ಶನಿವಾರ, ಏಪ್ರಿಲ್ 17, 2021
31 °C

12ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ನಮ್ಮ ನಿರಭಿಮಾನವನ್ನು ಮೊದಲು ಕಿತ್ತೊಗೆಯೋಣ, ದಾಸರು, ಶರಣ-ಶರಣೆಯರ ವಚನ, ಕೀರ್ತನೆಗಳನ್ನು ಕಲಿಯುತ್ತ- ಕಲಿಸುತ್ತ ಕನ್ನಡವನ್ನು ಬೆಳೆಸೋಣ’ ಇದು ಹಾಸನ ಜಿಲ್ಲಾ ಮಟ್ಟದ 12ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್.ಬಿ. ರಮೇಶ್ ಅವರು ಕನ್ನಡಾಭಿಮಾನಿಗಳಿಗೆ ನೀಡಿದ ಕರೆ.‘ಹಾಸನ ಶಾಂತಲೆ ಕಟ್ಟಿದ ನಾಡು. ಇಲ್ಲಿಯ ಅಧಿದೇವತೆ ಹಾಸನಾಂಬೆ, ಜನರು ಸಪ್ತ ಮಾತೃಕೆಯರನ್ನು ಪೂಜಿಸುತ್ತ ಬಂದಿದ್ದಾರೆ. ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲೂ ಮಹಿಳೆಯರೇ ಹೆಚ್ಚಾಗಿ ಪಾಲ್ಗೊಂಡಿರುವುದು ಸಂತೋಷದ ವಿಚಾರ’ ಎನ್ನುತ್ತಲೇ ಮಾತು ಆರಂಭಿಸಿದ ರಮೇಶ್ ಕನ್ನಡತನ ಕಡಿಮೆಯಾಗುತ್ತಿರುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದರು. ಮನೆಮನೆ ಹಾಗೂ ಮನಮನಗಳಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಲು ಅಮೂಲ್ಯವಾದ ಹದಿಮೂರು ಸಲಹೆಗಳನ್ನೂ ನೀಡಿದರು.‘ಭಾಷೆಯನ್ನು ಉಳಿಸುವ ಜವಾಬ್ದಾರಿಯನ್ನು ಮಹಿಳೆಯರು ಯಾವತ್ತೋ ಕೈಗೆತ್ತಿಕೊಂಡಿದ್ದಾರೆ. ಅವರನ್ನೂ ಒಳಗೊಳ್ಳುವಂತೆ ಯೋಜನೆ ರೂಪಿಸಿದರೆ ಭಾಷೆಯನ್ನು ಉಳಿಸಿ ಬೆಳೆಸುವುದು ಸುಲಭ. ಪ್ರತಿ ಶಾಲೆ- ಕಾಲೇಜುಗಳಲ್ಲಿ, ಸರ್ಕಾರಿ, ಖಾಸಗಿ ಸಂಸ್ಥೆಗಳ ಕಚೇರಿಗಳಲ್ಲಿ ಒಂದೊಂದು ಕನ್ನಡ ಸಂಘವನ್ನು ಆರಂಭಿಸಬೇಕು. ಇಲ್ಲಿ ಪ್ರತಿ ವಾರ ಒಂದೊಂದು ಕಾರ್ಯಕ್ರಮ ನಡೆಯಬೇಕು. ಕನ್ನಡ ಸಾಹಿತ್ಯ ಪರಿಷತ್ತು ಇವುಗಳೊಂದಿಗೆ ಸೇರಿ ಆಗಾಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.‘ಜಿಲ್ಲೆಗೆ ಬೇರೆ ಜಿಲ್ಲೆ, ರಾಜ್ಯಗಳಿಂದ ಬಂದಿರುವ ಅಧಿಕಾರಿಗಳು, ನಾಗರಿಕರನ್ನೂ ಒಳಗೊಂಡಂಥ ಒಂದು ಕನ್ನಡ ಸಂಘ ಆರಂಭಿಸಿ ಅವರಲ್ಲೂ ಕನ್ನಡ ಪ್ರೀತಿಯನ್ನು ಜಾಗೃತಗೊಳಿಸುವ ಕಾರ್ಯವನ್ನು ಮಾಡುತ್ತಿರಬೇಕು. ಕನ್ನಡ ಕಟ್ಟುವ ಕೆಲಸಗಳಲ್ಲೂ ಅವರನ್ನು ತೊಡಗಿಸಿಕೊಳ್ಳುವ ಕಾರ್ಯವಾಗಬೇಕು. ಮನೆಮನೆಗೊಬ್ಬ ಕ.ಸಾ.ಪ ಸದಸ್ಯ ಹಾಗೂ ಪ್ರತಿ ಮನೆಗೊಂದು ಕನ್ನಡ ಪತ್ರಿಕೆ ಬರುವಂತಾಗಬೇಕು. ಪತ್ರಿಕಾ ಮಾಧ್ಯಮದವರೊಂದಿಗೆ ಸೇರಿ ಇಂಥ ಯೋಜನೆಯೊಂದನ್ನು ರೂಪಿಸಬೇಕು. ಇದೊಂದು ಆಂದೋಲನವಾಗಬೇಕು ಎಂದರು.‘ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿ ಸಾಹಿತ್ಯ ಪರಿಷತ್ತುಗಳು ರಚನೆಯಾಗಬೇಕು. ಸಾಹಿತ್ಯ ಪರಿಷತ್ತು ಪ್ರಕಟಿಸುವ ಪುಸ್ತಕಗಳು ಹಾಗೂ ಪತ್ರಿಕೆಯನ್ನು ಪ್ರತಿ ಶಾಲಾ ಕಾಲೇಜೂ ಖರೀದಿಸುವಂತಾಗಬೇಕು. ಸಾಹಿತ್ಯ, ಸಂಸ್ಕೃತಿಯಿಂದ ಹೊರಗಿರುವಂಥ ಸಂಘ ಸಂಸ್ಥೆಗಳನ್ನೂ ಕನ್ನಡ ಕಾರ್ಯದಲ್ಲಿ ತೊಡಗಿಸುವ ಕಾರ್ಯವಾಗಬೇಕು...  ಹೀಗೆ ಹತ್ತು ಹಲವು ಸಲಹೆಗಳನ್ನು ರಮೇಶ್ ನೀಡಿದರು.‘ಸಾಂಸ್ಕೃತಿಕ, ಸಾಹಿತ್ಯಕ ಮಾತ್ರವಲ್ಲ ಧಾರ್ಮಿಕವಾಗಿಯೂ ಹಾಸನ ಶ್ರೀಮಂತ ಜಿಲ್ಲೆ. ಈಚಿನ ದಿನಗಳಲ್ಲಿ ರಾಜಕೀಯವಾಗಿಯೂ ಪ್ರಾಮುಖ್ಯ ಪಡೆದಿದೆ. ಸಾಹಿತ್ಯ ಕೃಷಿ ಜೋರಾಗಿ ನಡೆಯುತ್ತಿದೆ. ಹೊಸ ಹೊಸ ಲೇಖಕರು ಉದಯಿಸುತ್ತಿದ್ದಾರೆ. ಆದರೆ ಇಲ್ಲಿನ ಅನೇಕ ಐತಿಹಾಸಿಕ ಸಾಂಸ್ಕೃತಿಕ ಕ್ಷೇತ್ರಗಳು ಅಪಾಯದಲ್ಲಿವೆ. ಜನರು ಅದನ್ನು ನಿರ್ಲಕ್ಷಿಸುತ್ತಿದ್ದಾರೆ. ಹಾಸನದಲ್ಲೇ ಇದ್ದರೂ ‘ಹಲ್ಮಿಡಿ ಶಾಸನ’ವನ್ನು ನೋಡದಿರುವವರಿದ್ದಾರೆ. ಭಾಷೆ ಸಂಸ್ಕೃತಿ ಬಗ್ಗೆ ಜಾಗೃತಿ ಇಲ್ಲದಿರುವುದು ಇದಕ್ಕೆ ಕಾರಣ. ಸಾಹಿತ್ಯ ಸಮ್ಮೇಳನವೆಂದರೆ ಜಾತ್ರೆಯಲ್ಲ. ಸಾಹಿತ್ಯಾಸಕ್ತರೆಲ್ಲರೂ ಒಂದೆಡೆ ಸೇರಿ ಸಾಗಿ ಬಂದ ಹಾದಿಯ ಸಿಂಹಾವಲೋಕನ ಹಾಗೂ ಮುಂದೆ ಕ್ರಮಿಸಬೇಕಾದ ಹಾದಿಯ ಬಗ್ಗೆ ಗಮನ ಹರಿಸುವ ಪವಿತ್ರ ಕಾರ್ಯ. ಸಾಹಿತ್ಯ ಜೀವನವನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಸಾಹಿತಿಗಳ ಹೆಗಲಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ ಎಂದರು.ಭಾಷಣವನ್ನು ಬರೆದು ತಂದಿದ್ದರೂ ಅದನ್ನು ಯಥಾವತ್ ಓದುವ ಗೋಜಿಗೆ ಹೋಗದೆ, ಅನೇಕ ಸಂದರ್ಭಗಳಲ್ಲಿ ಭಾವಾವೇಶದಿಂದ ಇನ್ನೂಕೆಲವೊಮ್ಮೆ ಸಾತ್ವಿಕ ರೋಷದಿಂದ ಮಾತನಾಡಿದ ರಮೇಶ್, ಜಾತೀಯತೆ ಭಾಷೆ, ಸಂಸ್ಕೃತಿ, ಸಾಹಿತ್ಯ ಎಲ್ಲಕ್ಕಿಂತಲೂ ಉಚ್ಚ ಸ್ಥಾನ  ಪಡೆಯುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಹಾಸನದ ಜನತೆ ಇವೆಲ್ಲವನ್ನೂ ಮೀರಿ ಕನ್ನಡಿಗರಾಗಿ ಮೇಲೇಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.