುವುದು ಅನಿ ವಾರ್ಯವಾಯಿತು’ ಎಂದು ಸಮರ್ಥಿಸಿಕೊಂಡರು.

‘ರಿಬೇಟ್‌ ಪದ್ಧತಿ ಆರಂಭವಾಗಲಿ’
ಖಾದಿ ಉತ್ತೇಜನ ನೀಡಲು ಕೇಂದ್ರ– ರಾಜ್ಯ ಸರ್ಕಾರ ನೀಡುತ್ತಿದ್ದ ರಿಬೇಟ್‌ ವ್ಯವಸ್ಥೆ 2009–10ರವರೆಗೆ ಜಾರಿಯಲ್ಲಿತ್ತು. ಆದರೆ ಕಳೆದ ಮೂರು ವರ್ಷದಿಂದ ಅದನ್ನು ರದ್ದುಗೊಳಿಸಿ ಎಂಡಿಎ (ಮಾರ್ಕೆಟಿಂಗ್‌ ಡೆವಲಂಪ್‌ಮೆಂಟ್‌ ಅಸಿಸ್ಟ್‌) ನೀಡುತ್ತಿದೆ. ಈ ಹೊಸ ವ್ಯವಸ್ಥೆಯಿಂದ ಖಾದಿ ಸಂಘಕ್ಕೆ ಯಾವುದೇ ಪ್ರಯೋಜನ ಇಲ್ಲ.

ಕೇಂದ್ರ ನೀಡುವ ಶೇ 20 ಎಂಡಿಎಯಲ್ಲಿ ಶೇ 15 ಗ್ರಾಹಕರಿಗೆ, ಉಳಿದ ಶೇ 5ರಲ್ಲಿ ಅರ್ಧದಷ್ಟು ನೇಯುವವರಿಗೆ ಹೋಗುತ್ತದೆ. ಅದೇ ರೀತಿ ರಾಜ್ಯ ನೀಡುವ ಶೇ 15ರಲ್ಲಿ ಶೇ 10 ಗ್ರಾಹಕರಿಗೆ ಶೇ 3 ನೇಯುವವರಿಗೆ ಸಲ್ಲಿಕೆಯಾಗುತ್ತದೆ. ಗ್ರಾಹಕರಿಗೆ ಅನುಕೂಲವಾದರೂ ಸಂಸ್ಥೆಯ ಹಿತದೃಷ್ಟಿಯಿಂದ ಇದು ಸರಿಯಾದ ಕ್ರಮವಲ್ಲ. ಇದರ ಬದಲು ಈ ಹಿಂದಿನಂತೆ ರಿಬೇಟ್‌ ವ್ಯವಸ್ಥೆ ಬರಬೇಕು’ ಎಂದು ಪ್ರತಿಪಾದಿಸುತ್ತಾರೆ ಅಂಟೀನ.

ಯಶಸ್ಸಿನ ಹಾದಿ....
1981–-82ರಲ್ಲಿ ಭೀಕರ ಬರಗಾಲಕ್ಕೆ ತುತ್ತಾದ ಬಾಗಲಕೋಟೆ ಜಿಲ್ಲೆಯಲ್ಲಿ ಆರಂಭವಾದ ಗ್ರಾಮೋದ್ಯೋಗ ಸಂಘ, 27 ಗ್ರಾಮಗಳ 2,500 ಜನರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಿತ್ತು. ಸಂಘದ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಮಾಗಡಿ ಅವರ ಕನಸಿನ ಕೂಸಾದ ಸಂಘ, ಇಂದು ಖಾದಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇದೇ ಸಮಯದಲ್ಲಿ ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಆರಂಭವಾದ ಖಾದಿ ಸಂಸ್ಥೆ ಅಸ್ತಿತ್ವ ಕಳೆದುಕೊಂಡಿದೆ. ಒಟ್ಟು 27 ಕೇಂದ್ರಗಳಲ್ಲಿ ಸ್ವಂತ ಕಟ್ಟಡ ಹೊಂದಿರುವ ಸಂಘ, ಜಾತಿ- ಮತ ಧರ್ಮದ ಚೌಕಟ್ಟು ಮೀರಿ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ.

ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ, ಗದ್ದನಕೇರಿ, ಸಿಮಿಕೇರಿ, ಜಾಲಿಹಾಳ ಮತ್ತು ಬೇಲೂರು ಗ್ರಾಮಗಳಲ್ಲಿ 50 ಮಗ್ಗ, 90 ಚರಕಗಳು ಇದ್ದು, 165 ಜನರು ನೂಲುವ ಕೆಲಸದಲ್ಲಿ ತೊಡಗಿದ್ದಾರೆ. ಹುಬ್ಬಳ್ಳಿಯ ಕೇಂದ್ರದಲ್ಲಿ 25-ರಿಂದ 30 ಮಂದಿ ಹೊಲಿಗೆ, ಟ್ಯಾಗಲ್ಸ್ ಹಾಕುವ ಕಾಯಕದಲ್ಲಿ ನಿರತರಾಗಿದ್ದಾರೆ. 100 ಜನ ಆಡಳಿತ ಸಿಬ್ಬಂದಿ ಇದ್ದಾರೆ. ಖಾದಿ ಬಟ್ಟೆ, ಧ್ವಜ ಮಾತ್ರವಲ್ಲದೇ ಖಾದಿ ಪಾಲಿಯೆಸ್ಟರ್, ಮಸ್ಲಿನ್‌ ಖಾದಿ, ನೂಲು, ಜಮಖಾನ್, ಬೆಡ್‌ಶೀಟ್‌ನಂತಹ ಅನೇಕ ವಸ್ತುಗಳ ನೇಯ್ಗೆ ಇಲ್ಲಿಯೇ ಆಗುತ್ತಿದ್ದು, 1,200 ಜನರು ಉದ್ಯೋಗ ಕಂಡುಕೊಂಡಿದ್ದಾರೆ.

ಬೆಂಗೇರಿ ಖಾದಿ ಸಂಘ ರಾಜ್ಯದ 79 ಹತ್ತಿ, 50 ಉಣ್ಣೆ ಹಾಗೂ 57 ರೇಷ್ಮೆ ಖಾದಿ ಸಂಸ್ಥೆಗಳೂ ಸೇರಿದಂತೆ 186 ಅಧಿಕೃತ ನೂಲುವ ನೇಕಾರರ ಸಂಸ್ಥೆಗಳ ಹಿತ ಕಾಯುತ್ತಿದೆ. ರಾಜ್ಯ ಸರಕಾರ 50 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕಳೆದ ವರ್ಷ ಖಾದಿ ಕ್ಷೇತ್ರಕ್ಕೆ ರೂ. 28 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅದರಲ್ಲಿ ನೇಕಾರರ ಸಂಸ್ಥೆಗಳ ಪುನಶ್ಚೇತನಕ್ಕೆ ರೂ. 11ಕೋಟಿ ಹಾಗೂ ನೇಕಾರರಿಗೆ ಪ್ರೋತ್ಸಾಹಧನ ನೀಡಲು ರೂ. 16 ಕೋಟಿ ಮೀಸಲಿಡಲಾಗಿದೆ.

ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಡಿ.ಆರ್.ಪಾಟೀಲ, ಎಚ್.ಹನುಮಂತಪ್ಪ, ಡಾ. ಎಚ್.ಶ್ರೀನಿವಾಸಯ್ಯ ಹಾಗೂ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಕೆ.ವಿ.ಪತ್ತಾರ ಖಾದಿ ಕ್ಷೇತ್ರದ ಅಭಿವೃದ್ಧಿಗೆ ಹೆಗಲು ನೀಡಿದ್ದಾರೆ. ರಾಜ್ಯದಲ್ಲಿ ಇನ್ನೂ ಐದು ರಾಷ್ಟ್ರಧ್ವಜ ತಯಾರಿಕೆ ಘಟಕ ಸ್ಥಾಪಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅಂಟೀನ ತಿಳಿಸಿದರು.

ಗಾಂಧಿ ಬೇರು; ಜಾಗತಿಕ ಮೇರು!
ಹುಬ್ಬಳ್ಳಿ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಈಗ ಗಾಂಧಿ ಬೇರು ಜಾಗತಿಕ ಮೇರು ಯೋಜನೆಯಡಿ ತನ್ನೆಲ್ಲ ವ್ಯವಹಾರವನ್ನು ಗಣಕೀಕರಣಗೊಳಿಸಿದೆ. ಮೊದಲ ಹಂತದಲ್ಲಿ ಆಡಳಿತ ಕಚೇರಿ ನಂತರ ಬೆಂಗಳೂರಿನಲ್ಲಿರುವ

ಖಾದಿ ವಸ್ತ್ರಾಲಯ ಎಂಪೋರಿಯಂ ಹಾಗೂ 3ನೇ ಹಂತದಲ್ಲಿ ಬಾಗಲಕೋಟೆ, ಬದಾಮಿ ಮತ್ತು ಬೀಳಗಿ ತಾಲ್ಲೂಕುಗಳಲ್ಲಿರುವ 24 ಖಾದಿ ಕೇಂದ್ರಗಳಲ್ಲಿ ಈ ಯೋಜನೆ ಜಾರಿಗೊಳಿಸಲು ಉದ್ದೇಶಿಸಿದೆ. ಗಣಕೀಕರಣಗೊಂಡ ರಾಜ್ಯದ ಮೊದಲ ಸಂಸ್ಥೆ ಇದಾಗಿದೆ. ಸಂಘದಲ್ಲಿ ಸಿಸಿ ಕ್ಯಾಮೆರಾ, ಬಯೋಮೆಟ್ರಿಕ್‌ ಅಳವಡಿಕೆ ಹಾಗೂ ಸುರಕ್ಷತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸಂಘ ಈ ಕ್ರಮಕ್ಕೆ ಮುಂದಾಗಿದೆ ಎಂದು ಅಂಟೀನ ಮಾಹಿತಿ ನೀಡಿದರು.

ನಕಲಿ ರಾಷ್ಟ್ರಧ್ವಜ ಹಾವಳಿ
ರಾಷ್ಟ್ರದ ಗೌರವ, ಅಭಿಮಾನದ ಸಂಕೇತವಾಗಿರುವ ರಾಷ್ಟ್ರಧ್ವಜ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜೋತ್ಸವದಂದು ದೇಶವ್ಯಾಪಿ ನಕಲಿ ಮಾರಾಟವಾಗುತ್ತಿದೆ. ಅದೂ ಅಸಲಿಯನ್ನು ಹಿಂದಿಕ್ಕಿ!

ಧ್ವಜ ಸಂಹಿತೆ ಪ್ರಕಾರ ರಾಷ್ಟ್ರಧ್ವಜ ಹೀಗೇ ಇರಬೇಕೆಂದು ನಿರ್ದಿಷ್ಟ ನಿಯಮಾವಳಿಗಳಿದ್ದರೂ ದೇಶದಾದ್ಯಂತ ಇದನ್ನು ಉಲ್ಲಂಘಿಸಿ ರಾಷ್ಟ್ರಧ್ವಜ ತಯಾರಿಸಿ ಮಾರಲಾಗುತ್ತಿದೆ. ‘ಕೈಯಿಂದ ನೇಯ್ದ ಅಪ್ಪಟ ಖಾದಿ’ ಬಟ್ಟೆಯಿಂದ ಮಾತ್ರ ತ್ರಿವರ್ಣ ಧ್ವಜ ಸಿದ್ಧಪಡಿಸಬೇಕೆಂಬುದು ಧ್ವಜ ಸಂಹಿತೆಯಲ್ಲಿರುವ ಮೊಟ್ಟಮೊದಲ ನಿಯಮ. ಆದರೆ, ದುರಂತವೋ ಎನ್ನುವಂತೆ ದೇಶವ್ಯಾಪಿ ಖಾಸಗಿ ಮಿಲ್‌ಗಳಲ್ಲಿ ಬಗೆಬಗೆಯ ಬಟ್ಟೆಯಿಂದ ಹಿಡಿದು ಪ್ಲಾಸ್ಟಿಕ್ ಹಾಳೆಯಿಂದಲೂ ರಾಷ್ಟ್ರಧ್ವಜ ತಯಾರಿಸಲಾಗುತ್ತಿದೆ!

ರಾಷ್ಟ್ರಧ್ವಜ ತಯಾರಿಸುವ ಬಿಐಎಸ್ ಅನುಮತಿ ಪಡೆದಿರುವುದು ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಮತ್ತು ಮುಂಬೈನ ಖಾದಿ ಡಯಾಸ್ ಅಂಡ್ ಪ್ರಿಂಟರ್ಸ್ ಸಂಸ್ಥೆ ಮಾತ್ರ. ಪ್ರತಿವರ್ಷ ಸುಮಾರು ರೂ. 6 ಕೋಟಿ ಮೌಲ್ಯದ ರಾಷ್ಟ್ರಧ್ವಜಗಳು ಮಾರಾಟವಾಗುತ್ತವೆ. ಈ ಪೈಕಿ ಮುಂಬೈ ಹಾಗೂ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘದಿಂದ ಅಂದಾಜು ರೂ. 2.5 ಕೋಟಿ ಮೌಲ್ಯದ ರಾಷ್ಟ್ರಧ್ವಜಗಳು ಮಾರಾಟವಾಗುತ್ತವೆ. ಉಳಿದ ಖಾದಿ ಸಂಘಗಳಿಂದ ಅಂದಾಜು ರೂ. 50 ಲಕ್ಷ ಮೌಲ್ಯದ ರಾಷ್ಟ್ರಧ್ವಜ ಮಾರಾಟವಾಗುತ್ತವೆ. ಉಳಿದಂತೆ ಸುಮಾರು ರೂ. 3 ಕೋಟಿಯಷ್ಟು ನಕಲಿ, ಮಾನ್ಯತೆಯೇ ಇಲ್ಲದ ಧ್ವಜಗಳು ಮಾರಾಟವಾಗುತ್ತವೆ ಎಂಬ ಅಂಕಿ ಅಂಶವಿದೆ.

‘ಪ್ಲಾಸ್ಟಿಕ್‌ ಧ್ವಜ ನಿಷೇಧಿಸಬೇಕು’
‘ನಕಲಿ ರಾಷ್ಟ್ರಧ್ವಜಗಳು ಹಾರಾಡುತ್ತಿರು ವುದಕ್ಕೆ ಸರ್ಕಾರವೇ ಹೊಣೆ. ನಕಲಿ ಧ್ವಜಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಾಮಾಣಿಕ ಕೆಲಸ

ಯಾರಿಂದಲೂ ನಡೆಯುತ್ತಿಲ್ಲ. ಶಾಲಾ ವಿದ್ಯಾರ್ಥಿಗಳ ಕೈಯಲ್ಲಿ ಪ್ಲಾಸ್ಟಿಕ್‌ ಧ್ವಜಗಳು ರಾರಾಜಿಸು ವುದನ್ನು ನೋಡಬಹುದು. ನಕಲಿ ಧ್ವಜಗಳ ಹಾವಳಿ ತಡೆದರೆ ಖಾದಿ ಗ್ರಾಮೋದ್ಯೋಗ ಇನ್ನೂ ಬೆಳವಣಿಗೆಯಾಗುವುದರಲ್ಲಿ ಸಂದೇಹ ಇಲ್ಲ. ಸರಕಾರ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು.’

–ಎಚ್.ಎನ್. ಅಂಟೀನ, ಕಾರ್ಯದರ್ಶಿ, ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT