ಶನಿವಾರ, ಫೆಬ್ರವರಿ 27, 2021
31 °C

26 ಪಾಸ್‌ಪೋರ್ಟ್‌ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

26 ಪಾಸ್‌ಪೋರ್ಟ್‌ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಮಂಗಳೂರು: 26 ಮಂದಿಯ ಪಾಸ್‌ಪೋರ್ಟ್‌ಗಳನ್ನು ಅನಧಿಕೃತವಾಗಿ ದುಬೈಗೆ ಸಾಗಿಸುತ್ತಿದ್ದ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ಅಬ್ದುಲ್ಲಾ ಪಲ್ಲಕ್ಕಣ್‌ ಎಂಬಾತನನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ವಲಸೆ ವಿಭಾಗದ ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.ಎಂಐಎ ಮೂಲಕ ದುಬೈಗೆ ಹೊರಟಿದ್ದ ಅಬ್ದುಲ್ಲಾನನ್ನು ವಲಸೆ ವಿಭಾಗದ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆತನ ಬಳಿ 26 ವ್ಯಕ್ತಿಗಳಿಗೆ ಸಂಬಂಧಿಸಿದ ಪಾಸ್‌ಪೋರ್ಟ್‌ಗಳು ಪತ್ತೆಯಾಗಿದ್ದವು. ಯಾವುದೇ ಅಧಿಕೃತ ಪತ್ರಗಳಿಲ್ಲದೇ ಮತ್ತು ಸಂಬಂಧಿಸಿದ ಅಧಿಕಾರಿಗಳ ಅನುಮತಿ ಇಲ್ಲದೇ ಬೇರೆಯವರ ಪಾಸ್‌ಪೋರ್ಟ್‌ಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಆತನನ್ನು ಬಂಧಿಸಿರುವ ವಲಸೆ ವಿಭಾಗದ ಅಧಿಕಾರಿಗಳು, ಆರೋಪಿಯನ್ನು ಬಜ್ಪೆ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.‘ಅಬ್ದುಲ್ಲಾ ಬಳಿ ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ 24 ಮಂದಿ ಮತ್ತು ಅಮೆರಿಕದ ಇಬ್ಬರು ಮುಸ್ಲಿಂ ಧರ್ಮೀಯರ ಪಾಸ್‌ಪೋರ್ಟ್‌ಗಳು ಪತ್ತೆಯಾಗಿವೆ. ಹಜ್‌ ಯಾತ್ರಿಕರಿಗೆ ಭಾರತದಲ್ಲಿ ಸುಲಭವಾಗಿ ವೀಸಾ ದೊರೆಯುತ್ತದೆ ಮತ್ತು ಕೆಲವು ರಿಯಾಯಿತಿ ಪ್ಯಾಕೇಜ್‌ಗಳು ದೊರೆಯುತ್ತಿವೆ.ಈ 26 ಮಂದಿ ಭಾರತದ ವಿಶೇಷ ಪ್ಯಾಕೇಜ್‌ ಅಡಿ ಹಜ್‌ ಯಾತ್ರೆಗೆ ಹೋಗಲು ಬಯಸಿದ್ದರು. ದುಬೈನಲ್ಲಿ ಟ್ರಾವೆಲ್‌ ಏಜೆನ್ಸಿ ಹೊಂದಿದ್ದ ಕೇರಳ ಮೂಲದ ಸದಾಕತ್ ಉಲ್ಲಾ ಎಂಬಾತ ವಿಶೇಷ ಪ್ಯಾಕೇಜ್‌ನಡಿ ಭಾರತದ ಮೂಲಕ ವೀಸಾ ದೊರಕಿಸಿಕೊಡುವ ಭರವಸೆ ನೀಡಿ ಅವರಿಂದ ಪಾಸ್‌ಪೋರ್ಟ್‌ ಸಂಗ್ರಹಿಸಿದ್ದ. ಅವುಗಳನ್ನು ಅಬ್ದುಲ್ಲಾ ಮೂಲಕ ಕೇರಳಕ್ಕೆ ಕಳುಹಿಸಿಕೊಟ್ಟಿದ್ದ’ ಎಂಬುದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಬಜ್ಪೆ ಠಾಣೆ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.ದುಬೈನಿಂದ ಹೊರಟು ಆಗಸ್ಟ್‌ 7ರಂದು ಕೇರಳದ ಕಲ್ಲಿಕೋಟೆಗೆ ಬಂದಿದ್ದ ಅಬ್ದುಲ್ಲಾ, ಅಲ್ಲಿರುವ ಟ್ರಾವೆಲ್‌ ಏಜೆಂಟರನ್ನು ಸಂಪರ್ಕಿಸಿ 26 ಮಂದಿಗೆ ವಿಶೇಷ ಪ್ಯಾಕೇಜ್‌ನಡಿ ಹಜ್‌ ಯಾತ್ರೆಗೆ ವೀಸಾ ದೊರಕಿಸಿಕೊಡುವಂತೆ ಕೋರಿದ್ದ. ಅದರೆ, ಆಗಲೇ ಪ್ಯಾಕೇಜ್‌ಗಳ ಅವಧಿ ಕೊನೆಗೊಂಡಿರುವುದಾಗಿ ಟ್ರಾವೆಲ್‌ ಏಜೆಂಟರು ಆತನಿಗೆ ತಿಳಿಸಿದ್ದರು. ಬಳಿಕ 26 ಮಂದಿಯ ಪಾಸ್‌ಪೋರ್ಟ್‌ಗಳ ಜೊತೆ ದುಬೈಗೆ ತೆರಳಲು ಮಂಗಳವಾರ ರಾತ್ರಿ ಎಂಐಎಗೆ ಬಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.