ಭಾನುವಾರ, ಮೇ 22, 2022
21 °C

1984ರ ಸಿಖ್ ವಿರೋಧಿ ಗಲಭೆ: ಅಮಿತಾಭ್ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1984ರ ಸಿಖ್ ವಿರೋಧಿ ಗಲಭೆ: ಅಮಿತಾಭ್ ವಿರುದ್ಧ ದೂರು

ವಾಷಿಂಗ್ಟನ್ (ಐಎಎನ್‌ಎಸ್): 1984ರಲ್ಲಿ ಭಾರತದಲ್ಲಿ ನಡೆದ ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದಂತೆ ಬಾಲಿವುಡ್‌ನ ಮೇರು ನಟ ಅಮಿತಾಭ್ ಬಚ್ಚನ್ ವಿರುದ್ಧ ಆಸ್ಟ್ರೇಲಿಯಾದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.ಆಸ್ಟ್ರೇಲಿಯಾದ ಕಾಮನ್‌ವೆಲ್ತ್ ನಿರ್ದೇಶಕರ ಕಚೇರಿಯ ಸರ್ಕಾರಿ ವಕೀಲರು ಹಾಗೂ ಅಮೆರಿಕ ಮೂಲದ `ಸಿಖ್ಸ್ ಫಾರ್ ಜಸ್ಟೀಸ್~ (ಎಸ್‌ಎಫ್‌ಜೆ) ತಂಡವು ಜೊತೆಗೂಡಿ ಈ ಮೊಕದ್ದಮೆ ಹೂಡಿವೆ ಎಂದು ಅಮೆರಿಕದ ಮಾನವ ಹಕ್ಕುಗಳ ಸಂಘಟನೆ ಮಂಗಳವಾರ ತಿಳಿಸಿದೆ.1984ರಲ್ಲಿ ದೆಹಲಿ ಮತ್ತಿತರ ಕಡೆ ನಡೆದ ಸಿಖ್ ವಿರೋಧಿ ಗಲಭೆಗಳಲ್ಲಿ ಮೃತಪಟ್ಟವರ ಸಿಖ್ ಸಮುದಾಯದ ವಿಧವೆಯರು, ಗಲಭೆಗಳಲ್ಲಿ ಬದುಕುಳಿದವರ ಹೇಳಿಕೆ ಮತ್ತು ಸಾಕ್ಷ್ಯಗಳನ್ನು ಆಧರಿಸಿ ಈ ಮೊಕದ್ದಮೆ ಹೂಡಲಾಗಿದೆ. ಮೊಕದ್ದಮೆ ಹೂಡುವ ಎಸ್‌ಎಫ್‌ಜೆಯ ಈ ನಿರ್ಧಾರಕ್ಕೆ ಅಖಿಲ ಭಾರತ ಸಿಖ್ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ಮತ್ತು 1984ರ ದಂಗೆಗೆ ಬಲಿಯಾದವರಿಗೆ ನ್ಯಾಯ ಒದಗಿಸಿ ಕೊಡುವ ವೇದಿಕೆ ಕೈಜೋಡಿಸಿದೆ.ಬ್ರಿಸ್ಬೇನ್‌ನ ಕ್ವೀನ್ಸ್‌ಲ್ಯಾಂಡ್ ತಾಂತ್ರಿಕ ವಿಶ್ವವಿದ್ಯಾಲಯವು ನೀಡುತ್ತಿರುವ ಗೌರವ ಡಾಕ್ಟರೇಟ್ ಪಡೆಯುವುದಕ್ಕಾಗಿ ಅಮಿತಾಭ್ ಬಚ್ಚನ್ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಅಂತೆಯೇ ಅವರು ಹಾಲಿವುಡ್ ಸಿನಿಮಾ `ಗ್ರೇಟ್ ಗ್ಯಾಟ್ಸ್‌ಬೈ~ ಚಿತ್ರೀಕರಣದಲ್ಲೂ ಪಾಲ್ಗೊಳ್ಳಲಿದ್ದಾರೆ.ಆಸ್ಟ್ರೇಲಿಯಾದ ಅಪರಾಧ ಪ್ರಕ್ರಿಯಾ ಸಂಹಿತೆ 1995ರ ಅನುಸಾರ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೇ ವ್ಯಕ್ತಿ ಮಾನವೀಯ ನಡವಳಿಕೆಗಳಿಗೆ ವಿರುದ್ಧವಾಗಿ ಅಪರಾಧ ಎಸಗಿದ್ದರೆ ಅಂತಹ ವ್ಯಕ್ತಿಯ ವಿರುದ್ಧ ಆಸ್ಟ್ರೇಲಿಯಾ ಕೋರ್ಟ್‌ಗಳ ವ್ಯಾಪ್ತಿಯಲ್ಲಿ ಮೊಕದ್ದಮೆ ಹೂಡಲು ಅವಕಾಶ ಕಲ್ಪಿಸಲಾಗಿದೆ.ಇಂತಹ ಅಪರಾಧಗಳನ್ನು ಆಸ್ಟ್ರೇಲಿಯಾದಲ್ಲಿಯೇ ನಡೆಸಿರಬೇಕೆಂಬ ಕಾನೂನು ನಿಯಮಗಳು ಈ ಕ್ರಿಮಿನಲ್ ಮೊಕದ್ದಮೆ ಹೂಡಲು ಅಡ್ಡಿಬರುವುದಿಲ್ಲ.ಮೊಕದ್ದಮೆ ಹೂಡುವ ಸಮಯ ದಲ್ಲಿ ಆರೋಪಿಯು ಆಸ್ಟ್ರೇಲಿಯಾ ನೆಲದಲ್ಲಿದ್ದರೆ ಸಾಕು ಎಂದು ಎಸ್‌ಎಫ್‌ಜೆಯ ಕಾನೂನು ಸಲಹೆಗಾರ ಗುರುಪತ್ವಂತ್ ಸಿಂಗ್ ಪನ್ನುನ್ ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.