₨ 16 ಕೋಟಿ ಚಿನ್ನ ವಶ

ಬೆಂಗಳೂರು: ಮಿಂಚಿನ ಕಾರ್ಯಾಚರಣೆ ನಡೆಸಿದ ನಗರ ಪೊಲೀಸರು, ಅಕ್ರಮವಾಗಿ ಚಿನ್ನದ ಗಟ್ಟಿಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಿ ₨ 16.50 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
‘ಕೊಯಮತ್ತೂರು ಮೂಲದ ಬಾಲಸುಬ್ರಹ್ಮಣ್ಯ, ರವಿವರ್ಮ ಮತ್ತು ಈಶ್ವರಮೂರ್ತಿ ಬಂಧಿತರು. ಆರೋಪಿಗಳಿಂದ 54 ಕೆ.ಜಿ ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕೆಲ ವ್ಯಕ್ತಿಗಳು ಜೆಟ್ ಏರ್ವೇಸ್ ವಿಮಾನದಲ್ಲಿ ಕೋಲ್ಕತ್ತದಿಂದ ಬೆಂಗಳೂರು ಮಾರ್ಗವಾಗಿ ಕೊಯಮತ್ತೂರಿಗೆ ಅಕ್ರಮವಾಗಿ ಚಿನ್ನದ ಗಟ್ಟಿ ಸಾಗಿಸುತ್ತಿದ್ದಾರೆ ಎಂದು ಮಾಹಿತಿ ಬಂದಿತ್ತು. ಆ ಮಾಹಿತಿ ಆಧರಿಸಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಸ್.ರವಿ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಹೇಳಿದರು.
‘ಕೋಲ್ಕತ್ತದಿಂದ ಸಂಜೆ ಆರು ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜೆಟ್ ಏರ್ವೇಸ್ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಅವರ ಬ್ಯಾಗ್ಗಳನ್ನು ಸಿಬ್ಬಂದಿ ತಪಾಸಣೆಗೆ ಒಳಪಡಿಸಿದಾಗ ಅದೇ ವಿಮಾನದಲ್ಲಿದ್ದ ಆರೋಪಿಗಳು ಮೂರು ಬ್ಯಾಗ್ಗಳಲ್ಲಿ ಚಿನ್ನದ ಗಟ್ಟಿ ಸಾಗಿಸುತ್ತಿದ್ದುದು ಗೊತ್ತಾಗಿದೆ’ ಎಂದರು.
‘ಕೋಲ್ಕತ್ತದ ಸ್ಕೊಶಿಯಾ ಬ್ಯಾಂಕ್ನಿಂದ ಕೊಯಮತ್ತೂರಿನ ಕಂಪೆನಿಯೊಂದಕ್ಕೆ ಕೊಡಲು ಚಿನ್ನದ ಗಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗಿ ಬಂಧಿತರು ಹೇಳಿಕೆ ನೀಡಿದ್ದಾರೆ. ಆ ಸಂಬಂಧ ದಾಖಲೆಪತ್ರದ ಜೆರಾಕ್ಸ್ ಪ್ರತಿಯೊಂದನ್ನು ಕೊಟ್ಟಿದ್ದಾರೆ. ಆದರೆ, ಆ ದಾಖಲೆಪತ್ರದ ಪ್ರತಿ ನಕಲಿ ಎಂದು ತನಿಖೆಯಿಂದ ಗೊತ್ತಾಗಿದೆ’ ಎಂದರು.
‘ಬಂಧಿತರು ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಪೊಲೀಸರ ಮತ್ತು ತಪಾಸಣಾ ಸಿಬ್ಬಂದಿಯ ಕಣ್ತಪ್ಪಿಸಿ ಚಿನ್ನದ ಗಟ್ಟಿಗಳನ್ನು ಹೇಗೆ ವಿಮಾನಕ್ಕೆ ತೆಗೆದುಕೊಂಡು ಬಂದರು ಎಂಬುದು ಗೊತ್ತಿಲ್ಲ. ಪ್ರಕರಣ ಸಂಬಂಧ ಕೋಲ್ಕತ್ತ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಅಲ್ಲಿನ ಪೊಲೀಸರು ಆರೋಪಿಗಳ ಸಹಚರನೊಬ್ಬನನ್ನು ಬಂಧಿಸಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.
‘ಪ್ರಕರಣದ ಬಗ್ಗೆ ಸೀಮಾಸುಂಕ, ಆದಾಯ ತೆರಿಗೆ ಇಲಾಖೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹೆಚ್ಚಿನ ತನಿಖೆಗಾಗಿ ಕೋಲ್ಕತ್ತ ಪೊಲೀಸರ ತಂಡವೊಂದು ನಗರಕ್ಕೆ ಬರುತ್ತಿದೆ’ ಎಂದು ಹೇಳಿದರು.
‘ಆರೋಪಿಯೊಬ್ಬ ತಾನು ಕೊಯಮತ್ತೂರಿನ ಚಿನ್ನಾಭರಣ ಮಾರಾಟ ಮಳಿಗೆಯೊಂದರಲ್ಲಿ ಹಿರಿಯ ಮಾರಾಟ ಪ್ರತಿನಿಧಿ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.