ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ರಿಂದ ನಾಗೇಗೌಡ ಜನ್ಮಶತಮಾನೋತ್ಸವ

Last Updated 9 ಫೆಬ್ರುವರಿ 2014, 6:08 IST
ಅಕ್ಷರ ಗಾತ್ರ

ಮಂಡ್ಯ: ಕರ್ನಾಟಕ ಜಾನಪದ ಪರಿಷತ್‌ ವತಿಯಿಂದ ನಾಡೋಜ ಡಾ.ಎಚ್‌.ಎಲ್‌. ನಾಗೇಗೌಡ ಅವರ ಜನ್ಮ ಶತಮಾನೋತ್ಸವದ ಪ್ರಾರಂಭವನ್ನು ಅವರ ಹುಟ್ಟೂರಾದ ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿಯಿಂದ ಚಾಲನೆ ನೀಡಲಾಗುವುದು ಎಂದು ಪರಿಷತ್‌್ ಅಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಹಾಗೂ ರಾಮನಗರ ಜಿಲ್ಲೆಯಲ್ಲಿ ಫೆ.11 ರಿಂದ 16ರ ವರೆಗೆ ಸಂಘಟಿಸಲಾಗಿದ್ದು, ಫೆ.11 ರಂದು ಬೆಳಿಗ್ಗೆ 10.30ಕ್ಕೆ ಆದಿಚುಂಚನಗಿರಿಯ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ವಸತಿ ಸಚಿವ ಡಾ.ಅಂಬರೀಷ್‌, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಸೇರಿದಂತೆ ಜನಪ್ರತಿನಿಧಿಗಳು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಶಾಸಕ ಎನ್‌. ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಮೆರವಣಿಗೆಯಲ್ಲಿ ಜನಪದ ತಂಡಗಳು ಭಾಗವಹಿಸಲಿದ್ದು, ರಂಗೋಲಿ ಸ್ಪರ್ಧೆ, ಗ್ರಾಮೀಣ ಆಟಗಳ ಪ್ರದರ್ಶನ ಏರ್ಪಡಿಸಲಾಗಿದೆ. ಅಲ್ಲಿಂದ ಹೊರಡುವ ನಾಗಜ್ಯೋತಿಯು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಲಿದೆ ಎಂದರು.

ಫೆ.16 ರಂದು ಬೆಳಿಗ್ಗೆ 10.30ಕ್ಕೆ ರಾಮನಗರದ ಜಾನಪದ ಲೋಕದಲ್ಲಿ ನಡೆಯುವ ಲೋಕೋತ್ಸವವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಕರಕುಶಲ ವಸ್ತುಪ್ರದರ್ಶನವನ್ನು ಪ್ರೊ. ಸಿದ್ದಲಿಂಗಯ್ಯ ಉದ್ಘಾಟಿಸಲಿದ್ದಾರೆ. ಸಂಜೆ ಜಾನಪದ ಕಲೆಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಜ.16 ರಂದು ಬೆಳಿಗ್ಗೆ 10.30ಕ್ಕೆ ‘ನಾಡೋಜ ಎಚ್‌.ಎಲ್‌. ನಾಗೇಗೌಡರ ಜನಪದ ಕನಸು: ಇಂದು ಮತ್ತು ನಾಳೆ’ ಕುರಿತು ಸಂವಾದ, ಚರ್ಚೆ ಏರ್ಪಡಿಸಲಾಗಿದೆ. ಸಂಜೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ನಾಡೋಜ ಎಚ್‌.ಎಲ್. ನಾಗೇಗೌಡ ಪ್ರಶಸ್ತಿಯನ್ನು ಎಚ್‌ .ಡಿ. ಸಂಜೀವಯ್ಯ, ಡಾ.ನಾರಾಯಣ ಜನಪದ ಲೋಕಶ್ರೀ ಪ್ರಶಸ್ತಿಯನ್ನು ಡಾ.ಎನ್‌.ಆರ್‌. ನಾಯಕ್‌,  ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿಯನ್ನು ಸುಗಲಬಾಯಿ ಗೌಡತಿ ಸಿ.ಪಾಟೀಲ, ಹಾಗೂ ನಾಗೇಗೌಡರ ಹೆಸರಿನ ದತ್ತಿನಿಧಿ ಪ್ರಶಸ್ತಿಯನ್ನು ಕೆ.ಎಲ್‌. ರಂಗಪ್ಪಗೌಡ ಅವರಿಗೆ ನೀಡಲಾಗುವುದು ಎಂದರು.


ರಾಮನಗರದ ಸೋಬಾನೆ ಕೆಂಪಮ್ಮ (ಸೋಬಾನೆ ಹಾಡುಗಾರ್ತಿ), ಬಳ್ಳಾರಿಯ ಗೋಂದಳಿ ರಾಮಣ್ಣ (ಗೋಂದಣಿ ಕಲೆ), ಬೆಂಗಳೂರಿನ ಬಿ.ರಾಮಂಣ್ಣ (ರಂಗಗೀತೆ), ಮಂಡ್ಯದ ಚಂದಗಾಲು ಬೋರಪ್ಪ (ತತ್ವಪದ), ಶಿವಣ್ಣ (ತಮಟೆ), ಧಾರವಾಡದ ವಸಂತನಾರಾಯಣ ರನ್ನವರೆ (ಜಗ್ಗಲಿಗೆ ಮೇಳ), ಉತ್ತರ ಕನ್ನಡದ ನಾಗು ತಿಮ್ಮೇಗೌಡ (ಕೊಳಲಾಟ), ಬಾಗಲಕೋಟೆಯ ಸಿದ್ದಪ್ಪ ತಳೇವಾಡ (ಕೃಷ್ಣ ಪಾರಿಜಾತ), ದಕ್ಷಿಣ ಕನ್ನಡದ ಗಂಗಯ್ಯ ಪರವ (ದೈವದ ಪಾತ್ರಿ), ಕೊಪ್ಪಳದ ದಾವಲ್‌ಸಾಹೇಬ ಅತ್ತಾರ (ಗೀಗೀ ಮತ್ತು ತತ್ವಪದ), ಮುಂಬೈನ ಡಾ.ವಿಶ್ವನಾಥ ಕಾರ್ನಾಡ್‌ (ಸಾಹಿತಿ ಮತ್ತು ಜಾನಪದ ವಿದ್ವಾಂಸ), ಗುಲ್ಬರ್ಗದ ಗಂಗಾಧರಸ್ವಾಮಿ (ಪುರವಂತಿಗೆ), ಮೈಸೂರಿನ ಕಂಸಾಳೆ ಮಹದೇವು ಅವರಿಗೆ ಜಾನಪದ ಲೋಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಚಿವೆ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡುವರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ. ಸುರೇಶ್‌ ಭಾಗವಹಿಸಲಿದ್ದಾರೆ

ಎಚ್‌.ಎಲ್‌. ನಾಗೇಗೌಡರ ಹೆಸರಿನಲ್ಲಿ 1ಲಕ್ಷ ರೂಪಾಯಿ ನಗದು ಬಹುಮಾನ ಹೊಂದಿದ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಲು ಹಾಗೂ ಅವರ ಕುರಿತ ಜನಪದ ಸಾಹಿತ್ಯ ಸಂಪುಟ ಹೊರತರಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರವು ಎಲ್ಲ ವಿ.ವಿ.ಗಳಲ್ಲಿ ಎಚ್‌.ಎಲ್‌.ನಾಗೇಗೌಡ ಅವರ ಹೆಸರಿನ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಎಚ್‌.ಟಿ. ಕೃಷ್ಣಪ್ಪ, ನಾಗೇಗೌಡರ ಸಹೋದರ ಡಾ.ಕೃಷ್ಣೇಗೌಡ, ಪುತ್ರಿ ಇಂದಿರಾ ಬಾಲಕೃಷ್ಣ, ಸಾಹಿತಿ ಪ್ರೊ.ಎಚ್‌.ಎಲ್‌. ಕೇಶವಮೂರ್ತಿ, ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ. ಸ್ವಾಮಿ, ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT